Revised Common Lectionary (Complementary)
18 ನಿಮ್ಮಲ್ಲಿ ಕೆಲವರಿಗೆ ಯೆಹೋವನ
ನ್ಯಾಯತೀರ್ಪಿನ ದಿನವನ್ನು ನೋಡುವ ಮನಸ್ಸಿದೆ.
ಆ ದಿವಸವನ್ನು ಯಾಕೆ ನೀವು ನೋಡಬೇಕು?
ಯೆಹೋವನ ನ್ಯಾಯಾತೀರ್ಪಿನ ದಿನವು ಬೆಳಕನ್ನಲ್ಲ, ಕತ್ತಲನ್ನು ತರುವುದು.
19 ಆಗ ನೀವು ಸಿಂಹದ ಬಾಯಿಂದ ತಪ್ಪಿಸಿಕೊಂಡು
ಕರಡಿಯ ಬಾಯಿಗೆ ಬೀಳುವ ಮನುಷ್ಯನಂತಿರುವಿರಿ.
ಆಗ ನೀವು ನಿಮ್ಮ ಮನೆಯ ಆಶ್ರಯಕ್ಕೆ ಓಡಿಹೋಗಿ
ಗೋಡೆಗೆ ಒರಗಿ ನಿಂತಾಗ
ಒಂದು ಹಾವಿನಿಂದ ಕಚ್ಚಿಸಿಕೊಂಡವರಂತೆ ಇರುವಿರಿ.
20 ಯೆಹೋವನ ನ್ಯಾಯತೀರ್ಪಿನ ದಿವಸವು
ಬೆಳಕಿನ ದಿವಸವಾಗಿರದೆ ಕತ್ತಲೆಯ ದಿವಸವಾಗಿರುವುದು;
ಬೆಳಕಿನ ಮಿಣಕೂ ಇಲ್ಲದ ಅಂಧಕಾರದ ದಿನವಾಗಿರುವುದು.
ಇಸ್ರೇಲಿನ ಆರಾಧನೆಯು ಯೆಹೋವನಿಗೆ ಬೇಕಿಲ್ಲ
21 “ನಿಮ್ಮ ಆರಾಧನಾ ದಿವಸಗಳನ್ನು ನಾನು ದ್ವೇಷಿಸುತ್ತೇನೆ.
ನಾನು ಅವುಗಳನ್ನು ಸ್ವೀಕರಿಸುವುದಿಲ್ಲ.
ನಿಮ್ಮ ಧಾರ್ಮಿಕ ಕೂಟಗಳಲ್ಲಿ ನಾನು ಸಂತೋಷಿಸುವದಿಲ್ಲ.
22 ನೀವು ಸರ್ವಾಂಗಹೋಮವನ್ನಾಗಲಿ ಧಾನ್ಯದ ಹೋಮವನ್ನಾಗಲಿ ಅರ್ಪಿಸಿದರೆ
ನಾನು ಅದನ್ನು ಸ್ವೀಕರಿಸುವುದಿಲ್ಲ.
ಸಮಾಧಾನಯಜ್ಞದಲ್ಲಿ ಕೊಬ್ಬಿದ ಪ್ರಾಣಿಗಳನ್ನು ಬಲಿಯರ್ಪಿಸಿದರೂ
ನಾನು ಅದನ್ನು ಕಣ್ಣೆತ್ತಿ ನೋಡುವದಿಲ್ಲ.
23 ನಿಮ್ಮ ಗಟ್ಟಿಯಾದ ಹಾಡುಗಳನ್ನು ನನ್ನಿಂದ ದೂರ ಮಾಡಿರಿ.
ನಿಮ್ಮ ಹಾರ್ಪ್ ವಾದ್ಯಗಳ ಹಾಡುಗಳನ್ನು ನಾನು ಕೇಳುವುದಿಲ್ಲ.
24 ನಿಮ್ಮ ದೇಶದಿಂದ ನ್ಯಾಯವು ಹರಿಯುವಂತೆ ಮಾಡಿರಿ.
ಎಂದಿಗೂ ಬತ್ತದ ಒರತೆಯಂತೆ ನಿಮ್ಮ ಒಳ್ಳೆತನವು ಹರಿಯಲಿ.
ಜ್ಞಾಪಕಾರ್ಥ ನೈವೇದ್ಯ. ಸಮರ್ಪಣೆಯ ಹಾಡು. ರಚನೆಗಾರ: ದಾವೀದ.
70 ದೇವರೇ, ನನ್ನನ್ನು ರಕ್ಷಿಸು!
ದೇವರೇ, ಬೇಗನೆ ನನಗೆ ಸಹಾಯಮಾಡು!
2 ನನ್ನನ್ನು ಕೊಲ್ಲಲು ಪ್ರಯತ್ನಿಸುವವರು
ನಿರಾಶೆಗೊಂಡು ಅಪಮಾನ ಹೊಂದಲಿ.
