Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 95:1-7

95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
    ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
    ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
    ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
    ಭೂಮಿಯೂ ಆತನ ಕೈಕೆಲಸವೇ.
ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
    ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
ನಮ್ಮ ದೇವರು ಆತನೇ, ನಾವು ಆತನವರೇ.
    ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.

1 ಪೂರ್ವಕಾಲವೃತ್ತಾಂತ 17:1-15

ದಾವೀದನಿಗೆ ದೇವರ ವಾಗ್ದಾನ

17 ದಾವೀದನು ತನ್ನ ಮನೆಗೆ ಹಿಂತಿರುಗಿದ ಬಳಿಕ ಪ್ರವಾದಿಯಾದ ನಾತಾನನಿಗೆ, “ನಾನು ದೇವದಾರು ಮರಗಳಿಂದ ಮಾಡಿದ ಮನೆಯಲ್ಲಿ ವಾಸಮಾಡುತ್ತಿರುವಾಗ ದೇವರ ಒಡಂಬಡಿಕೆಯ ಪೆಟ್ಟಿಗೆಯು ಗುಡಾರದೊಳಗೆ ಇಡಲ್ಪಟ್ಟಿದೆ. ದೇವರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದಿರುವೆ” ಎಂದನು.

ಅದಕ್ಕೆ ನಾತಾನನು, “ನಿನ್ನ ಮನಸ್ಸಿಗೆ ಬಂದಂತೆ ಮಾಡು. ದೇವರು ನಿನ್ನೊಂದಿಗಿದ್ದಾನೆ” ಎಂದನು.

ಆದರೆ ಆ ರಾತ್ರಿ ದೇವರ ಮಾತು ನಾತಾನನಿಗೆ ಬಂತು. ದೇವರು ಅವನಿಗೆ,

“ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ನನಗೋಸ್ಕರ ಆಲಯವನ್ನು ಕಟ್ಟುವವನು ನೀನಲ್ಲ. 5-6 ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿದಂದಿನಿಂದ ಈ ದಿವಸದ ತನಕ ನಾನು ಮನೆಯಲ್ಲಿ ವಾಸವಾಗಿರಲಿಲ್ಲ. ನಾನು ಗುಡಾರದಲ್ಲಿಯೇ ಇದ್ದುಕೊಂಡು ಸಂಚರಿಸುತ್ತಿದ್ದೆನು. ಇಸ್ರೇಲರ ನಾಯಕರಾಗುವದಕ್ಕೆ ನಾನು ಕೆಲವರನ್ನು ಆರಿಸಿಕೊಂಡಿದ್ದೇನೆ. ಆ ನಾಯಕರು ನನ್ನ ಜನರಿಗೆ ಕುರುಬರಂತಿದ್ದಾರೆ. ಅವರೊಂದಿಗೆ ನಾನು ಬೇರೆಬೇರೆ ಸ್ಥಳಗಳಿಗೆ ಸಂಚರಿಸುತ್ತಿದ್ದಾಗ ನಾನೆಂದೂ ನನಗೊಂದು ಆಲಯವನ್ನು ದೇವದಾರು ಮರದಿಂದ ಕಟ್ಟಲು ಕೇಳಿಕೊಂಡಿರಲಿಲ್ಲ.’

