Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 34:11-16

11 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ, “ನಾನೇ ಅವರಿಗೆ ಕುರುಬನಾಗಿರುವೆನು. ತಪ್ಪಿಹೋದ ಕುರಿಗಳನ್ನು ನಾನು ಹುಡುಕುವೆನು, ನಾನು ಅವರನ್ನು ಗಮನಿಸುತ್ತಾ ನಡೆಸುವೆನು. 12 ತಪ್ಪಿಹೋದ ಕುರಿಗಳಿಗಾಗಿ ಹುಡುಕುವ ಕುರುಬನಂತೆ ನನ್ನ ಕುರಿಗಳನ್ನು ಹುಡುಕಿ ರಕ್ಷಿಸುವೆನು. ಮೋಡ ಕವಿದ ಕಾರ್ಗತ್ತಲೆಯ ದಿನದಲ್ಲಿ ತಪ್ಪಿಸಿಕೊಂಡ ಅವುಗಳನ್ನು ಹುಡುಕಿ ತರುವೆನು. 13 ನನ್ನ ಕುರಿಗಳನ್ನು ಆ ದೇಶಗಳಿಂದ ಬರಮಾಡುವೆನು. ಆ ದೇಶಗಳಿಂದ ಅವುಗಳನ್ನು ಒಟ್ಟುಗೂಡಿಸುವೆನು. ಅವುಗಳ ಸ್ವಂತ ದೇಶಕ್ಕೆ ಹಿಂದಿರುಗಿಸುವೆನು. ಇಸ್ರೇಲರ ಬೆಟ್ಟಗಳಲ್ಲಿ ಅವುಗಳನ್ನು ಮೇಯಿಸುವೆನು. ನೀರಿನ ತೊರೆಗಳ ಬದಿಯಲ್ಲಿ ಜನರಿರುವ ಸ್ಥಳಗಳಲ್ಲಿ ನಾನು ಅವುಗಳನ್ನು ಮೇಯಿಸುವೆನು. 14 ಹುಲ್ಲುಗಾವಲಿಗೆ ನಾನು ಅವುಗಳನ್ನು ನಡೆಸುವೆನು. ಇಸ್ರೇಲಿನ ಎತ್ತರವಾದ ಬೆಟ್ಟಗಳಲ್ಲಿ ಅವು ಮೇಯುವವು. ಅಲ್ಲಿ ಒಳ್ಳೆಯ ಸ್ಥಳದಲ್ಲಿ ಅವುಗಳು ಮಲಗಿ ಹುಲ್ಲನ್ನು ಮೇಯುವವು. 15 ಹೌದು, ನಾನು ನನ್ನ ಮಂದೆಯನ್ನು ಮೇಯಿಸಿ ಅವುಗಳನ್ನು ವಿಶ್ರಾಂತಿಯ ಸ್ಥಳಕ್ಕೆ ನಡೆಸುವೆನು.” ಇದು ನನ್ನ ಒಡೆಯನಾದ ಯೆಹೋವನ ನುಡಿ.

16 “ಕಳೆದುಹೋದ ಕುರಿಗಳನ್ನು ನಾನು ಹುಡುಕುವೆನು. ಚದರಿಹೋಗಿದ್ದ ಕುರಿಗಳನ್ನು ಹಿಂದಕ್ಕೆ ತರುವೆನು. ಗಾಯಗೊಂಡ ಕುರಿಗಳನ್ನು ಬಟ್ಟೆಯಿಂದ ಸುತ್ತುವೆನು. ಬಲಹೀನ ಕುರಿಗಳನ್ನು ಬಲಶಾಲಿಯಾಗಿ ಮಾಡುವೆನು. ಆದರೆ ನಾನು ಕೊಬ್ಬಿದ, ಶಕ್ತಿಶಾಲಿಯಾದ ಕುರುಬರನ್ನು ನಾಶಮಾಡುವೆನು. ಯೋಗ್ಯವಾದ ಶಿಕ್ಷೆಯನ್ನು ಅವರಿಗೆ ಉಣಿಸುವೆನು.”

