Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 70

ಜ್ಞಾಪಕಾರ್ಥ ನೈವೇದ್ಯ. ಸಮರ್ಪಣೆಯ ಹಾಡು. ರಚನೆಗಾರ: ದಾವೀದ.

70 ದೇವರೇ, ನನ್ನನ್ನು ರಕ್ಷಿಸು!
    ದೇವರೇ, ಬೇಗನೆ ನನಗೆ ಸಹಾಯಮಾಡು!
ನನ್ನನ್ನು ಕೊಲ್ಲಲು ಪ್ರಯತ್ನಿಸುವವರು
    ನಿರಾಶೆಗೊಂಡು ಅಪಮಾನ ಹೊಂದಲಿ.
ನನಗೆ ಕೇಡುಮಾಡಬೇಕೆಂದಿರುವವರು
    ಅವಮಾನಗೊಂಡು ಓಡಿಹೋಗಲಿ.
ನನ್ನನ್ನು ಗೇಲಿಮಾಡುವವರು
    ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.
ನನ್ನ ಆರಾಧಕರೆಲ್ಲರೂ ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು ನಿನ್ನನ್ನು ಯಾವಾಗಲೂ ಕೊಂಡಾಡಲಿ.

ನಾನಾದರೋ ಬಡವನೂ ನಿಸ್ಸಹಾಯಕನೂ ಆಗಿರುವೆ!
    ದೇವರೇ, ಬೇಗನೆ ಬಂದು ನನ್ನನ್ನು ರಕ್ಷಿಸು!
ಯೆಹೋವನೇ, ನನ್ನನ್ನು ಬಿಡುಗಡೆ ಮಾಡಬಲ್ಲವನು ನೀನೊಬ್ಬನೇ.
    ಯೆಹೋವನೇ ತಡಮಾಡಬೇಡ!

ಆಮೋಸ 4:6-13

“ನೀವು ನನ್ನ ಬಳಿಗೆ ಬರುವಂತೆ ಅನೇಕ ಕಾರ್ಯಗಳನ್ನು ಮಾಡಿದೆನು. ನಿಮಗೆ ನಾನು ಊಟಕ್ಕೆ ಕೊಡಲಿಲ್ಲ. ನಿಮ್ಮ ಯಾವ ಪಟ್ಟಣದಲ್ಲಿಯೂ ಆಹಾರವಿಲ್ಲ. ಆದರೂ ನೀವು ನನ್ನ ಬಳಿಗೆ ಹಿಂದಿರುಗಿ ಬರಲಿಲ್ಲ.” ಇದು ಯೆಹೋವನ ನುಡಿ.

“ನಾನು ಮಳೆಯನ್ನು ನಿಲ್ಲಿಸಿದೆನು. ಸುಗ್ಗಿಗೆ ಮೂರು ತಿಂಗಳು ಇರುವಾಗಲೇ ಮಳೆಗರೆಯುವುದನ್ನು ನಿಲ್ಲಿಸಿದೆನು. ಆದ್ದರಿಂದ ಪೈರು ಬೆಳೆಯಲಿಲ್ಲ. ಆಮೇಲೆ ನಾನು ಒಂದು ಪಟ್ಟಣದ ಮೇಲೆ ಮಳೆ ಬೀಳುವಂತೆ ಮಾಡಿದೆನು. ಬೇರೆ ಪಟ್ಟಣಗಳ ಮೇಲೆ ಬೀಳದಂತೆ ಮಾಡಿದೆನು. ದೇಶದ ಒಂದು ಭಾಗದಲ್ಲಿ ಮಳೆ ಸುರಿಯಿತು. ಇನ್ನೊಂದು ಭಾಗವು ಒಣಗಿ ಬೆಂಗಾಡಾಗಿತ್ತು. ಹೀಗೆ ಎರಡು ಮೂರು ಪಟ್ಟಣಗಳ ನಿವಾಸಿಗಳು ನೀರಿಗಾಗಿ ಇನ್ನೊಂದು ಪಟ್ಟಣಕ್ಕೆ ಕಷ್ಟಪಟ್ಟು ಕೊಂಡುಹೋದರು. ಆದರೆ ಅಲ್ಲಿ ಎಲ್ಲರಿಗೂ ನೀರು ದೊರಕಲಿಲ್ಲ. ಹೀಗಾದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇವು ಯೆಹೋವನ ನುಡಿಗಳು.

