Revised Common Lectionary (Complementary)
41 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
ನಿನ್ನ ವಾಗ್ದಾನದಂತೆ ನನ್ನನ್ನು ರಕ್ಷಿಸು.
42 ನನ್ನನ್ನು ಗೇಲಿಮಾಡುವ ಜನರಿಗೆ ಆಗ ನಾನು ಉತ್ತರ ಕೊಡುವೆನು.
ಯೆಹೋವನೇ, ನಿನ್ನ ಮಾತುಗಳಲ್ಲೇ ನಾನು ಭರವಸವಿಟ್ಟಿದ್ದೇನೆ.
43 ನಿನ್ನ ಸತ್ಯೋಪದೇಶಗಳನ್ನು ನಾನು ಯಾವಾಗಲೂ ಮಾತಾಡುವಂತಾಗಲಿ.
ನಿನ್ನ ಜ್ಞಾನದ ನಿರ್ಧಾರಗಳನ್ನೇ ನಾನು ಆಶ್ರಯಿಸಿಕೊಂಡಿದ್ದೇನೆ.
44 ನಿನ್ನ ಉಪದೇಶಗಳನ್ನು ಎಂದೆಂದಿಗೂ ಅನುಸರಿಸುವೆನು.
45 ಯಾಕೆಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು
ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು.
46 ರಾಜರುಗಳ ಮುಂದೆಯೂ
ಯೆಹೋವನ ಒಡಂಬಡಿಕೆಯ ಕುರಿತು ಚರ್ಚಿಸುವೆನು, ನಾಚಿಕೆಪಡುವುದಿಲ್ಲ.
47 ನಿನ್ನ ಆಜ್ಞೆಗಳಲ್ಲಿ ಆನಂದಿಸುವೆನು;
ಅವು ನನಗೆ ಇಷ್ಟವಾಗಿವೆ.
48 ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು.
ಅವು ನನಗೆ ಇಷ್ಟವಾಗಿವೆ.
ಯಾವಾಗಲೂ ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗಿರಿ
6 “ನಿಮ್ಮದೇವರಾದ ಯೆಹೋವನು ನಿಮಗೆ ಉಪದೇಶಿಸಲೆಂದು ನನಗೆ ಕೊಟ್ಟ ಆಜ್ಞೆಗಳು, ಕಟ್ಟಳೆಗಳು ಮತ್ತು ನಿಯಮಗಳು ಇವೇ. ನೀವು ವಾಸಮಾಡಲು ಪ್ರವೇಶಿಸಲಿರುವ ದೇಶದಲ್ಲಿ ಅವುಗಳನ್ನು ಪಾಲಿಸಿರಿ. 2 ನೀವೂ ಮತ್ತು ನಿಮ್ಮ ಸಂತತಿಯವರೂ ಜೀವಿಸುವ ದಿನಗಳಲ್ಲೆಲ್ಲಾ ದೇವರಾದ ಯೆಹೋವನನ್ನು ಗೌರವಿಸಬೇಕು. ನಾನೀಗ ಕೊಡುವ ಎಲ್ಲಾ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸಬೇಕು. ಹಾಗೆ ಮಾಡಿದ್ದಲ್ಲಿ ನೀವು ನೆಲೆಸುವ ಜಾಗದಲ್ಲಿ ನೀವು ಬಹುಕಾಲ ಜೀವಿಸುವಿರಿ. 3 ಇಸ್ರೇಲಿನ ಜನರೇ, ಕಿವಿಗೊಟ್ಟು ಕೇಳಿರಿ. ದೇವರ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನಿಮಗೆ ಎಲ್ಲಾದರಲ್ಲಿ ಶುಭವಾಗುವುದು. ನಿಮಗೆ ಹೆಚ್ಚು ಮಕ್ಕಳಾಗುವವು. ನೀವು ನೆಲೆಸುವ ದೇಶವು ನಿಮ್ಮ ಪೂರ್ವಿಕರಿಗೆ ದೇವರು ವಾಗ್ದಾನ ಮಾಡಿದ ಪ್ರಕಾರ ಫಲಭರಿತವಾಗುವುದು.
