Revised Common Lectionary (Complementary)
ರಚನೆಗಾರ: ದಾವೀದ.
9 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
ನಿನ್ನ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.
2 ದೇವರೇ, ನಿನ್ನಲ್ಲಿ ನಾನು ಸಂತೋಷಿಸುತ್ತಾ ಉಲ್ಲಾಸಪಡುವೆನು.
ಮಹೋನ್ನತನೇ, ನಿನ್ನ ಹೆಸರನ್ನೇ ಸಂಕೀರ್ತಿಸುವೆನು.
3 ನನ್ನ ವೈರಿಗಳು ನಿನ್ನ ಎದುರಿನಿಂದ ಹಿಂತಿರುಗಿ ಓಡಿಹೋದರು.
ಆದರೆ ಅವರು ಬಿದ್ದು ನಾಶವಾದರು.
4 ನೀನು ನೀತಿವಂತನಾದ ನ್ಯಾಯಾಧಿಪತಿ.
ಸಿಂಹಾಸನದ ಮೇಲೆ ಕುಳಿತು ನೀನು ನ್ಯಾಯತೀರಿಸುವೆ.
ನೀನು ನನ್ನ ಮೊಕದ್ದಮೆಯನ್ನು ಕೇಳಿ ನನ್ನ ವಿಷಯದಲ್ಲಿ ತೀರ್ಪು ಮಾಡಿರುವೆ.
5 ನೀನು ಜನಾಂಗಗಳನ್ನು ಟೀಕಿಸಿ ಆ ದುಷ್ಟರನ್ನು ನಾಶಮಾಡಿದೆ.
ನೀನು ಅವರ ಹೆಸರುಗಳನ್ನು ಜೀವಿತರ ಪಟ್ಟಿಯಿಂದ ಶಾಶ್ವತವಾಗಿ ಅಳಿಸಿಹಾಕಿರುವೆ.
6 ವೈರಿಗಳು ಇಲ್ಲವಾದರು.
ನೀನು ಅವರ ನಗರಗಳನ್ನು ನಾಶಮಾಡಿದೆ!
ಈಗ ಹಾಳಾದ ಕಟ್ಟಡಗಳು ಮಾತ್ರ ಉಳಿದಿವೆ; ದುಷ್ಟರನ್ನು ಜ್ಞಾಪಕಕ್ಕೆ ತರುವ ಯಾವುದೂ ಉಳಿದಿಲ್ಲ.
7 ಯೆಹೋವನಾದರೋ ಶಾಶ್ವತವಾಗಿ ಆಳುವನು.
ಆತನು ಭೂಲೋಕಕ್ಕೆ ನ್ಯಾಯದೊರಕಿಸುವುದಕ್ಕಾಗಿ ತನ್ನ ರಾಜ್ಯವನ್ನು ಬಲಗೊಳಿಸಿದ್ದಾನೆ.
8 ಆತನು ಭೂನಿವಾಸಿಗಳಿಗೆಲ್ಲಾ ನ್ಯಾಯವಾಗಿ ತೀರ್ಪುಮಾಡುವನು.
ಆತನು ಜನಾಂಗಗಳಿಗೆಲ್ಲಾ ಯಥಾರ್ಥವಾಗಿ ತೀರ್ಪುಮಾಡುವನು.
9 ಯೆಹೋವನು ಕುಗ್ಗಿಹೋದವರಿಗೆ ಆಶ್ರಯಸ್ಥಾನವೂ
ಇಕ್ಕಟ್ಟಿನಲ್ಲಿರುವವರಿಗೆ ಆಶ್ರಯದುರ್ಗವೂ ಆಗಿದ್ದಾನೆ.
10 ಯೆಹೋವನೇ, ನಿನ್ನ ಹೆಸರನ್ನು ಬಲ್ಲವರು ನಿನ್ನಲ್ಲಿ ಭರವಸೆಯಿಡುವರು.
ಯಾಕೆಂದರೆ ನಿನ್ನ ಸಹಾಯಕ್ಕಾಗಿ ಬರುವವರನ್ನು ನೀನು ತೊರೆದುಬಿಡುವುದಿಲ್ಲ.
11 ಚೀಯೋನಿನ ನಿವಾಸಿಗಳೇ, ಯೆಹೋವನನ್ನು ಸಂಕೀರ್ತಿಸಿರಿ.
ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
12 ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವ ಆತನು
ಕುಗ್ಗಿಹೋದವರ ಮೊರೆಯನ್ನು ಮರೆಯದೆ ಅವರನ್ನು ಜ್ಞಾಪಿಸಿಕೊಂಡನು.