“ನಿಮ್ಮ ಬೆಳೆಗಳು ಸೂರ್ಯನ ಶಾಖದಿಂದಲೂ ರೋಗದಿಂದಲೂ ಸಾಯುವಂತೆ ಮಾಡಿದೆನು. ನಿಮ್ಮ ತೋಟಗಳನ್ನೂ ದ್ರಾಕ್ಷಿತೋಟಗಳನ್ನೂ ನಾನು ನಾಶಮಾಡಿದೆನು. ಮಿಡತೆಗಳು ನಿಮ್ಮ ಅಂಜೂರದ ಮತ್ತು ಆಲೀವ್ ಮರಗಳನ್ನು ತಿಂದುಬಿಟ್ಟವು. ಆದಾಗ್ಯೂ ಸಹಾಯಕ್ಕಾಗಿ ನೀವು ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.

10 “ನಾನು ಈಜಿಪ್ಟಿಗೆ ವ್ಯಾಧಿಗಳನ್ನು ಹೇಗೆ ಬರಮಾಡಿದೆನೋ ಹಾಗೆಯೇ ನಿಮಗೂ ಮಾಡಿದೆನು. ನಿಮ್ಮ ಯೌವನಸ್ಥರನ್ನು ಕತ್ತಿಯಿಂದ ಕೊಂದೆನು. ನಿಮ್ಮ ಕುದುರೆಗಳನ್ನು ತೆಗೆದುಕೊಂಡೆನು. ಹೆಣಗಳ ರಾಶಿಯಿಂದ ನಿಮ್ಮ ಸ್ಥಳವು ದುರ್ವಾಸನೆಯಿಂದ ತುಂಬುವಂತೆ ಮಾಡಿದೆನು. ಆದಾಗ್ಯೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.

11 “ಸೊದೋಮ್ ಗೊಮೋರವನ್ನು ನಾಶಮಾಡಿದಂತೆ ನಾನು ನಿಮ್ಮನ್ನು ನಾಶಮಾಡಿದೆನು. ಆ ನಗರಗಳು ಸಂಪೂರ್ಣವಾಗಿ ನಾಶವಾದವು. ನೀವು ಬೆಂಕಿಯಿಂದ ಎಳೆದ ಕೊಳ್ಳಿಯಂತಿದ್ದೀರಿ. ಆದರೂ ನೀವು ಸಹಾಯಕ್ಕಾಗಿ ನನ್ನ ಬಳಿಗೆ ಬರಲಿಲ್ಲ.” ಇದು ಯೆಹೋವನ ನುಡಿ.

12 “ಆದ್ದರಿಂದ ಇಸ್ರೇಲೇ, ನಿನಗೆ ವಿರುದ್ಧವಾಗಿ ಈ ಸಂಗತಿಗಳನ್ನು ಮಾಡುತ್ತೇನೆ. ಇಸ್ರೇಲೇ, ನಿನ್ನ ದೇವರನ್ನು ಸಂಧಿಸಲು ನಿನ್ನನ್ನು ತಯಾರು ಮಾಡಿಕೊ.”

13 ನಾನು ಯಾರು? ನಾನೇ ಪರ್ವತಗಳನ್ನು ನಿರ್ಮಿಸಿದಾತನು.
    ನಿಮ್ಮಲ್ಲಿ ಮನಸ್ಸನ್ನು ಉಂಟುಮಾಡಿದಾತನು ನಾನೇ.
    ನಾನು ಜನರಿಗೆ ಮಾತನಾಡಲು ಕಲಿಸಿದೆನು.
ಕತ್ತಲೆಯನ್ನು ಬೆಳಕು ಮಾಡಿದೆನು.
    ಭೂಮಿಯ ಮೇಲಿರುವ ಪರ್ವತಗಳ ಮೇಲೆ ನಾನು ನಡಿಯುತ್ತೇನೆ.
    ನಾನು ಯಾರು? ನನ್ನ ಹೆಸರು ಸೈನ್ಯಗಳ ದೇವರಾದ ಯೆಹೋವನು.

ಮತ್ತಾಯ 24:1-14

ನೆಲಸಮವಾಗಲಿರುವ ಮಹಾದೇವಾಲಯ

(ಮಾರ್ಕ 13:1-31; ಲೂಕ 21:5-33)

24 ಯೇಸು ದೇವಾಲಯದಿಂದ ಹೋಗುತ್ತಿದ್ದಾಗ ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲು ಆತನ ಬಳಿಗೆ ಬಂದರು. ಆಗ ಯೇಸು “ಈ ಕಟ್ಟಡಗಳನ್ನೆಲ್ಲ ನೋಡುತ್ತಿದ್ದೀರಾ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇವುಗಳೆಲ್ಲಾ ನಾಶವಾಗುತ್ತವೆ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಎಲ್ಲಾ ಕಲ್ಲುಗಳು ಕೆಡವಲ್ಪಡುತ್ತವೆ” ಎಂದು ಹೇಳಿದನು.

