Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 95:1-7

95 ಬನ್ನಿರಿ, ನಾವು ಯೆಹೋವನನ್ನು ಸ್ತುತಿಸೋಣ!
    ನಮಗೆ ಬಂಡೆಯಾಗಿರುವಾತನನ್ನು ಕೊಂಡಾಡೋಣ.
ಆತನಿಗೆ ಕೃತಜ್ಞತಾಸುತ್ತಿ ಮಾಡೋಣ.
    ಸ್ತುತಿಗೀತೆಗಳೊಡನೆ ಆನಂದಘೋಷ ಮಾಡೋಣ.
ಯಾಕೆಂದರೆ ಯೆಹೋವನು ಮಹಾದೇವರಾಗಿದ್ದಾನೆ!
    ಆತನು ದೇವರುಗಳಿಗೆಲ್ಲಾ ಮಹಾರಾಜನಾಗಿದ್ದಾನೆ.
ಭೂಮಿಯ ಆಳವೂ ಉನ್ನತೋನ್ನತವಾದ ಶಿಖರಗಳೂ ಆತನವೇ.
ಸಮುದ್ರವು ಆತನದೇ, ಅದನ್ನು ಸೃಷ್ಟಿಸಿದಾತನು ಆತನೇ.
    ಭೂಮಿಯೂ ಆತನ ಕೈಕೆಲಸವೇ.
ಬನ್ನಿರಿ, ಆತನಿಗೆ ಅಡ್ಡಬಿದ್ದು ಆರಾಧಿಸೋಣ.
    ನಮ್ಮನ್ನು ಸೃಷ್ಟಿಸಿದ ಯೆಹೋವನನ್ನು ಕೊಂಡಾಡೋಣ.
ನಮ್ಮ ದೇವರು ಆತನೇ, ನಾವು ಆತನವರೇ.
    ಆತನ ಸ್ವರಕ್ಕೆ ಕಿವಿಗೊಡುವುದಾದರೆ ಇಂದೇ ನಾವು ಆತನ ಮಂದೆಯಾಗುತ್ತೇವೆ.

1 ರಾಜರುಗಳು 22:13-23

13 ಈ ಕಾರ್ಯಗಳು ನಡೆಯುತ್ತಿರುವಾಗ, ಮೀಕಾಯೆಹುವನ್ನು ಕಂಡುಹಿಡಿಯಲು ಅಧಿಕಾರಿಯೊಬ್ಬನು ಹೋದನು. ಅಧಿಕಾರಿಯು ಮೀಕಾಯೆಹುವನ್ನು ಕಂಡುಹಿಡಿದು, ಅವನಿಗೆ, “ರಾಜನಿಗೆ ಶುಭವಾಗುವುದೆಂದು ಪ್ರವಾದಿಗಳೆಲ್ಲರೂ ಹೇಳಿದ್ದಾರೆ. ಆದ್ದರಿಂದ ಅವರು ಹೇಳಿದಂತೆಯೇ ನೀನೂ ಹೇಳುವುದು ನಿನಗೇ ಒಳ್ಳೆಯದು” ಎಂದು ಹೇಳಿದನು.

14 ಆದರೆ ಮೀಕಾಯೆಹುವು, “ಇಲ್ಲ! ಯೆಹೋವನಾಣೆ, ಆತನು ತಿಳಿಸುವುದನ್ನೇ ನಾನು ಹೇಳುತ್ತೇನೆ” ಎಂದು ಉತ್ತರಿಸಿದನು.

15 ನಂತರ ರಾಜನಾದ ಅಹಾಬನ ಎದುರಿನಲ್ಲಿ ಮೀಕಾಯೆಹು ನಿಂತುಕೊಂಡನು. ರಾಜನು ಅವನನ್ನು, “ಮೀಕಾಯೆಹುವೇ, ರಾಜನಾದ ಯೆಹೋಷಾಫಾಟನು ಮತ್ತು ನಾನು ನಮ್ಮ ಸೈನ್ಯಗಳನ್ನು ಒಟ್ಟುಗೂಡಿಸಬಹುದೇ? ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ನಾವೀಗ ಹೋಗಬೇಕೇ?” ಎಂದು ಕೇಳಿದನು.

ಮೀಕಾಯೆಹು, “ಆಗಲಿ, ಈಗ ನೀವು ಹೋಗಿ, ಅವರ ವಿರುದ್ಧ ಯುದ್ಧಮಾಡಿ. ಯೆಹೋವನು ನಿಮಗೆ ಜಯವನ್ನು ಕೊಡುತ್ತಾನೆ” ಎಂದನು.