4 “ಇಸ್ರೇಲಿನ ಜನರೇ, ಕಿವಿಗೊಡಿರಿ. ಯೆಹೋವನೇ ನಮ್ಮ ದೇವರು. ದೇವರು ಒಬ್ಬನೇ! 5 ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. 6 ನಾನೀಗ ಕೊಡುವ ಆಜ್ಞೆಗಳನ್ನು ಯಾವಾಗಲೂ ನಿಮ್ಮ ಜ್ಞಾಪದಲ್ಲಿಟ್ಟುಕೊಂಡಿರಿ. 7 ನಿಮ್ಮ ಮಕ್ಕಳಿಗೆ ಇದನ್ನು ಕಲಿಸಲು ಮರೆಯಬೇಡಿರಿ. ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ರಸ್ತೆಗಳಲ್ಲಿ ನಡೆಯುತ್ತಿರುವಾಗ, ನೀವು ಮಲಗಿರುವಾಗ, ಎದ್ದಾಗ ಈ ಆಜ್ಞೆಗಳ ಕುರಿತಾಗಿ ಮಾತಾಡಿಕೊಳ್ಳಿರಿ. 8 ಈ ಆಜ್ಞೆಗಳನ್ನು ಬರೆದು ನಿಮ್ಮ ಕೈಗಳಿಗೆ ಕಟ್ಟಿರಿ, ನಿಮ್ಮ ಹಣೆಗಳ ಮೇಲೆ ಕಟ್ಟಿರಿ. ಇವು ನನ್ನ ಬೋಧನೆಯ ವಿಚಾರವಾಗಿ ನಿಮಗೆ ಜ್ಞಾಪಕ ಹುಟ್ಟಿಸಲು ಸಹಾಯವಾಗುವುದು. 9 ಅವುಗಳನ್ನು ನಿಮ್ಮ ಬಾಗಿಲಿನ ಮೇಲೆಯೂ ನಿಲುವುಪಟ್ಟಿಗಳ ಮೇಲೆಯೂ ಬರೆಯಿರಿ.
ದೇವರ ಕಾರ್ಯಗಳನ್ನು ನಿಮ್ಮ ಮಕ್ಕಳಿಗೆ ತಿಳಿಸಬೇಕು
20 “ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳು ನಿಮಗೆ ಈ ಪ್ರಶ್ನೆ ಕೇಳಬಹುದು: ‘ಯೆಹೋವದೇವರು ನಮಗೆ ನ್ಯಾಯವಿಧಿ, ನಿಯಮಗಳನ್ನು ಕೊಟ್ಟಿರುತ್ತಾನೆ. ಇವುಗಳ ಅರ್ಥವೇನು?’ 21 ಆಗ ನೀವು ಹೀಗೆ ಉತ್ತರಿಸಬೇಕು: ‘ನಾವು ಈಜಿಪ್ಟಿನಲ್ಲಿ ಫರೋಹನ ಗುಲಾಮರಾಗಿದ್ದೆವು. ಆದರೆ ನಮ್ಮ ದೇವರಾದ ಯೆಹೋವನು ತನ್ನ ಪರಾಕ್ರಮದಿಂದ ನಮ್ಮನ್ನು ಬಿಡುಗಡೆ ಮಾಡಿದನು. 22 ಯೆಹೋವನು ಈಜಿಪ್ಟಿನವರನ್ನೂ ಫರೋಹನನ್ನೂ ಅವನ ಪರಿವಾರದವರನ್ನೂ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಮಹತ್ಕಾರ್ಯಗಳಿಂದಲೂ ಭಯಂಕರ ಕಾರ್ಯಗಳಿಂದಲೂ ಬಾಧಿಸಿದನು. 23 ಯೆಹೋವನು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನದಂತೆ ನಮಗೆ ಆ ದೇಶವನ್ನು ಕೊಡುವುದಕ್ಕಾಗಿ ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. 24 ಈ ಉಪದೇಶಗಳನ್ನೆಲ್ಲಾ ಅನುಸರಿಸಬೇಕೆಂದು ಯೆಹೋವನು ನಮಗೆ ಆಜ್ಞಾಪಿಸಿದ್ದಾನೆ. ನಮ್ಮ ದೇವರಾದ ಯೆಹೋವನನ್ನು ನಾವು ಗೌರವಿಸತಕ್ಕದ್ದು. ಆಗ ಇಂದಿನಂತೆ ಯೆಹೋವನು ನಮ್ಮನ್ನು ಜೀವಂತವಾಗಿರಿಸಿ ನಮಗೆ ಒಳ್ಳೆಯದನ್ನು ಮಾಡುತ್ತಾನೆ. 25 ನಮ್ಮ ದೇವರಾದ ಯೆಹೋವನು ಹೇಳಿದಂತೆಯೇ, ಇಡೀ ಧರ್ಮಶಾಸ್ತ್ರಕ್ಕೆ ನಾವು ಚಾಚೂತಪ್ಪದೆ ಎಚ್ಚರಿಕೆಯಿಂದ ವಿಧೇಯರಾದರೆ, ನಾವು ಒಳ್ಳೆಯದನ್ನು ಮಾಡಿದೆವೆಂದು ದೇವರು ಹೇಳುತ್ತಾನೆ.’
