Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 5

ರಚನೆಗಾರ: ದಾವೀದ.

ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
    ನನ್ನ ಆಲೋಚನೆಗಳಿಗೆ ಗಮನಕೊಡು.
ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
    ನನ್ನ ಪ್ರಾರ್ಥನೆಯನ್ನು ಆಲೈಸು.
ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
    ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.

ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
    ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
    ದುಷ್ಟರನ್ನು ನೀನು ದ್ವೇಷಿಸುವೆ.
ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
    ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.

ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
    ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
    ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
ಅವರ ಮಾತುಗಳಲ್ಲಿ ಸತ್ಯವೆಂಬುದೇ ಇಲ್ಲ.
    ಅವರ ಬಾಯಿಗಳು ಸವಿಮಾತುಗಳನ್ನಾಡಿದರೂ
ಅವರ ಹೃದಯಗಳು ನಾಶಕರವಾದ ಗುಂಡಿಯಾಗಿವೆ.
    ಅವರ ಗಂಟಲು ತೆರೆದ ಸಮಾಧಿಗಳಂತಿವೆ.
10 ದೇವರೇ, ಅವರನ್ನು ದಂಡಿಸು!
    ಅವರು ತಮ್ಮ ಬಲೆಗಳಿಗೇ ಸಿಕ್ಕಿಕೊಳ್ಳಲಿ.
ಅವರು ನಿನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
    ಅವರ ಅನೇಕ ಅಪರಾಧಗಳ ನಿಮಿತ್ತ ಅವರನ್ನು ದಂಡಿಸು.
11 ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ.
    ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
12 ಯೆಹೋವನೇ, ನೀನು ನೀತಿವಂತರಿಗೆ ಒಳ್ಳೆಯದನ್ನೇ ಮಾಡುವೆ;
    ನೀನು ಅವರನ್ನು ವಿಶಾಲವಾದ ಗುರಾಣಿಯಂತೆ ಸಂರಕ್ಷಿಸುವೆ.

ಯೆರೆಮೀಯ 5:18-31

18 “ಯೆಹೂದವೇ, ಆ ಭಯಂಕರ ದಿನಗಳು ಬಂದಾಗ ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ,
ಎಂದು ಯೆಹೋವನು ಹೇಳಿದನು.
19 ಯೆಹೂದದ ಜನರು ನಿನ್ನನ್ನು,
    ‘ಯೆರೆಮೀಯನೇ, ನಮ್ಮ ದೇವರಾದ ಯೆಹೋವನು ನಮಗೆ ಇಂಥಾ ಕೇಡನ್ನು ಏಕೆ ಮಾಡಿದನು’ ಎಂದು ಕೇಳಬಹುದು.
ಆಗ ಅವರಿಗೆ ಹೀಗೆ ಉತ್ತರಕೊಡು:
‘ಯೆಹೂದದ ಜನರಾದ ನೀವು ಯೆಹೋವನನ್ನು ತೊರೆದಿದ್ದೀರಿ,
    ನಿಮ್ಮ ದೇಶದಲ್ಲಿ ನೀವು ಅನ್ಯರ ವಿಗ್ರಹಗಳ ಸೇವೆ ಮಾಡುತ್ತಿದ್ದೀರಿ.
ಆದ್ದರಿಂದಲೇ ನೀವು ಪರದೇಶದಲ್ಲಿ
    ಪರದೇಶಿಯರ ಸೇವೆಯನ್ನು ಮಾಡುವಿರಿ.’”