16 ಆದರೆ ಅಹಾಬನು, “ಯೆಹೋವನ ಶಕ್ತಿಯಿಂದ ನೀನು ಮಾತನಾಡುತ್ತಿಲ್ಲ. ನೀನು ನಿನ್ನ ಸ್ವಂತ ಮಾತುಗಳನ್ನು ಹೇಳುತ್ತಿರುವೆ. ನನಗೆ ನೀನು ನಿಜವನ್ನು ಹೇಳು! ನಾನು ನಿನಗೆ ಎಷ್ಟು ಸಲ ಹೇಳಬೇಕು? ಯೆಹೋವನು ತಿಳಿಸುವುದನ್ನೇ ನನಗೆ ಹೇಳು!” ಎಂದು ಕೇಳಿದನು.

17 ಮೀಕಾಯೆಹು, “ಮುಂದೆ ಸಂಭವಿಸುವುದು ನನಗೆ ಕಾಣುತ್ತಿದೆ. ಇಸ್ರೇಲಿನ ಸೈನ್ಯವು ಬೆಟ್ಟಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಕುರುಬನಿಲ್ಲದ ಕುರಿಗಳಂತಾಗಿದೆ. ಯೆಹೋವನು ಹೇಳುವುದು ಇದನ್ನೇ, ‘ಈ ಜನರಿಗೆ ನಾಯಕನಿಲ್ಲ. ಅವರು ಯುದ್ಧಮಾಡದೆ, ಮನೆಗೆ ಹೋಗಬೇಕು’” ಎಂದು ಹೇಳಿದನು.

18 ಆಗ ಅಹಾಬನು ಯೆಹೋಷಾಫಾಟನಿಗೆ, “ನೋಡಿದೆಯಾ! ನಾನು ನಿನಗೆ ಹೇಳಿದೆನಲ್ಲಾ! ಈ ಪ್ರವಾದಿಯು ಎಂದೂ ನನ್ನ ಬಗ್ಗೆ ಒಳ್ಳೆಯದೇನನ್ನೂ ಹೇಳುವುದಿಲ್ಲ. ನಾನು ಕೇಳಬಾರದ ಸಂಗತಿಗಳನ್ನು ಅವನು ಯಾವಾಗಲೂ ನನಗೆ ಹೇಳುತ್ತಾನೆ” ಎಂದು ಹೇಳಿದನು.

19 ಆದರೆ ಮೀಕಾಯೆಹು ಯೆಹೋವನಿಗಾಗಿ ಮಾತನಾಡುತ್ತಲೇ ಇದ್ದನು. ಮೀಕಾಯೆಹು, “ಕೇಳಿರಿ! ಈ ಮಾತುಗಳನ್ನು ಯೆಹೋವನು ತಿಳಿಸುತ್ತಾನೆ! ಯೆಹೋವನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆತನ ಎಲ್ಲಾ ದೂತರು ಆತನ ಎಡಬಲಗಳಲ್ಲಿ ನಿಂತಿದ್ದರು. 20 ಯೆಹೋವನು ಅವರಿಗೆ, ‘ನಿಮ್ಮಲ್ಲಿ ಯಾರಾದರೂ ರಾಜನಾದ ಅಹಾಬನನ್ನು ಪ್ರೇರೇಪಿಸುವಿರಾ? ಅವನು ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ಹೋಗಬೇಕೆಂದು ನಾನು ಅಪೇಕ್ಷೆಪಟ್ಟಿದ್ದೇನೆ. ಅಲ್ಲಿ ಅವನು ಕೊಲ್ಲಲ್ಪಡುವನು’ ಎಂದು ಹೇಳಿದನು. ತಾವು ಏನು ಮಾಡಬೇಕೆಂಬುದರ ಬಗ್ಗೆ ದೂತರಲ್ಲಿ ಒಮ್ಮತದ ಅಭಿಪ್ರಾಯವುಂಟಾಗಲಿಲ್ಲ. 21 ಆಗ ಒಬ್ಬ ದೂತನು ಯೆಹೋವನ ಬಳಿಗೆ ಹೋಗಿ, ‘ನಾನು ಅವನನ್ನು ಪ್ರೇರೇಪಿಸುತ್ತೇನೆ’ ಎಂದನು. 22 ಯೆಹೋವನು, ‘ರಾಜನಾದ ಅಹಾಬನನ್ನು ನೀನು ಹೇಗೆ ಪ್ರೇರೇಪಿಸುವೆ?’ ಎಂದು ಉತ್ತರಿಸಿದಾಗ, ದೂತನು, ‘ಅಹಾಬನ ಎಲ್ಲಾ ಪ್ರವಾದಿಗಳು ಗಲಿಬಿಲಿಗೊಳ್ಳುವಂತೆ ಮಾಡುತ್ತೇನೆ. ರಾಜನಾದ ಅಹಾಬನಿಗೆ ಪ್ರವಾದಿಗಳು ಸುಳ್ಳುಹೇಳುವಂತೆ ನಾನು ಮಾಡುತ್ತೇನೆ. ಪ್ರವಾದಿಗಳ ಸಂದೇಶವೆಲ್ಲವೂ ಸುಳ್ಳಾಗಿರುವುದು’ ಎಂದನು. ಆದ್ದರಿಂದ ಯೆಹೋವನು, ‘ಸರಿ, ಹೋಗಿ ರಾಜನಾದ ಅಹಾಬನನ್ನು ಪ್ರೇರೇಪಿಸು. ನೀನು ಸಫಲನಾಗುವೆ’” ಎಂದು ಹೇಳಿದನು.

