Revised Common Lectionary (Complementary)
ದಾವೀದನು ಯೆಹೂದದ ಅರಣ್ಯದಲ್ಲಿದ್ದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
63 ದೇವರೇ, ನೀನೇ ನನ್ನ ದೇವರು.
ನಿನಗಾಗಿ ಕುತೂಹಲದಿಂದ ಎದುರು ನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂಮಿಯಂತೆ ನನ್ನ ಆತ್ಮವು ನಿನಗಾಗಿ ಬಾಯಾರಿದೆ;
ನನ್ನ ದೇಹವು ನಿನಗಾಗಿ ಬಯಸಿದೆ.
2 ಹೌದು, ನಿನ್ನನ್ನು ನಿನ್ನ ಆಲಯದಲ್ಲಿ ನೋಡಿದ್ದೇನೆ,
ನಿನ್ನ ಶಕ್ತಿಯನ್ನೂ ಮಹಿಮೆಯನ್ನೂ ಕಂಡಿದ್ದೇನೆ.
3 ನಿನ್ನ ಪ್ರೀತಿಯು ಜೀವಕ್ಕಿಂತಲೂ ಶ್ರೇಷ್ಠ.
ನನ್ನ ತುಟಿಗಳು ನಿನ್ನನ್ನು ಕೊಂಡಾಡುತ್ತವೆ.
4 ಹೌದು, ನನ್ನ ಜೀವಮಾನವೆಲ್ಲಾ ನಿನ್ನನ್ನು ಕೊಂಡಾಡುವೆನು.
ನಿನ್ನ ಹೆಸರಿನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
5 ಮೃಷ್ಟಾನ್ನವನ್ನು ತಿಂದಿರುವವನಂತೆ ತೃಪ್ತನಾಗಿರುವೆನು.
ನನ್ನ ಬಾಯಿ ನಿನ್ನನ್ನು ಕೊಂಡಾಡುವುದು.
6 ಹಾಸಿಗೆಯು ಮೇಲೆ ಮಲಗಿರುವಾಗಲೂ ನಿನ್ನನ್ನು ಜ್ಞಾಪಿಸಿಕೊಳ್ಳುವೆನು.
ಮಧ್ಯರಾತ್ರಿಯಲ್ಲಿಯೂ ನಿನ್ನನ್ನು ನೆನಸಿಕೊಳ್ಳುವೆನು.
7 ನಿಜವಾಗಿಯೂ ನೀನೇ ನನಗೆ ಸಹಾಯಕ.
ನಿನ್ನ ರೆಕ್ಕೆಗಳ ಮರೆಯಲ್ಲಿ ಆನಂದಘೋಷ ಮಾಡುವೆನು.
8 ನನ್ನ ಆತ್ಮವು ನಿನ್ನನ್ನು ಅಂಟಿಕೊಂಡಿರುವುದು.
ನಿನ್ನ ಬಲಗೈ ನನ್ನ ಕೈಹಿಡಿದು ನಡೆಸುವುದು.
9 ನನ್ನನ್ನು ಕೊಲ್ಲಬೇಕೆಂದಿರುವವರು
ಪಾತಾಳಕ್ಕೆ ಇಳಿದುಹೋಗುವರು.
10 ಅವರು ಖಡ್ಗಗಳಿಂದ ಕೊಲ್ಲಲ್ಪಡುವರು.
ಅವರ ಶವಗಳು ನರಿಗಳ ಪಾಲಾಗುವವು.
11 ರಾಜನಾದರೋ ತನ್ನ ದೇವರಲ್ಲಿಯೇ ಸಂತೋಷಿಸುವನು.
ಹರಕೆಹೊತ್ತು ಅವನಿಗೆ ವಿಧೇಯರಾಗಿರುವವರು ದೇವರನ್ನು ಕೊಂಡಾಡುವರು,
ಯಾಕೆಂದರೆ ಆ ಸುಳ್ಳುಗಾರರನ್ನೆಲ್ಲಾ ಆತನು ಸೋಲಿಸಿದ್ದಾನೆ.
ಯುದ್ಧಕ್ಕೆ ತಯಾರಾಗು
9 ಜನಾಂಗದವರಿಗೆ ಇದನ್ನು ಪ್ರಕಟಿಸು:
ಯುದ್ಧಕ್ಕೆ ತಯಾರಾಗಿರಿ!
ಶೂರರನ್ನು ಎಚ್ಚರಿಸಿರಿ!
ಯುದ್ಧ ವೀರರು ಹತ್ತಿರಕ್ಕೆ ಬರಲಿ; ಅವರು ಬರಲಿ!
10 ನಿಮ್ಮ ನೇಗಿಲ ಗುಳಗಳನ್ನು ಕತ್ತಿಯನ್ನಾಗಿ ಮಾಡಿರಿ.
ಕುಡುಗೋಲುಗಳಿಂದ ಬರ್ಜಿಯನ್ನು ಮಾಡಿರಿ.
