Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 7

ಬೆನ್ಯಾಮೀನ್ ಕುಲದವನಾದ ಕೂಷನ ಮಾತುಗಳ ವಿಷಯದಲ್ಲಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

ನನ್ನ ದೇವರಾದ ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
    ನನ್ನನ್ನು ಹಿಂದಟ್ಟುತ್ತಿರುವವರಿಂದ ನನ್ನನ್ನು ತಪ್ಪಿಸಿ ಕಾಪಾಡು!
ನೀನು ನನಗೆ ಸಹಾಯ ಮಾಡದಿದ್ದರೆ, ಸಿಂಹದ ಬಾಯಿಗೆ ಸಿಕ್ಕಿಕೊಂಡಿರುವ ಪ್ರಾಣಿಯಂತಾಗುವೆನು;
    ರಕ್ಷಣೆಯೇ ಇಲ್ಲದವನಾಗಿ ಸೀಳಿಹಾಕಲ್ಪಡುವೆನು.

ನನ್ನ ದೇವರಾದ ಯೆಹೋವನೇ, ನಾನು ಯಾವುದೇ ಅಪರಾಧವನ್ನು ಮಾಡಿದ್ದರೆ,
ಸ್ನೇಹಿತನೊಬ್ಬನಿಗೆ ಕೆಟ್ಟದ್ದೇನಾದರೂ ಮಾಡಿದ್ದರೆ,
    ಶತ್ರುವಿನಿಂದ ಅನ್ಯಾಯವಾಗಿ ಏನನ್ನಾದರೂ ದೋಚಿಕೊಂಡಿದ್ದರೆ,
ಇವುಗಳಲ್ಲಿ ನಾನು ಯಾವುದನ್ನೇ ಮಾಡಿದ್ದರೂ,
    ಶತ್ರುವು ನನ್ನನ್ನು ಹಿಂದಟ್ಟಿ ಬಂದು ನನ್ನನ್ನು ಹಿಡಿದು ನೆಲಕ್ಕೆ ಕೆಡವಿ ತುಳಿಯಲಿ;
    ನನ್ನ ಪ್ರಾಣವನ್ನು ಮಣ್ಣುಪಾಲು ಮಾಡಲಿ.

ಯೆಹೋವನೇ, ಎದ್ದೇಳು, ನಿನ್ನ ಕೋಪವನ್ನು ತೋರು!
    ನನ್ನ ವೈರಿಯು ಕೋಪಗೊಂಡಿದ್ದಾನೆ. ಅವನಿಗೆ ವಿರೋಧವಾಗಿ ಎದ್ದುನಿಂತು ಹೋರಾಡು.
    ನನ್ನ ದೇವರೇ, ಎದ್ದೇಳು, ನ್ಯಾಯಕ್ಕಾಗಿ ಒತ್ತಾಯಿಸು!
ಜನಾಂಗಗಳನ್ನು ನಿನ್ನ ಸುತ್ತಲೂ ಸೇರಿಸಿ
    ನಿನ್ನ ಉನ್ನತಸ್ಥಾನದಲ್ಲಿ ಆಸೀನನಾಗು.
ಜನರಿಗೆ ನ್ಯಾಯತೀರಿಸು.
    ಯೆಹೋವನೇ, ನನಗೆ ನ್ಯಾಯತೀರಿಸು.
    ನನ್ನನ್ನು ನೀತಿವಂತನೆಂದೂ ನಿರಪರಾಧಿಯೆಂದೂ ನಿರೂಪಿಸು.
ಕೆಟ್ಟವರನ್ನು ದಂಡಿಸು,
    ಒಳ್ಳೆಯವರಿಗೆ ಸಹಾಯಮಾಡು.
ದೇವರೇ ನೀನು ಒಳ್ಳೆಯವನು;
    ಮನುಷ್ಯರ ಅಂತರಾಳವನ್ನು ನೀನು ಪರಿಶೋಧಿಸಬಲ್ಲೆ.

