Revised Common Lectionary (Complementary)
ನಾಲ್ಕನೆ ಭಾಗ
(ಕೀರ್ತನೆಗಳು 90–106)
ಪ್ರಾರ್ಥನೆ. ರಚನೆಗಾರ: ದೇವಮನುಷ್ಯನಾದ ಮೋಶೆ.
90 ಯೆಹೋವನೇ, ತಲತಲಾಂತರಗಳಿಂದಲೂ ನೀನೇ ನಮ್ಮ ವಾಸಸ್ಥಾನ.
2 ಬೆಟ್ಟಗಳು ಹುಟ್ಟುವುದಕ್ಕಿಂತ ಮೊದಲಿಂದಲೂ
ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವುದಕ್ಕಿಂತ ಮೊದಲಿನಿಂದಲೂ ನೀನೇ ದೇವರು.
ಯಾವಾಗಲೂ ದೇವರಾಗಿದ್ದಾತನು ನೀನೇ! ಯಾವಾಗಲೂ ದೇವರಾಗಿರುವಾತನೂ ನೀನೇ!
3 ಜನರಿಗೆ ಜನ್ಮನೀಡುವಾತನೂ ನೀನೇ;
ಅವರನ್ನು ಮತ್ತೆ ಧೂಳನ್ನಾಗಿ ಮಾಡುವಾತನೂ ನೀನೇ.
4 ಸಾವಿರ ವರ್ಷಗಳು ನಿನಗೆ ಗತಿಸಿಹೋದ
ನಿನ್ನೆಯಂತೆಯೂ ರಾತ್ರಿಯ ಜಾವದಂತೆಯೂ ಇವೆ.
5 ನೀನು ನಮ್ಮನ್ನು ಗುಡಿಸಿಹಾಕುವೆ.
ನಮ್ಮ ಜೀವನವು ಕನಸಿನಂತಿದೆ; ಹೊತ್ತಾರೆಯಲ್ಲಿ ನಾವು ಇಲ್ಲವಾಗುತ್ತೇವೆ.
ನಾವು ಹುಲ್ಲಿನಂತಿದ್ದೇವೆ.
6 ಹೊತ್ತಾರೆಯಲ್ಲಿ ಹುಲ್ಲು ಚಿಗುರತೊಡಗಿದರೂ
ಸಾಯಂಕಾಲದೊಳಗೆ ಒಣಗಿಹೋಗುತ್ತದೆ.
7 ದೇವರೇ, ನಿನ್ನ ಕೋಪದಿಂದ ನಾವು ನಾಶವಾದೆವು.
ನಿನ್ನ ರೌದ್ರವು ನಮ್ಮನ್ನು ತಲ್ಲಣಗೊಳಿಸಿದೆ.
8 ನಮ್ಮ ಪಾಪಗಳೆಲ್ಲಾ ನಿನಗೆ ತಿಳಿದಿವೆ.
ದೇವರೇ, ನಮ್ಮ ರಹಸ್ಯಪಾಪಗಳೆಲ್ಲಾ ನಿನ್ನ ಮುಂದೆ ಬಟ್ಟಬಯಲಾಗಿವೆ.
9 ನಿನ್ನ ಕೋಪವು ನಮ್ಮ ಜೀವನವನ್ನು ಕೊನೆಗೊಳಿಸಬಲ್ಲದು.
ನಮ್ಮ ಜೀವಿತಗಳು ನಿಟ್ಟುಸಿರಿನಂತೆ ತೀರಿಹೋದವು.
10 ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ; ಬಲಹೆಚ್ಚಿದರೆ ಎಂಭತ್ತು ವರ್ಷ.
ಕಷ್ಟಸಂಕಟಗಳೇ ಅದರ ಆಡಂಬರ.
ಬಹುಬೇಗನೆ ನಮ್ಮ ಜೀವಿತಗಳು ಕೊನೆಗೊಳ್ಳುತ್ತವೆ!
ನಾವು ಹಾರಿ ಹೋಗುತ್ತೇವೆ.
11 ದೇವರೇ, ನಿನ್ನ ಕೋಪದ ಪೂರ್ಣ ಬಲವನ್ನು ಯಾರೂ ತಿಳಿಯರು.
ನಿನ್ನಲ್ಲಿ ನಮಗಿರುವ ಭಯಭಕ್ತಿಯು ನಿನ್ನ ಕೋಪದಷ್ಟೇ ದೊಡ್ಡದಾಗಿವೆ.
