Revised Common Lectionary (Complementary)
ರಚನೆಗಾರ: ದಾವೀದ.
5 ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
ನನ್ನ ಆಲೋಚನೆಗಳಿಗೆ ಗಮನಕೊಡು.
2 ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
ನನ್ನ ಪ್ರಾರ್ಥನೆಯನ್ನು ಆಲೈಸು.
3 ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.
4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
5 ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
ದುಷ್ಟರನ್ನು ನೀನು ದ್ವೇಷಿಸುವೆ.
6 ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.
7 ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
8 ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
9 ಅವರ ಮಾತುಗಳಲ್ಲಿ ಸತ್ಯವೆಂಬುದೇ ಇಲ್ಲ.
ಅವರ ಬಾಯಿಗಳು ಸವಿಮಾತುಗಳನ್ನಾಡಿದರೂ
ಅವರ ಹೃದಯಗಳು ನಾಶಕರವಾದ ಗುಂಡಿಯಾಗಿವೆ.
ಅವರ ಗಂಟಲು ತೆರೆದ ಸಮಾಧಿಗಳಂತಿವೆ.
10 ದೇವರೇ, ಅವರನ್ನು ದಂಡಿಸು!
ಅವರು ತಮ್ಮ ಬಲೆಗಳಿಗೇ ಸಿಕ್ಕಿಕೊಳ್ಳಲಿ.
ಅವರು ನಿನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
ಅವರ ಅನೇಕ ಅಪರಾಧಗಳ ನಿಮಿತ್ತ ಅವರನ್ನು ದಂಡಿಸು.
11 ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ.
ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
12 ಯೆಹೋವನೇ, ನೀನು ನೀತಿವಂತರಿಗೆ ಒಳ್ಳೆಯದನ್ನೇ ಮಾಡುವೆ;
ನೀನು ಅವರನ್ನು ವಿಶಾಲವಾದ ಗುರಾಣಿಯಂತೆ ಸಂರಕ್ಷಿಸುವೆ.
21 ಜ್ಞಾನಿಯನ್ನು ಅವನ ಜ್ಞಾನದಿಂದಲೇ ಜನರು ಗುರುತಿಸುವರು. ಎಚ್ಚರಿಕೆಯಿಂದ ಮಾತಾಡುವವನು ಒಡಂಬಡಿಸುವನು.
22 ವಿವೇಕವು ವಿವೇಕಿಗಳಿಗೆ ನಿಜಜೀವವನ್ನು ಕೊಡುತ್ತದೆ. ಆದರೆ ಮೂಢರು ತಮ್ಮ ಮೂಢತನದಿಂದಲೇ ದಂಡಿಸಲ್ಪಡುವರು.
23 ಜ್ಞಾನಿಯ ಹೃದಯವು ಅವನ ಬಾಯಿಗೆ ಮಾರ್ಗದರ್ಶನ. ಅವನ ಮಾತುಗಳು ಒಳ್ಳೆಯದಾಗಿವೆ; ಕೇಳಲು ಯೋಗ್ಯವಾಗಿವೆ.
24 ಸವಿನುಡಿಗಳು ಜೇನಿನಂತಿವೆ. ಅವು ಸ್ವೀಕಾರಕ್ಕೆ ಸುಲಭ; ಆರೋಗ್ಯಕ್ಕೆ ಉಪಯುಕ್ತ.
25 ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ಮಾರ್ಗವಿದೆ; ಆದರೆ ಅದರ ಅಂತ್ಯವು ಮರಣ.
26 ಕೆಲಸಗಾರನನ್ನು ಅವನ ಹೊಟ್ಟೆಯೇ ದುಡಿಮೆಯಲ್ಲಿ ತೊಡಗಿಸುತ್ತದೆ. ಅವನ ಹಸಿವೇ ಊಟಕ್ಕಾಗಿ ಅವನನ್ನು ದುಡಿಸುತ್ತದೆ.
27 ನೀಚನು ಕೆಟ್ಟಕಾರ್ಯಗಳನ್ನು ಆಲೋಚಿಸಿಕೊಳ್ಳುವನು. ಅವನ ಮಾತುಗಳು ಬೆಂಕಿಯಂತೆ ನಾಶಕರ.
28 ಕೆಡುಕನು ಜಗಳ ಎಬ್ಬಿಸುವನು; ಗಾಳಿಸುದ್ದಿಯನ್ನು ಹಬ್ಬಿಸುವವನು ಆಪ್ತಸ್ನೇಹಿತರಲ್ಲಿ ಒಡಕು ಉಂಟುಮಾಡುವನು.
29 ಕೆಡುಕನು ತನ್ನ ಸ್ನೇಹಿತರನ್ನೇ ಮೋಸಗೊಳಿಸಿ ನಾಶನಕ್ಕೆ ನಡೆಸುವನು.