10 ನನ್ನ ಗುರಾಣಿಯು ದೇವರೇ.
    ಆತನು ಯಥಾರ್ಥವಂತರನ್ನು ರಕ್ಷಿಸುವನು.
11 ದೇವರು ನೀತಿವಂತನಾದ ನ್ಯಾಯಾಧೀಶನಾಗಿದ್ದಾನೆ.
    ಆತನು ದುಷ್ಟರ ವಿಷಯದಲ್ಲಿ ಯಾವಾಗಲೂ ಕೋಪವುಳ್ಳವನು.
12 ಆತನು ತಾನು ಮಾಡಿದ ತೀರ್ಮಾನವನ್ನು ಬದಲಾಯಿಸುವುದಿಲ್ಲ.
13 ದುಷ್ಟರನ್ನು ಶಿಕ್ಷಿಸಲು ಆತನು ಸಿದ್ಧನಾಗಿದ್ದಾನೆ.[a]

14 ಕೆಲವರು ದುಷ್ಕೃತ್ಯಗಳನ್ನು ಮಾಡುವುದಕ್ಕಾಗಿಯೇ ಆಲೋಚಿಸುತ್ತಿರುವರು.
    ಅವರು ಸಂಚುಗಳನ್ನು ಮಾಡುತ್ತಾ ಸುಳ್ಳಾಡುವರು.
15 ಅವರು ಇತರರನ್ನು ಬಲೆಗೆ ಸಿಕ್ಕಿಸಿ ಕೇಡುಮಾಡಬೇಕೆಂದಿದ್ದಾರೆ;
    ಆದರೆ ತಾವೇ ಆ ಬಲೆಗಳಿಗೆ ಸಿಕ್ಕಿಕೊಳ್ಳುವರು.
16 ಅವರು ತಮ್ಮ ಕುಯುಕ್ತಿಗೆ ತಕ್ಕ ದಂಡನೆಯನ್ನು ಹೊಂದುವರು.
    ಅವರು ಇತರರ ವಿಷಯದಲ್ಲಿ ಕ್ರೂರವಾಗಿ ನಡೆದುಕೊಂಡರು.
    ಅವರು ಮಾಡಿದ ಹಿಂಸೆಯು ಅವರಿಗೇ ಸಂಭವಿಸುವುದು.

17 ಯೆಹೋವನ ನ್ಯಾಯವಾದ ತೀರ್ಪಿಗಾಗಿ ಆತನನ್ನು ಕೊಂಡಾಡುವೆನು.
    ಮಹೋನ್ನತನಾದ ಯೆಹೋವನ ಹೆಸರನ್ನು ಸ್ತುತಿಸುವೆನು.

ಯೆಹೆಜ್ಕೇಲ 33:7-20

“ಈಗ, ನರಪುತ್ರನೇ, ನಾನು ನಿನ್ನನ್ನು ಇಸ್ರೇಲಿನ ಕಾವಲುಗಾರನನ್ನಾಗಿ ಆರಿಸಿದ್ದೇನೆ. ನನ್ನ ಬಾಯಿಂದ ನೀನು ಸಂದೇಶವನ್ನು ಕೇಳಿದಾಗ, ನನ್ನ ಪರವಾಗಿ ನೀನು ಜನರನ್ನು ಎಚ್ಚರಿಸಬೇಕು. ‘ಈ ಕೆಟ್ಟ ಮನುಷ್ಯನು ಸಾಯುವನು’ ಎಂದು ನಾನು ಹೇಳಿದರೆ, ನೀನು ಹೋಗಿ ಆ ಮನುಷ್ಯನನ್ನು ಎಚ್ಚರಿಸಬೇಕು. ಆದರೆ ನೀನು ಅವನನ್ನು ಎಚ್ಚರಿಸದೆ ಹೋದರೆ, ಅವನ ಜೀವಿತವನ್ನು ಬದಲಾಯಿಸಿಕೊಳ್ಳಲು ಹೇಳದೆ ಹೋದರೆ, ಪಾಪಮಾಡಬೇಡ ಎಂದು ಹೇಳದೆ ಹೋದರೆ, ಆ ದುಷ್ಟನು ಸಾಯುವನು. ಯಾಕೆಂದರೆ, ಅವನು ಪಾಪಮಾಡಿದನು. ಆದರೆ ಅವನ ಮರಣಕ್ಕೆ ನಿನ್ನನ್ನು ಕಾರಣನನ್ನಾಗಿ ಮಾಡುತ್ತೇನೆ. ಆದರೆ ನೀನು ಅವನನ್ನು ಎಚ್ಚರಿಸಿ, ಅವನ ಜೀವಿತವನ್ನು ಬದಲಾಯಿಸಲು ಹೇಳಿ, ಪಾಪವನ್ನು ಮಾಡಬೇಡ ಎಂದು ಹೇಳಿದರೂ ಅವನು ಕೇಳದೆ ಹೋದರೆ ಪಾಪ ಮಾಡುವದನ್ನು ಬಿಡದೆ ಹೋದರೆ ಅವನು ಪಾಪ ಮಾಡಿದುದರಿಂದ ಸಾಯುವನು. ಆದರೆ ನೀನು ಅವನ ಮರಣಕ್ಕೆ ಕಾರಣನಾಗುವದಿಲ್ಲ.

