Revised Common Lectionary (Complementary)
ಜ್ಞಾಪಕಾರ್ಥ ನೈವೇದ್ಯ. ಸಮರ್ಪಣೆಯ ಹಾಡು. ರಚನೆಗಾರ: ದಾವೀದ.
70 ದೇವರೇ, ನನ್ನನ್ನು ರಕ್ಷಿಸು!
ದೇವರೇ, ಬೇಗನೆ ನನಗೆ ಸಹಾಯಮಾಡು!
2 ನನ್ನನ್ನು ಕೊಲ್ಲಲು ಪ್ರಯತ್ನಿಸುವವರು
ನಿರಾಶೆಗೊಂಡು ಅಪಮಾನ ಹೊಂದಲಿ.
ನನಗೆ ಕೇಡುಮಾಡಬೇಕೆಂದಿರುವವರು
ಅವಮಾನಗೊಂಡು ಓಡಿಹೋಗಲಿ.
3 ನನ್ನನ್ನು ಗೇಲಿಮಾಡುವವರು
ಸೋಲಿನಿಂದ ಅವಮಾನಕ್ಕೀಡಾಗಿ ಓಡಿಹೋಗಲಿ.
4 ನನ್ನ ಆರಾಧಕರೆಲ್ಲರೂ ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ.
ನಿನ್ನ ರಕ್ಷಣೆಯಲ್ಲಿ ಆನಂದಿಸುವವರು ನಿನ್ನನ್ನು ಯಾವಾಗಲೂ ಕೊಂಡಾಡಲಿ.
5 ನಾನಾದರೋ ಬಡವನೂ ನಿಸ್ಸಹಾಯಕನೂ ಆಗಿರುವೆ!
ದೇವರೇ, ಬೇಗನೆ ಬಂದು ನನ್ನನ್ನು ರಕ್ಷಿಸು!
ಯೆಹೋವನೇ, ನನ್ನನ್ನು ಬಿಡುಗಡೆ ಮಾಡಬಲ್ಲವನು ನೀನೊಬ್ಬನೇ.
ಯೆಹೋವನೇ ತಡಮಾಡಬೇಡ!
ಪರಿಚಯ
1 ಇದು ಆಮೋಸನ ಸಂದೇಶ. ಇವನು ತೆಕೋವ ಎಂಬ ಪಟ್ಟಣದ ಕುರುಬರಲ್ಲೊಬ್ಬನು. ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಸಮಯದಲ್ಲಿ ಮತ್ತು ಅದೇ ಸಮಯದಲ್ಲಿ ಯೋವಾಷನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿರುವಾಗ ಆಮೋಸನಿಗೆ ದೈವದರ್ಶನಗಳುಂಟಾದವು. ಭೂಕಂಪವಾಗುವುದಕ್ಕಿಂತ ಎರಡು ವರ್ಷಗಳಿಗೆ ಮೊದಲು ಈ ದರ್ಶನಗಳಾದವು.
ಅರಾಮ್ಯರಿಗೆ ಶಿಕ್ಷೆ
2 ಆಮೋಸನು ಹೇಳಿದ್ದೇನೆಂದರೆ,
“ಚೀಯೋನಿನಲ್ಲಿ ಯೆಹೋವನು ಸಿಂಹದಂತೆ ಗರ್ಜಿಸುವನು.
ಜೆರುಸಲೇಮಿನಿಂದ ಆರ್ಭಟಿಸುತ್ತಾನೆ.
ಆಗ ಕುರುಬರ ಹಸಿರು ಹುಲ್ಲುಗಾವಲು ಕಂದುಬಣ್ಣವಾಗಿ ಸಾಯುವುದು.
ಕರ್ಮೆಲ್ ಬೆಟ್ಟವು ಒಣಗಿ ಬರಡಾಗುವುದು.”
3 ಯೆಹೋವನು ಹೇಳುವುದೇನೆಂದರೆ, “ದಮಸ್ಕದವರು ನಡಿಸಿದ ಅನೇಕ ಅಪರಾಧಗಳ ನಿಮಿತ್ತವಾಗಿ ನಾನು ಖಂಡಿತವಾಗಿಯೂ ಅವರನ್ನು ಶಿಕ್ಷಿಸುವೆನು. ಯಾಕೆಂದರೆ ಅವರು ಗಿಲ್ಯಾದಿನ ಜನರನ್ನು ಒಕ್ಕಣೆಗೆ ಉಪಯೋಗಿಸುವ ಕಬ್ಬಿಣದ ಸಲಕರಣೆಗಳಿಂದ ಜಜ್ಜಿಬಿಟ್ಟರು. 4 ಆದರೆ ನಾನು ಹಜಾಯೇಲನ ನಿವಾಸದಲ್ಲಿ ಬೆಂಕಿಯನ್ನು ಪ್ರಾರಂಭಿಸುವೆನು. ಅದು ಬೆನ್ಹದದನ ಭವ್ಯ ಅರಮನೆಗಳನ್ನೆಲ್ಲಾ ಸುಟ್ಟುಹಾಕುವದು.