ನಿಮ್ಮ ಬಲಹೀನನಾದ ಸೈನಿಕನು,
“ನಾನು ಬಲಶಾಲಿ” ಅನ್ನಲಿ.
11 ಎಲ್ಲಾ ಜನಾಂಗದವರೇ, ತ್ವರೆಪಡಿರಿ.
ಆ ಸ್ಥಳದಲ್ಲಿ ಒಟ್ಟುಸೇರಿರಿ.
ಯೆಹೋವನೇ, ನಿನ್ನ ಬಲಶಾಲಿಯಾದ ಸೈನಿಕರನ್ನು ಬರಮಾಡು.
12 ಜನಾಂಗಗಳೇ, ಎಚ್ಚರಗೊಳ್ಳಿರಿ!
ಯೆಹೋಷಾಫಾಟ್ ತಗ್ಗಿಗೆ ಬನ್ನಿರಿ.
ಸುತ್ತಲಿರುವ ಜನಾಂಗಗಳಿಗೆ ತೀರ್ಪುಕೊಡಲು
ನಾನು ಅಲ್ಲಿ ಕುಳಿತುಕೊಳ್ಳುವೆನು.
13 ಬೆಳೆಯು ಪಕ್ವವಾಗಿದೆ;
ಕುಡುಗೋಲನ್ನು ತನ್ನಿರಿ.
ಬನ್ನಿ, ದ್ರಾಕ್ಷಿಯನ್ನು ಆಲೆಯಲ್ಲಿ ತುಳಿಯಿರಿ,
ಯಾಕೆಂದರೆ ಆಲೆಯು ತುಂಬಿಹೋಗಿದೆ.
ಪಿಪಾಯಿಗಳು ತುಂಬಿತುಳುಕುತ್ತಿವೆ,
ಯಾಕೆಂದರೆ ಅವರ ದುಷ್ಟತ್ವವು ವಿಪರೀತವಾಗಿದೆ!
14 ತೀರ್ಮಾನದ ತಗ್ಗಿನಲ್ಲಿ ಅನೇಕರು ಸೇರಿದ್ದಾರೆ.
ಯೆಹೋವನ ವಿಶೇಷ ದಿನವು ತೀರ್ಮಾನದ ತಗ್ಗಿನ ಹತ್ತಿರ ಬಂದಿದೆ.
15 ಸೂರ್ಯಚಂದ್ರರು ಕತ್ತಲಾಗುವರು,
ನಕ್ಷತ್ರಗಳು ಹೊಳೆಯುವುದಿಲ್ಲ.
16 ಚೀಯೋನಿನಿಂದ ದೇವರಾದ ಯೆಹೋವನು ಆರ್ಭಟಿಸುವನು.
ಜೆರುಸಲೇಮಿನಿಂದ ಆತನು ಗರ್ಜಿಸುವನು.
ಆಗ ಭೂಮ್ಯಾಕಾಶಗಳು ನಡುಗುವವು.
ಆದರೆ ಯೆಹೋವನ ಜನರಿಗೆ ಆತನೇ ಆಶ್ರಯ ಸ್ಥಳವಾಗುವನು.
ಆತನು ಇಸ್ರೇಲರಿಗೆ ಸುರಕ್ಷಿತ ಸ್ಥಳವಾಗುವನು.
ಯೆಹೂದಕ್ಕೆ ಒಂದು ಹೊಸ ಜೀವಿತದ ವಾಗ್ದಾನ
17 “ಆಗ ನಾನು ನಿಮ್ಮ ದೇವರಾದ ಯೆಹೋವನು ಎಂದು ಅರಿತುಕೊಳ್ಳುವಿರಿ.
ನಾನು ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ವಾಸಿಸುವೆನು.
ಜೆರುಸಲೇಮ್ ಪರಿಶುದ್ಧವಾಗುವದು.
ಪರದೇಶಿಗಳು ಇನ್ನು ಮುಂದೆ ಅದನ್ನು ದಾಟಿಹೋಗುವುದಿಲ್ಲ.
18 ಆ ದಿವಸ ಸಿಹಿ ದ್ರಾಕ್ಷಾರಸವು ಬೆಟ್ಟಗಳಿಂದ ಹರಿಯುವುದು.
ಬೆಟ್ಟಗಳಲ್ಲಿ ಹಾಲು ಹರಿಯುವುದು.
ಮತ್ತು ಯೆಹೂದದ ಬತ್ತಿದ ನದಿಗಳಲ್ಲಿ ನೀರು ತುಂಬಿ ಹರಿಯುವದು.
ಯೆಹೋವನ ಆಲಯದಿಂದ ಬುಗ್ಗೆಯು ಹೊರಡುವದು.
ಅಕಾಸಿಯ ಕಣಿವೆಗೆ ನೀರನ್ನು ಕೊಡುವದು.
19 ಈಜಿಪ್ಟ್ ಬರಿದಾಗುವದು.
