Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:41-48

41 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
    ನಿನ್ನ ವಾಗ್ದಾನದಂತೆ ನನ್ನನ್ನು ರಕ್ಷಿಸು.
42 ನನ್ನನ್ನು ಗೇಲಿಮಾಡುವ ಜನರಿಗೆ ಆಗ ನಾನು ಉತ್ತರ ಕೊಡುವೆನು.
    ಯೆಹೋವನೇ, ನಿನ್ನ ಮಾತುಗಳಲ್ಲೇ ನಾನು ಭರವಸವಿಟ್ಟಿದ್ದೇನೆ.
43 ನಿನ್ನ ಸತ್ಯೋಪದೇಶಗಳನ್ನು ನಾನು ಯಾವಾಗಲೂ ಮಾತಾಡುವಂತಾಗಲಿ.
    ನಿನ್ನ ಜ್ಞಾನದ ನಿರ್ಧಾರಗಳನ್ನೇ ನಾನು ಆಶ್ರಯಿಸಿಕೊಂಡಿದ್ದೇನೆ.
44 ನಿನ್ನ ಉಪದೇಶಗಳನ್ನು ಎಂದೆಂದಿಗೂ ಅನುಸರಿಸುವೆನು.
45 ಯಾಕೆಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು
    ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು.
46 ರಾಜರುಗಳ ಮುಂದೆಯೂ
    ಯೆಹೋವನ ಒಡಂಬಡಿಕೆಯ ಕುರಿತು ಚರ್ಚಿಸುವೆನು, ನಾಚಿಕೆಪಡುವುದಿಲ್ಲ.
47 ನಿನ್ನ ಆಜ್ಞೆಗಳಲ್ಲಿ ಆನಂದಿಸುವೆನು;
    ಅವು ನನಗೆ ಇಷ್ಟವಾಗಿವೆ.
48 ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು.
    ಅವು ನನಗೆ ಇಷ್ಟವಾಗಿವೆ.

ಧರ್ಮೋಪದೇಶಕಾಂಡ 10:10-22

10 “ಹಿಂದಿನ ಪ್ರಕಾರ ಈ ಸಾರಿಯೂ ನಾನು ನಲವತ್ತು ದಿನ ಹಗಲಿರುಳು ಬೆಟ್ಟದ ಮೇಲಿದ್ದೆನು. ನನ್ನ ಮಾತುಗಳನ್ನು ಯೆಹೋವನು ಆಲೈಸಿದನು; ನಿಮ್ಮನ್ನು ನಾಶಮಾಡುವುದಿಲ್ಲವೆಂದು ಪ್ರಮಾಣ ಮಾಡಿದನು. 11 ಯೆಹೋವನು ನನಗೆ, ‘ನನ್ನ ಜನರನ್ನು ಪ್ರಯಾಣದಲ್ಲಿ ಮುನ್ನಡೆಸು; ನಾನು ಅವರ ಪೂರ್ವಿಕರಿಗೆ ವಾಗ್ದಾನ ಮಾಡಿದ ಆ ದೇಶದಲ್ಲಿ ಅವರು ನೆಲೆಸಬೇಕು’ ಎಂದು ಹೇಳಿದನು.

ಯೆಹೋವನು ಅಪೇಕ್ಷಿಸುವುದೇನೆಂದರೆ

12 “ಇಸ್ರೇಲ್ ಜನರೇ, ಕೇಳಿರಿ! ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ನಿಜವಾಗಿಯೂ ಅಪೇಕ್ಷಿಸುವುದೇನು? ನೀವು ಆತನನ್ನು ಗೌರವಿಸಬೇಕೆಂದೂ ಆತನ ಆಜ್ಞಾವಿಧಿಗಳಿಗೆ ವಿಧೇಯರಾಗಬೇಕೆಂದೂ ಅಪೇಕ್ಷಿಸುತ್ತಾನೆ. ನೀವು ಆತನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕೆಂದು ಆತನು ಅಪೇಕ್ಷಿಸುತ್ತಾನೆ. 13 ಆದ್ದರಿಂದ ನಾನು ನಿಮಗೆ ಕೊಡುವ ಆತನ ಕಟ್ಟಳೆ, ವಿಧಿನಿಯಮಗಳಿಗೆ ವಿಧೇಯರಾಗಿರಿ. ಇವೆಲ್ಲವೂ ನಿಮ್ಮ ಒಳ್ಳೆಯದಕ್ಕಾಗಿಯೇ ಇರುತ್ತದೆ.