ಯೆಹೆಜ್ಕೇಲ 34:20-24

20 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನಾನು ಕೊಬ್ಬಿದ ಕುರಿಗಳಿಗೂ ಬಲಹೀನ ಕುರಿಗಳಿಗೂ ನ್ಯಾಯತೀರಿಸುವೆನು. 21 ನೀವು ನಿಮ್ಮ ಶಕ್ತಿಯಿಂದ ಬೇರೆ ಕುರಿಗಳನ್ನು ದೂಡಿಬಿಡುವಿರಿ. ನಿಮ್ಮ ಕೊಂಬುಗಳಿಂದ ಬಲಹೀನ ಕುರಿಗಳನ್ನು ಹಾದುಬಿಡುವಿರಿ. ಅವುಗಳು ಆ ಸ್ಥಳದಿಂದ ಓಡಿಬಿಡುವಂತೆ ಮಾಡುವಿರಿ. 22 ಆದ್ದರಿಂದ ನಾನು ನನ್ನ ಕುರಿಗಳನ್ನು ರಕ್ಷಿಸುವೆನು. ಅವುಗಳನ್ನು ಕಾಡುಪ್ರಾಣಿಗಳು ಇನ್ನು ಮುಂದೆ ಹಿಡಿಯಲಾರವು. ಅವುಗಳಲ್ಲಿ ಪ್ರತಿಯೊಂದಕ್ಕೂ ನಾನು ನ್ಯಾಯತೀರಿಸುವೆನು. 23 ಆಮೇಲೆ ನಾನು ಅವರಿಗೆ ಒಬ್ಬ ಕುರುಬನನ್ನು ನೇಮಿಸುವೆನು. ಅವನು ನನ್ನ ಸೇವಕನಾದ ದಾವೀದನು; ಅವನು ಅವರನ್ನು ಮೇಯಿಸುವನು ಮತ್ತು ಅವರಿಗೆ ಕುರುಬನಾಗುವನು. 24 ಯೆಹೋವನಾದ ನಾನು ಅವರಿಗೆ ದೇವರಾಗಿರುವೆನು. ನನ್ನ ಸೇವಕನಾದ ದಾವೀದನು ಅವರೊಂದಿಗೆ ವಾಸಿಸುತ್ತಾ ಅವರನ್ನು ಆಳುವನು. ಇದು ಯೆಹೋವನಾದ ನನ್ನ ನುಡಿ.

ಕೀರ್ತನೆಗಳು 95:1-7

95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
    ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
    ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
    ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
    ಭೂಮಿಯೂ ಆತನ ಕೈಕೆಲಸವೇ.
ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
    ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
ನಮ್ಮ ದೇವರು ಆತನೇ, ನಾವು ಆತನವರೇ.
    ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.

ಎಫೆಸದವರಿಗೆ 1:15-23

ಪೌಲನ ಪ್ರಾರ್ಥನೆ

15-16 ಆದಕಾರಣವೇ ನನ್ನ ಪ್ರಾರ್ಥನೆಗಳಲ್ಲಿ ನಾನು ನಿಮ್ಮನ್ನು ಜ್ಞಾಪಿಸಿಕೊಂಡು ನಿಮ್ಮ ವಿಷಯದಲ್ಲಿ ದೇವರಿಗೆ ಯಾವಾಗಲೂ ಸ್ತೋತ್ರ ಸಲ್ಲಿಸುತ್ತೇನೆ. ಪ್ರಭುವಾದ ಯೇಸುವಿನಲ್ಲಿ ನಿಮಗಿರುವ ನಂಬಿಕೆಯ ಬಗ್ಗೆ ಮತ್ತು ಎಲ್ಲಾ ದೇವಜನರ ಮೇಲೆ ನಿಮಗಿರುವ ಪ್ರೀತಿಯ ಬಗ್ಗೆ ಕೇಳಿದಂದಿನಿಂದ ನಾನು ನಿಮ್ಮ ವಿಷಯದಲ್ಲಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 17 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ದೇವರೂ ಮಹಿಮಾ ಸ್ವರೂಪನಾದ ತಂದೆಯೂ ಆಗಿರುವಾತನಿಗೆ ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ದೇವರ ಜ್ಞಾನದಿಂದ ಅಂದರೆ ಆತನು ನಿಮಗೆ ತಿಳಿಯಪಡಿಸಿದ ಜ್ಞಾನದಿಂದ ನಿಮ್ಮನ್ನು ವಿವೇಕಿಗಳನ್ನಾಗಿ ಮಾಡುವಂಥ ಆತ್ಮವನ್ನು ಆತನು ನಿಮಗೆ ಅನುಗ್ರಹಿಸಲೆಂದು ನಾನು ಪ್ರಾರ್ಥಿಸುತ್ತೇನೆ.