ನನಗೆ ಕೇಡುಮಾಡಬೇಕೆಂದಿರುವವರು
ಅವಮಾನಗೊಂಡು ಓಡಿಹೋಗಲಿ.
3 ನನ್ನನ್ನು ಗೇಲಿಮಾಡುವವರು
ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.
4 ನನ್ನ ಆರಾಧಕರೆಲ್ಲರೂ ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು ನಿನ್ನನ್ನು ಯಾವಾಗಲೂ ಕೊಂಡಾಡಲಿ.
5 ನಾನಾದರೋ ಬಡವನೂ ನಿಸ್ಸಹಾಯಕನೂ ಆಗಿರುವೆ!
ದೇವರೇ, ಬೇಗನೆ ಬಂದು ನನ್ನನ್ನು ರಕ್ಷಿಸು!
ಯೆಹೋವನೇ, ನನ್ನನ್ನು ಬಿಡುಗಡೆ ಮಾಡಬಲ್ಲವನು ನೀನೊಬ್ಬನೇ.
ಯೆಹೋವನೇ ತಡಮಾಡಬೇಡ!
ಪ್ರಭುವಿನ ಬರುವಿಕೆ
13 ಸಹೋದರ ಸಹೋದರಿಯರೇ, ಸತ್ತುಹೋದ ಜನರ ಬಗ್ಗೆ ನೀವು ತಿಳಿದುಕೊಳ್ಳಬೇಕೆಂಬುದು ನಮ್ಮ ಅಪೇಕ್ಷೆ. ನಿರೀಕ್ಷೆಯಿಲ್ಲದ ಜನರಂತೆ ನೀವು ದುಃಖದಿಂದಿರುವುದು ನಮಗೆ ಇಷ್ಟವಿಲ್ಲ. 14 ಯೇಸು ಸತ್ತುಹೋದನೆಂದು ನಾವು ನಂಬುತ್ತೇವೆ. ಆದರೆ ಯೇಸು ಮತ್ತೆ ಜೀವಂತವಾಗಿ ಎದ್ದುಬಂದನೆಂಬುದನ್ನೂ ನಾವು ನಂಬುತ್ತೇವೆ. ಹಾಗೆಯೇ ಯೇಸುವಿನಲ್ಲಿ ವಿಶ್ವಾಸವಿಟ್ಟು ಸತ್ತುಹೋದವರನ್ನು ದೇವರು ಆತನ ಜೊತೆಯಲ್ಲಿ ಕರೆದುಕೊಂಡು ಬರುವನು.
15 ಈಗ ನಾವು ನಿಮಗೆ ಹೇಳುತ್ತಿರುವುದು ಪ್ರಭುವಿನ ಸ್ವಂತ ಸಂದೇಶವನ್ನೇ. ಪ್ರಭುವು ಮತ್ತೆ ಬಂದಾಗ ಈಗ ಜೀವಿಸುತ್ತಿರುವ ನಾವು ಇನ್ನೂ ಜೀವದಿಂದ ಇದ್ದರೆ ನಾವು ಪ್ರಭುವಿನ ಜೊತೆಯಲ್ಲಿರುತ್ತೇವೆ. ಆದರೂ ಸತ್ತುಹೋದ ಇತರರಿಗಿಂತಲೂ ನಾವು ಮುಂದಿನವರಾಗುವುದಿಲ್ಲ. 16 ಪ್ರಭುವು ತಾನೇ ಪರಲೋಕದಿಂದ ಇಳಿದುಬರುವನು. ಆಗ ಪ್ರಧಾನ ದೇವದೂತನು ದೇವರ ತುತೂರಿ ಧ್ವನಿಯೊಡನೆ ಆಜ್ಞಾಘೋಷ ಮಾಡುವನು. ಕೂಡಲೇ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದುಬರುವರು. 17 ಅನಂತರ, ಇನ್ನೂ ಜೀವದಿಂದುಳಿದಿರುವ ನಾವು ಸತ್ತವರೊಡನೆ ಒಂದುಗೂಡುವೆವು. ಪ್ರಭುವನ್ನು ಅಂತರಿಕ್ಷದಲ್ಲಿ ಎದುರುಗೊಳ್ಳಲು ನಾವು ಮೇಘಗಳ ನಡುವೆ ಎತ್ತಲ್ಪಡುವೆವು. ಹೀಗೆ ನಾವು ಯಾವಾಗಲೂ ಪ್ರಭುವಿನೊಂದಿಗೆ ಇರುವೆವು. 18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.