20 ಯೆಹೋವನು ಹೀಗೆನ್ನುತ್ತಾನೆ: “ಈ ಸಂದೇಶವನ್ನು ಯಾಕೋಬನ ಜನಾಂಗದವರಿಗೆ ಸಾರಿರಿ.
    ಈ ಸಂದೇಶವನ್ನು ಯೆಹೂದ ಜನಾಂಗಕ್ಕೆ ಹೇಳಿರಿ:
21 ಬುದ್ಧಿ ಇಲ್ಲದ ಮೂರ್ಖಜನರೇ,
    ಈ ಸಂದೇಶವನ್ನು ಕೇಳಿರಿ.
    ನಿಮಗೆ ಕಣ್ಣುಗಳಿವೆ ಆದರೆ ನೀವು ನೋಡುವದಿಲ್ಲ,
    ನಿಮಗೆ ಕಿವಿಗಳಿವೆ ಆದರೆ ನೀವು ಕೇಳುವದಿಲ್ಲ.
22 ನೀವು ನನಗೆ ಅಂಜುವುದಿಲ್ಲವೇ?”
ಇದು ಯೆಹೋವನ ಸಂದೇಶ:
“ನೀವು ನನ್ನ ಎದುರಿಗೆ ಭಯದಿಂದ ನಡುಗುವುದಿಲ್ಲವೇ?
    ಸಾಗರಗಳಿಗೆ ಗಡಿಯಂತೆ ದಡವನ್ನು ನಿರ್ಮಿಸಿದವನು ನಾನೇ.
    ಸಮುದ್ರವು ನಿರಂತರವಾಗಿ ತನ್ನ ಸೀಮೆಯಲ್ಲಿಯೇ ಹರಿಯಬೇಕೆಂದು ಹಾಗೆ ಮಾಡಿದೆ.
    ತೆರೆಗಳು ದಡವನ್ನು ಅಪ್ಪಳಿಸಬಹುದು ಆದರೆ ಅವುಗಳು ಅದನ್ನು ನಾಶಮಾಡಲಾರವು.
    ತೆರೆಗಳು ಬರುವಾಗ ಭೋರ್ಗರೆಯಬಹುದು, ಆದರೆ ದಡವನ್ನು ದಾಟಿಹೋಗಲಾರವು.
23 ಯೆಹೂದದ ಜನರು ಹಟಮಾರಿಗಳಾಗಿದ್ದಾರೆ.
    ಅವರು ನನ್ನ ವಿರುದ್ಧ ಹೋಗುವದಕ್ಕೆ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
    ಅವರು ನನ್ನಿಂದ ತಿರುಗಿ ಬಹಳ ದೂರ ಹೋಗಿಬಿಟ್ಟಿದ್ದಾರೆ.
24 ಯೆಹೂದದ ಜನರು,
    ‘ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯಿಂದಿರಬೇಕು.
    ಆತನು ನಮಗೆ ಸರಿಸಮಯದಲ್ಲಿ ಮುಂಗಾರು ಮತ್ತು ಹಿಂಗಾರುಮಳೆ ಸುರಿಸುತ್ತಾನೆ.
    ಸರಿಸಮಯಕ್ಕೆ ಫಸಲನ್ನು ಬರಮಾಡುತ್ತಾನೆ’ ಎಂದು ತಮ್ಮ ಹೃದಯದಲ್ಲಿ ಅಂದುಕೊಳ್ಳುವದಿಲ್ಲ.
