Revised Common Lectionary (Complementary)
43 ದೇವರೇ, ನನ್ನನ್ನು ನಿರಪರಾಧಿಯೆಂದು ತೀರ್ಪು ನೀಡು.
ವ್ಯಾಜ್ಯದಲ್ಲಿ ನನ್ನ ಪರವಾಗಿಯೂ ಅನ್ಯ ಜನಾಂಗಗಳಿಗೆ ವಿರೋಧವಾಗಿಯೂ ವಾದಿಸು.
ಸುಳ್ಳುಗಾರರಿಂದಲೂ ಕೆಡುಕರಿಂದಲೂ ನನ್ನನ್ನು ರಕ್ಷಿಸು.
2 ದೇವರೇ, ನೀನೇ ನನಗೆ ಆಶ್ರಯಸ್ಥಾನವಾಗಿರುವೆ!
ನೀನು ನನ್ನನ್ನು ಯಾಕೆ ಕೈಬಿಟ್ಟಿರುವೆ?
ಶತ್ರು ಬಾಧೆಯಿಂದ ನಾನೇಕೆ
ದುಃಖಿಸುತ್ತಾ ಸಂಕಟಪಡಬೇಕು?
3 ನಿನ್ನ ಬೆಳಕೂ ಸತ್ಯವೂ ನನ್ನ ಮೇಲೆ ಪ್ರಕಾಶಿಸಲಿ.
ನಿನ್ನ ಬೆಳಕೂ ಸತ್ಯವೂ ನನಗೆ ಮಾರ್ಗದರ್ಶನ ನೀಡಲಿ.
ಅವು ನನ್ನನ್ನು ನಿನ್ನ ಪವಿತ್ರ ಪರ್ವತಕ್ಕೂ ನಿನ್ನ ನಿವಾಸಕ್ಕೂ ನಡೆಸುತ್ತವೆ.
4 ನನ್ನ ದೇವರೇ, ನಿನ್ನ ಯಜ್ಞವೇದಿಕೆಯ ಬಳಿಗೆ ಬರುವೆನು.
ನನ್ನ ಸಂತೋಷಕ್ಕೆ ನೀನೇ ಆಧಾರನಾಗಿರುವೆ.
ದೇವರೇ, ನನ್ನ ದೇವರೇ,
ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ನಿನ್ನನ್ನು ಕೊಂಡಾಡುವೆನು.
5 ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.
ಜನರು ಯೆಹೋವನನ್ನು ಗೌರವಿಸುವುದಿಲ್ಲ
6 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ, “ಮಕ್ಕಳು ಹೆತ್ತವರನ್ನು ಗೌರವಿಸುವರು. ಸೇವಕರು ಯಜಮಾನನನ್ನು ಗೌರವಿಸುತ್ತಾರೆ. ನಾನು ನಿಮ್ಮ ತಂದೆಯಾಗಿದ್ದೇನೆ, ಆದರೆ ನನ್ನನ್ನು ಯಾಕೆ ಗೌರವಿಸುವದಿಲ್ಲ? ನಾನು ನಿಮ್ಮ ಯಜಮಾನನಾಗಿದ್ದೇನೆ, ಆದರೆ ನನ್ನನ್ಯಾಕೆ ಗೌರವಿಸುವದಿಲ್ಲ? ಯಾಜಕರೇ, ನೀವು ನನ್ನ ಹೆಸರನ್ನು ಗೌರವಿಸುವದಿಲ್ಲ.”
ಆದರೆ ನೀವು, “ನಾವು ನಿನಗೆ ಯಾವ ವಿಷಯದಲ್ಲಿ ಗೌರವ ಕೊಟ್ಟಿಲ್ಲ” ಎಂದು ಕೇಳುತ್ತೀರಿ.
7 “ನನ್ನ ಯಜ್ಞವೇದಿಕೆಗೆ ನೀವು ಅಶುದ್ಧ ರೊಟ್ಟಿಗಳನ್ನು ಅರ್ಪಿಸುತ್ತೀರಿ” ಎಂದು ಯೆಹೋವನು ಹೇಳುತ್ತಾನೆ.
