Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 41

ರಚನೆಗಾರ: ದಾವೀದ.

41 ಯಾವನು ಬಡಜನರನ್ನು[a] ಅಭಿವೃದ್ಧಿಪಡಿಸುವನೋ ಅವನೇ ಧನ್ಯನು.
    ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
ಯೆಹೋವನು ಅವನ ಪ್ರಾಣವನ್ನು ಕಾಪಾಡಿ ರಕ್ಷಿಸುವನು.
    ಅವನು ಭೂಮಿಯ ಮೇಲೆ ಧನ್ಯನೆನಸಿಕೊಳ್ಳುವನು.
    ಯೆಹೋವನೇ, ಅವನನ್ನು ಶತ್ರುಗಳ ಕೈಗೆ ಕೊಡಬೇಡ.
ಅವನು ಕಾಯಿಲೆಯಿಂದ ಹಾಸಿಗೆಯಲ್ಲಿರುವಾಗ
    ಯೆಹೋವನು ಅವನಿಗೆ ಬಲವನ್ನು ಕೊಡುವನು.
ಅವನು ಕಾಯಿಲೆಯಿಂದ ಹಾಸಿಗೆಯಲ್ಲಿದ್ದರೂ ಯೆಹೋವನು ಅವನನ್ನು ಗುಣಪಡಿಸುವನು!

ನಾನು ಆತನಿಗೆ, “ಯೆಹೋವನೇ, ನನಗೆ ದಯೆತೋರು.
    ನಾನು ನಿನಗೆ ವಿರೋಧವಾಗಿ ಪಾಪಮಾಡಿದ್ದೇನೆ, ಆದರೂ ನನ್ನನ್ನು ಕ್ಷಮಿಸಿ ಗುಣಪಡಿಸು” ಎಂದು ಹೇಳಿದೆ.
ನನ್ನ ಶತ್ರುಗಳು ನನ್ನನ್ನು ದೂಷಿಸುತ್ತಾ “ಅವನು ಯಾವಾಗ ಸಾಯುತ್ತಾನೆ,
    ಅವನ ಹೆಸರು ಯಾವಾಗ ಅಳಿದುಹೋಗುತ್ತದೆ” ಎಂದು ಹೇಳುತ್ತಿದ್ದಾರೆ.
ನನ್ನನ್ನು ನೋಡಲು ಬಂದವರು ಕಪಟದ ಮಾತನ್ನಾಡುವರು;
    ಅವರು ನನ್ನ ಸಮಾಚಾರವನ್ನು ಸಂಗ್ರಹಿಸಿಕೊಂಡು ಸುಳ್ಳುಸುದ್ದಿಯನ್ನು ಹಬ್ಬಿಸುವರು.
ನನ್ನ ವೈರಿಗಳು ನನಗೆ ವಿರೋಧವಾಗಿ ಗುಟ್ಟಾಗಿ ಮಾತಾಡಿಕೊಳ್ಳುವರು;
    ನನಗೆ ಕೇಡುಮಾಡಲು ಆಲೋಚಿಸುವರು.
“ಅವನು ಯಾವುದೋ ತಪ್ಪು ಮಾಡಿರುವುದರಿಂದ
    ಅವನಿಗೆ ಕಾಯಿಲೆ ಬಂದಿದೆ,
    ಅವನಿಗೆ ಗುಣವಾಗುವುದೇ ಇಲ್ಲ” ಎಂದು ಅವರು ಹೇಳುತ್ತಾರೆ.
ನನ್ನ ಆಪ್ತಸ್ನೇಹಿತನೊಂದಿಗೆ ಊಟಮಾಡುತ್ತಿದ್ದೆನು; ಅವನಲ್ಲಿ ಭರವಸವಿಟ್ಟಿದ್ದೆನು,
    ಆದರೆ ಈಗ ಅವನೇ ನನಗೆ ವಿರೋಧವಾಗಿ ಎದ್ದಿದ್ದಾನೆ.
10 ಯೆಹೋವನೇ, ದಯವಿಟ್ಟು ನನಗೆ ದಯೆತೋರು;
    ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿ ತೀರಿಸುವೆನು.
11 ನನಗೆ ಕೇಡುಮಾಡಲು ವೈರಿಗೆ ನೀನು ಅವಕಾಶ ಕೊಡದಿದ್ದರೆ,
    ನೀನು ನನ್ನನ್ನು ಸ್ವೀಕರಿಸಿಕೊಂಡಿರುವೆ ಎಂದು ತಿಳಿದುಕೊಳ್ಳುವೆನು.
12 ನಿರಪರಾಧಿಯಾದ ನನಗೆ ಸಹಾಯಮಾಡು.
    ನಿನ್ನ ಸನ್ನಿಧಿಯಲ್ಲಿ ಯಾವಾಗಲೂ ನಿನ್ನ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡು.