30 ಕಣ್ಣುಮಿಟುಕಿಸಿ ನಗುವವನು ತಪ್ಪಾದ ಹಾಗೂ ಕೆಟ್ಟಕಾರ್ಯವೆಸಗಲು ಯೋಜಿಸುತ್ತಿರುವನು.
31 ಒಳ್ಳೆಯವರಿಗೆ ಅವರ ನರೆಕೂದಲೇ ವೈಭವದ ಕಿರೀಟ.
32 ಶೂರನಾಗಿರುವುದಕ್ಕಿಂತ ತಾಳ್ಮೆಯಿಂದಿರುವುದೇ ಶ್ರೇಷ್ಠ; ಪಟ್ಟಣವನ್ನು ವಶಪಡಿಸಿಕೊಳ್ಳುವುದಕ್ಕಿಂತ ನಿಮ್ಮ ಕೋಪವನ್ನು ಸ್ವಾಧೀನದಲ್ಲಿಟ್ಟುಕೊಳ್ಳವುದೇ ಉತ್ತಮ.
33 ಜನರು ಚೀಟುಹಾಕಿ ನಿರ್ಧಾರ ಮಾಡಿದರೂ ಆ ನಿರ್ಧಾರಗಳು ಬರುವುದು ಯೆಹೋವನಿಂದಲೇ.
ದೇವರ ಆಜ್ಞೆ ಮತ್ತು ಮನುಷ್ಯರ ನಿಯಮ
(ಮಾರ್ಕ 7:1-23)
15 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಯೇಸುವಿನ ಬಳಿಗೆ ಬಂದು, 2 “ನಮ್ಮ ಪೂರ್ವಿಕರಿಂದ ಬಂದ ಸಂಪ್ರದಾಯಗಳಿಗೆ ನಿನ್ನ ಶಿಷ್ಯರು ಏಕೆ ವಿಧೇಯರಾಗಿರುವುದಿಲ್ಲ? ನಿನ್ನ ಶಿಷ್ಯರು ಊಟ ಮಾಡುವುದಕ್ಕೆ ಮುಂಚೆ ಕೈ ತೊಳೆಯುವುದಿಲ್ಲವೇಕೆ?” ಎಂದು ಕೇಳಿದರು.
3 ಯೇಸು, “ನಿಮ್ಮ ಸಂಪ್ರದಾಯಗಳನ್ನು ಅನುಸರಿಸಲು ದೇವರ ಆಜ್ಞೆಗೆ ಅವಿಧೇಯರಾಗುವುದೇಕೆ? 4 ‘ನಿಮ್ಮ ತಂದೆತಾಯಿಗಳಿಗೆ ಗೌರವ ನೀಡಿ’(A) ಎಂಬುದು ದೇವರ ಆಜ್ಞೆ. ‘ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೀನೈಸಿದರೆ ಅವನನ್ನು ಕೊಲ್ಲಬೇಕು’(B) ಎಂಬುದೂ ದೇವರ ಆಜ್ಞೆ. 5 ಆದರೆ ಒಬ್ಬ ವ್ಯಕ್ತಿಯು ತನ್ನ ತಂದೆಗಾಗಲಿ ತಾಯಿಗಾಗಲಿ ‘ನಿಮಗೆ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ, ಏಕೆಂದರೆ ನನ್ನಲ್ಲಿರುವ ಪ್ರತಿಯೊಂದು ದೇವರಿಗೆ ಪ್ರತಿಷ್ಠಿತವಾಗಿದೆ’ ಎಂದು ಹೇಳಿದರೆ, 6 ಅವನು ತನ್ನ ತಂದೆಯನ್ನು ಗೌರವಿಸಬೇಕಿಲ್ಲ ಎಂದು ನೀವು ಬೋಧಿಸುತ್ತೀರಿ. ಹೀಗಿರಲು ನಿಮ್ಮ ಸಂಪ್ರದಾಯವೇ ದೇವರ ಆಜ್ಞೆಯನ್ನು ತಳ್ಳಿಹಾಕಿದೆ. 7 ನೀವು ಕಪಟಿಗಳು. ಯೆಶಾಯನು ನಿಮ್ಮನ್ನು ಕುರಿತು ಸರಿಯಾಗಿ ಹೇಳಿದ್ದಾನೆ. ಅದೇನೆಂದರೆ:
8 ‘ಇವರು ನನ್ನನ್ನು ಮಾತಿನಿಂದ ಗೌರವಿಸುತ್ತಾರೆ.
ಇವರ ಮನಸ್ಸಾದರೋ ನನಗೆ ದೂರವಾಗಿದೆ.
9 ಇವರು ನನ್ನನ್ನು ಆರಾಧಿಸುವುದೂ ನಿರರ್ಥಕ.
ಇವರು ಮನುಷ್ಯರ ಕಟ್ಟಳೆಗಳನ್ನೇ ಉಪದೇಶಿಸುತ್ತಾರೆ.’(C)”
Kannada Holy Bible: Easy-to-Read Version. All rights reserved. © 1997 Bible League International