“ನನ್ನ ಸೇವಕನಾದ ದಾವೀದನಿಗೆ ಹೇಳು: ಸರ್ವಶಕ್ತನಾದ ದೇವರು ಹೀಗೆನ್ನುತ್ತಾನೆ: ‘ಕುರಿಗಳನ್ನು ಮೇಯಿಸುತ್ತಿದ್ದ ನಿನ್ನನ್ನು ನಾನು ಆರಿಸಿಕೊಂಡೆನು; ನನ್ನ ಜನರಾದ ಇಸ್ರೇಲರ ಮೇಲೆ ನಿನ್ನನ್ನು ಅರಸನನ್ನಾಗಿ ಮಾಡಿದೆನು. ನೀನು ಹೋದಲ್ಲೆಲ್ಲಾ ನಿನ್ನೊಂದಿಗೆ ನಾನಿದ್ದೆನು; ನಿನ್ನ ಮುಂದೆ ಹೋಗಿ ನಿನ್ನ ವೈರಿಗಳನ್ನು ಸಾಯಿಸಿದೆನು. ಈಗ ನಾನು ನಿನ್ನನ್ನು ಲೋಕದಲ್ಲಿ ಎಲ್ಲರಿಗಿಂತಲೂ ಪ್ರಸಿದ್ಧಿ ಹೊಂದುವಂತೆ ಮಾಡುವೆನು. ನಾನು ಈ ದೇಶವನ್ನು ನನ್ನ ಜನರಾದ ಇಸ್ರೇಲರಿಗೆ ಕೊಡುವೆನು; ಅವರು ಮರಗಳನ್ನು ನೆಟ್ಟು ಅದರ ನೆರಳಡಿಯಲ್ಲಿ ಸಮಾಧಾನದಿಂದ ವಾಸಿಸುವರು; ಅವರನ್ನು ಯಾರೂ ಬಾಧಿಸರು. ದುಷ್ಟರು ಮುಂಚಿನಂತೆ ಅವರಿಗೆ ಕೇಡುಮಾಡರು. 10 ಅವರನ್ನು ಸಂರಕ್ಷಿಸಲು ನಾನು ನಾಯಕರನ್ನು ಎಬ್ಬಿಸುವೆನು; ನಾನು ನಿನ್ನ ವೈರಿಗಳನ್ನೆಲ್ಲಾ ಸೋಲಿಸಿಬಿಡುವೆನು.

“‘ನಿನ್ನ ಮನೆತನವನ್ನು ನಾನು ಕಟ್ಟುವೆನು. 11 ನೀನು ಸತ್ತು ನಿನ್ನ ಪೂರ್ವಿಕರ ಬಳಿ ಸೇರಿದಾಗ ನಾನು ನಿನ್ನ ಮಕ್ಕಳಲ್ಲಿ ಒಬ್ಬನನ್ನು ಅರಸನನ್ನಾಗಿ ಮಾಡುವೆನು. ನಾನು ಅವನ ರಾಜ್ಯವನ್ನು ಸ್ಥಿರಪಡಿಸುವೆನು. 12 ನಿನ್ನ ಮಗನು ನನಗೆ ಆಲಯವನ್ನು ಕಟ್ಟುವನು. ನಿನ್ನ ಮಗನ ವಂಶವು ಸದಾಕಾಲಕ್ಕೂ ಇಸ್ರೇಲ್ ಜನಾಂಗವನ್ನು ಆಳುವದು. 13 ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಸೌಲನು ರಾಜನಾಗಿದ್ದನು. ಆದರೆ ನಾನು ಅವನನ್ನು ತೆಗೆದುಹಾಕಿದೆನು. ಆದರೆ ನನ್ನ ಕೃಪೆ ನಿನ್ನ ಮಗನಿಂದ ತೊಲಗಿಹೋಗುವದಿಲ್ಲ. 14 ನನ್ನ ಮನೆಗೂ ನನ್ನ ರಾಜ್ಯಕ್ಕೂ ಅವನನ್ನು ನಿತ್ಯದ ರಾಜನನ್ನಾಗಿ ಮಾಡುವೆನು; ಅವನ ಆಳ್ವಿಕೆಯು ನಿರಂತರವಾಗಿರುವುದು.’”

15 ನಾತಾನನು ದಾವೀದನಿಗೆ ತನಗೆ ದೊರೆತ ದರ್ಶನವನ್ನು ಮತ್ತು ದೇವರು ತನಗೆ ತಿಳಿಸಿದ ಎಲ್ಲಾ ಮಾತುಗಳನ್ನು ತಿಳಿಸಿದನು.

ಪ್ರಕಟನೆ 22:1-9

22 ಆಗ ದೇವದೂತನು ನನಗೆ ಜೀವಜಲದ ನದಿಯನ್ನು ತೋರಿಸಿದನು. ಆ ನದಿಯು ಸ್ಫಟಿಕದಂತೆ ಪ್ರಕಾಶಮಾನವಾಗಿತ್ತು. ಆ ನದಿಯು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಆಗಮಿಸಿ, ನಗರದ ಬೀದಿಯ ಮಧ್ಯಭಾಗದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲಿಯೂ ಜೀವವೃಕ್ಷಗಳಿದ್ದ್ದವು. ಆ ಜೀವವೃಕ್ಷವು ಪ್ರತಿತಿಂಗಳು ಫಲವನ್ನು ಫಲಿಸುತ್ತಾ ವರ್ಷದಲ್ಲಿ ಹನ್ನೆರಡು ತರದ ಫಲಗಳನ್ನು ನೀಡುತ್ತದೆ. ಆ ವೃಕ್ಷದ ಎಲೆಗಳು ಜನಾಂಗದವರನ್ನು ಗುಣಪಡಿಸುತ್ತವೆ.