18 ನೀವು ನಿಮ್ಮ ಹೃದಯದಲ್ಲಿ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಹೊಂದಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ. ನಾವು ಎಂಥ ನಿರೀಕ್ಷೆಯನ್ನು ಹೊಂದಿಕೊಳ್ಳಬೇಕೆಂದು ದೇವರು ನಮ್ಮನ್ನು ಆರಿಸಿಕೊಂಡನೆಂಬುದನ್ನು ಆಗ ತಿಳಿದುಕೊಳ್ಳುವಿರಿ; ಆತನು ತನ್ನ ಪರಿಶುದ್ಧ ಜನರಿಗೆ ವಾಗ್ದಾನ ಮಾಡಿದ ಆಶೀರ್ವಾದಗಳು ಎಷ್ಟು ಮಹಿಮಾತಿಶಯವಾಗಿವೆ ಎಂಬುದನ್ನು ತಿಳಿದುಕೊಳ್ಳುವಿರಿ. 19 ನಂಬಿಕೆಯಿಡುವಂಥ ನಮಗೆ ದೇವರ ಶಕ್ತಿಯು ಎಷ್ಟು ಮಹತ್ವವುಳ್ಳದ್ದಾಗಿದೆ ಎಂಬುದನ್ನೂ ಆಗ ನೀವು ತಿಳಿದುಕೊಳ್ಳುವಿರಿ. ಕ್ರಿಸ್ತನನ್ನು ಮರಣದಿಂದ ಜೀವಂತನಾಗಿ ಎಬ್ಬಿಸಲು ದೇವರು ಉಪಯೋಗಿಸಿದ ಮಹಾಶಕ್ತಿ ಅದೇ. 20 ದೇವರು ಕ್ರಿಸ್ತನನ್ನು ಪರಲೋಕದೊಳಗೆ ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. 21 ದೇವರು ಕ್ರಿಸ್ತನನ್ನು ಎಲ್ಲಾ ಅಧಿಪತಿಗಳಿಗಿಂತಲೂ ಅಧಿಕಾರಿಗಳಿಗಿಂತಲೂ ಶಕ್ತಿಗಳಿಗಿಂತಲೂ ರಾಜರುಗಳಿಗಿಂತಲೂ ಪ್ರಮುಖನನ್ನಾಗಿ ಮಾಡಿದನು. ಈ ಲೋಕದಲ್ಲಾಗಲಿ ಮುಂದಿನ ಲೋಕದಲ್ಲಾಗಲಿ ಕೊಡಲ್ಪಟ್ಟಿರುವ ಯಾವುದೇ ಹೆಸರುಳ್ಳವರಿಗಿಂತಲೂ ಕ್ರಿಸ್ತನು ಪ್ರಮುಖನಾಗಿದ್ದಾನೆ. 22 ದೇವರು ಪ್ರತಿಯೊಂದನ್ನು ಕ್ರಿಸ್ತನ ಅಧಿಕಾರಕ್ಕೆ ಒಳಪಡಿಸಿದನು. ಸಭೆಗೋಸ್ಕರವಾಗಿ ದೇವರು ಆತನನ್ನು ಪ್ರತಿಯೊಂದರ ಮೇಲೆ ಶಿರಸ್ಸನ್ನಾಗಿ ಮಾಡಿದನು. 23 ಸಭೆಯು ಕ್ರಿಸ್ತನ ದೇಹವಾಗಿದೆ. ಸಭೆಯು ಕ್ರಿಸ್ತನಿಂದ ಆವರಿಸಲ್ಪಟ್ಟಿದೆ. ಆತನು ಸಮಸ್ತವನ್ನು ಪ್ರತಿಯೊಂದು ವಿಷಯದಲ್ಲಿಯೂ ಸಂಪೂರ್ಣಗೊಳಿಸುತ್ತಾನೆ.

