Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 90:1-8

ನಾಲ್ಕನೆ ಭಾಗ

(ಕೀರ್ತನೆಗಳು 90–106)

ಪ್ರಾರ್ಥನೆ. ರಚನೆಗಾರ: ದೇವಮನುಷ್ಯನಾದ ಮೋಶೆ.

90 ಯೆಹೋವನೇ, ತಲತಲಾಂತರಗಳಿಂದಲೂ ನೀನೇ ನಮ್ಮ ವಾಸಸ್ಥಾನ.
ಬೆಟ್ಟಗಳು ಹುಟ್ಟುವುದಕ್ಕಿಂತ ಮೊದಲಿಂದಲೂ
    ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲಿನಿಂದಲೂ ನೀನೇ ದೇವರು.
    ಯಾವಾಗಲೂ ದೇವರಾಗಿದ್ದಾತನು ನೀನೇ! ಯಾವಾಗಲೂ ದೇವರಾಗಿರುವಾತನೂ ನೀನೇ!

ಜನರಿಗೆ ಜನ್ಮನೀಡುವಾತನೂ ನೀನೇ;
    ಅವರನ್ನು ಮತ್ತೆ ಧೂಳನ್ನಾಗಿ ಮಾಡುವಾತನೂ ನೀನೇ.
ಸಾವಿರ ವರ್ಷಗಳು ನಿನಗೆ ಗತಿಸಿಹೋದ
    ನಿನ್ನೆಯಂತೆಯೂ ರಾತ್ರಿಯ ಜಾವದಂತೆಯೂ ಇವೆ.
ನೀನು ನಮ್ಮನ್ನು ಗುಡಿಸಿಹಾಕುವೆ.
    ನಮ್ಮ ಜೀವನವು ಕನಸಿನಂತಿದೆ; ಹೊತ್ತಾರೆಯಲ್ಲಿ ನಾವು ಇಲ್ಲವಾಗುತ್ತೇವೆ.
ನಾವು ಹುಲ್ಲಿನಂತಿದ್ದೇವೆ.
    ಹೊತ್ತಾರೆಯಲ್ಲಿ ಹುಲ್ಲು ಚಿಗುರತೊಡಗಿದರೂ
    ಸಾಯಂಕಾಲದೊಳಗೆ ಒಣಗಿಹೋಗುತ್ತದೆ.
ದೇವರೇ, ನಿನ್ನ ಕೋಪದಿಂದ ನಾವು ನಾಶವಾದೆವು.
    ನಿನ್ನ ರೌದ್ರವು ನಮ್ಮನ್ನು ತಲ್ಲಣಗೊಳಿಸಿದೆ.
ನಮ್ಮ ಪಾಪಗಳೆಲ್ಲಾ ನಿನಗೆ ತಿಳಿದಿವೆ.
    ದೇವರೇ, ನಮ್ಮ ರಹಸ್ಯಪಾಪಗಳೆಲ್ಲಾ ನಿನ್ನ ಮುಂದೆ ಬಟ್ಟಬಯಲಾಗಿವೆ.

ಕೀರ್ತನೆಗಳು 90:9-11

ನಿನ್ನ ಕೋಪವು ನಮ್ಮ ಜೀವನವನ್ನು ಕೊನೆಗೊಳಿಸಬಲ್ಲದು.
    ನಮ್ಮ ಜೀವಿತಗಳು ನಿಟ್ಟುಸಿರಿನಂತೆ ತೀರಿಹೋದವು.
10 ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ; ಬಲಹೆಚ್ಚಿದರೆ ಎಂಭತ್ತು ವರ್ಷ.
    ಕಷ್ಟಸಂಕಟಗಳೇ ಅದರ ಆಡಂಬರ.
ಬಹುಬೇಗನೆ ನಮ್ಮ ಜೀವಿತಗಳು ಕೊನೆಗೊಳ್ಳುತ್ತವೆ!
    ನಾವು ಹಾರಿ ಹೋಗುತ್ತೇವೆ.
11 ದೇವರೇ, ನಿನ್ನ ಕೋಪದ ಪೂರ್ಣ ಬಲವನ್ನು ಯಾರೂ ತಿಳಿಯರು.
    ನಿನ್ನಲ್ಲಿ ನಮಗಿರುವ ಭಯಭಕ್ತಿಯು ನಿನ್ನ ಕೋಪದಷ್ಟೇ ದೊಡ್ಡದಾಗಿವೆ.