5 “ನಾನು ದಮಸ್ಕದ ಹೆಬ್ಬಾಗಿಲುಗಳನ್ನೂ ಒಡೆದುಹಾಕುವೆನು; ಆವೆನ್ ಕಣಿವೆಯಲ್ಲಿ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನನ್ನು ತೆಗೆದುಬಿಡುವೆನು; ಬೇತ್ ಎದೆನ್‌ನಲ್ಲಿರುವ ಸಾಮರ್ಥ್ಯದ ಗುರುತನ್ನು ಕಿತ್ತುಹಾಕುವೆನು. ಆಗ ಅರಾಮ್ಯರು ಸೋಲಿಸಲ್ಪಟ್ಟವರಾಗಿ ಕೀರ್ ಎಂಬಲ್ಲಿಗೆ ಕೊಂಡೊಯ್ಯುವರು. ಇದು ಯೆಹೋವನ ನುಡಿ.”
ಫಿಲಿಷ್ಟಿಯರಿಗೆ ಶಿಕ್ಷೆ
6 ಯೆಹೋವನು ಹೇಳುವುದೇನೆಂದರೆ, “ಗಾಜದ ಜನರನ್ನು ಅವರು ಮಾಡಿದ ಅಪರಾಧಗಳ ನಿಮಿತ್ತ ಖಂಡಿತವಾಗಿಯೂ ಶಿಕ್ಷಿಸುವೆನು. ಯಾಕೆಂದರೆ ಅವರು ಒಂದು ಇಡೀ ಜನಾಂಗವನ್ನೇ ಎದೋಮಿಗೆ ಗುಲಾಮರನ್ನಾಗಿ ಕಳುಹಿಸಿದರು. 7 ಅದಕ್ಕಾಗಿ ನಾನು ಗಾಜದ ಗೋಡೆಯ ಮೇಲೆ ಬೆಂಕಿಯನ್ನು ಕಳುಹಿಸುವೆನು. ಈ ಬೆಂಕಿಯು ಗಾಜದ ಎತ್ತರವಾದ ಗೋಪುರಗಳನ್ನು ನಾಶಮಾಡುವದು. 8 ಇದಲ್ಲದೆ, ನಾನು ಅಷ್ಡೋದಿನಲ್ಲಿ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನನ್ನು ನಾಶಮಾಡುವೆನು; ಅಷ್ಕೆಲೋನಿನಲ್ಲಿ ರಾಜದಂಡ ಹಿಡಿಯುವವನನ್ನು ನಾಶಮಾಡುವೆನು; ಎಕ್ರೋನಿನ ಜನರನ್ನು ಶಿಕ್ಷಿಸುವೆನು. ಆಮೇಲೆ ಅಳಿದುಳಿದ ಫಿಲಿಷ್ಟಿಯರು ಸಾಯುವರು.” ಇದು ಯೆಹೋವನ ನುಡಿ.
ತೂರಿಗೆ ಶಿಕ್ಷೆ
9 ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ತೂರಿನ ಜನರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಅವರು ಒಂದು ಜನಾಂಗದ ಜನರನ್ನೆಲ್ಲಾ ಗುಲಾಮರನ್ನಾಗಿ ಎದೋಮಿಗೆ ಕಳುಹಿಸಿದರು. ಅವರು ತಮ್ಮ ಸಹೋದರರೊಂದಿಗೆ (ಇಸ್ರೇಲಿನೊಂದಿಗೆ) ಮಾಡಿದ ಒಡಂಬಡಿಕೆಯನ್ನು ಮರೆತುಬಿಟ್ಟರು. 10 ಆದ್ದರಿಂದ ನಾನು ತೂರಿನ ಗೋಡೆಯ ಮೇಲೆ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ತೂರಿನ ಎತ್ತರವಾದ ಬುರುಜುಗಳನ್ನು ನಾಶಮಾಡುವದು.”