“ಯಾವ ವಿಷಯದಲ್ಲಿ ಅದು ಅಶುದ್ಧವಾಯಿತು?” ಎಂದು ನೀವು ಕೇಳುತ್ತೀರಿ.
ಅದಕ್ಕೆ ಯೆಹೋವನು, “ನನ್ನ ಯಜ್ಞವೇದಿಕೆಯನ್ನು ನೀವು ಗೌರವಿಸುವದಿಲ್ಲ. 8 ನೀವು ಕುರುಡು ಪ್ರಾಣಿಗಳನ್ನು ಯಜ್ಞಕ್ಕಾಗಿ ತರುತ್ತೀರಿ. ಅದು ತಪ್ಪಲ್ಲವೇ? ಕುಂಟು, ರೋಗಪೀಡಿತ ಪಶುಗಳನ್ನು ಯಜ್ಞಾರ್ಪಣೆಗಾಗಿ ತರುತ್ತೀರಿ. ಅದು ತಪ್ಪಲ್ಲವೇ? ನಿಮ್ಮ ರಾಜ್ಯಪಾಲನಿಗೆ ನೀವು ಅಂಥಾ ಪ್ರಾಣಿಗಳನ್ನು ಕಾಣಿಕೆಯಾಗಿ ಕೊಟ್ಟರೆ ಅವನು ಅದನ್ನು ಸ್ವೀಕರಿಸುವನೋ? ಇಲ್ಲ, ಅಂಥಾ ಕಾಣಿಕೆಯನ್ನು ಅವನು ಸ್ವೀಕರಿಸುವದೇ ಇಲ್ಲ” ಸರ್ವಶಕ್ತನಾದ ಯೆಹೋವನು ಇದನ್ನು ಹೇಳುತ್ತಿದ್ದಾನೆ.
9 “ಯಾಜಕರೇ, ಯೆಹೋವನು ನಮಗೆ ಶುಭವನ್ನು ಉಂಟುಮಾಡುವಂತೆ ಆತನನ್ನು ಕೇಳಿಕೊಳ್ಳಿರಿ. ಆದರೆ ಆತನು ನಿಮಗೆ ಕಿವಿಗೊಡುವುದಿಲ್ಲ. ನಿಮ್ಮ ತಪ್ಪು ದೋಷಗಳೇ ಅದಕ್ಕೆ ಕಾರಣ.” ಇದು ಸರ್ವಶಕ್ತನಾದ ಯೆಹೋವನ ನುಡಿ.
10 “ನಿಮ್ಮಲ್ಲಿ ಕೆಲವು ಯಾಜಕರು ಆಲಯದ ಬಾಗಿಲುಗಳನ್ನು ಮುಚ್ಚಿ ಬೆಂಕಿಯನ್ನು ಸರಿಯಾದ ರೀತಿಯಲ್ಲಿ ಹಚ್ಚುವರು. ಆದರೆ ನಾನು ನಿಮ್ಮನ್ನು ಮೆಚ್ಚುವದಿಲ್ಲ. ನಿಮ್ಮ ಕಾಣಿಕೆಗಳನ್ನು ಸ್ವೀಕರಿಸುವದಿಲ್ಲ” ಇದು ಸರ್ವಶಕ್ತನಾದ ಯೆಹೋವನ ನುಡಿ.
11 “ಭೂಲೋಕದ ಜನರೆಲ್ಲಾ ನನ್ನ ಹೆಸರನ್ನು ಗೌರವಿಸುತ್ತಾರೆ; ಒಳ್ಳೆಯ ಕಾಣಿಕೆಗಳನ್ನು ತಂದೊಪ್ಪಿಸುತ್ತಾರೆ, ಒಳ್ಳೆಯ ಧೂಪವನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಯಾಕೆಂದರೆ ಅವರಿಗೆಲ್ಲಾ ನನ್ನ ನಾಮ ಮಹತ್ತರವಾದದ್ದು, ವಿಶೇಷವಾದದ್ದು.” ಇದು ಸರ್ವಶಕ್ತನಾದ ಯೆಹೋವನ ನುಡಿ.