ಕೀರ್ತನೆಗಳು 90:12

12 ನಮ್ಮ ಜೀವಿತಗಳು ಕೊಂಚವೇ ಎಂಬುದನ್ನು ನಮಗೆ ಕಲಿಸು.
    ಆಗ ನಾವು ವಿವೇಕಿಗಳಾಗುವೆವು.

ಯೆಹೆಜ್ಕೇಲ 7:10-27

10 “ಆ ಶಿಕ್ಷೆಯ ಸಮಯವು ಬಂದಿದೆ. ಆಪತ್ತು ಬರುತ್ತಿದೆ. ಹಿಂಸೆಯು ಅರಳಿದೆ. ದುರಹಂಕಾರವು ಮೊಗ್ಗು ಬಿಟ್ಟಿದೆ. 11 ದುಷ್ಟತನವನ್ನು ದಂಡಿಸಲು ಹಿಂಸೆಯು ಬೆಳೆದು ಕೋಲಾಗಿದೆ. ಜನರಲ್ಲಿ ಯಾರೂ ಉಳಿಯುವುದಿಲ್ಲ, ಆ ಜನಸಮೂಹದಲ್ಲಿ ಒಬ್ಬರೂ ಉಳಿಯುವುದಿಲ್ಲ. ಅವರ ಐಶ್ವರ್ಯದಲ್ಲಿ ಏನೂ ಉಳಿಯುವದಿಲ್ಲ; ಪ್ರಮುಖರಾದವರಲ್ಲಿ ಯಾರೂ ಉಳಿಯುವುದಿಲ್ಲ.

12 “ಆ ಶಿಕ್ಷೆಯ ಸಮಯವು ಬಂತು. ಆ ದಿವಸವು ಇಲ್ಲಿಯೇ ಇದೆ. ವಸ್ತುಗಳನ್ನು ಕೊಂಡುಕೊಳ್ಳುವ ಜನರು ಸಂತೋಷಪಡಕೂಡದು. ವಸ್ತುಗಳನ್ನು ಮಾರುವವರು ಮಾರುವದಕ್ಕೆ ದುಃಖಿಸಕೂಡದು. ಯಾಕೆಂದರೆ ಆ ಭಯಂಕರ ಶಿಕ್ಷೆಯು ಎಲ್ಲರಿಗೂ ಉಂಟಾಗುವುದು. 13 ತಮ್ಮ ಆಸ್ತಿಗಳನ್ನು ಮಾರಿದ ಜನರು ಅಲ್ಲಿಗೆ ತಿರುಗಿ ಹೋಗುವುದಿಲ್ಲ. ಒಬ್ಬನು ಜೀವಂತವಾಗಿ ತಪ್ಪಿಸಿಕೊಂಡರೂ ತನ್ನ ಆಸ್ತಿಗೆ ಹೋಗುವುದಿಲ್ಲ. ಯಾಕೆಂದರೆ ಈ ದರ್ಶನವು ಎಲ್ಲಾ ಜನಸಮೂಹಕ್ಕಾಗಿದೆ. ಇದು ಬದಲಾಗುವುದಿಲ್ಲ; ಅವರ ಪಾಪಗಳ ದೆಸೆಯಿಂದ ಅವರಲ್ಲಿ ಒಬ್ಬನಾದರೂ ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವುದಿಲ್ಲ.