ಎದೋಮ್ಯರಿಗೆ ಶಿಕ್ಷೆ
11 ಯೆಹೋವನು ಹೇಳುವುದೇನೆಂದರೆ, “ಅನೇಕ ಅಪರಾಧಗಳನ್ನು ಮಾಡಿದ ಎದೋಮ್ಯರನ್ನು ನಾನು ಖಂಡಿತವಾಗಿ ಶಿಕ್ಷಿಸುವೆನು. ಯಾಕೆಂದರೆ ಎದೋಮ್ ತನ್ನ ಸಹೋದರನಾದ ಇಸ್ರೇಲನ್ನು ಕತ್ತಿಯಿಂದ ಹತಿಸಿತು. ಎದೋಮ್ ಯಾವ ಕರುಣೆಯನ್ನೂ ತೋರಲಿಲ್ಲ. ಅದರ ಕೋಪವು ನಿರಂತರವಾಗಿ ಮುಂದುವರಿಯಿತು; ಕ್ರೂರಪ್ರಾಣಿಯಂತೆ ಇಸ್ರೇಲನ್ನು ಹರಿದುಹರಿದು ಹಾಕಿತು. 12 ಆದ್ದರಿಂದ ನಾನು ತೇಮಾನಿನಲ್ಲಿ ಬೆಂಕಿಯನ್ನು ಹಾಕುವೆನು. ಆ ಬೆಂಕಿಯು ಬೋಚ್ರದ ಉನ್ನತ ಗೋಪುರಗಳನ್ನು ನಾಶಮಾಡುವದು.”
ಅಮ್ಮೋನಿಯರಿಗೆ ಶಿಕ್ಷೆ
13 ಯೆಹೋವನು ಹೇಳುವುದೇನೆಂದರೆ, “ಅನೇಕಾನೇಕ ಅಪರಾಧಗಳನ್ನು ಮಾಡಿದ ಅಮ್ಮೋನಿಯರನ್ನು ನಾನು ಖಂಡಿತವಾಗಿಯೂ ಶಿಕ್ಷಿಸುತ್ತೇನೆ. ಯಾಕೆಂದರೆ ಅವರು ಗಿಲ್ಯಾದಿನ ಗರ್ಭಿಣಿ ಸ್ತ್ರೀಯರನ್ನು ಕೊಂದರು. ಆ ಪ್ರಾಂತ್ಯವನ್ನು ಕೈವಶಮಾಡಿಕೊಂಡು ತಮ್ಮ ದೇಶವನ್ನು ವಿಸ್ತಾರ ಮಾಡುವುದಕ್ಕಾಗಿ ಅವರು ಹೀಗೆ ಮಾಡಿದರು. 14 ಆದ್ದರಿಂದ ನಾನು ರಬ್ಬದ ಗೋಡೆಗಳಲ್ಲಿ ಬೆಂಕಿ ಹಾಕುವೆನು. ಆ ಬೆಂಕಿಯು ರಬ್ಬದ ಉನ್ನತ ಗೋಪುರಗಳನ್ನು ನಾಶಮಾಡುವದು; ಹಗಲಿನ ಯುದ್ಧದ ಕೂಗಾಟದಂತೆಯೂ ಸುಂಟರಗಾಳಿಯಂತೆಯೂ ಸಂಕಟವು ಅವರ ದೇಶಕ್ಕೆ ಬರುವದು. 15 ಆಗ ಅವರ ಅರಸನು ಮತ್ತು ನಾಯಕರು ಸೆರೆಹಿಡಿಯಲ್ಪಡುವರು. ಅವರನ್ನೆಲ್ಲ ಒಟ್ಟಿಗೆ ಕೊಂಡೊಯ್ಯಲಾಗುವುದು.” ಈ ಸಂಗತಿಗಳನ್ನೆಲ್ಲ ಯೆಹೋವನು ತಿಳಿಸಿದನು.