8 ಪವಿತ್ರ ಗ್ರಂಥದಲ್ಲಿ ಬರೆದಿರುವ, “ನಿನ್ನನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸು”(A) ಎಂಬ ರಾಜಾಜ್ಞೆಗೆ ನೀವು ವಿಧೇಯರಾಗಿದ್ದರೆ ಸರಿಯಾದುದನ್ನೇ ಮಾಡುವವರಾಗಿದ್ದೀರಿ. 9 ಆದರೆ ನೀವು ಒಬ್ಬನನ್ನು ಇನ್ನೊಬ್ಬನಿಗಿಂತ ಮುಖ್ಯನೆಂದು ಪರಿಗಣಿಸಿ ಪಕ್ಷಪಾತ ಮಾಡಿದರೆ ಪಾಪವನ್ನು ಮಾಡುವವರಾಗಿದ್ದೀರಿ. ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೋಷಿಗಳಾಗಿದ್ದೀರೆಂದು ಆ ರಾಜಾಜ್ಞೆಯು ನಿರೂಪಿಸುತ್ತದೆ.
10 ಒಬ್ಬನು ದೇವರ ಎಲ್ಲಾ ಆಜ್ಞೆಗಳನ್ನು ಅನುಸರಿಸುತ್ತಿರಬಹುದು. ಆದರೆ ಅವನು ಒಂದು ಆಜ್ಞೆಗೆ ಅವಿಧೇಯನಾದರೆ ಅವನು ಧರ್ಮಶಾಸ್ತ್ರದ ಎಲ್ಲಾ ಆಜ್ಞೆಗಳನ್ನು ಮೀರಿದನೆಂಬ ಅಪರಾಧಕ್ಕೆ ಗುರಿಯಾಗುವನು. 11 “ವ್ಯಭಿಚಾರ ಮಾಡಬಾರದು”(B) ಎಂದು ದೇವರು ಹೇಳಿದನು. “ಕೊಲ್ಲಬಾರದು”(C) ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.
12 ಜನರನ್ನು ಬಿಡುಗಡೆ ಮಾಡುವ ಧರ್ಮಶಾಸ್ತ್ರದಿಂದಲೇ ನಿಮಗೆ ತೀರ್ಪಾಗುವುದು. ನೀವು ಕೇಳುವ ಮತ್ತು ಮಾಡುವ ಪ್ರತಿಯೊಂದರಲ್ಲಿಯೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. 13 ಹೌದು, ಇತರರಿಗೆ ನೀವು ಕರುಣೆ ತೋರಬೇಕು. ಇಲ್ಲವಾದರೆ ದೇವರು ತೀರ್ಪು ನೀಡುವಾಗ ನಿಮಗೂ ಕರುಣೆ ತೋರನು. ಕರುಣೆ ತೋರುವವನು ದೇವರ ನ್ಯಾಯತೀರ್ಪಿನಲ್ಲಿ ಭಯವಿಲ್ಲದೆ ಇರುವನು.
Kannada Holy Bible: Easy-to-Read Version. All rights reserved. © 1997 Bible League International