14 “ಅವರು ಜನರನ್ನು ಎಚ್ಚರಿಸುವುದಕ್ಕಾಗಿ ತುತ್ತೂರಿಯನ್ನು ಊದುವರು. ಜನರು ಯುದ್ಧಕ್ಕೆ ತಯಾರಾಗುವರು. ಆದರೆ ಅವರು ರಣರಂಗಕ್ಕೆ ಹೋಗುವುದಿಲ್ಲ. ಯಾಕೆಂದರೆ ಆ ಜನಸಮೂಹಕ್ಕೆ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂಬುದನ್ನು ತೋರಿಸುತ್ತೇನೆ. 15 ಖಡ್ಗಧಾರಿಯಾದ ವೈರಿಯು ಪಟ್ಟಣದ ಹೊರಗಿದ್ದಾನೆ. ರೋಗ ಮತ್ತು ಹಸಿವೆ ಪಟ್ಟಣದೊಳಗಿವೆ. ಒಬ್ಬನು ಹೊರಗೆ ಹೊಲದ ಬಳಿ ಹೋದರೆ ವೈರಿಸೈನಿಕನು ಅವನನ್ನು ಕೊಲ್ಲುವನು. ಪಟ್ಟಣದೊಳಗೇ ಉಳಿದರೆ ರೋಗ ಮತ್ತು ಹಸಿವೆಯು ಅವನನ್ನು ಕೊಲ್ಲುವವು.

16 “ಆದರೂ ಕೆಲವರು ತಪ್ಪಿಸಿಕೊಳ್ಳುವರು. ಅವರು ಬೆಟ್ಟಕ್ಕೆ ಓಡುವರು. ಆದರೆ ಅವರು ಸಂತೋಷಪಡುವುದಿಲ್ಲ. ತಮ್ಮ ಪಾಪಗಳಿಗಾಗಿ ಅವರು ದುಃಖಿತರಾಗುವರು. ಪಾರಿವಾಳಗಳಂತೆ ಮೂಲುಗುವರು, ಅಳುವರು. 17 ತಮ್ಮ ಕೈಗಳನ್ನು ಮೇಲಕ್ಕೆ ಎತ್ತುವಷ್ಟು ದುಃಖ ಮತ್ತು ಆಯಾಸ ಅವರಲ್ಲಿದೆ. ಅವರ ಕಾಲುಗಳು ನೀರಿನಂತಿರುತ್ತವೆ. 18 ಅವರು ಶೋಕಬಟ್ಟೆಗಳನ್ನು ಧರಿಸಿ ಭಯಗ್ರಸ್ತರಾಗುವರು. ಪ್ರತೀ ಮುಖದಲ್ಲಿ ನಾಚಿಕೆಯು ಕಾಣಿಸುವುದು. ತಮ್ಮ ದುಃಖವನ್ನು ಪ್ರದರ್ಶಿಸಲು ತಮ್ಮ ತಲೆಗಳನ್ನು ಬೋಳಿಸುವರು. 19 ಅವರು ತಮ್ಮ ಬೆಳ್ಳಿಯ ವಿಗ್ರಹಗಳನ್ನು ರಸ್ತೆಗೆ ಬಿಸಾಡುವರು, ಅವರು ಬಂಗಾರದ ವಿಗ್ರಹವನ್ನು ಅಶುದ್ಧ ವಸ್ತುವಿನಂತೆ ನೋಡುವರು. ಯೆಹೋವನು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರಗಳ ವಿಗ್ರಹಗಳು ಅವರನ್ನು ರಕ್ಷಿಸಲಾರವು. ಅವು ಅವರ ಹಸಿವನ್ನು ನೀಗಿಸಲಾರವು ಅಥವಾ ಅವರ ಹೊಟ್ಟೆಗಳನ್ನು ತುಂಬಿಸಲಾರವು. ಜನರು ಪಾಪದಲ್ಲಿ ಬೀಳುವಂತೆ ಅವು ಮಾಡಿದವು.