12 “ಆದರೆ ನೀವು ನನ್ನ ನಾಮವನ್ನು ಘನಪಡಿಸುವದಿಲ್ಲ. ನನ್ನ ಮೇಜು ಅಶುದ್ಧವಾದದ್ದೆಂದು ನೀವು ಹೇಳುತ್ತೀರಿ. 13 ನೀವು ಆ ಮೇಜಿನಿಂದ ಆಹಾರವನ್ನು ತೆಗೆದುಕೊಳ್ಳುವದಿಲ್ಲ. ನೀವು ಆಹಾರವನ್ನು ಮೂಸಿನೋಡಿ ಅದನ್ನು ತಿನ್ನಲು ನಿರಾಕರಿಸುತ್ತೀರಿ. ಅದು ಚೆನ್ನಾಗಿಲ್ಲ ಎಂದು ಹೇಳುತ್ತೀರಿ. ಆದರೆ ಅದು ನಿಜವಲ್ಲ. ಆ ಮೇಲೆ, ನೀವು ರೋಗಪೀಡಿತವಾದ ಕುಂಟಾದ ಮತ್ತು ಕಳುವು ಮಾಡಿದ ಪಶುಗಳನ್ನು ನನಗರ್ಪಿಸುತ್ತೀರಿ. ಆದರೆ ಅಂಥಾ ಪಶುಗಳನ್ನು ನಿಮ್ಮಿಂದ ನಾನು ಸ್ವೀಕರಿಸುವದಿಲ್ಲ. 14 ನಿಮ್ಮಲ್ಲಿ ಕೆಲವರಲ್ಲಿ ಯಜ್ಞಕ್ಕೆ ಬೇಕಾಗಿರುವ ಒಳ್ಳೆಯ ಗಂಡು ಪಶುಗಳು ಇದ್ದಾಗ್ಯೂ ಅವರು ನನಗೆ ಅವುಗಳನ್ನು ಸಮರ್ಪಿಸುವದಿಲ್ಲ. ಕೆಲವರು ಕಳಂಕವಿಲ್ಲದ ಪಶುಗಳನ್ನು ನನಗೆ ತರುತ್ತಾರೆ. ಅವರು ಅಂಥಾ ಆರೋಗ್ಯಕರ ಪಶುಗಳನ್ನು ನನಗೆ ಸಮರ್ಪಿಸಲು ವಾಗ್ದಾನ ಮಾಡುವರು. ಆದರೆ ಗುಪ್ತವಾಗಿ ಅವರು ಆ ಪಶುವನ್ನು ಬದಲಿಸಿ ನನಗೆ ರೋಗಿಯಾದ ಪಶುಗಳನ್ನು ಕೊಡುತ್ತಾರೆ. ಅವರಿಗೆ ದುರ್ದೆಶೆ ಸಂಭವಿಸಲಿರುವದು. ನಾನು ದೊಡ್ಡ ಅರಸನು. ನೀವು ನನ್ನನ್ನು ಗೌರವಿಸಬೇಕು. ಭೂಲೋಕದ ಸರ್ವಜನರು ನನ್ನನ್ನು ಸನ್ಮಾನಿಸುವರು.” ಇವು ಸರ್ವಶಕ್ತನಾದ ಯೆಹೋವನ ನುಡಿಗಳು.