25 ಯೆಹೂದದ ಜನರೇ, ನೀವು ತಪ್ಪುಗಳನ್ನು ಮಾಡಿರುವಿರಿ.
ಆದ್ದರಿಂದಲೇ ಮಳೆಬೆಳೆಗಳು ಆಗಿಲ್ಲ.
    ನಿಮ್ಮ ಪಾಪಗಳಿಂದಾಗಿ ಯೆಹೋವನ ಆ ಉತ್ತಮ ಕಾಣಿಕೆಗಳನ್ನು ನೀವು ಸವಿಯಲಾಗಲಿಲ್ಲ.
26 ನಮ್ಮ ಜನರಲ್ಲಿ ದುಷ್ಟರಿದ್ದಾರೆ.
    ಅವರು ಪಕ್ಷಿಗಳ ಬಲೆಯನ್ನು ಮಾಡುವ ಬಲೆಗಾರರಂತಿದ್ದಾರೆ.
ಅವರು ಬಲೆಗಳನ್ನು ಬೀಸುತ್ತಾರೆ.
    ಆದರೆ ಅವರು ಹಿಡಿಯುವುದು ಪಕ್ಷಿಗಳನ್ನಲ್ಲ, ಮನುಷ್ಯರನ್ನೇ.
27 ಪಕ್ಷಿಗಳಿಂದ ತುಂಬಿರುವ ಪಂಜರದಂತೆ
    ಈ ಕೇಡಿಗರ ಮನೆಗಳು ಸುಳ್ಳುಮೋಸಗಳಿಂದ ತುಂಬಿವೆ.
ಅವರ ಸುಳ್ಳುಮೋಸಗಳು ಅವರನ್ನು ಶ್ರೀಮಂತರನ್ನಾಗಿಯೂ ಶಕ್ತಿಶಾಲಿಗಳನ್ನಾಗಿಯೂ ಮಾಡಿವೆ.
28     ಅವರು ಮಾಡಿದ ದುಷ್ಕೃತ್ಯಗಳಿಂದ ಅವರು ಬೆಳೆದಿದ್ದಾರೆ, ಕೊಬ್ಬಿದ್ದಾರೆ.
ಅವರು ಮಾಡುವ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲ.
    ಅವರು ಅನಾಥ ಮಕ್ಕಳ ಪಕ್ಷವಹಿಸಿ ಮಾತನಾಡುವದಿಲ್ಲ.
    ಅವರು ಅನಾಥರಿಗೆ ಸಹಾಯ ಮಾಡುವದಿಲ್ಲ.
    ಅವರು ದಿಕ್ಕಿಲ್ಲದವರಿಗೆ ನ್ಯಾಯ ದೊರೆಯದಂತೆ ಮಾಡುವರು.
29 ಇವುಗಳ ನಿಮಿತ್ತ ಯೆಹೂದದ ಜನರನ್ನು ನಾನು ಶಿಕ್ಷಿಸಬೇಕಲ್ಲವೆ?”
ಯೆಹೋವನು ಹೀಗೆನ್ನುತ್ತಾನೆ:
“ಇಂಥ ಜನಾಂಗವನ್ನು ನಾನು ದಂಡಿಸಬೇಕೆಂಬುದು ನಿಮಗೆ ಗೊತ್ತು.
    ನಾನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು.”