ಮತ್ತಾಯ 25:31-46

ಸರ್ವರಿಗೂ ಮನುಷ್ಯಕುಮಾರನು ನೀಡುವ ತೀರ್ಪು

31 “ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಮತ್ತೆ ಬರುವಾಗ ರಾಜನಾಗಿ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾನೆ. 32 ಭೂಲೋಕದ ಜನರೆಲ್ಲರೂ ಆತನ ಮುಂದೆ ಒಟ್ಟುಗೂಡುತ್ತಾರೆ. ಕುರುಬನು ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸಿದಂತೆ ಆತನು ಅವರನ್ನು ಬೇರ್ಪಡಿಸುವನು; 33 ಮನುಷ್ಯಕುಮಾರನು ಕುರಿಗಳನ್ನು ತನ್ನ ಬಲಗಡೆಯಲ್ಲಿಯೂ ಮತ್ತು ಆಡುಗಳನ್ನು ತನ್ನ ಎಡಗಡೆಯಲ್ಲಿಯೂ ನಿಲ್ಲಿಸುವನು.

34 “ಆಗ ರಾಜನು ತನ್ನ ಬಲಗಡೆಯಲ್ಲಿರುವ ಜನರಿಗೆ, ‘ಬನ್ನಿರಿ, ನನ್ನ ತಂದೆ ನಿಮಗೆ ಮಹಾ ಆಶೀರ್ವಾದಗಳನ್ನು ಕೊಟ್ಟಿದ್ದಾನೆ. ಬನ್ನಿರಿ, ದೇವರು ನಿಮಗೆ ವಾಗ್ದಾನ ಮಾಡಿದ ರಾಜ್ಯವನ್ನು ಪಡೆದುಕೊಳ್ಳಿರಿ. ಆ ರಾಜ್ಯವು ಲೋಕ ಉಂಟಾದಂದಿನಿಂದ ನಿಮಗಾಗಿ ಸಿದ್ಧಮಾಡಲ್ಪಟ್ಟಿದೆ. 35 ನೀವು ಈ ರಾಜ್ಯವನ್ನು ಪಡೆದುಕೊಳ್ಳಿರಿ. ಏಕೆಂದರೆ ನಾನು ಹಸಿದಿದ್ದೆನು. ನೀವು ನನಗೆ ಊಟ ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಒಬ್ಬಂಟಿಗನಾಗಿ ಮನೆಯಿಂದ ದೂರದಲ್ಲಿ ಇದ್ದಾಗ, ನೀವು ನನ್ನನ್ನು ನಿಮ್ಮ ಮನೆಯೊಳಗೆ ಸೇರಿಸಿಕೊಂಡಿರಿ. 36 ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಟ್ಟಿರಿ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು, ನೀವು ನನಗೆ ಆರೈಕೆ ಮಾಡಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡುವುದಕ್ಕೆ ಬಂದಿರಿ’ ಎಂದು ಹೇಳುತ್ತಾನೆ.