12 ನಮ್ಮ ಜೀವಿತಗಳು ಕೊಂಚವೇ ಎಂಬುದನ್ನು ನಮಗೆ ಕಲಿಸು.
ಆಗ ನಾವು ವಿವೇಕಿಗಳಾಗುವೆವು.
ಜೆರುಸಲೇಮಿಗೆ ಬರುವ ದುರ್ಗತಿ
7 ಯೆಹೋವನ ಸಂದೇಶವು ನನಗೆ ಬಂದಿತು. 2 ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನನ್ನ ಒಡೆಯನಾದ ಯೆಹೋವನ ಸಂದೇಶವಿದು. ಈ ಸಂದೇಶವನ್ನು ಇಸ್ರೇಲ್ ದೇಶಕ್ಕೆ ನೀಡು.
“ಅಂತ್ಯ,
ಅಂತ್ಯವು ಬರುವುದು.
ಇಡೀ ದೇಶವು ಹಾಳಾಗಿಹೋಗುವದು.
3 ನಿನ್ನ ಅಂತ್ಯವು ಈಗ ಬರುವುದು.
ನಿನ್ನ ಮೇಲೆ ನನಗೆ ಎಷ್ಟು ಕೋಪವಿದೆ ಎಂದು ನಾನು ತೋರಿಸುವೆನು.
ನಿನ್ನ ದುಷ್ಕೃತ್ಯಗಳಿಗಾಗಿ ನಾನು ನಿನ್ನನ್ನು ಶಿಕ್ಷಿಸುವೆನು.
ನಿನ್ನ ಅಸಹ್ಯಕೃತ್ಯಗಳಿಗಾಗಿ ನಾನು ಪ್ರತೀಕಾರ ಮಾಡುವೆನು.
4 ನಿನಗೆ ನಾನು ಇನ್ನು ಕರುಣೆಯನ್ನು ತೋರಿಸೆನು.
ನಿನ್ನ ವಿಷಯದಲ್ಲಿ ನಾನು ದುಃಖಿಸುವದಿಲ್ಲ.
ನೀನು ಮಾಡಿದ ಕೆಟ್ಟಕಾರ್ಯಗಳಿಗಾಗಿ ನಿನ್ನನ್ನು ಶಿಕ್ಷಿಸುವೆನು.
ನೀನು ಅಂಥಾ ಭಯಂಕರ ಕೃತ್ಯಗಳನ್ನು ಮಾಡಿದ್ದೀ.
ಈಗ ನಾನೇ ಯೆಹೋವನೆಂದು ನೀನು ತಿಳಿಯುವಿ.”
5 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಒಂದರ ಮೇಲೊಂದು ದುರ್ಘಟನೆಗಳು ನಡೆಯುವವು. 6 ಅಂತ್ಯವು ಬರುವುದು. ಅದು ಬೇಗನೆ ಬರುವದು. 7 ಇಸ್ರೇಲ್ ದೇಶದಲ್ಲಿ ವಾಸಿಸುವ ಜನರೇ, ನಿಮಗೆ ಆಪತ್ತು ಬರುವುದು, ಸಮಯವು ಬರುತ್ತಿದೆ. ದಿನವು ಸಮೀಪಿಸಿದೆ. ಬೆಟ್ಟಗಳ ಮೇಲೆ ಆನಂದ ಬೋಷಗಳ ಬದಲು ಯುದ್ಧದ ಕೂಗಾಟಗಳು ಇರುತ್ತವೆ. 8 ಇನ್ನು ಸ್ವಲ್ಪ ಸಮಯದಲ್ಲಿ ನಾನು ಎಷ್ಟು ಸಿಟ್ಟುಗೊಂಡಿದ್ದೇನೆ ಎಂದು ನಿಮಗೆ ತೋರಿಸುವೆನು. ನನ್ನ ಕೋಪವನ್ನೆಲ್ಲಾ ನಿಮಗೆ ತೋರಿಸುವೆನು. ನಿಮ್ಮ ದುಷ್ಕ್ರಿಯೆಗಳಿಗಾಗಿ ನಾನು ನಿಮ್ಮನ್ನು ಶಿಕ್ಷಿಸುವೆನು. ನಿಮ್ಮ ಅಸಹ್ಯಕೃತ್ಯಗಳಿಗಾಗಿ ನಾನು ಸೇಡನ್ನು ತೀರಿಸಿಕೊಳ್ಳುವೆನು. 9 ನಾನು ನಿಮಗೆ ಕರುಣೆ ತೋರಿಸೆನು. ನಿಮಗಾಗಿ ನಾನು ದುಃಖಿಸುವದಿಲ್ಲ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ನಿಮ್ಮನ್ನು ಶಿಕ್ಷಿಸುವೆನು. ಅಂಥಾ ಭಯಂಕರವಾದ ಕೃತ್ಯಗಳನ್ನು ನೀವು ಮಾಡಿದ್ದೀರಿ. ನಿಮ್ಮನ್ನು ದಂಡಿಸಿದಾತನು ಯೆಹೋವನಾದ ನಾನೇ ಎಂಬುದು ಆಗ ನಿಮಗೆ ತಿಳಿಯುವುದು.