30 ಯೆಹೋವನು, “ಯೆಹೂದ ಪ್ರದೇಶದಲ್ಲಿ ಭಯಂಕರವಾದ
    ಮತ್ತು ಅಸಹ್ಯವಾದ ಸಂಗತಿಗಳು ನಡೆದಿವೆ.
31 ಪ್ರವಾದಿಗಳು ಸುಳ್ಳು ಹೇಳುತ್ತಿದ್ದಾರೆ.
ಯಾಜಕರು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ.[a]
    ನನ್ನ ಜನರು ಇದನ್ನೇ ಮೆಚ್ಚಿಕೊಳ್ಳುತ್ತಿದ್ದಾರೆ.
ಆದರೆ ದಂಡನೆಯ ಸಮಯ ಬಂದಾಗ
    ನೀವು ಏನು ಮಾಡುವಿರಿ?” ಎಂದನು.

1 ಥೆಸಲೋನಿಕದವರಿಗೆ 2:13-20

13 ನೀವು ದೇವರ ಸಂದೇಶವನ್ನು ಸ್ವೀಕರಿಸಿಕೊಂಡದ್ದಕ್ಕಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನೀವು ಆ ಸಂದೇಶವನ್ನು ನಮ್ಮಿಂದ ಕೇಳಿ, ಅದನ್ನು ದೇವರ ವಾಕ್ಯದಂತೆ ಒಪ್ಪಿಕೊಂಡಿರೇ ಹೊರತು ಮಾನವನ ವಾಕ್ಯಗಳೆಂದಲ್ಲ. ಅದು ನಿಜವಾಗಿಯೂ ದೇವರ ಸಂದೇಶ. ಆ ಸಂದೇಶವು ನಂಬುವವರಾದ ನಿಮ್ಮಲ್ಲಿ ಕಾರ್ಯಮಾಡುತ್ತದೆ. 14 ಸಹೋದರ ಸಹೋದರಿಯರೇ, ನೀವು ಜುದೇಯದಲ್ಲಿರುವ ದೇವರ ಸಭೆಗಳಂತಿದ್ದೀರಿ. ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಅವರು ಇತರ ಯೆಹೂದ್ಯರಿಂದ ಹಿಂಸಿಸಲ್ಪಟ್ಟರು. ಅದೇ ರೀತಿಯಲ್ಲಿ ನೀವೂ ನಿಮ್ಮ ದೇಶದ ಇತರ ಜನರಿಂದ ಹಿಂಸಿಸಲ್ಪಟ್ಟವರಾಗಿದ್ದೀರಿ. 15 ಆ ಯೆಹೂದ್ಯರು ಪ್ರಭುವಾದ ಯೇಸುವನ್ನೂ ಪ್ರವಾದಿಗಳನ್ನೂ ಕೊಂದುಹಾಕಿದರು. ತಮ್ಮ ದೇಶದಿಂದ (ಜುದೇಯ) ನಮ್ಮನ್ನು ಬಲವಂತವಾಗಿ ಹೊರಗಟ್ಟಿದರು. ಅವರು ದೇವರಿಗೆ ಮೆಚ್ಚಿಕೆಯಾದವರಾಗಿಲ್ಲ ಮತ್ತು ಜನರೆಲ್ಲರ ವಿರುದ್ಧವಾಗಿದ್ದಾರೆ. 16 ಹೌದು, ಯೆಹೂದ್ಯರಲ್ಲದವರಿಗೆ ರಕ್ಷಣೆ ನೀಡುವ ಸುವಾರ್ತೆಯನ್ನು ನಾವು ಉಪದೇಶಿಸದಂತೆ ನಮ್ಮನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಹೀಗೆ ಅವರು ತಮ್ಮ ಪಾಪಗಳಿಗೆ ಮತ್ತಷ್ಟು ಪಾಪಗಳನ್ನು ಕೂಡಿಸುತ್ತಿದ್ದಾರೆ. ಕೊನೆಗೆ, ದೇವರ ಕೋಪವು ಅವರ ಮೇಲೆ ಬರುತ್ತದೆ.

ಥೆಸಲೋನಿಕದವರನ್ನು ಮತ್ತೆ ನೋಡಲು ಪೌಲನ ಆಸೆ

17 ಸಹೋದರ ಸಹೋದರಿಯರೇ, ನಿಮ್ಮಿಂದ ಸ್ವಲ್ಪಕಾಲ ಅಗಲಿ ಹೋಗಿದ್ದೆವು. (ನಾವು ನಿಮ್ಮೊಡನೆ ಇರಲಿಲ್ಲ. ಆದರೆ ನಮ್ಮ ಆಲೋಚನೆಗಳು ನಿಮ್ಮೊಡನೆ ಇನ್ನೂ ಇವೆ.) ನಿಮ್ಮನ್ನು ನೋಡಲು ಅತ್ಯಾಸೆಯಿಂದ ಬಹಳ ಪ್ರಯತ್ನಪಟ್ಟೆವು. 18 ಹೌದು, ನಾವು ನಿಮ್ಮಲ್ಲಿಗೆ ಬರಬೇಕೆಂದಿದ್ದೆವು. ಪೌಲನಾದ ನಾನು, ನಿಜವಾಗಿಯೂ ಅನೇಕ ಸಲ ಬರಲು ಪ್ರಯತ್ನಿಸಿದೆನು, ಆದರೆ ನಮ್ಮನ್ನು ಸೈತಾನನು ನಿಲ್ಲಿಸಿದನು. 19 ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಾವು ಹೊಗಳಿಕೊಳ್ಳುವ ನಮ್ಮ ನಿರೀಕ್ಷೆ, ನಮ್ಮ ಸಂತೋಷ, ನಮ್ಮ ಕಿರೀಟ ನೀವೇ ಆಗಿದ್ದೀರಿ. 20 ನಿಜವಾಗಿಯೂ ನೀವೇ ನಮ್ಮ ಸಂತೋಷ ಮತ್ತು ಗೌರವವಾಗಿದ್ದೀರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International