23 ಮೀಕಾಯೆಹು ಹೀಗೆ ಹೇಳಿದ ಮೇಲೆ, “ಇಲ್ಲಿ ನಡೆದದ್ದೂ ಇದೇ. ನಿನ್ನ ಪ್ರವಾದಿಗಳೇ ನಿನಗೆ ಸುಳ್ಳುಹೇಳುವಂತೆ ಯೆಹೋವನು ಮಾಡಿದ್ದಾನೆ. ನಿನಗೆ ಮಹಾಕೇಡು ಬರಲೆಂದು ಯೆಹೋವನು ತಾನೇ ತೀರ್ಮಾನಿಸಿದ್ದಾನೆ” ಎಂದು ಹೇಳಿದನು.

ಪ್ರಕಟನೆ 14:1-11

ರಕ್ಷಣೆ ಹೊಂದಿದವರ ಉತ್ಸವ ಗೀತೆ

14 ನಂತರ ನಾನು ನೋಡಿದಾಗ, ನನ್ನ ಎದುರಿನಲ್ಲಿಯೇ ಕುರಿಮರಿಯಾದಾತನು ಇದ್ದನು. ಆತನು ಚೀಯೋನ್ ಪರ್ವತದ ಮೇಲೆ ನಿಂತಿದ್ದನು. ಆತನ ಜೊತೆಯಲ್ಲಿ 1,44,000 ಜನರಿದ್ದರು. ಅವರ ಹಣೆಗಳ ಮೇಲೆ ಆತನ ಹೆಸರನ್ನು ಮತ್ತು ಆತನ ತಂದೆಯ ಹೆಸರನ್ನು ಬರೆಯಲಾಗಿತ್ತು.

ನಾನು ಪರಲೋಕದಿಂದ ಒಂದು ಶಬ್ದವನ್ನು ಕೇಳಿಸಿಕೊಂಡೆನು. ಅದು ನೀರಿನ ಪ್ರವಾಹದಂತೆ ಭೋರ್ಗರೆಯುವ ಶಬ್ದದಂತೆ ಮತ್ತು ಗುಡುಗಿನ ಧ್ವನಿಯಂತೆ ಇದ್ದಿತು. ಜನರು ತಮ್ಮ ತಂತಿವಾದ್ಯಗಳನ್ನು ಬಾರಿಸುತ್ತಿರುವರೋ ಎಂಬಂತೆ ಆ ಶಬ್ದವು ನನಗೆ ಕೇಳಿಸಿತು. ಜನರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸನ್ನಿಧಿಯಲ್ಲಿ ಹೊಸ ಹಾಡನ್ನು ಹಾಡಿದರು. ಈ ಲೋಕದಿಂದ ಬಿಡುಗಡೆ ಹೊಂದಿದ್ದ 1,44,000 ಜನರು ಮಾತ್ರ ಈ ಹಾಡನ್ನು ಕಲಿಯಲು ಶಕ್ತರಾಗಿದ್ದರು. ಈ ಹಾಡನ್ನು ಬೇರೆ ಯಾರೂ ಕಲಿಯಲಾಗುತ್ತಿರಲಿಲ್ಲ.

ಇವರು ಸ್ತ್ರೀ ಸಹವಾಸದಿಂದ ಮಲಿನರಾಗದೆ ಕನ್ನಿಕೆಯರಂತೆ ಉಳಿದಿದ್ದರು. ಕುರಿಮರಿಯಾದಾತನು ಹೋದಕಡೆಯಲ್ಲೆಲ್ಲಾ ಅವರು ಆತನನ್ನು ಹಿಂಬಾಲಿಸುತ್ತಾರೆ. ಭೂಲೋಕದ ಜನರ ಮಧ್ಯದಿಂದ ಬಿಡುಗಡೆ ಹೊಂದಿದವರೇ 1,44,000 ಮಂದಿ. ದೇವರಿಗೂ ಕುರಿಮರಿಯಾದಾತನಿಗೂ ಅರ್ಪಿತರಾದವರಲ್ಲಿ ಇವರೇ ಮೊದಲಿಗರಾಗಿದ್ದರು. ಈ ಜನರು ಸುಳ್ಳುಗಾರರಾಗಿರಲಿಲ್ಲ. ಇವರು ನಿರ್ದೋಷಿಗಳಾಗಿದ್ದರು.