8 ನಾಲ್ಕನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಸೂರ್ಯನ ಮೇಲೆ ಸುರಿದನು. ಜನರನ್ನು ಕಡುಬಿಸಿಲಿನಿಂದ ಕಂದಿಸುವ ಅಧಿಕಾರವನ್ನು ಸೂರ್ಯನಿಗೆ ಕೊಡಲಾಯಿತು. 9 ಜನರು ಕುಡುಬಿಸಿಲಿನಿಂದ ಕಂದಿಹೋಗಿ ದೇವರ ಹೆಸರನ್ನು ಶಪಿಸಿದರು. ಈ ಉಪದ್ರವಗಳನ್ನು ದೇವರೊಬ್ಬನೇ ನಿಯಂತ್ರಿಸ ಬಲ್ಲವನಾಗಿದ್ದಾನೆ. ಆದರೆ ಜನರು ತಮ್ಮ ಹೃದಯಗಳನ್ನೂ ಜೀವಿತಗಳನ್ನೂ ಪರಿವರ್ತಿಸಿಕೊಳ್ಳಲಿಲ್ಲ. ದೇವರನ್ನು ಮಹಿಮೆಪಡಿಸಲು ಒಪ್ಪಿಕೊಳ್ಳಲಿಲ್ಲ.
10 ಐದನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಆ ಮೃಗದ ಸಿಂಹಾಸನದ ಮೇಲೆ ಸುರಿದನು. ಮೃಗದ ರಾಜ್ಯದಲ್ಲಿ ಅಂಧಕಾರವು ಕವಿಯಿತು. ಜನರು ನೋವಿನಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡರು. 11 ಜನರು ತಮಗಾದ ಹುಣ್ಣುಗಳಿಂದ ಮತ್ತು ನೋವಿನಿಂದ ಪರಲೋಕದ ದೇವರನ್ನು ದೂಷಿಸಿದರು. ಆದರೆ ಜನರು ತಾವು ಮಾಡುವ ಕೆಟ್ಟಕಾರ್ಯಗಳನ್ನು ತೊರೆದುಬಿಟ್ಟು ತಮ್ಮ ಹೃದಯಗಳನ್ನು ಮಾರ್ಪಡಿಸಿಕೊಳ್ಳಲು ಒಪ್ಪಲಿಲ್ಲ.
12 ಆರನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಯೂಫ್ರಟಿಸ್ ಮಹಾನದಿಯ ಮೇಲೆ ಸುರಿಸಿದನು. ನದಿಯಲ್ಲಿದ್ದ ನೀರು ಬತ್ತಿಹೋಯಿತು. ಇದರಿಂದ ಪೂರ್ವದಲ್ಲಿದ್ದ ರಾಜರುಗಳು ಬರಲು ಮಾರ್ಗವು ಸಿದ್ಧವಾಯಿತು. 13 ಆಗ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳನ್ನು ನಾನು ನೋಡಿದೆನು. ಅವು ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಹೊರಗೆ ಬಂದವು. 14 ಈ ಅಶುದ್ಧಾತ್ಮಗಳು ಸೈತಾನನ ಆತ್ಮಗಳಾಗಿವೆ. ಅವುಗಳಿಗೆ ಮಹಾ ಅದ್ಭುತಗಳನ್ನು ಮಾಡಲು ಶಕ್ತಿಯಿದೆ. ಈ ಅಶುದ್ಧಾತ್ಮಗಳು ಸರ್ವಶಕ್ತನಾದ ದೇವರ ಮಹಾದಿನದಂದು ನಡೆಯುವ ಯುದ್ಧಕ್ಕೆ, ಲೋಕದಲ್ಲೆಲ್ಲಾ ಇರುವ ರಾಜರನ್ನು ಒಟ್ಟುಗೂಡಿಸಲು ಹೊರಗೆ ಹೋಗುತ್ತವೆ.