ದೇವರು ಮನುಷ್ಯರನ್ನು ನಾಶಮಾಡಲು ಇಷ್ಟಪಡುವುದಿಲ್ಲ

10 “ಆದ್ದರಿಂದ ನರಪುತ್ರನೇ, ನನ್ನ ಪರವಾಗಿ ಇಸ್ರೇಲ್ ಜನರೊಂದಿಗೆ ಮಾತನಾಡು. ‘ನಾವು ಪಾಪಮಾಡಿದ್ದೇವೆ. ಕಟ್ಟಳೆಗಳನ್ನು ಮೀರಿದ್ದೇವೆ. ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ. ನಾವು ಆ ಪಾಪಗಳಿಂದಾಗಿ ಕ್ಷೀಣಿಸುತ್ತಿದ್ದೇವೆ. ನಾವು ಜೀವಿಸಬೇಕಾದರೆ ಏನು ಮಾಡಬೇಕು?’ ಎಂದು ಅವರು ಕೇಳಿಯಾರು.

11 “ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’

12 “ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ‘ಒಬ್ಬನು ಒಳ್ಳೆಯವನಾಗಿದ್ದುಕೊಂಡು ನಂತರ ದುಷ್ಟತನವನ್ನು ನಡಿಸಿದರೆ ಅವನ ಸತ್ಕಾರ್ಯಗಳು ಅವನನ್ನು ರಕ್ಷಿಸಲಾರವು. ಒಬ್ಬನು ದುಷ್ಕೃತ್ಯಗಳನ್ನು ಮಾಡಿ ತನ್ನ ದುಷ್ಟತ್ವದಿಂದ ತಿರುಗಿದರೆ ಅವನು ನಾಶವಾಗುವದಿಲ್ಲ. ಆದ್ದರಿಂದ ಹಿಂದೆ ಮಾಡಿದ್ದ ಪುಣ್ಯಕಾರ್ಯಗಳು ಒಬ್ಬ ಪಾಪಿಯನ್ನು ರಕ್ಷಿಸಲಾರದೆಂಬುದನ್ನು ಜ್ಞಾಪಕದಲ್ಲಿಟ್ಟುಕೊ.’

13 “ಒಂದುವೇಳೆ ‘ನೀನು ಜೀವಿಸುವಿ’ ಎಂದು ಒಬ್ಬ ಒಳ್ಳೆಯ ಮನುಷ್ಯನಿಗೆ ನಾನು ಹೇಳಬಹುದು. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ತಾನು ರಕ್ಷಿಸಲ್ಪಟ್ಟಿದ್ದೇನೆ ಎಂದು ನೆನಸಬಹುದು. ಆ ಬಳಿಕ ಅವನು ದುಷ್ಕೃತ್ಯಗಳನ್ನು ಮಾಡಲು, ನಾನು ಅವನ ಪುಣ್ಯಕಾರ್ಯಗಳನ್ನು ನೋಡದೆ ಅವನ ದುಷ್ಕೃತ್ಯಗಳ ನಿಮಿತ್ತ ಅವನನ್ನು ಸಾಯಿಸುವೆನು.

14 “ಒಂದುವೇಳೆ ನಾನು ಒಬ್ಬ ದುಷ್ಟನಿಗೆ ನೀನು ಸಾಯುವಿ ಎಂದು ಹೇಳಿದರೆ ಅವನು ತನ್ನ ಜೀವಿತವನ್ನು ಬದಲಾಯಿಸಿ, ದುಷ್ಟತ್ವವನ್ನು ನಿಲ್ಲಿಸಿ, ಅವನು ನೀತಿವಂತನಾಗಿ ಬಾಳಿ 15 ಒತ್ತೆ ತೆಗೆದುಕೊಂಡಿದ್ದ ವಸ್ತುಗಳನ್ನು ಹಿಂದಕ್ಕೆ ಕೊಟ್ಟು, ತಾನು ಕದ್ದುಕೊಂಡದ್ದನ್ನು ಹಿಂದಕ್ಕೆ ಕೊಟ್ಟು, ಜೀವಕರವಾದ ಕಟ್ಟಳೆಗಳನ್ನು ಅನುಸರಿಸಿದರೆ ಆ ಮನುಷ್ಯನು ಖಂಡಿತವಾಗಿ ಬದುಕುವನು. ಅವನನ್ನು ಸಾಯಿಸುವುದಿಲ್ಲ. 16 ಅವನು ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಾನು ನನ್ನ ನೆನಪಿಗೆ ತರುವದಿಲ್ಲ. ಯಾಕೆಂದರೆ ಈಗ ಅವನು ಶಿಷ್ಟನಾಗಿ ಬಾಳುತ್ತಿದ್ದಾನೆ. ಆದುದರಿಂದ ಅವನು ಜೀವಿಸುವನು.