37 “ಆಗ ಒಳ್ಳೆಯ ಜನರು, ‘ಪ್ರಭುವೇ, ನೀನು ಹಸಿದಿದ್ದನ್ನು ನೋಡಿ ಯಾವಾಗ ನಿನಗೆ ಆಹಾರ ಕೊಟ್ಟೆವು? ನೀನು ಬಾಯಾರಿದ್ದನ್ನು ನೋಡಿ ಯಾವಾಗ ಕುಡಿಯುವುದಕ್ಕೆ ಕೊಟ್ಟೆವು? 38 ನೀನು ಒಬ್ಬಂಟಿಗನಾಗಿ ಮನೆಯಿಂದ ದೂರವಾಗಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ನಮ್ಮ ಮನೆಗಳೊಳಗೆ ಸೇರಿಸಿಕೊಂಡೆವು? ನಿನಗೆ ಬಟ್ಟೆಯಿಲ್ಲದಿರುವುದನ್ನು ನೋಡಿ ಯಾವಾಗ ಉಡುವುದಕ್ಕೆ ಕೊಟ್ಟೆವು? 39 ನೀನು ಕಾಯಿಲೆ ಬಿದ್ದಿದ್ದನ್ನು ಅಥವಾ ಸೆರೆಯಲ್ಲಿ ಇದ್ದದ್ದನ್ನು ನೋಡಿ ಯಾವಾಗ ನಿನ್ನನ್ನು ಆರೈಕೆ ಮಾಡಿದೆವು?’ ಎಂದು ಹೇಳುವರು.

40 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗಾಗಿ ಏನೇನು ಮಾಡುತ್ತೀರೋ ಅದೆಲ್ಲವನ್ನು ನನಗೂ ಮಾಡಿದಂತಾಯಿತು’ ಎಂದು ಉತ್ತರಕೊಡುವನು.

41 “ಆಮೇಲೆ ರಾಜನು ತನ್ನ ಎಡಗಡೆಯಿದ್ದ ಜನರಿಗೆ, ‘ನನ್ನಿಂದ ತೊಲಗಿಹೋಗಿರಿ, ನಿಮಗೆ ಶಿಕ್ಷೆಯಾಗಬೇಕೆಂದು ದೇವರು ತೀರ್ಮಾನಿಸಿದ್ದಾನೆ. ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. 42 ಏಕೆಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯಲು ಕೊಡಲಿಲ್ಲ. 43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ನಿಮ್ಮ ಮನೆಯೊಳಕ್ಕೆ ಸೇರಿಸಿಕೊಳ್ಳಲಿಲ್ಲ. ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು ಮತ್ತು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡಿಕೊಳ್ಳಲಿಲ್ಲ’ ಎಂದು ಹೇಳುವನು.

44 “ಅವರು, ‘ಪ್ರಭುವೇ, ನೀನು ಯಾವಾಗ ಹಸಿದಿದ್ದೆ ಮತ್ತು ಬಾಯಾರಿದ್ದೆ? ನೀನು ಯಾವಾಗ ಆಶ್ರಯವಿಲ್ಲದವನಾಗಿದ್ದೆ? ನಿನಗೆ ಯಾವಾಗ ಬಟ್ಟೆಯಿರಲಿಲ್ಲ? ನೀನು ಯಾವಾಗ ಕಾಯಿಲೆ ಬಿದ್ದಿದ್ದೆ ಮತ್ತು ಸೆರೆವಾಸದಲ್ಲಿದ್ದೆ? ಇವೆಲ್ಲವನ್ನು ನಾವು ನೋಡಿಯೂ ನಿನಗೆ ಸಹಾಯ ಮಾಡದೆ ಹೋದದ್ದು ಯಾವಾಗ?’ ಎಂದು ಉತ್ತರಿಸುವರು.

45 “ಆಗ ರಾಜನು, ‘ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಇಲ್ಲಿ ನನ್ನ ಜನರಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡದಂತಾಯಿತು’ ಎಂದು ಉತ್ತರಕೊಡುವನು.

46 “ಆಗ ಕೆಟ್ಟಜನರು ಅಲ್ಲಿಂದ ಹೊರಟುಹೋಗುವರು. ಅವರಿಗೆ ನಿತ್ಯದಂಡನೆಯಾಗುವುದು. ಒಳ್ಳೆಯ ಜನರಾದರೋ ನಿತ್ಯಜೀವವನ್ನು ಹೊಂದುವರು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International