15 “ಕೇಳಿರಿ! ನಾನು ಕಳ್ಳನಂತೆ ಬರುತ್ತೇನೆ. ಎಚ್ಚರವಾಗಿದ್ದು ತನ್ನ ಬಟ್ಟೆಗಳನ್ನು ಕಾಪಾಡಿಕೊಳ್ಳುವವನು ಭಾಗ್ಯವಂತನಾಗಿದ್ದಾನೆ. ಆಗ ಅವನು ಬಟ್ಟೆಯಿಲ್ಲದೆ ಹೊರಗೆ ಹೋಗಿ ತನ್ನನ್ನು ನಾಚಿಕೆಗೆ ಗುರಿಪಡಿಸಿಕೊಳ್ಳುವ ಅಗತ್ಯತೆವಿರುವುದಿಲ್ಲ.”
16 ಬಳಿಕ ಅಶುದ್ಧಾತ್ಮಗಳು ರಾಜರುಗಳನ್ನು ಹೀಬ್ರೂ ಭಾಷೆಯಲ್ಲಿ ಹರ್ಮೆಗದೋನ್ ಎಂಬ ಹೆಸರುಳ್ಳ ಸ್ಥಳದಲ್ಲಿ ಒಟ್ಟಾಗಿ ಸೇರಿಸಿದವು.
17 ಏಳನೆಯ ದೇವದೂತನು ತನ್ನ ಪಾತ್ರೆಯಲ್ಲಿದ್ದುದನ್ನು ಗಾಳಿಯಲ್ಲಿ ಸುರಿದನು. ಆಗ ಒಂದು ಮಹಾಧ್ವನಿಯು ಸಿಂಹಾಸನದಿಂದ ಆಲಯದ ಹೊರಕ್ಕೆ ಬಂದಿತು. ಆ ಧ್ವನಿಯು, “ಮುಗಿದುಹೋಯಿತು!” ಎಂದು ಹೇಳಿತು. 18 ಆಗ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಉಂಟಾದವು ಮತ್ತು ಭೂಕಂಪವೂ ಆಯಿತು. ಜನರು ಭೂಮಿಯ ಮೇಲೆ ಇರಲು ಆರಂಭಿಸಿದಂದಿನಿಂದ ಅಂತಹ ಭೀಕರ ಭೂಕಂಪವು ಎಂದೂ ಸಂಭವಿಸಿರಲಿಲ್ಲ. 19 ಆ ಮಹಾನಗರವು ಒಡೆದು ಮೂರು ಭಾಗವಾಯಿತು. ಜನಾಂಗಗಳ ನಗರಗಳು ನಾಶವಾದವು. ಮಹಾನಗರವಾದ ಬಾಬಿಲೋನನ್ನು ದೇವರು ದಂಡಿಸದೆ ಬಿಡಲಿಲ್ಲ. ಆತನು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕುಡಿಯಲು ಕೊಟ್ಟನು. 20 ಸಕಲ ದ್ವೀಪಗಳೂ ಅದೃಶ್ಯವಾದವು ಮತ್ತು ಬೆಟ್ಟಗಳೇ ಇಲ್ಲವಾದವು. 21 ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲುಗಳು ಬಿದ್ದವು. ಆ ಆಲಿಕಲ್ಲುಗಳು ನೂರು ಪೌಂಡುಗಳಷ್ಟು ಭಾರವಾಗಿದ್ದವು. ಈ ಉಪದ್ರವದ ಕಾಟದಿಂದ ಜನರು ದೇವರನ್ನು ದೂಷಿಸಿದರು. ಈ ಉಪದ್ರವವು ಬಹಳ ಭೀಕರವಾಗಿತ್ತು.
Kannada Holy Bible: Easy-to-Read Version. All rights reserved. © 1997 Bible League International