13 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ!
    ಆತನು ಯಾವಾಗಲೂ ಇದ್ದವನು; ಯಾವಾಗಲೂ ಇರುವವನು.

ಆಮೆನ್, ಆಮೆನ್!

ಯೆಶಾಯ 38:1-8

ಹಿಜ್ಕೀಯನ ಅಸ್ವಸ್ಥತೆ

38 ಆ ಸಮಯದಲ್ಲಿ ಹಿಜ್ಕೀಯನು ರೋಗಗ್ರಸ್ತನಾಗಿ ಸಾಯುವ ಸ್ಥಿತಿಯಲ್ಲಿದ್ದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನನ್ನು ನೋಡಲು ಹೋದನು. ಯೆಶಾಯನು ಅರಸನಿಗೆ, “ಯೆಹೋವನು ಈ ವಿಷಯಗಳನ್ನು ನಿನಗೆ ತಿಳಿಸಲು ಹೇಳಿದ್ದಾನೆ: ‘ನೀನು ಬೇಗನೇ ಸಾಯುವೆ. ಆದ್ದರಿಂದ ನೀನು ಸಾಯುವಾಗ ನಿನ್ನ ಕುಟುಂಬದವರು ಮಾಡಬೇಕಾದದ್ದನ್ನು ಅವರಿಗೆ ತಿಳಿಸು. ನಿನಗೆ ಗುಣವಾಗುವುದಿಲ್ಲ’” ಎಂದು ಹೇಳಿದನು.

ಹಿಜ್ಕೀಯನು ದೇವಾಲಯದ ಕಡೆಗಿರುವ ಗೋಡೆಯ ಕಡೆಗೆ ಮುಖ ಮಾಡಿ ದೇವರಿಗೆ, “ಯೆಹೋವನೇ, ನಾನು ನಿನಗೆ ಪೂರ್ಣಹೃದಯದಿಂದ ನಂಬಿಗಸ್ತನಾಗಿ ಸೇವೆಮಾಡಿದ್ದನ್ನು ಜ್ಞಾಪಿಸಿಕೋ. ನಿನಗೆ ಇಷ್ಟವಾದದ್ದನ್ನೆಲ್ಲ ನಾನು ಮಾಡಿದ್ದೇನೆ” ಎಂದು ಪ್ರಾರ್ಥಿಸಿ ಬಹಳವಾಗಿ ಅತ್ತನು.

ಆಗ ಯೆಶಾಯನಿಗೆ ಈ ಸಂದೇಶವು ಯೆಹೋವನಿಂದ ಬಂದಿತು: “ಹಿಜ್ಕೀಯನ ಬಳಿಗೆ ಹೋಗಿ ಹೇಳು, ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೇಳುವುದೇನೆಂದರೆ: ‘ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಸೇರಿಸಿದ್ದೇನೆ. ನಾನು ನಿನ್ನನ್ನೂ ಈ ಪಟ್ಟಣವನ್ನೂ ಕಾಪಾಡುವೆನು. ಅಶ್ಶೂರದ ಅರಸನಿಂದ ರಕ್ಷಿಸುವೆನು.’”

“ದೇವರು ತಾನು ಹೇಳಿದ್ದನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಗುರುತೇನೆಂದರೆ: ಇಗೋ, ಆಹಾಜನ ಮೆಟ್ಟಿಲಲ್ಲಿರುವ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಹೋಗುವಂತೆ ಮಾಡುವೆನು ಎಂದು ನಿನ್ನ ದೇವರಾಗಿರುವ ಯೆಹೋವನು ಹೇಳುತ್ತಾನೆಂಬದಾಗಿ ತಿಳಿಸು” ಎಂದು ಹೇಳಿದನು. ಅದರಂತೆ ಮೆಟ್ಟಿಲಲ್ಲಿರುವ ಸೂರ್ಯನ ನೆರಳು ಹತ್ತು ಮೆಟ್ಟಿಲು ಹಿಂದಕ್ಕೆ ಹೋಯಿತು.