ಯಾಜಕರ ನಿಯಮಗಳು
2 “ಯಾಜಕರೇ, ನನ್ನ ಮಾತನ್ನು ಕೇಳಿರಿ. ನಾನು ಹೇಳುವುದಕ್ಕೆ ಗಮನ ಕೊಡಿರಿ. ಈ ನಿಯಮಗಳನ್ನು ನಿಮಗಾಗಿ ಹೇಳುತ್ತಿದ್ದೇನೆ. 2 ನನ್ನ ನಾಮವನ್ನು ಘನಪಡಿಸದೆ ಹೋದರೆ ಕೆಟ್ಟ ವಿಷಯಗಳು ನಿಮಗೆ ಪ್ರಾಪ್ತಿಯಾಗುವವು. ನೀವು ಆಶೀರ್ವದಿಸುವಿರಿ. ಆದರೆ ಅದು ಶಾಪವಾಗುವದು. ಕೆಟ್ಟ ವಿಷಯಗಳು ನೆರವೇರುವಂತೆ ನಾನು ಮಾಡುವೆನು. ಯಾಕೆಂದರೆ ನೀವು ನನ್ನ ಹೆಸರನ್ನು ಘನಪಡಿಸುವದಿಲ್ಲ.” ಇದನ್ನು ಸರ್ವಶಕ್ತನಾದ ಯೆಹೋವನು ನುಡಿದಿದ್ದಾನೆ.
3 “ನಿಮ್ಮ ಸಂತತಿಯವರನ್ನು ನಾನು ಶಿಕ್ಷಿಸುವೆನು. ಹಬ್ಬದ ದಿವಸಗಳಲ್ಲಿ ಯಾಜಕರೇ, ನೀವು ನನಗೆ ಯಜ್ಞಗಳನ್ನರ್ಪಿಸುತ್ತೀರಿ. ಪಶುವನ್ನು ಕೊಯಿದ ಬಳಿಕ ಅದರ ಒಳಗಿನ ಭಾಗಗಳನ್ನೂ ಅದರ ಮಲವನ್ನು ನಿಮ್ಮ ಮುಖಗಳಿಗೆ ಹಚ್ಚುವೆನು ಮತ್ತು ನೀವು ಅದರೊಂದಿಗೆ ಹೊರಗೆ ಬಿಸಾಡಲ್ಪಡುವಿರಿ. 4 ಆಗ ನೀವು ನಾನು ಈ ಆಜ್ಞೆಯನ್ನು ಯಾಕೆ ಕೊಡುತ್ತಿದ್ದೇನೆಂದು ಅರಿಯುವಿರಿ. ಲೇವಿಯರೊಂದಿಗೆ ನಾನು ಮಾಡಿರುವ ಒಡಂಬಡಿಕೆಯು ಮುಂದುವರಿಯುವ ಹಾಗೆ ನಾನು ಈ ಸಂಗತಿಗಳನ್ನು ನಿಮಗೆ ತಿಳಿಸುತ್ತಿದ್ದೇನೆ.” ಸೇನಾಧೀಶ್ವರನಾದ ಯೆಹೋವನು ಈ ಮಾತುಗಳನ್ನು ಅಂದಿದ್ದಾನೆ.