ಎದೋಮು ಬೆಂಗಾಡಾಗುವದು.
ಯಾಕೆಂದರೆ ಅವರು ಯೆಹೂದದ ಜನರೊಂದಿಗೆ ಕ್ರೂರ ರೀತಿಯಲ್ಲಿ ವರ್ತಿಸಿದರು.
ಅವರ ದೇಶಗಳಲ್ಲಿ ನಿರಪರಾಧಿಗಳನ್ನು ಕೊಂದರು.
20 ಆದರೆ ಯೆಹೂದದಲ್ಲಿ ಯಾವಾಗಲೂ ಜನರು ವಾಸಿಸುವರು.
ಅನೇಕ ತಲೆಮಾರಿನವರೆಗೆ ಜನರು ಜೆರುಸಲೇಮಿನಲ್ಲಿ ವಾಸಿಸುವರು.
21 ಆ ಜನರು ನನ್ನ ಜನರನ್ನು ಕೊಂದರು.
ಆದ್ದರಿಂದ ನಾನು ನಿಜವಾಗಿಯೂ ಅವರನ್ನು ಶಿಕ್ಷಿಸುವೆನು.”
ಯಾಕೆಂದರೆ ದೇವರಾದ ಯೆಹೋವನು ಚೀಯೋನಿನಲ್ಲಿ ವಾಸಿಸುವನು.
29 “ಆ ದಿನಗಳ ಸಂಕಟವು ತೀರಿದ ಕೂಡಲೇ,
‘ಸೂರ್ಯನು ಕತ್ತಲಾಗುವನು.
ಚಂದ್ರನು ಕಾಂತಿಹೀನನಾಗುವನು.
ನಕ್ಷತ್ರಗಳು ಆಕಾಶದಿಂದ ಕಳಚಿಬೀಳುವವು.
ಆಕಾಶಮಂಡಲವು ಕಂಪಿಸುವುದು.’(A)
30 “ಆಗ ಮನುಷ್ಯಕುಮಾರನ ಆಗಮನದ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು. ಲೋಕದ ಜನರೆಲ್ಲಾ ಗೋಳಾಡುವರು. ಆಕಾಶದಲ್ಲಿ ಮೇಘಗಳ ಮೇಲೆ ಆತನು ಬರುವುದನ್ನು ಜನರೆಲ್ಲರೂ ನೋಡುವರು. ಆತನು ಶಕ್ತಿಸಾಮರ್ಥ್ಯದಿಂದಲೂ ಮಹಿಮೆಯಿಂದಲೂ ಬರುವನು. 31 ಮಹಾಶಬ್ದದ ತುತ್ತೂರಿಯ ಘೋಷಣೆಯೊಡನೆ ಮನುಷ್ಯಕುಮಾರನು ತನ್ನ ದೂತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸುವನು. ಆತನು ಆರಿಸಿಕೊಂಡವರನ್ನು ದೇವದೂತರು ಭೂಲೋಕದ ಎಲ್ಲಾ ಕಡೆಗಳಿಂದಲೂ ಒಟ್ಟುಗೂಡಿಸುವರು.
32 “ಅಂಜೂರದ ಮರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಅಂಜೂರದ ಮರದ ಕೊಂಬೆಗಳು ಹಸುರಾಗಿ ಎಳೆಯದಾಗಿದ್ದು ಹೊಸ ಎಲೆಗಳು ಬೆಳೆಯುವುದಕ್ಕೆ ಪ್ರಾರಂಭಿಸಿದಾಗ, ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ. 33 ನಾನು ನಿಮಗೆ ಹೇಳಿದ ಈ ಸಂಗತಿಗಳಿಗೂ ಅದು ಅನ್ವಯಿಸುತ್ತದೆ. ಈ ಸಂಗತಿಗಳೆಲ್ಲಾ ಸಂಭವಿಸುತ್ತಿರುವುದನ್ನು ನೀವು ನೋಡುವಾಗ ಆ ಸಮಯ ಹತ್ತಿರವಾಯಿತೆಂದೂ ಬರುವುದಕ್ಕೆ ಸಿದ್ಧವಾಗಿದೆಯೆಂದೂ ತಿಳಿದುಕೊಳ್ಳುವಿರಿ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. 34 ಇಂದಿನ ಜನರು ಇನ್ನೂ ಜೀವಿಸಿರುವಾಗಲೇ ಈ ಎಲ್ಲಾ ಸಂಗತಿಗಳು ಸಂಭವಿಸುತ್ತವೆ! 35 ಭೂಮಿಯೂ ಆಕಾಶವೂ ನಾಶವಾಗುತ್ತವೆ, ಆದರೆ ನಾನು ಹೇಳಿದ ಮಾತುಗಳು ನಾಶವಾಗುವುದೇ ಇಲ್ಲ!
Kannada Holy Bible: Easy-to-Read Version. All rights reserved. © 1997 Bible League International