20 “ಆ ಜನರು ತಮ್ಮ ಬೆಳ್ಳಿಬಂಗಾರಗಳ ಆಭರಣಗಳನ್ನು ಅಲಂಕಾರದ ವಸ್ತುಗಳನ್ನಾಗಿ ಪರಿವರ್ತಿಸಿದರು. ಅವುಗಳಿಂದ ತಮ್ಮ ಕೊಳಕಾದ ಮತ್ತು ಅಸಹ್ಯಕರವಾದ ವಿಗ್ರಹಗಳನ್ನು ಮಾಡಿಕೊಂಡರು. ಆದ್ದರಿಂದ ಅವರ ಬೆಳ್ಳಿಬಂಗಾರಗಳನ್ನು ಅವರಿಗೆ ಕೊಳೆಯ ಬಟ್ಟೆಯನ್ನಾಗಿ ಮಾಡುವೆನು. 21 ಬೇರೆ ದೇಶದವರು ಅವರ ಐಶ್ವರ್ಯವನ್ನು ಲೂಟಿಮಾಡಿಕೊಂಡು ಹೋಗಲು ನಾನು ಅವಕಾಶಕೊಡುವೆನು. ಭೂಮಿಯ ಮೇಲಿರುವ ಅತ್ಯಂತ ದುಷ್ಟರಾದ ಜನರಿಗೆ ನಾನು ಅದನ್ನು ಕೊಳ್ಳೆಯನ್ನಾಗಿ ಕೊಡುವೆನು. ಅವರು ಅದನ್ನು ಹೊಲಸು ಮಾಡುವರು. 22 ನಾನು ಅವರ ಕಡೆಯಿಂದ ನನ್ನ ಮುಖವನ್ನು ತಿರುಗಿಸಿಕೊಳ್ಳುವೆನು. ಆ ಪರದೇಶಿಯರು ನನ್ನ ಅಮೂಲ್ಯವಾದ ಆಲಯವನ್ನು ಹೊಲಸು ಮಾಡುವರು. ದರೋಡೆಕೋರರು ಅದರೊಳಗೆ ನುಗ್ಗಿ ಅದಕ್ಕೆ ಅಪಮಾನ ಮಾಡುವರು.

23 “ಸೆರೆಯವರಿಗಾಗಿ ಸರಪಣಿಗಳನ್ನು ಮಾಡು. ದೇಶವು ಕೊಲೆಯ ಅಪರಾಧಗಳಿಂದ ತುಂಬಿದೆ. ಪಟ್ಟಣದಲ್ಲಿ ಹಿಂಸೆಯು ತುಂಬಿದೆ. 24 ಇಸ್ರೇಲ್ ಜನರ ಮನೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಅತೀ ದುಷ್ಟ ಜನಾಂಗಗಳನ್ನು ಬರಮಾಡುವೆನು. ನಾನು ಗರ್ವಿಷ್ಠರ ಸೊಕ್ಕನ್ನು ಮುರಿಯುವೆನು; ಅವರ ಆರಾಧನೆಯ ಸ್ಥಳಗಳು ಅಪರಿಶುದ್ಧಗೊಳ್ಳುವವು.