5 ಯೆಹೋವನು ಹೀಗೆನ್ನುತ್ತಾನೆ, “ಆ ಒಡಂಬಡಿಕೆಯನ್ನು ನಾನು ಲೇವಿಯರೊಂದಿಗೆ ಮಾಡಿದೆನು. ನಾನು ಅವನಿಗೆ ಜೀವ ಮತ್ತು ಸಮಾಧಾನವನ್ನು ವಾಗ್ದಾನ ಮಾಡಿ ಅವನಿಗೆ ಅದನ್ನು ಕೊಟ್ಟೆನು. ಲೇವಿಯು ನನ್ನನ್ನು ಘನಪಡಿಸಿದನು. ನನ್ನ ಹೆಸರನ್ನು ಗೌರವಿಸಿದನು. 6 ಲೇವಿಯು ಸುಳ್ಳನ್ನು ಸಮರ್ಥಿಸದೆ ಸತ್ಯ ಬೋಧನೆಯನ್ನು ಬೋಧಿಸಿದನು. ಅವನು ಪ್ರಮಾಣಿಕನಾಗಿದ್ದು ಸಮಾಧಾನವನ್ನು ಪ್ರೀತಿಸುತ್ತಿದ್ದನು. ಲೇವಿಯು ನನಗೆ ವಿಧೇಯನಾಗಿದ್ದು ಎಷ್ಟೋ ಮಂದಿ ಕೆಟ್ಟದಾರಿಯಲ್ಲಿ ಹೋಗುತ್ತಿರುವವರನ್ನು ನನ್ನ ಶಿಕ್ಷೆಯಿಂದ ಪಾರುಮಾಡಿದನು. 7 ಒಬ್ಬ ಯಾಜಕನು ಯೆಹೋವನ ಬೋಧನೆಯನ್ನು ಚೆನ್ನಾಗಿ ಅರಿತಿರಬೇಕು. ಜನರು ಯಾಜಕನ ಬಳಿಗೆ ಹೋಗಿ ದೇವರ ಬೋಧನೆಯನ್ನು ಕೇಳಿ ತಿಳಿದುಕೊಳ್ಳಬೇಕು. ಯಾಜಕನು ದೇವರ ಸಂದೇಶವನ್ನು ಜನರಿಗೆ ತಲುಪಿಸುವವನಾಗಿರಬೇಕು.
8 “ಆದರೆ ಯಾಜಕರೇ, ನೀವು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿ ಬಿಟ್ಟಿರಿ. ಅನೇಕ ಜನರು ತಪ್ಪು ದಾರಿಯಲ್ಲಿ ಹೋಗುವಂತೆ ಮಾಡಲು ನೀವು ಉಪದೇಶವನ್ನು ಬಳಸಿಕೊಂಡಿರಿ. ಲೇವಿಯೊಂದಿಗೆ ಮಾಡಿದ ಒಡಂಬಡಿಕೆಯನ್ನು ನೀವು ಹಾಳುಮಾಡಿಬಿಟ್ಟಿರಿ.” ಇದು ಸರ್ವಶಕ್ತನಾದ ಯೆಹೋವನ ನುಡಿ. 9 “ನಾನು ಹೇಳಿರುವ ಪ್ರಕಾರ ನೀವು ಜೀವಿಸುತ್ತಿಲ್ಲ. ನೀವು ನನ್ನ ಉಪದೇಶವನ್ನು ಜನರಿಗೆ ತಿಳಿಸುವಾಗ ಮುಖದಾಕ್ಷಿಣ್ಯ ಮಾಡುತ್ತೀರಿ. ಈ ಕಾರಣದಿಂದಾಗಿ ನಿಮ್ಮನ್ನು ಗಣನೆಗೆ ಬಾರದವರಂತೆಯೂ ಜನರು ನಿಮ್ಮನ್ನು ಸನ್ಮಾನಿಸದಂತೆಯೂ ಮಾಡುವೆನು.”
13 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ಜನರು ಪರಲೋಕರಾಜ್ಯಕ್ಕೆ ಪ್ರವೇಶಿಸುವ ದಾರಿಯನ್ನು ನೀವು ಮುಚ್ಚಿಬಿಡುತ್ತೀರಿ. ನೀವೂ ಪ್ರವೇಶಿಸುವುದಿಲ್ಲ ಮತ್ತು ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಜನರಿಗೂ ಬಿಡುವುದಿಲ್ಲ. 14 [a]
15 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮ ಮಾರ್ಗಗಳನ್ನು ಹಿಂಬಾಲಿಸುವ ಒಬ್ಬನನ್ನು ಕಂಡುಕೊಳ್ಳಲು ನೀವು ಸಮುದ್ರಗಳನ್ನು ದಾಟಿ ಬೇರೆಬೇರೆ ದೇಶಗಳಲ್ಲಿ ಪ್ರಯಾಣ ಮಾಡುತ್ತೀರಿ. ಅವನನ್ನು ಕಂಡುಕೊಂಡ ಮೇಲೆ ನಿಮಗಿಂತಲೂ ಹೆಚ್ಚು ಕೆಟ್ಟವನನ್ನಾಗಿ ಮಾಡುತ್ತೀರಿ. ನೀವು ನರಕಪಾತ್ರರಾಗುವಷ್ಟು ಕೆಟ್ಟವರಾಗಿದ್ದೀರಿ.