ಬಳಿಕ ಯೇಸು ಆಲಿವ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ! ನೀನು ಈ ಲೋಕಕ್ಕೆ ಮತ್ತೊಮ್ಮೆ ಬರುವಾಗ ಮತ್ತು ಲೋಕದ ಸಮಾಪ್ತಿಯ ಸಮಯ ಬಂದಾಗ ಸೂಚನೆಗಾಗಿ ಏನು ಸಂಭವಿಸುವುದು? ನಮಗೆ ತಿಳಿಸು!” ಎಂದು ಕೇಳಿದರು.

ಯೇಸು ಅವರಿಗೆ ಕೊಟ್ಟ ಉತ್ತರವಿದು: “ಎಚ್ಚರವಾಗಿರಿ! ನಿಮ್ಮನ್ನು ಮೋಸಗೊಳಿಸಲು ಯಾರಿಗೂ ಅವಕಾಶ ಕೊಡಬೇಡಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಪಡಿಸುವರು. ನಿಮ್ಮ ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ದವನ್ನೂ ಬಹು ದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಹೆದರಬೇಡಿ. ಅಂತ್ಯವು ಬರುವುದಕ್ಕಿಂತ ಮುಂಚೆ ಇವುಗಳು ಸಂಭವಿಸಲೇಬೇಕು. ಜನಾಂಗಗಳು ಬೇರೆ ಜನಾಂಗಗಳಿಗೆ ವಿರೋಧವಾಗಿ ಯುದ್ದ ಮಾಡುತ್ತವೆ. ರಾಜ್ಯಗಳು ಬೇರೆಬೇರೆ ರಾಜ್ಯಗಳಿಗೆ ವಿರೋಧವಾಗಿ ಯುದ್ಧ ಮಾಡುತ್ತವೆ. ಬರಗಾಲಗಳು ಬರುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಭೂಕಂಪಗಳು ಆಗುತ್ತವೆ. ಇವೆಲ್ಲಾ ಪ್ರಸವವೇದನೆಯ ಆರಂಭವಷ್ಟೇ.

“ಆಗ ಜನರು ನಿಮ್ಮನ್ನು ಹಿಂಸಿಸಿ, ಮರಣದಂಡನೆ ವಿಧಿಸಲು ಅಧಿಕಾರಿಗಳಿಗೆ ಒಪ್ಪಿಸಿಕೊಡುವರು. ಜನರೆಲ್ಲರೂ ನಿಮ್ಮನ್ನು ವಿರೋಧಿಸುವರು. ನೀವು ನನ್ನಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ಇವುಗಳೆಲ್ಲಾ ನಿಮಗೆ ಸಂಭವಿಸುವವು. 10 ಆ ಸಮಯದಲ್ಲಿ ಅನೇಕ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವರು. ಅವರು ಒಬ್ಬರಿಗೊಬ್ಬರಿಗೆ ವಿರೋಧವಾಗಿ ತಿರುಗಿಕೊಂಡು ಒಬ್ಬರನ್ನೊಬ್ಬರು ದ್ವೇಷಿಸುವರು. 11 ಅನೇಕ ಸುಳ್ಳುಪ್ರವಾದಿಗಳು ಬಂದು ಎಷ್ಟೋ ಜನರನ್ನು ವಂಚಿಸುವರು. 12 ಲೋಕದಲ್ಲಿ ದುಷ್ಟತನವು ಹೆಚ್ಚಾಗಿ ಬಹುಜನ ವಿಶ್ವಾಸಿಗಳ ಪ್ರೀತಿಯು ಅಡಗಿಹೋಗುವುದು. 13 ಆದರೆ ಕಡೆಯವರೆಗೂ ದೃಢವಾಗಿರುವವನು ರಕ್ಷಣೆಹೊಂದುತ್ತಾನೆ. 14 ದೇವರ ರಾಜ್ಯದ ಶುಭವಾರ್ತೆಯನ್ನು ಲೋಕದಲ್ಲೆಲ್ಲಾ ಪ್ರತಿ ಜನಾಂಗಕ್ಕೂ ಸಾರಲಾಗುವುದು. ಆಗ ಅಂತ್ಯವು ಬರುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International