14 “ಪ್ರತಿಯೊಂದೂ ಯೆಹೋವನದೇ, ಉನ್ನತವಾದ ಆಕಾಶವೂ ಯೆಹೋವನದೇ. ಈ ಭೂಮಿಯೂ, ಅದರಲ್ಲಿರುವ ಸಮಸ್ತವೂ ದೇವರಿಗೇ ಸೇರಿದ್ದು. 15 ಯೆಹೋವನು ನಿಮ್ಮ ಪೂರ್ವಿಕರನ್ನು ಎಷ್ಟು ಪ್ರೀತಿಮಾಡಿದ್ದನೆಂದರೆ, ಅವರ ಸಂತಾನದವರಾದ ನಿಮ್ಮನ್ನು ತನ್ನ ಜನರನ್ನಾಗಿ ಆರಿಸಿಕೊಳ್ಳುವಷ್ಟು ಪ್ರೀತಿಸಿದನು; ಬೇರೆ ಜನಾಂಗದವರ ಬದಲಾಗಿ ನಿಮ್ಮನ್ನೇ ಆರಿಸಿಕೊಂಡನು. ನೀವು ಇಂದಿಗೂ ಆತನಿಂದ ಆರಿಸಲ್ಪಟ್ಟ ಜನರಾಗಿದ್ದೀರಿ.

16 “ಆದ್ದರಿಂದ ಹಠಮಾರಿಗಳಾಗಬೇಡಿರಿ. ನಿಮ್ಮ ಹೃದಯಗಳನ್ನು ಯೆಹೋವನಿಗೆ ಕೊಡಿರಿ. 17 ಯಾಕೆಂದರೆ ಯೆಹೋವನೇ ನಿಮ್ಮ ದೇವರು. ಆತನು ದೇವರುಗಳ ದೇವರೂ ಪ್ರಭುಗಳ ಪ್ರಭುವೂ ಆಗಿದ್ದಾನೆ. ಆತನು ಮಹಾದೇವರೂ ಆಶ್ಚರ್ಯಕಾರನೂ ಪರಾಕ್ರಮಶಾಲಿಯೂ ಭಯಂಕರನೂ ಆಗಿದ್ದಾನೆ. ಆತನಿಗೆ ಎಲ್ಲಾ ಜನರೂ ಒಂದೇ. ಆತನು ತನ್ನ ತೀರ್ಮಾನವನ್ನು ಬದಲಾಯಿಸಲು ಲಂಚ ಸ್ವೀಕರಿಸುವವನಲ್ಲ. 18 ಅನಾಥಮಕ್ಕಳಿಗೂ ವಿಧವೆಯರಿಗೂ ಆತನು ಸಹಾಯಕನಾಗಿದ್ದಾನೆ. ನಮ್ಮ ದೇಶದಲ್ಲಿರುವ ಪರದೇಶಿಯರನ್ನೂ ಆತನು ಪ್ರೀತಿಸುತ್ತಾನೆ; ಅವರಿಗೆ ಊಟಬಟ್ಟೆಗಳನ್ನು ಒದಗಿಸುತ್ತಾನೆ. 19 ಆದ್ದರಿಂದ ನೀವೂ ಪರದೇಶಿಯರನ್ನು ಪ್ರೀತಿಸಬೇಕು. ನೀವೂ ಸಹ ಈಜಿಪ್ಟ್ ದೇಶದಲ್ಲಿ ಪರದೇಶಿಗಳಾಗಿದ್ದಿರಿ.