16 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು. ಒಬ್ಬನು ದೇವಾಲಯದ ಹೆಸರಿನ ಮೇಲೆ ವಾಗ್ದಾನ ಮಾಡಿದರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ದೇವಾಲಯದಲ್ಲಿರುವ ಚಿನ್ನದ ಮೇಲೆ ವಾಗ್ದಾನ ಮಾಡಿದರೆ, ಅವನು ಅದನ್ನು ಈಡೇರಿಸಬೇಕು ಎಂದು ಹೇಳುತ್ತೀರಿ! 17 ನೀವು ಕುರುಡರಾದ ಮೂರ್ಖರು! ಯಾವುದು ಹೆಚ್ಚಿನದು? ಚಿನ್ನವೋ ಅಥವಾ ದೇವಾಲಯವೋ? ಆ ಚಿನ್ನವು ಪರಿಶುದ್ಧಗೊಂಡದ್ದು ದೇವಾಲಯದಿಂದಲೇ. ಆದ್ದರಿಂದ ದೇವಾಲಯವೇ ಹೆಚ್ಚಿನದು.
18 “ಒಬ್ಬನು ಯಜ್ಞವೇದಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ಯಜ್ಞವೇದಿಕೆಯ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದರೆ ಅವನು ಅದನ್ನು ಈಡೇರಿಸಲೇಬೇಕು ಎಂದು ಹೇಳುತ್ತೀರಿ. 19 ನೀವು ಕುರುಡರು. ನಿಮಗೇನೂ ಅರ್ಥವಾಗುವುದಿಲ್ಲ. ಯಾವುದು ಹೆಚ್ಚಿನದು? ಕಾಣಿಕೆಯೋ ಅಥವಾ ಯಜ್ಞವೇದಿಕೆಯೋ? ಕಾಣಿಕೆ ಪರಿಶುದ್ಧಗೊಂಡದ್ದು ಯಜ್ಞವೇದಿಕೆಯಿಂದಲೇ. ಆದ್ದರಿಂದ ಯಜ್ಞವೇದಿಕೆಯೇ ಹೆಚ್ಚಿನದು. 20 ಯಜ್ಞವೇದಿಕೆಯ ಮೇಲೆ ವಾಗ್ದಾನ ಮಾಡುವವನು ಯಜ್ಞವೇದಿಕೆಯ ಮತ್ತು ಅದರ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದಂತಾಯಿತು. 21 ದೇವಾಲಯದ ಮೇಲೆ ವಾಗ್ದಾನ ಮಾಡುವವನು ನಿಜವಾಗಿಯೂ ದೇವಾಲಯದ ಮತ್ತು ಅದರೊಳಗೆ ವಾಸವಾಗಿರುವಾತನ ಮೇಲೆ ವಾಗ್ದಾನ ಮಾಡಿದಂತಾಯಿತು. 22 ಪರಲೋಕದ ಮೇಲೆ ವಾಗ್ದಾನ ಮಾಡುವವನು ದೇವರ ಸಿಂಹಾಸನದ ಮೇಲೆಯೂ ಆ ಸಿಂಹಾಸನದ ಮೇಲೆ ಕುಳಿತಿರುವಾತನ ಮೇಲೆಯೂ ವಾಗ್ದಾನ ಮಾಡಿದಂತಾಯಿತು.