ಮೋವಾಬ್ಯರಿಗೆ ಶಿಕ್ಷೆ
2 ಯೆಹೋವನು ಹೇಳುವುದೇನೆಂದರೆ, “ಮೋವಾಬ್ಯರು ಅನೇಕ ಅಪರಾಧಗಳನ್ನು ಮಾಡಿದ್ದರಿಂದ ನಾನು ಖಂಡಿತವಾಗಿಯೂ ಅವರನ್ನು ಶಿಕ್ಷಿಸುವೆನು. ಎದೋಮ್ಯರ ಅರಸನ ಎಲುಬುಗಳನ್ನು ಮೋವಾಬ್ಯರು ಸುಟ್ಟು ಸುಣ್ಣವಾಗಿ ಮಾಡಿದರು. 2 ಆದ್ದರಿಂದ ಮೋವಾಬಿನಲ್ಲಿ ನಾನು ಬೆಂಕಿಯನ್ನು ಹಾಕುವೆನು. ಅದು ಕೆರಿಯೋತಿನ ಉನ್ನತ ಗೋಪುರಗಳನ್ನು ನಾಶಮಾಡುವದು. ಅಲ್ಲಿ ಭಯಂಕರವಾದ ಕೂಗಾಟವೂ ತುತ್ತೂರಿಯ ಧ್ವನಿಯೂ ಇರುತ್ತದೆ. ಆಗ ಮೋವಾಬು ಸಾಯುವದು. 3 ಹೀಗೆ ನಾನು ಮೋವಾಬಿನ ಅರಸರಿಗೆ ಅಂತ್ಯವನ್ನು ಮಾಡುವೆನು. ಮೋವಾಬಿನ ಎಲ್ಲಾ ನಾಯಕರುಗಳನ್ನು ಸಾಯಿಸುವೆನು” ಇದು ಯೆಹೋವನ ನುಡಿ.
ಯೆಹೂದಕ್ಕೆ ಶಿಕ್ಷೆ
4 ಯೆಹೋವನು ಹೇಳುವುದೇನೆಂದರೆ, “ಯೆಹೂದ ಜನರ ಅನೇಕ ಅಪರಾಧಗಳಿಗಾಗಿ ಅವರನ್ನು ಖಂಡಿತವಾಗಿಯೂ ದಂಡಿಸುವೆನು. ಯಾಕೆಂದರೆ ಅವರು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ. ನನ್ನ ಕಟ್ಟಳೆಗಳಿಗೆ ವಿಧೇಯರಾಗಲಿಲ್ಲ. ಅವರ ಪೂರ್ವಿಕರು ಸುಳ್ಳನ್ನು ನಂಬಿದರು. ಆ ಸುಳ್ಳುಗಳಿಂದ ಅವರು ನನ್ನನ್ನು ಹಿಂಬಾಲಿಸಲಿಲ್ಲ. 5 ಆದ್ದರಿಂದ ನಾನು ಯೆಹೂದದಲ್ಲಿ ಬೆಂಕಿಯನ್ನು ಹಚ್ಚುವೆನು; ಆ ಬೆಂಕಿಯು ಜೆರುಸಲೇಮಿನ ಉನ್ನತ ಬುರುಜುಗಳನ್ನು ನಾಶಮಾಡುವದು.”
ಏಳು ತುತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು
6 ನಂತರ ಆ ಏಳು ಮಂದಿ ದೇವದೂತರು ಏಳು ತುತೂರಿಗಳನ್ನು ಊದಲು ಸಿದ್ಧರಾದರು.
7 ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ರಕ್ತದಲ್ಲಿ ಕಲಸಿದ್ದ ಆಲಿಕಲ್ಲುಗಳ ಮತ್ತು ಬೆಂಕಿಯ ಮಳೆಯು ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರನೆಯ ಒಂದು ಭಾಗ ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋದವು; ಮತ್ತು ಮರಗಳಲ್ಲಿ ಮೂರನೆಯ ಒಂದು ಭಾಗ ಸುಟ್ಟುಹೋದವು.
8 ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿದ್ದ ದೊಡ್ಡ ಬೆಟ್ಟವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರದೊಳಕ್ಕೆ ಎಸೆಯಲಾಯಿತು. ಆಗ ಸಮುದ್ರದ ಮೂರನೆಯ ಒಂದು ಭಾಗ ರಕ್ತವಾಯಿತು. 9 ಸಮುದ್ರದಲ್ಲಿದ್ದ ಜೀವಿಗಳಲ್ಲಿ ಮೂರನೆಯ ಒಂದು ಭಾಗ ಸತ್ತುಹೋದವು ಮತ್ತು ಹಡಗುಗಳಲ್ಲಿ ಮೂರನೆಯ ಒಂದು ಭಾಗ ನಾಶವಾದವು.