17 “ಆದರೆ ನಿನ್ನ ಜನರು, ‘ಅದು ನ್ಯಾಯವಲ್ಲ. ನನ್ನ ಒಡೆಯನಾದ ಯೆಹೋವನು ಹಾಗೆ ಮಾಡಲಾರನು’ ಎಂದು ಹೇಳುವರು.

“ಅಂಥ ಜನರೇ ನ್ಯಾಯವಂತರಲ್ಲ. ಅವರೇ ಬದಲಾಗಬೇಕು. 18 ಒಬ್ಬ ಒಳ್ಳೆಯ ಮನುಷ್ಯನು ತನ್ನ ಶಿಷ್ಟತ್ವವನ್ನು ಬಿಟ್ಟು ಪಾಪದ ಮಾರ್ಗದಲ್ಲಿ ನಡೆದರೆ ಅವನು ಅವನ ಪಾಪಗಳ ನಿಮಿತ್ತ ಸಾಯುವನು. 19 ಆದರೆ ಒಬ್ಬ ಪಾಪಿ ತನ್ನ ದುಷ್ಟತನವನ್ನು ಬಿಟ್ಟು ನೀತಿವಂತನಾಗಿ ಬಾಳಿದರೆ ಅವನು ಜೀವಿಸುವನು. 20 ಆದರೆ ನಾನು ನ್ಯಾಯವಂತನಲ್ಲ, ಎಂದು ನೀವು ಹೇಳುತ್ತೀರಿ. ಆದರೆ ನಾನು ಖಂಡಿತವಾಗಿ ಹೇಳುತ್ತೇನೆ, ಇಸ್ರೇಲ್ ಮನೆತನದವರೇ, ಪ್ರತಿಯೊಬ್ಬನೂ ತಾನು ಮಾಡಿದ ಕಾರ್ಯಗಳಿಗಾಗಿ ನ್ಯಾಯ ಹೊಂದುವನು.”

ಯೋಹಾನ 5:19-40

ಯೇಸುವಿಗೆ ದೇವರ ಅಧಿಕಾರವಿದೆ

19 ಅದಕ್ಕೆ ಉತ್ತರವಾಗಿ ಆತನು ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಮಗನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ತಂದೆಯು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ತಂದೆಯು ಮಾಡುವ ಕಾರ್ಯಗಳನ್ನೇ ಮಗನೂ ಮಾಡುತ್ತಾನೆ. 20 ತಂದೆಯು ಮಗನನ್ನು ಪ್ರೀತಿಸುವನು ಮತ್ತು ತಾನು ಮಾಡುವ ಎಲ್ಲಾ ಕಾರ್ಯಗಳನ್ನು ಮಗನಿಗೆ ತೋರಿಸುವನು. ಆದರೆ ಇದಕ್ಕಿಂತಲೂ ಹೆಚ್ಚಿನ ಕಾರ್ಯಗಳನ್ನು ತಂದೆಯು ಮಗನಿಗೆ ತೋರಿಸುವನು. ಆಗ ನೀವೆಲ್ಲರೂ ಆಶ್ಚರ್ಯಚಕಿತರಾಗುವಿರಿ. 21 ತಂದೆಯು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವ ಕೊಡುತ್ತಾನೆ. ಅದೇ ರೀತಿಯಲ್ಲಿ ಮಗನು ತಾನು ಬಯಸಿದವರಿಗೆ ಜೀವವನ್ನು ಕೊಡುತ್ತಾನೆ.