20 “ನೀವು ನಿಮ್ಮ ದೇವರಾದ ಯೆಹೋವನನ್ನು ಗೌರವಿಸಿ ಆತನೊಬ್ಬನನ್ನೇ ಆರಾಧಿಸಬೇಕು. ಆತನನ್ನು ಬಿಟ್ಟು ತೊಲಗದಿರಿ. ವಾಗ್ದಾನ, ಒಡಂಬಡಿಕೆಗಳನ್ನು ಮಾಡುವಾಗ ಆತನ ಹೆಸರಿನಲ್ಲಿಯೇ ಮಾಡಿರಿ. 21 ಯೆಹೋವನನ್ನು ಮಾತ್ರ ನೀವು ಸ್ತುತಿಸಬೇಕು. ಆತನೇ ನಿಮ್ಮ ದೇವರು. ಆತನು ನಿಮಗಾಗಿ ಭಯಂಕರವಾದ ಮಹತ್ಕಾರ್ಯಗಳನ್ನು ಮಾಡಿದ್ದಾನೆ. ಅವುಗಳನ್ನು ನೀವು ಕಣ್ಣಾರೆ ಕಂಡಿದ್ದೀರಿ. 22 ನಿಮ್ಮ ಪೂರ್ವಿಕರು ಈಜಿಪ್ಟಿಗೆ ಹೋದಾಗ ಅವರಲ್ಲಿ ಕೇವಲ ಎಪ್ಪತ್ತು ಮಂದಿ ಮಾತ್ರ ಇದ್ದರು. ಆದರೆ ನಿಮ್ಮ ದೇವರಾದ ಯೆಹೋವನು ಆಕಾಶದಲ್ಲಿರುವ ನಕ್ಷತ್ರಗಳಂತೆ ನಿಮ್ಮನ್ನು ಅನೇಕಾನೇಕ ಜನರನ್ನಾಗಿ ಮಾಡಿದ್ದಾನೆ.

ಯಾಕೋಬನು 2:14-26

ನಂಬಿಕೆ ಮತ್ತು ಉತ್ತಮ ಕಾರ್ಯಗಳು

14 ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ! 15 ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು. 16 ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. 17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.

18 ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು. 19 ಒಬ್ಬನೇ ದೇವರಿರುವನೆಂದು ನೀವು ನಂಬಿದ್ದೀರಿ. ಒಳ್ಳೆಯದು! ಆದರೆ ದೆವ್ವಗಳೂ ಅದನ್ನು ನಂಬುತ್ತವೆ ಮತ್ತು ಭಯದಿಂದ ನಡುಗುತ್ತವೆ.

20 ಬುದ್ಧಿಹೀನರೇ, ಕ್ರಿಯೆಯಿಲ್ಲದ ನಂಬಿಕೆಯು ನಿಷ್ಪ್ರಯೋಜಕವೆಂದು ನಿಮಗೆ ತೋರಿಸಬೇಕೋ? 21 ಅಬ್ರಹಾಮನು ನಮ್ಮ ಪಿತೃ. ಅವನು ತನ್ನ ಕ್ರಿಯೆಗಳಿಂದ ನೀತಿವಂತನಾದನು. ಅವನು ಯಜ್ಞವೇದಿಕೆಯ ಮೇಲೆ ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದನು. 22 ಆದ್ದರಿಂದ ಅವನ ನಂಬಿಕೆ ಮತ್ತು ಅವನ ಕ್ರಿಯೆ ಒಟ್ಟಿಗೆ ಕಾರ್ಯ ಮಾಡಿದವು. ಅವನ ನಂಬಿಕೆಯು ಅವನ ಕ್ರಿಯೆಗಳಿಂದಲೇ ಪರಿಪೂರ್ಣಗೊಂಡಿತು. 23 ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.”(A) ಅಬ್ರಹಾಮನನ್ನು “ದೇವರ ಸ್ನೇಹಿತ”(B) ನೆಂದು ಕರೆಯಲಾಯಿತು. 24 ಹೀಗಿರಲು ಒಬ್ಬನು ತನ್ನ ಕ್ರಿಯೆಗಳಿಂದ ನೀತಿವಂತನಾಗುತ್ತಾನೆ ಎಂಬುದು ಸ್ಪಷ್ಟವಾಗಿದೆ. ಒಬ್ಬನು ಕೇವಲ ನಂಬಿಕೆಯೊಂದರಿಂದಲೇ ನೀತಿವಂತನಾಗಲು ಸಾಧ್ಯವಿಲ್ಲ.

25 ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು.[a]

26 ಒಬ್ಬ ವ್ಯಕ್ತಿಯ ದೇಹದಲ್ಲಿ ಆತ್ಮವಿಲ್ಲದಿದ್ದರೆ, ಅವನ ದೇಹವು ಸತ್ತದ್ದೇ. ಅದೇ ರೀತಿಯಲ್ಲಿ ಕ್ರಿಯೆಯಿಲ್ಲದ ನಂಬಿಕೆಯು ಸತ್ತದ್ದೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International