ಹತ್ತು ಮಂದಿ ಕನ್ನಿಕೆಯರನ್ನು ಕುರಿತ ಸಾಮ್ಯ
25 “ಆ ದಿನಗಳಲ್ಲಿ ಪರಲೋಕರಾಜ್ಯವು ಹೇಗಿರುತ್ತದೆ ಎನ್ನುವುದಕ್ಕೆ ಈ ಸಾಮ್ಯವು ಉದಾಹರಣೆಯಾಗಿದೆ. ಹತ್ತು ಮಂದಿ ಕನ್ನಿಕೆಯರು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳಲು ಹೊರಟರು. 2 ಅವರಲ್ಲಿ ಐದು ಮಂದಿ ಬುದ್ಧಿಹೀನರಾಗಿದ್ದರು. ಇನ್ನುಳಿದ ಐದು ಮಂದಿ ಬುದ್ಧಿವಂತೆಯರಾಗಿದ್ದರು. 3 ಬುದ್ಧಿಹೀನ ಕನ್ನಿಕೆಯರು ತಮ್ಮ ದೀಪಾರತಿಗಳನ್ನು ತಂದರೇ ಹೊರತು ಬೇಕಾಗುವಷ್ಟು ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. 4 ಬುದ್ಧಿವಂತೆಯರು ತಮ್ಮ ದೀಪಗಳೊಂದಿಗೆ ಬೇಕಾದಷ್ಟು ಎಣ್ಣೆಯನ್ನೂ ತೆಗೆದುಕೊಂಡರು. 5 ಮದುಮಗನ ಆಗಮನ ತಡವಾಯಿತು. ಅವರೆಲ್ಲರೂ ಆಯಾಸದಿಂದ ತೂಕಡಿಸುತ್ತಾ ನಿದ್ರೆಹೋದರು.
6 “ಮಧ್ಯರಾತ್ರಿಯಲ್ಲಿ, ‘ಮದುಮಗನು ಬರುತ್ತಿದ್ದಾನೆ! ಬನ್ನಿರಿ, ಆತನನ್ನು ಸಂಧಿಸಿರಿ!’ ಎಂದು ಯಾರೋ ಒಬ್ಬನು ಪ್ರಕಟಿಸಿದನು.
7 “ಆಗ ಕನ್ನಿಕೆಯರೆಲ್ಲ ಎಚ್ಚರಗೊಂಡು ತಮ್ಮ ದೀಪಾರತಿಗಳನ್ನು ಸಿದ್ಧಮಾಡಿಕೊಂಡರು. 8 ಬುದ್ಧಿಹೀನ ಕನ್ನಿಕೆಯರು ಬುದ್ಧಿವಂತ ಕನ್ನಿಕೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿ. ನಮ್ಮ ದೀಪಾರತಿಗಳಲ್ಲಿದ್ದ ಎಣ್ಣೆಯೆಲ್ಲಾ ಮುಗಿಯಿತು’ ಎಂದರು.
9 “ಬುದ್ಧಿವಂತೆಯರು, ‘ಇಲ್ಲ! ನಮ್ಮಲ್ಲಿರುವ ಎಣ್ಣೆ ನಮಗೇ ಸಾಕಾಗದಿರಬಹುದು. ಅಂಗಡಿಗೆ ಹೋಗಿ ಕೊಂಡುಕೊಳ್ಳಿರಿ’ ಎಂದು ಉತ್ತರಕೊಟ್ಟರು.
10 “ಆದ್ದರಿಂದ ಐದು ಮಂದಿ ಬುದ್ಧಿಹೀನ ಕನ್ನಿಕೆಯರು ಎಣ್ಣೆ ಕೊಂಡುಕೊಳ್ಳುವುದಕ್ಕೆ ಹೋದರು. ಅವರು ಹೋಗುತ್ತಿರುವಾಗ, ಮದುಮಗನು ಬಂದನು. ಸಿದ್ಧವಾಗಿದ್ದ ಕನ್ನಿಕೆಯರು ಮದುಮಗನ ಜೊತೆಯಲ್ಲಿ ಔತಣಕ್ಕೆ ಹೋದರು. ನಂತರ ಬಾಗಿಲು ಮುಚ್ಚಲಾಯಿತು.
11 “ತರುವಾಯ ಬುದ್ಧಿಹೀನ ಕನ್ನಿಕೆಯರು ಬಂದು, ‘ಸ್ವಾಮೀ, ಸ್ವಾಮೀ, ಒಳಗೆ ಬರಲು ನಮಗೆ ಬಾಗಿಲು ತೆರೆ’ ಅಂದರು.
12 “ಆದರೆ ಮದುಮಗನು, ‘ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನೀವು ಯಾರೋ ನನಗೆ ಗೊತ್ತಿಲ್ಲ’ ಎಂದು ಉತ್ತರಕೊಟ್ಟನು.
13 “ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ಮನುಷ್ಯಕುಮಾರನು ಬರುವ ದಿನವಾಗಲಿ ಸಮಯವಾಗಲಿ ನಿಮಗೆ ಗೊತ್ತಿಲ್ಲ.
Kannada Holy Bible: Easy-to-Read Version. All rights reserved. © 1997 Bible League International