ಇಬ್ರಿಯರಿಗೆ 12:7-13

ಆದ್ದರಿಂದ ತಂದೆಯು ನೀಡುವ ದಂಡನೆ ಎಂಬುದಾಗಿ ಅವುಗಳನ್ನು ಸಹಿಸಿಕೊಳ್ಳಿ. ತಂದೆಯು ತನ್ನ ಮಕ್ಕಳನ್ನು ದಂಡಿಸುವಂತೆ ದೇವರು ನಿಮ್ಮನ್ನು ಈ ರೀತಿ ಶಿಕ್ಷಿಸುತ್ತಾನೆ. ಎಲ್ಲಾ ಮಕ್ಕಳು ತಮ್ಮ ತಂದೆಗಳಿಂದ ಶಿಕ್ಷಿಸಲ್ಪಡುತ್ತಾರೆ. ನೀವು ಎಂದೂ ಶಿಕ್ಷಿಸಲ್ಪಡದಿದ್ದರೆ ನಿಮ್ಮ ತಂದೆಗೆ ನೀವು ನಿಜವಾದ ಮಕ್ಕಳಲ್ಲ. ಈ ಲೋಕದಲ್ಲಿ ನಮ್ಮೆಲ್ಲರನ್ನೂ ಶಿಕ್ಷಿಸಿದಂಥ ತಂದೆಗಳು ನಮಗಿದ್ದರು. ನಾವು ಅವರನ್ನು ಗೌರವಿಸಿದೆವು. ಆದ್ದರಿಂದ ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಂದ ದಂಡನೆಗಳನ್ನು ಸ್ವೀಕರಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ನಾವು ಹೀಗೆ ಮಾಡಿದರೆ ಜೀವವನ್ನು ಹೊಂದಿಕೊಳ್ಳುವೆವು. 10 ಈ ಲೋಕದ ನಮ್ಮ ತಂದೆಗಳು ನಮ್ಮನ್ನು ಸ್ವಲ್ಪಕಾಲ ದಂಡಿಸಿದರು. ಅವರು ತಮಗೆ ಉತ್ತಮವೆಂದು ತೋರಿದ ರೀತಿಯಲ್ಲಿ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ನಮಗೆ ಸಹಾಯ ಮಾಡಲು ನಮ್ಮನ್ನು ಶಿಕ್ಷಿಸುತ್ತಾನೆ. ಏಕೆಂದರೆ ನಾವೂ ಆತನಂತೆ ಪರಿಶುದ್ಧರಾಗಬೇಕೆಂಬುದೇ ಆತನ ಉದ್ದೇಶ. 11 ಯಾವುದೇ ದಂಡನೆಯಾಗಲಿ ತತ್ಕಾಲಕ್ಕೆ ಸಂತೋಷಕರವಾಗಿರದೆ ದುಃಖಕರವಾಗಿರುತ್ತದೆ. ಆದರೆ ಆ ತರುವಾಯ ದಂಡನೆಯಿಂದ ನಾವು ಕಲಿತುಕೊಂಡು ಯೋಗ್ಯವಾದ ಜೀವಿತವನ್ನು ಆರಂಭಿಸುವುದರ ಮೂಲಕ ನಮಗೆ ಸಮಾಧಾನ ಉಂಟಾಗುತ್ತದೆ.

ಯೋಗ್ಯ ಮಾರ್ಗದಲ್ಲಿ ಜೀವಿಸಿರಿ

12 ನೀವು ದುರ್ಬಲರಾಗಿದ್ದೀರಿ. ಆದ್ದರಿಂದ ನಿಮ್ಮನ್ನು ಮತ್ತೆ ಬಲಪಡಿಸಿಕೊಳ್ಳಿರಿ. 13 ನೀವು ಯೋಗ್ಯವಾದ ಮಾರ್ಗದಲ್ಲಿ ಜೀವಿಸಿದರೆ ರಕ್ಷಣೆ ಹೊಂದುವಿರಿ ಮತ್ತು ನಿಮ್ಮನ್ನು ನಾಶಗೊಳಿಸಲು ನಿಮ್ಮ ಬಲಹೀನತೆಗಳಿಗೆ ಸಾಧ್ಯವಾಗುವುದಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International