Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 95:1-7

95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
    ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
    ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
    ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
    ಭೂಮಿಯೂ ಆತನ ಕೈಕೆಲಸವೇ.
ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
    ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
ನಮ್ಮ ದೇವರು ಆತನೇ, ನಾವು ಆತನವರೇ.
    ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.

ಯೆಶಾಯ 44:21-28

ನಿಜದೇವರಾದ ಯೆಹೋವನು ಇಸ್ರೇಲರ ಸಹಾಯಕನು

21 “ಯಾಕೋಬೇ, ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊ!
    ಇಸ್ರೇಲೇ, ನೀನು ನನ್ನ ಸೇವಕನೆಂಬುದನ್ನು ನೆನಪಿನಲ್ಲಿಟ್ಟುಕೊ!
ನಾನೇ ನಿನ್ನನ್ನು ನಿರ್ಮಿಸಿದೆನು; ನೀನೇ ನನ್ನ ಸೇವಕನು.
    ಆದ್ದರಿಂದ ಇಸ್ರೇಲೇ, ನನ್ನನ್ನು ಮರೆತುಬಿಡಬೇಡ.
22 ನಿನ್ನ ಪಾಪಗಳು ದೊಡ್ಡ ಮೋಡದಂತಿವೆ.
    ಆದರೆ ನಾನು ಅವುಗಳನ್ನು ಅಳಿಸಿಬಿಟ್ಟಿದ್ದೇನೆ.
ನಿನ್ನ ಪಾಪಗಳನ್ನು ಗಾಳಿಯಲ್ಲಿ ಹಾರಿಹೋದ
    ಮೋಡದಂತೆ ಹಾರಿಸಿಬಿಟ್ಟಿದ್ದೇನೆ.
ನಾನು ನಿನ್ನನ್ನು ರಕ್ಷಿಸಿದೆನು.
    ಆದ್ದರಿಂದ ನನ್ನ ಬಳಿಗೆ ಹಿಂತಿರುಗಿ ಬಾ.”

23 ಯೆಹೋವನು ಮಹಾ ಕಾರ್ಯಗಳನ್ನು ಮಾಡಿದ್ದರಿಂದ ಆಕಾಶವು ಹರ್ಷಿಸುತ್ತದೆ.
    ಭೂಮಿಯೂ ಭೂಮಿಯ ಅಧೋಭಾಗವೂ ಸಂತೋಷಿಸುತ್ತದೆ.
ಪರ್ವತಗಳು ಕೃತಜ್ಞತಾಸ್ತುತಿಗಳನ್ನು ಮಾಡುತ್ತವೆ.
    ಅರಣ್ಯದಲ್ಲಿರುವ ಎಲ್ಲಾ ಮರಗಳು ಹರ್ಷಿಸುತ್ತವೆ.
ಯಾಕೆಂದರೆ ಯೆಹೋವನು ಯಾಕೋಬನನ್ನು ರಕ್ಷಿಸಿದನು,
    ಇಸ್ರೇಲಿಗೆ ಆತನು ಅದ್ಭುತಕಾರ್ಯವನ್ನು ಮಾಡಿದ್ದಾನೆ.
24 ಯೆಹೋವನು ನಿನ್ನನ್ನು ರೂಪಿಸಿದನು.
    ನೀನು ನಿನ್ನ ತಾಯಿಯ ಗರ್ಭದಲ್ಲಿರುವಾಗಲೇ ಆತನು ನಿನ್ನನ್ನು ರೂಪಿಸಿದನು.
ಆತನು ಹೇಳುವುದೇನೆಂದರೆ, “ಯೆಹೋವನಾದ ನಾನು ಸಮಸ್ತವನ್ನೂ ಸೃಷ್ಟಿಸಿದೆನು.
    ಆಕಾಶಮಂಡಲವನ್ನು ಅದರ ಸ್ಥಳದಲ್ಲಿ ಇಟ್ಟೆನು;
    ಭೂಮಿಯನ್ನು ನನ್ನ ಮುಂದೆ ಹರಡಿದೆನು.”