22 “ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವುದಿಲ್ಲ. ಆದರೆ ತಂದೆಯು ತೀರ್ಪು ಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ. 23 ಜನರು ತಂದೆಯನ್ನು ಗೌರವಿಸುವಂತೆ ಮಗನನ್ನು ಗೌರವಿಸಬೇಕೆಂದು ದೇವರು ಹೀಗೆ ಮಾಡಿದನು. ಮಗನನ್ನು ಸನ್ಮಾನಿಸದವನು ಆತನನ್ನು ಕಳುಹಿಸಿರುವ ತಂದೆಯನ್ನೂ ಸನ್ಮಾನಿಸದವನಾಗಿದ್ದಾನೆ.

24 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ಮಾತನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನಿಗೆ ಅಪರಾಧಿಯೆಂಬ ತೀರ್ಪಾಗುವುದಿಲ್ಲ. ಅವನು ಈಗಾಗಲೇ ಮರಣವನ್ನು ದಾಟಿ ಜೀವಕ್ಕೆ ಪ್ರವೇಶಿಸಿದ್ದಾನೆ. 25 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸತ್ತುಹೋದವರು ದೇವರ ಮಗನ ಸ್ವರವನ್ನು ಕೇಳುವ ಕಾಲ ಬರುತ್ತದೆ. ಅದು ಈಗಲೇ ಬಂದಿದೆ. ಕೇಳಿ ಸ್ವೀಕರಿಸಿಕೊಳ್ಳುವವರು ಜೀವವನ್ನು ಹೊಂದುವರು. 26 ತಂದೆಯು ಜೀವಕೊಡುವ ಶಕ್ತಿಯನ್ನು ತಾನು ಹೊಂದಿರುವಂತೆ ಮಗನಿಗೂ ಜೀವಕೊಡುವ ಶಕ್ತಿಯನ್ನು ಅನುಗ್ರಹಿಸಿದನು, 27 ಮತ್ತು ಎಲ್ಲಾ ಜನರಿಗೆ ತೀರ್ಪುಮಾಡುವ ಅಧಿಕಾರವನ್ನು ತಂದೆಯು ಮಗನಿಗೂ ಕೊಟ್ಟಿದ್ದಾನೆ. ಏಕೆಂದರೆ ಆ ಮಗನು ಮನುಷ್ಯಕುಮಾರನಾಗಿದ್ದಾನೆ.

28 “ಇದರ ಬಗ್ಗೆ ಆಶ್ಚರ್ಯಪಡಬೇಡಿರಿ. ಏಕೆಂದರೆ ಸಮಾಧಿಗಳಲ್ಲಿರುವ ಜನರೆಲ್ಲರೂ ಆತನ ಸ್ವರವನ್ನು ಕೇಳುವ ಕಾಲ ಬರುತ್ತದೆ. 29 ಆಗ ಅವರು ತಮ್ಮ ಸಮಾಧಿಗಳಿಂದ ಎದ್ದುಬರುವರು. ಜೀವನದಲ್ಲಿ ಒಳ್ಳೆಯದನ್ನು ಮಾಡಿದ ಜನರು ಪುನರುತ್ಥಾನಗೊಂಡು ನಿತ್ಯಜೀವವನ್ನು ಹೊಂದಿಕೊಳ್ಳುವರು. ಆದರೆ ಕೆಟ್ಟದ್ದನ್ನು ಮಾಡಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವುದು.

30 “ನಾನು ಒಬ್ಬಂಟಿಗನಾಗಿ ಏನೂ ಮಾಡಲಾರೆನು. ನಾನು ಕೇಳಿದ್ದಕ್ಕನುಸಾರವಾಗಿ ತೀರ್ಪು ಮಾಡುತ್ತೇನೆ. ಆದ್ದರಿಂದ ನನ್ನ ತೀರ್ಪು ಸರಿಯಾದದ್ದು. ಏಕೆಂದರೆ, ನಾನು ನನ್ನನ್ನು ಮೆಚ್ಚಿಸಲು ಪ್ರಯತ್ನಿಸದೆ ನನ್ನ ತಂದೆಯನ್ನು ಮೆಚ್ಚಿಸಲು ಪ್ರಯತ್ನಿಸುತ್ತೇನೆ.