ಮೂರು ಮಂದಿ ದೇವದೂತರು

ನಂತರ ಇನ್ನೊಬ್ಬ ದೇವದೂತನು ವಾಯುಮಂಡಲದಲ್ಲಿ ಅತಿ ಎತ್ತರದಲ್ಲಿ ಹಾರುತ್ತಿರುವುದನ್ನು ನಾನು ನೋಡಿದೆನು. ಭೂಮಿಯ ಮೇಲೆ ವಾಸಿಸುವ ಸಕಲ ಜನಾಂಗ, ಕುಲ, ಪ್ರಜೆ, ಭಾಷೆಗಳ ಜನರಿಗೆಲ್ಲಾ ಬೋಧಿಸುವುದಕ್ಕೆ ನಿತ್ಯವಾದ ಸುವಾರ್ತೆಯು ಆ ದೇವದೂತನಲ್ಲಿತ್ತು. ಆ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ದೇವರಿಗೆ ಭಯಪಡಿರಿ. ಆತನನ್ನು ಸ್ತುತಿಸಿರಿ. ಜನರಿಗೆಲ್ಲ ದೇವರು ತೀರ್ಪು ನೀಡುವ ಸಮಯವು ಹತ್ತಿರ ಬಂದಿದೆ. ದೇವರನ್ನು ಆರಾಧಿಸಿರಿ. ಪರಲೋಕವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಸೃಷ್ಟಿಸಿದವನು ಆತನೇ” ಎಂದು ಹೇಳಿದನು.

ನಂತರ ಎರಡನೆಯ ದೇವದೂತನು ಮೊದಲನೆಯ ದೇವದೂತನನ್ನು ಹಿಂಬಾಲಿಸುತ್ತಾ, “ಅವಳು ನಾಶವಾದಳು! ಬಾಬಿಲೋನ್ ಎಂಬ ನಗರಿಯು ನಾಶವಾದಳು! ಆಕೆಯು ಸಕಲ ಜನಾಂಗಗಳಿಗೆ ತನ್ನ ಜಾರತ್ವವೆಂಬ ಮತ್ತು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.

ಮೂರನೆಯ ದೇವದೂತನು ಮೊದಲ ಇಬ್ಬರು ದೇವದೂತರನ್ನು ಹಿಂಬಾಲಿಸಿದನು. ಈ ಮೂರನೆಯ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ ಹೀಗೆ ಹೇಳಿದನು: “ಮೃಗವನ್ನೂ ಮೃಗದ ವಿಗ್ರಹವನ್ನೂ ಆರಾಧಿಸುವವನಿಗೆ ಮತ್ತು ಮೃಗದ ಗುರುತನ್ನು ಹಣೆಯ ಮೇಲಾಗಲಿ ಇಲ್ಲವೆ ತನ್ನ ಕೈಗಳ ಮೇಲಾಗಲಿ ಹಾಕಿಸಿಕೊಳ್ಳುವವನಿಗೆ ಕೇಡಾಗುವುದು. 10 ಅವನು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುತ್ತಾನೆ. ದೇವರ ಕೋಪವೆಂಬ ಬಟ್ಟಲಿನಲ್ಲಿ ಈ ದ್ರಾಕ್ಷಾರಸವನ್ನು ಅದರ ಪೂರ್ಣಶಕ್ತಿಯ ಸಮೇತವಾಗಿ ತಯಾರಿಸಲಾಗಿದೆ. ಅವನನ್ನು ಪರಿಶುದ್ಧ ದೇವದೂತರ ಮತ್ತು ಕುರಿಮರಿಯಾದಾತನ ಮುಂದೆ ಉರಿಯುವ ಗಂಧಕದಿಂದ ಯಾತನೆಪಡಿಸಲಾಗುವುದು. 11 ಅವರ ಯಾತನೆಯೆಂಬ ಹೊಗೆಯು ಸದಾ ಏಳುತ್ತಲೇ ಇರುವುದು. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವ ಮತ್ತು ಅದರ ಹೆಸರನ್ನು ಗುರುತು ಹಾಕಿಸಿಕೊಳ್ಳುವ ಜನರಿಗೆ ಹಗಲಲ್ಲೂ ರಾತ್ರಿಯಲ್ಲೂ ವಿಶ್ರಾಂತಿಯೆಂಬುದೇ ಇರುವುದಿಲ್ಲ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International