10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಕೆಳಗೆ ಬಿತ್ತು. ಆ ನಕ್ಷತ್ರವು ನದಿಗಳಲ್ಲಿ ಮತ್ತು ನೀರಿನ ಬುಗ್ಗೆಗಳಲ್ಲಿ ಮೂರನೆಯ ಒಂದು ಭಾಗದ ಮೇಲೆ ಬಿದ್ದಿತು. 11 ಆ ನಕ್ಷತ್ರಕ್ಕೆ “ಕಹಿ ಮರ”[a] ಎಂದು ಹೆಸರು. ನೀರಿನಲ್ಲಿ ಮೂರನೆಯ ಒಂದು ಭಾಗವು ಕಹಿಯಾಯಿತು. ಈ ಕಹಿಯಾದ ನೀರನ್ನು ಕುಡಿದು ಅನೇಕ ಜನರು ಸತ್ತುಹೋದರು.
12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಸೂರ್ಯನಲ್ಲಿ ಮೂರನೆಯ ಒಂದು ಭಾಗ, ಚಂದ್ರನಲ್ಲಿ ಮೂರನೆಯ ಒಂದು ಭಾಗ ಮತ್ತು ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗ ಬಡಿಯಲ್ಪಟ್ಟು ಅವುಗಳಲ್ಲಿ ಮೂರನೆಯ ಒಂದು ಭಾಗ ಕತ್ತಲಾಯಿತು. ಹಗಲಿನಲ್ಲಿಯೂ ರಾತ್ರಿಯಲ್ಲಿಯೂ ಮೂರನೆಯ ಒಂದು ಭಾಗಕ್ಕೆ ಬೆಳಕಿಲ್ಲದಂತಾಯಿತು.
13 ನಾನು ನೋಡುತ್ತಿದ್ದಂತೆ, ವಾಯುಮಂಡಲದ ಅತಿ ಎತ್ತರದಲ್ಲಿ ಗರುಡ ಪಕ್ಷಿಯೊಂದು ಹಾರಾಡುತ್ತಿರುವುದನ್ನು ಕಂಡೆನು. ಆ ಪಕ್ಷಿಯು ಗಟ್ಟಿಯಾದ ಧ್ವನಿಯಲ್ಲಿ, “ತೊಂದರೆ! ತೊಂದರೆ! ಭೂಮಿಯ ಮೇಲೆ ವಾಸಿಸುವ ಜನರಿಗೆ ತೊಂದರೆ! ಇತರ ಮೂರು ಮಂದಿ ದೇವದೂತರು ತಮ್ಮ ತುತೂರಿಗಳನ್ನು ಊದಿದಾಗ ವಿಪತ್ತುಗಳು ಆರಂಭವಾಗುತ್ತವೆ” ಎಂದು ಕೂಗಿತು.
ಐದನೆಯ ತುತೂರಿ—ಮೊದಲನೆ ವಿಪತ್ತು
9 ಐದನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಒಂದು ನಕ್ಷತ್ರವು ಆಕಾಶದಿಂದ ಭೂಮಿಯ ಮೇಲೆ ಬಿದ್ದದ್ದನ್ನು ನಾನು ನೋಡಿದೆನು. ಆ ನಕ್ಷತ್ರಕ್ಕೆ ತಳವಿಲ್ಲದ ಆಳವಾದ ಕೂಪಕ್ಕೆ[b] ಹೋಗುವ ಬೀಗದ ಕೈ ಕೊಡಲ್ಪಟ್ಟಿತು. 2 ನಂತರ ಆ ನಕ್ಷತ್ರವು ತಳವಿಲ್ಲದ ಆಳವಾದ ಕೂಪವನ್ನು ತೆರೆಯಿತು. ದೊಡ್ಡ ಕುಲುಮೆಯಿಂದ ಹೊಗೆಯು ಬರುವಂತೆ ಆ ಕೂಪದಿಂದ ಹೊಗೆ ಮೇಲಕ್ಕೆ ಬಂದಿತು. ಆ ಕೂಪದಿಂದ ಬಂದ ಹೊಗೆಯಿಂದ ಸೂರ್ಯನೂ ಆಕಾಶವೂ ಕಪ್ಪಾದವು.