ದೇವರಿಂದ ಶಾಪ ಹೊಂದಿದ ಯಾವುದೂ ಆ ಪಟ್ಟಣದಲ್ಲಿರುವುದಿಲ್ಲ. ದೇವರ ಮತ್ತು ಕುರಿಮರಿಯಾದಾತನ (ಯೇಸು) ಸಿಂಹಾಸನವು ಆ ನಗರದಲ್ಲಿರುತ್ತದೆ. ದೇವರ ಸೇವಕರು ಆತನನ್ನು ಆರಾಧಿಸುತ್ತಾರೆ. ಅವರು ಆತನ ಮುಖವನ್ನು ನೋಡುತ್ತಾರೆ. ದೇವರ ಹೆಸರನ್ನು ಅವರ ಹಣೆಗಳ ಮೇಲೆ ಬರೆಯಲಾಗುತ್ತದೆ. ಅಲ್ಲಿ ರಾತ್ರಿಯೆಂಬುದೇ ಇರುವುದಿಲ್ಲ. ಜನರಿಗೆ ದೀಪದ ಬೆಳಕಾಗಲಿ ಸೂರ್ಯನ ಬೆಳಕಾಗಲಿ ಬೇಕಾಗುವುದಿಲ್ಲ. ಪ್ರಭುವಾದ ದೇವರೇ ಅವರಿಗೆ ಬೆಳಕನ್ನು ನೀಡುತ್ತಾನೆ. ಅವರು ಯುಗಯುಗಾಂತರಗಳಲ್ಲಿ ರಾಜರುಗಳಂತೆ ಆಳುತ್ತಾರೆ.

ಆ ದೇವದೂತನು ನನಗೆ, “ಈ ವಾಕ್ಯಗಳು ಸತ್ಯವಾದವುಗಳೂ ನಂಬತಕ್ಕವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳಿಗೆ ಪ್ರಭುವೇ ದೇವರಾಗಿದ್ದಾನೆ. ಬೇಗನೆ ಸಂಭವಿಸಲಿರುವ ಸಂಗತಿಗಳನ್ನು ತನ್ನ ಸೇವಕರಿಗೆ ತೋರಿಸಲು ದೇವರು ತನ್ನ ದೂತನನ್ನು ಕಳುಹಿಸಿದ್ದಾನೆ: ‘ಕೇಳಿರಿ, ನಾನು ಬೇಗನೆ ಬರುತ್ತೇನೆ! ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳಿಗೆ ವಿಧೇಯತೆಯಿಂದಿರುವವನು ಧನ್ಯನಾಗುತ್ತಾನೆ’” ಎಂದು ಹೇಳಿದನು.

ನಾನೇ ಯೋಹಾನನು. ನಾನು ಇವುಗಳನ್ನೆಲ್ಲ ಕೇಳಿದೆನು ಮತ್ತು ನೋಡಿದೆನು. ನಾನು ಇವುಗಳನ್ನು ಕೇಳಿ, ಕಂಡಾಗ, ನನಗೆ ಇವುಗಳನ್ನೆಲ್ಲ ತೋರಿಸಿದ ದೇವದೂತನನ್ನು ಆರಾಧಿಸುವುದಕ್ಕಾಗಿ ಅವನ ಪಾದಗಳಿಗೆ ಅಡ್ಡಬಿದ್ದೆನು. ಆದರೆ ಆ ದೇವದೂತನು ನನಗೆ, “ನನ್ನನ್ನು ಆರಾಧಿಸಬೇಡ! ನಾನು ನಿನ್ನಂತೆ, ಈ ಪುಸ್ತಕದಲ್ಲಿರುವ ವಾಕ್ಯಗಳಿಗೆ ವಿಧೇಯರಾಗಿರುವ ಎಲ್ಲ ಜನರಂತೆ ಮತ್ತು ನಿನ್ನ ಸಹೋದರರಾದ ಪ್ರವಾದಿಗಳಂತೆ ಒಬ್ಬ ಸೇವಕನು. ನೀನು ದೇವರನ್ನು ಆರಾಧಿಸಬೇಕು!” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International