ಯೆಹೂದ್ಯ ನಾಯಕರಿಗೆ ಯೇಸು ಹೇಳಿದ ಅಧಿಕ ವಿಷಯಗಳು

31 “ನನ್ನ ವಿಷಯವಾಗಿ ನಾನೇ ಹೇಳಿಕೊಂಡರೆ, ನನ್ನ ಸಾಕ್ಷಿಯು ಸತ್ಯವಾದದ್ದಲ್ಲ. 32 ಆದರೆ ನನ್ನ ವಿಷಯವಾಗಿ ಜನರಿಗೆ ಹೇಳುವ ಮತ್ತೊಬ್ಬ ವ್ಯಕ್ತಿಯಿದ್ದಾನೆ. ನನ್ನ ಬಗ್ಗೆ ಅವನು ಹೇಳುವ ಸಂಗತಿಗಳು ಸತ್ಯವಾಗಿವೆಯೆಂದು ನನಗೆ ಗೊತ್ತಿದೆ.

33 “ನೀವು ಯೋಹಾನನ ಬಳಿಗೆ ಜನರನ್ನು ಕಳುಹಿಸಿದ್ದಿರಿ. ಅವನು ನಿಮಗೆ ಸತ್ಯದ ಬಗ್ಗೆ ತಿಳಿಸಿದನು. 34 ಆದರೆ ನನ್ನ ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ನನಗೆ ಮನುಷ್ಯನೊಬ್ಬನ ಅಗತ್ಯವಿಲ್ಲ. ಆದರೆ ನಿಮಗೆ ರಕ್ಷಣೆಯಾಗಬೇಕೆಂದು ನಾನು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. 35 ಯೋಹಾನನು ಉರಿಯುವ ದೀಪದಂತೆ ಬೆಳಕನ್ನು ಕೊಟ್ಟನು ಮತ್ತು ನೀವು ಅವನ ಬೆಳಕನ್ನು ಸ್ವಲ್ಪಕಾಲ ಸಂತೋಷದಿಂದ ಅನುಭವಿಸಿದಿರಿ.

36 “ಆದರೆ ನನ್ನ ಬಗ್ಗೆ ನನ್ನಲ್ಲಿ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿಗಳಿವೆ. ನಾನು ಮಾಡುವ ಕಾರ್ಯಗಳೇ ನನ್ನ ಸಾಕ್ಷಿಗಳಾಗಿವೆ. ತಂದೆಯು ನನಗೆ ಕೊಟ್ಟಿರುವ ಈ ಕಾರ್ಯಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ ಎಂಬುದನ್ನು ತೋರಿಸುತ್ತವೆ. 37 ಅಲ್ಲದೆ ನನ್ನನ್ನು ಕಳುಹಿಸಿದ ತಂದೆಯು ನನ್ನ ಬಗ್ಗೆ ತಾನೇ ಸಾಕ್ಷಿ ಕೊಟ್ಟಿದ್ದಾನೆ. ಆದರೆ ನೀವು ಆತನ ಧ್ವನಿಯನ್ನು ಎಂದೂ ಕೇಳಿಲ್ಲ. ಆತನು ಹೇಗಿದ್ದಾನೆ ಎಂಬುದನ್ನು ನೀವು ಎಂದೂ ಕಂಡಿಲ್ಲ. 38 ತಂದೆಯ ಉಪದೇಶವು ನಿಮ್ಮಲ್ಲಿ ನೆಲೆಸಿಲ್ಲ. ಏಕೆಂದರೆ ತಂದೆಯು ಕಳುಹಿಸಿರುವಾತನನ್ನು ನೀವು ನಂಬುವುದಿಲ್ಲ. 39 ನೀವು ಪವಿತ್ರ ಗ್ರಂಥವನ್ನು ಜಾಗ್ರತೆಯಿಂದ ಅಧ್ಯಯನ ಮಾಡುತ್ತೀರಿ. ಆ ಪವಿತ್ರ ಗ್ರಂಥವು ನಿಮಗೆ ನಿತ್ಯಜೀವವನ್ನು ಕೊಡುತ್ತದೆ ಎಂಬುದು ನಿಮ್ಮ ಆಲೋಚನೆ. ಅದೇ ಪವಿತ್ರ ಗ್ರಂಥವು ನನ್ನ ಬಗ್ಗೆ ತಿಳಿಸುತ್ತದೆ! 40 ಆದರೆ ನೀವು ಬಯಸುವ ಆ ಜೀವವನ್ನು ನನ್ನ ಬಳಿಗೆ ಬಂದು ಹೊಂದಿಕೊಳ್ಳಲು ನಿಮಗೆ ಇಷ್ಟವಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International