3 ನಂತರ ಮಿಡತೆಗಳು ಹೊಗೆಯೊಳಗಿಂದ ಭೂಮಿಯ ಮೇಲಕ್ಕೆ ಬಂದಿಳಿದವು. ಅವುಗಳಿಗೆ ಚೇಳುಗಳಂತೆ ಕುಟುಕುವ ಶಕ್ತಿಯನ್ನು ಕೊಡಲಾಯಿತು. 4 ಭೂಮಿಯ ಮೇಲಿನ ಹುಲ್ಲಿಗಾಗಲಿ ಸಸ್ಯಕ್ಕಾಗಲಿ ಮರಕ್ಕಾಗಲಿ ಹಾನಿ ಮಾಡದಂತೆ ಆ ಮಿಡತೆಗಳಿಗೆ ತಿಳಿಸಲಾಯಿತು. ತಮ್ಮ ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದ ಜನರನ್ನು ಹಿಂಸಿಸಲು ಅವುಗಳಿಗೆ ತಿಳಿಸಲಾಯಿತು. 5 ಜನಗಳಿಗೆ ಐದು ತಿಂಗಳ ಕಾಲ ನೋವು ಉಂಟುಮಾಡುವಂತಹ ಶಕ್ತಿಯನ್ನು ಈ ಮಿಡತೆಗಳಿಗೆ ಕೊಡಲಾಯಿತು. ಆದರೆ ಜನರನ್ನು ಕೊಲ್ಲುವ ಶಕ್ತಿಯನ್ನು ಮಿಡತೆಗಳಿಗೆ ಕೊಡಲಿಲ್ಲ. ಈ ಮಿಡತೆಗಳು ಕುಟುಕಿದಾಗ ಚೇಳು ಕುಟುಕಿದಷ್ಟೇ ನೋವಾಗುತ್ತಿತ್ತು. 6 ಆ ದಿನಗಳಲ್ಲಿ ಜನರು ಸಾಯುವುದಕ್ಕೆ ಮಾರ್ಗವನ್ನು ಹುಡುಕಿದರೂ ಅವರಿಗೆ ಸಿಕ್ಕುವುದಿಲ್ಲ. ಅವರು ಮರಣವನ್ನು ಬಯಸಿದರೂ ಮರಣವು ಅವರಿಗೆ ಮರೆಯಾಗುತ್ತದೆ.
7 ಮಿಡತೆಗಳು ಯುದ್ಧಕ್ಕೆ ಸಿದ್ಧಪಡಿಸಿದ ಕುದುರೆಗಳಂತೆ ಕಾಣುತ್ತಿದ್ದವು. ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳಂತೆ ಎನೋ ಇದ್ದವು; ಅವುಗಳ ಮುಖಗಳು ಮಾನವರ ಮುಖಗಳಂತಿದ್ದವು. 8 ತಲೆಕೂದಲು ಸ್ತ್ರೀಯರ ತಲೆಕೂದಲಂತಿತ್ತು; ಹಲ್ಲುಗಳು ಸಿಂಹಗಳ ಹಲ್ಲುಗಳಂತಿದ್ದವು. 9 ಎದೆಗಳು ಉಕ್ಕಿನ ಕವಚಗಳಂತೆ ಇದ್ದವು; ರೆಕ್ಕೆಗಳ ಶಬ್ದವು ಯುದ್ಧದಲ್ಲಿ ಆತುರದಿಂದ ಓಡುವ ಅನೇಕ ಕುದುರೆಗಳ ಮತ್ತು ರಥಗಳ ಶಬ್ದದಂತಿತ್ತು. 10 ಚೇಳುಗಳಿಗಿರುವಂತೆ ಬಾಲಗಳೂ ಕೊಂಡಿಗಳೂ ಇದ್ದವು; ಜನರಿಗೆ ಐದುತಿಂಗಳ ಕಾಲ ನೋವುಂಟುಮಾಡುವ ಶಕ್ತಿಯು ಅವುಗಳ ಬಾಲಗಳಲ್ಲಿ ಇತ್ತು. 11 ಮಿಡತೆಗಳಿಗೆ ಒಬ್ಬ ರಾಜನಿದ್ದನು. ತಳವಿಲ್ಲದ ಕೂಪದ ದೂತನೇ ಅವುಗಳ ರಾಜನಾಗಿದ್ದನು. ಅವನಿಗೆ ಹಿಬ್ರೂ ಭಾಷೆಯಲ್ಲಿ “ಅಬದ್ದೋನ್” ಎಂಬ ಹೆಸರಿತ್ತು. ಗ್ರೀಕ್ ಭಾಷೆಯಲ್ಲಿ “ಅಪೊಲ್ಲುವೋನ್” (ವಿನಾಶಕರ) ಎಂದೂ ಹೆಸರಿತ್ತು.
12 ಮೊದಲನೆಯ ಮಹಾವಿಪತ್ತು ಕಳೆದುಹೋಯಿತು. ಇನ್ನೂ ಎರಡು ಮಹಾವಿಪತ್ತುಗಳು ಬರಲಿದ್ದವು.
Kannada Holy Bible: Easy-to-Read Version. All rights reserved. © 1997 Bible League International