13 “ಯೆಹೋವನೇ, ನನ್ನನ್ನು ಕನಿಕರಿಸು.
ಇಗೋ, ವೈರಿಗಳು ನನಗೆ ಕೇಡುಮಾಡುತ್ತಿದ್ದಾರೆ.
‘ಮರಣ ದ್ವಾರ’ದಿಂದ ತಪ್ಪಿಸಿ ಕಾಪಾಡು.”
14 ಆಗ ಜೆರುಸಲೇಮಿನ ದ್ವಾರಗಳ ಬಳಿಯಲ್ಲಿ ನಿನ್ನನ್ನು ಸಂಕೀರ್ತಿಸುವೆನು.
ನೀನು ನನ್ನನ್ನು ರಕ್ಷಿಸಿದ್ದರಿಂದ ಹರ್ಷಿಸುವೆನು.
ಜೆರುಸಲೇಮನ್ನು ಅಳತೆ ಮಾಡಿದ್ದು
2 ಆಗ ನಾನು ಮೇಲಕ್ಕೆ ನೋಡಿದಾಗ ಒಬ್ಬ ಮನುಷ್ಯನು ಕೈಯಲ್ಲಿ ಒಂದು ಹಗ್ಗ ಮತ್ತು ಅಳತೆ ಮಾಡುವ ಸಾಮಾಗ್ರಿಗಳನ್ನು ಹಿಡಿದುಕೊಂಡಿದ್ದನ್ನು ಕಂಡೆನು. 2 “ನೀನು ಎಲ್ಲಿಗೆ ಹೋಗುತ್ತೀ?” ಎಂದು ನಾನು ಅವನನ್ನು ವಿಚಾರಿಸಿದೆನು.
“ನಾನು ಜೆರುಸಲೇಮ್ ಎಷ್ಟು ಉದ್ದಗಲವಿದೆಯೆಂದು ಅಳತೆ ಮಾಡಲು ಹೋಗುತ್ತಿದ್ದೇನೆ” ಎಂದನು.
3 ಆಗ ನನ್ನೊಡನೆ ಮಾತನಾಡುತ್ತಿದ್ದ ದೂತನು ನನ್ನನ್ನು ಬಿಟ್ಟುಹೋದನು. ಅವನೊಡನೆ ಮಾತನಾಡಲು ಇನ್ನೊಬ್ಬ ದೂತನು ಬಂದನು. 4 ಅವನು, “ಓಡಿಹೋಗಿ ಆ ಯೌವನಸ್ಥನಿಗೆ ಜೆರುಸಲೇಮು ಅಳತೆ ಮಾಡಲು ಸಾಧ್ಯವಾಗದಷ್ಟು ದೊಡ್ಡದಾಗಿದೆ ಎಂದು ಹೇಳು. ಅಲ್ಲದೆ ಅವನಿಗೆ ಈ ವಿಷಯವನ್ನೂ ತಿಳಿಸು:
‘ಜೆರುಸಲೇಮ್ ಗೋಡೆಗಳಿಲ್ಲದ ಪಟ್ಟಣವಾಗುವದು.
ಯಾಕೆಂದರೆ ಅಷ್ಟೊಂದು ಜನರೂ ಪಶುಗಳೂ ಅಲ್ಲಿ ವಾಸಿಸುವವು.’
5 ಯೆಹೋವನು ಹೇಳುವುದೇನೆಂದರೆ,
‘ನಾನು ಆಕೆಯ ಸುತ್ತಲೂ ಆಕೆಯನ್ನು ಸಂರಕ್ಷಿಸುವ ಬೆಂಕಿಯ ಗೋಡೆಯಂತಿರುವೆನು.
ಮತ್ತು ನಾನು ಅಲ್ಲಿಯೇ ವಾಸಿಸುವದರಿಂದ ಆ ನಗರಕ್ಕೆ ಮಹಿಮೆಯನ್ನು ತರುವೆನು.’”
ಹಾರುವ ಸುರುಳಿ
5 ನಾನು ತಿರುಗಿ ಮೇಲಕ್ಕೆ ನೋಡಿದಾಗ ಒಂದು ಹಾರುವ ಸುರುಳಿಯನ್ನು ಕಂಡೆನು. 2 “ಏನನ್ನು ನೋಡುತ್ತೀ?” ಎಂದು ದೇವದೂತನು ಕೇಳಿದನು.