25 ಸುಳ್ಳುಪ್ರವಾದಿಗಳು ಸುಳ್ಳನ್ನೇ ಹೇಳುತ್ತಾರೆ. ಅವರು ಹೇಳಿದ್ದೆಲ್ಲವೂ ಸುಳ್ಳು ಎಂದು ಯೆಹೋವನು ತೋರಿಸಿಕೊಡುತ್ತಾನೆ. ಮಂತ್ರಗಾರರನ್ನು ದೇವರು ಮೂರ್ಖರನ್ನಾಗಿ ಮಾಡುತ್ತಾನೆ. ಆತನು ಜ್ಞಾನಿಗಳನ್ನು ಗಲಿಬಿಲಿಗೊಳಿಸುತ್ತಾನೆ. ಅವರು ತಮಗೆ ಎಲ್ಲವೂ ಗೊತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ದೇವರು ಅವರನ್ನು ಮೂಢರನ್ನಾಗಿ ಮಾಡುತ್ತಾನೆ. 26 ಯೆಹೋವನು ತನ್ನ ಸೇವಕರನ್ನು ಜನರಿಗೆ ಸಂದೇಶ ತಿಳಿಸುವದಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದಾನೆ. ಆತನ ಸಂದೇಶಗಳು ಸತ್ಯವಾದವುಗಳಾಗಿವೆ. ಜನರು ಮಾಡಬೇಕಾದ ಕಾರ್ಯಗಳ ಬಗ್ಗೆ ಯೆಹೋವನು ಸಂದೇಶಕರನ್ನು ಕಳುಹಿಸುತ್ತಾನೆ. ಅವರ ಸಲಹೆಯು ಒಳ್ಳೆಯದೆಂದು ಯೆಹೋವನು ತೋರಿಸಿಕೊಡುತ್ತಾನೆ.

ಯೆಹೂದದ ಪುನರ್ ನಿರ್ಮಾಣದಲ್ಲಿ ಸೈರಸನ ಪಾತ್ರ

ಯೆಹೋವನು ಜೆರುಸಲೇಮಿಗೆ, “ಜನರು ನಿನ್ನಲ್ಲಿ ಮತ್ತೆ ವಾಸಮಾಡುವರು” ಎಂತಲೂ
    ಯೆಹೂದದ ನಗರಗಳಿಗೆ, “ನೀವು ತಿರುಗಿ ಕಟ್ಟಲ್ಪಡುವಿರಿ” ಎಂತಲೂ
    ಕೆಡವಲ್ಪಟ್ಟ ನಗರಗಳಿಗೆ, “ನಾನು ತಿರುಗಿ ನಿಮ್ಮನ್ನು ನಗರಗಳನ್ನಾಗಿ ಮಾಡುತ್ತೇನೆ” ಎಂತಲೂ ಹೇಳುತ್ತಾನೆ.
27 ಆಳವಾದ ನೀರಿಗೆ, “ಒಣಗಿಹೋಗು,
    ನಿನ್ನ ಬುಗ್ಗೆಗಳನ್ನು ನಾನು ಬತ್ತಿಸುವೆನು” ಎಂದು ಯೆಹೋವನು ಅನ್ನುತ್ತಾನೆ.
28 ಸೈರಸನಿಗೆ ಯೆಹೋವನು ಹೀಗೆನ್ನುತ್ತಾನೆ, “ನೀನೇ ನನ್ನ ಕುರುಬನು.
    ನಾನು ಬಯಸುವ ಕಾರ್ಯಗಳನ್ನು ನೀನು ಮಾಡುವೆ.
    ನೀನು ಜೆರುಸಲೇಮಿಗೆ, ‘ನೀನು ಕಟ್ಟಲ್ಪಡುವೆ’ ಎಂದೂ
    ದೇವಾಲಯಕ್ಕೆ ‘ನಿನ್ನ ಅಸ್ತಿವಾರವು ಮತ್ತೆ ಹಾಕಲ್ಪಡುವದು’ ಎಂದೂ ಹೇಳುವೆ.”

ಮತ್ತಾಯ 12:46-50

ಯೇಸುವಿನ ಶಿಷ್ಯರೇ ಆತನ ಕುಟುಂಬ

(ಮಾರ್ಕ 3:31-35; ಲೂಕ 8:19-21)

46 ಯೇಸುವು ಜನರೊಂದಿಗೆ ಮಾತಾಡುತ್ತಿರುವಾಗ, ಆತನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡರು. ಅವರು ಆತನೊಂದಿಗೆ ಮಾತಾಡಬೇಕೆಂದಿದ್ದರು. 47 ಒಬ್ಬನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾದಿದ್ದಾರೆ, ಅವರು ನಿನ್ನೊಂದಿಗೆ ಮಾತಾಡಬೇಕೆಂದಿದ್ದಾರೆ” ಎಂದನು.

48 ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಉತ್ತರಕೊಟ್ಟು, 49 ತನ್ನ ಶಿಷ್ಯರ ಕಡೆಗೆ ಕೈ ತೋರಿಸಿ, “ನೋಡಿ! ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು. 50 ಪರಲೋಕದಲ್ಲಿರುವ ನನ್ನ ತಂದೆ ಇಚ್ಛಿಸುವಂಥವುಗಳನ್ನು ಮಾಡುವವನೇ ನನ್ನ ನಿಜವಾದ ಸಹೋದರ, ಸಹೋದರಿ ಮತ್ತು ತಾಯಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International