23 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮಲ್ಲಿರುವ ಪ್ರತಿಯೊಂದರಲ್ಲೂ ನಿಮ್ಮ ಪುದೀನ, ಸಬ್ಬಸ್ಸಿಗೆ ಸೊಪ್ಪು, ಜೀರಿಗೆ ಗಿಡಗಳಲ್ಲಿಯೂ ಸಹ ಹತ್ತರಲ್ಲೊಂದು ಪಾಲನ್ನು ದೇವರಿಗೆ ಕೊಡುತ್ತೀರಿ. ಆದರೆ ಧರ್ಮಶಾಸ್ತ್ರದ ಬೋಧನೆಗಳಲ್ಲಿ ನಿಜವಾಗಿಯೂ ಪ್ರಾಮುಖ್ಯವಾದ ಆಜ್ಞೆಗಳನ್ನು ಅಂದರೆ ನ್ಯಾಯವನ್ನೂ ಕರುಣೆಯನ್ನೂ ಯಥಾರ್ಥತೆಯನ್ನೂ ನೀವು ತೊರೆದುಬಿಟ್ಟಿದ್ದೀರಿ. ಈ ಆಜ್ಞೆಗಳಿಗೆ ನೀವು ಮೊದಲು ವಿಧೇಯರಾಗಿ, ಈಗ ಮಾಡುತ್ತಿರುವಂಥ ಕಾರ್ಯಗಳನ್ನು ಮಾಡಬೇಕಿತ್ತು. 24 ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು! ಒಬ್ಬನು ತಾನು ಕುಡಿಯುವ ಪಾನೀಯದೊಳಗಿಂದ ಸಣ್ಣ ಸೊಳ್ಳೆಯನ್ನು ತೆಗೆದುಹಾಕಿ ಆಮೇಲೆ ಒಂಟೆಯನ್ನು ನುಂಗುವವನಂತೆ ನೀವಿದ್ದೀರಿ.
25 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ನಿಮ್ಮ ಪಾತ್ರೆ ಬಟ್ಟಲುಗಳ ಹೊರಭಾಗವನ್ನು ತೊಳೆದು ಸ್ವಚ್ಛಮಾಡುತ್ತೀರಿ. ಆದರೆ ಅವುಗಳ ಒಳಭಾಗವು ಮೋಸದಿಂದಲೂ ನಿಮಗೆ ತೃಪ್ತಿ ನೀಡುವ ಪದಾರ್ಥಗಳಿಂದಲೂ ತುಂಬಿವೆ. 26 ಫರಿಸಾಯರೇ, ನೀವು ಕುರುಡರು! ಮೊದಲು ಬಟ್ಟಲಿನ ಒಳಭಾಗವನ್ನು ಚೆನ್ನಾಗಿ ಶುಚಿಮಾಡಿರಿ. ಆಗ ಬಟ್ಟಲಿನ ಹೊರಭಾಗವು ನಿಜವಾಗಿಯೂ ಶುಚಿಯಾಗಿರುವುದು.
27 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಸುಣ್ಣ ಹಚ್ಚಿದ ಸಮಾಧಿಗಳಂತಿದ್ದೀರಿ. ಆ ಸಮಾಧಿಗಳ ಹೊರಭಾಗ ಚಂದವಾಗಿ ಕಾಣುತ್ತದೆ. ಆದರೆ ಒಳಭಾಗ ಸತ್ತವರ ಎಲುಬುಗಳಿಂದಲೂ ಎಲ್ಲಾ ಬಗೆಯ ಹೊಲಸುಗಳಿಂದಲೂ ತುಂಬಿರುತ್ತದೆ. 28 ನೀವು ಅದೇ ರೀತಿ ಇದ್ದೀರಿ. ನಿಮ್ಮನ್ನು ನೋಡಿದ ಜನರು ನಿಮ್ಮನ್ನು ಒಳ್ಳೆಯವರೆಂದು ಭಾವಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಅಂತರಂಗವು ಕಪಟದಿಂದಲೂ ದುಷ್ಟತನದಿಂದಲೂ ತುಂಬಿಕೊಂಡಿದೆ.
Kannada Holy Bible: Easy-to-Read Version. All rights reserved. © 1997 Bible League International