“ಒಂದು ಹಾರುವ ಸುರುಳಿ, ಅದು ಮೂವತ್ತು ಅಡಿ ಉದ್ದ, ಹದಿನೈದು ಅಡಿ ಅಗಲವಿದೆ” ಎಂದು ನಾನು ಉತ್ತರಿಸಿದೆನು.
3 ಆಗ ದೇವದೂತನು ನನಗೆ ಹೇಳಿದ್ದೇನೆಂದರೆ, “ಈ ಸುರುಳಿಯಲ್ಲಿ ಶಾಪವು ಬರೆಯಲ್ಪಟ್ಟಿದೆ. ಸುರುಳಿಯ ಒಂದು ಬದಿಯಲ್ಲಿ ಕದಿಯುವ ಜನರಿಗೆ ಶಾಪ ಬರೆಯಲ್ಪಟ್ಟಿದೆ. ಅದರ ಇನ್ನೊಂದು ಬದಿಯಲ್ಲಿ ವಾಗ್ದಾನ ಮಾಡಿಯೂ ಅದನ್ನು ಪಾಲಿಸದೆ ಸುಳ್ಳಾಡುವವರಿಗೆ ಶಾಪ ಬರೆಯಲ್ಪಟ್ಟಿದೆ. 4 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಆ ಸುರುಳಿಯನ್ನು ಕದಿಯುವವರ ಮನೆಗಳಿಗೂ ಮತ್ತು ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಡುವವರ ಮನೆಗಳಿಗೂ ಕಳುಹಿಸುವೆನು. ಆ ಸುರುಳಿಯು ಅಲ್ಲಿಯೇ ಇದ್ದು ಆ ಮನೆಗಳನ್ನು ನಾಶಮಾಡುವುದು. ಮನೆಯ ಕಲ್ಲುಕಂಬಗಳನ್ನು, ಮರದ ತೊಲೆಗಳನ್ನು ನಾಶಮಾಡುವದು.’”
ಕೊನೆಯ ಮಾತುಗಳು ಮತ್ತು ವಂದನೆಗಳು
12 ಸಹೋದರ ಸಹೋದರಿಯರೇ, ಈಗ ನಿಮ್ಮಲ್ಲಿ ಪ್ರಯಾಸದಿಂದ ಕೆಲಸ ಮಾಡುತ್ತಾ ನಿಮ್ಮನ್ನು ಪ್ರಭುವಿನ ಮಾರ್ಗದಲ್ಲಿ ನಡೆಸುವವರನ್ನು ಮತ್ತು ಉಪದೇಶಿಸುವವರನ್ನು ಗೌರವಿಸಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇವೆ. 13 ಅವರು ನಿಮ್ಮಲ್ಲಿ ಮಾಡುವ ಸೇವೆಗಾಗಿ ಅವರನ್ನು ವಿಶೇಷವಾದ ಪ್ರೀತಿಯಿಂದ ಗೌರವಿಸಿರಿ.
ನೀವೆಲ್ಲರೂ ಸಮಾಧಾನದಿಂದ ಜೀವಿಸಿರಿ. 14 ಸಹೋದರ ಸಹೋದರಿಯರೇ, ಕೆಲಸ ಮಾಡದೆ ಇರುವ ಜನರಿಗೆ ಎಚ್ಚರಿಕೆ ನೀಡಬೇಕೆಂದು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ಹೆದರಿಕೊಂಡಿರುವವರನ್ನು ಪ್ರೋತ್ಸಾಹಿಸಿರಿ; ಬಲಹೀನರಿಗೆ ಸಹಾಯ ಮಾಡಿ; ಎಲ್ಲರ ಜೊತೆಯಲ್ಲಿ ತಾಳ್ಮೆಯಿಂದಿರಿ; 15 ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿಕೊಳ್ಳಿರಿ; ಒಬ್ಬರಿಗೊಬ್ಬರಿಗೆ ಮತ್ತು ಎಲ್ಲರಿಗೆ ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿರಿ.
16 ಯಾವಾಗಲೂ ಸಂತೋಷದಿಂದಿರಿ. 17 ಎಡೆಬಿಡದೆ ಪ್ರಾರ್ಥಿಸಿರಿ. 18 ದೇವರಿಗೆ ಎಲ್ಲಾ ಕಾಲದಲ್ಲಿಯೂ ಕೃತಜ್ಞತೆಗಳನ್ನು ಸಲ್ಲಿಸಿರಿ. ಇದುವೇ ನಿಮ್ಮ ವಿಷಯವಾಗಿ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಚಿತ್ತ.
Kannada Holy Bible: Easy-to-Read Version. All rights reserved. © 1997 Bible League International