25 “ಜನರು ಭಯದಿಂದ ನಡುಗುವರು. ಅವರು ಶಾಂತಿಗಾಗಿ ಹುಡುಕುವರು, ಆದರೆ ಅವರಿಗೆ ಅದು ಸಿಗುವುದಿಲ್ಲ. 26 ಒಂದರ ಮೇಲೊಂದು ಆಪತ್ತು ಸಂಭವಿಸುವುದು. ಸುಳ್ಳುಸುದ್ದಿಗೊಂದು ಸುಳ್ಳುಸುದ್ದಿ ಸೇರಿಕೊಳ್ಳುವುದು. ಅವರು ಪ್ರವಾದಿಯಿಂದ ದರ್ಶನಕ್ಕಾಗಿ ಹುಡುಕುತ್ತಲೇ ಇರುವರು. ಆದರೆ ಯಾವ ದರ್ಶನಗಳೂ ಆಗುವದಿಲ್ಲ. ಜನರಿಗೆ ಉಪದೇಶಿಸಲು ಯಾಜಕರಲ್ಲಿ ಏನೂ ಇರುವುದಿಲ್ಲ. ಜನರಿಗೆ ಕೊಡಲು ಹಿರಿಯರಲ್ಲಿ ಯಾವ ಬುದ್ಧಿವಾದವೂ ಇರುವುದಿಲ್ಲ. 27 ಸತ್ತುಹೋದ ಜನರಿಗಾಗಿ ನಿಮ್ಮ ರಾಜನು ಗೋಳಾಡುವನು; ನಾಯಕನಿಗೆ ನಿರೀಕ್ಷೆಯು ಇಲ್ಲವಾಗುವುದು. ಸಾಮಾನ್ಯ ಜನರು ಭಯಗ್ರಸ್ತರಾಗುವರು. ಯಾಕೆಂದರೆ ನಾನು ಅವರ ನಡತೆಗೆ ತಕ್ಕಂತೆ ಅವರಿಗೆ ಮಾಡುವೆನು; ಅವರು ಬೇರೆಯವರಿಗೆ ನ್ಯಾಯ ತೀರಿಸಿದಂತೆ ನಾನು ಅವರಿಗೆ ನ್ಯಾಯತೀರಿಸುವೆನು. ನಾನೇ ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”

ಮತ್ತಾಯ 12:43-45

ಇಂದಿನ ದುಷ್ಟಜನರ ಸ್ಥಿತಿ

(ಲೂಕ 11:24-26)

43 “ದುರಾತ್ಮವು ಮನುಷ್ಯನಿಂದ ಹೊರಗೆ ಬಂದಾಗ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಪ್ರಯಾಣ ಮಾಡುತ್ತದೆ. ಆದರೆ ಆ ದುರಾತ್ಮಕ್ಕೆ ಬೇಕಾದ ವಿಶ್ರಾಂತಿ ಸ್ಥಳ ಸಿಕ್ಕುವುದಿಲ್ಲ. 44 ಆಗ ಅದು, ‘ನಾನು ಬಿಟ್ಟುಬಂದ ಮನೆಗೇ ಹಿಂತಿರುಗಿ ಹೋಗುತ್ತೇನೆ’ ಎಂದು ಅಂದುಕೊಳ್ಳುತ್ತದೆ. ಬಳಿಕ ಅದು ಅವನ ಬಳಿಗೆ ಮತ್ತೆ ಬಂದಾಗ ಆ ಮನೆಯು ಇನ್ನೂ ಬರಿದಾಗಿರುತ್ತದೆ. ಚೊಕ್ಕಟವಾಗಿ ಗುಡಿಸಿ ಅಲಂಕರಿಸಲ್ಪಟ್ಟಿರುತ್ತದೆ. 45 ಆಗ ಅದು ಹೊರಗೆ ಹೋಗಿ ತನಗಿಂತಲೂ ಹೆಚ್ಚು ದುಷ್ಟರಾದ ಏಳು ದುರಾತ್ಮಗಳನ್ನು ಕರೆದುಕೊಂಡು ಬರುತ್ತದೆ. ಆ ದುರಾತ್ಮಗಳೆಲ್ಲಾ ಆ ಮನುಷ್ಯನೊಳಗೆ ಸೇರಿಕೊಂಡು ವಾಸಮಾಡಲಾರಂಭಿಸುತ್ತವೆ. ಆಗ ಆ ಮನುಷ್ಯನಿಗೆ ಮೊದಲಿಗಿಂತಲೂ ಹೆಚ್ಚಿನ ಕಷ್ಟಗಳು ಉಂಟಾಗುತ್ತವೆ. ಈ ದಿನಗಳಲ್ಲಿ ಜೀವಿಸುವ ದುಷ್ಟ ಜನರಿಗೆ ಅದೇ ರೀತಿ ಆಗುವುದು” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International