Revised Common Lectionary (Complementary)
ಮೊದಲನೆ ಭಾಗ
(ಕೀರ್ತನೆಗಳು 1–41)
1 ಯಾವನು ದುಷ್ಟರ ಮಾರ್ಗವನ್ನು ಅನುಸರಿಸದೆ,
ಪಾಪಿಗಳಂತೆ ಜೀವಿಸದೆ,
ದೇವರಿಗೆ ಅವಿಧೇಯರಾದ ಜನರೊಂದಿಗೆ ಸೇರದೆ ಇರುವನೋ
ಅವನೇ ಭಾಗ್ಯವಂತನು.
2 ನೀತಿವಂತನಾದ ಅವನು ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಿಸುತ್ತಾ
ಅದನ್ನೇ ಹಗಲಿರುಳು ಧ್ಯಾನಿಸುವನು.
3 ಅವನು ನೀರಿನ ಕಾಲುವೆಗಳ ಬಳಿಯಲ್ಲಿ
ಹುಲುಸಾಗಿ ಬೆಳೆದಿರುವ ಮರದಂತಿರುವನು.
ಆ ಮರವು ತಕ್ಕಕಾಲದಲ್ಲಿ ಫಲಿಸುವುದು;
ಬಾಡದ ಎಲೆಗಳಿಂದ ಯಾವಾಗಲೂ ತುಂಬಿರುವುದು;
ಅಂತೆಯೇ ಅವನ ಕಾರ್ಯಗಳೆಲ್ಲಾ ಸಫಲವಾಗುವವು.
4 ದುಷ್ಟರಾದರೋ ಹಾಗಲ್ಲ!
ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತಿರುವರು.
5 ನ್ಯಾಯತೀರ್ಪಿನ ಕಾಲ ಬಂದಾಗ ದುಷ್ಟರಿಗೆ ಅಪರಾಧಿಗಳೆಂದು ತೀರ್ಪಾಗುವುದು.
ಪಾಪಿಗಳಿಗೆ ನೀತಿವಂತರ ಮಧ್ಯದಲ್ಲಿ ಸ್ಥಳವಿರುವುದಿಲ್ಲ.
6 ಯೆಹೋವನು ನೀತಿವಂತರನ್ನು ಸಂರಕ್ಷಿಸುವನು;
ದುಷ್ಟರನ್ನಾದರೋ ನಾಶಪಡಿಸುವನು.
ಮತ್ತಷ್ಟು ಜ್ಞಾನೋಕ್ತಿಗಳು
23 ಇವು ಸಹ ಜ್ಞಾನಿಗಳ ಮಾತುಗಳು:
ನ್ಯಾಯಾಧಿಪತಿ ನ್ಯಾಯವಂತನಾಗಿರಬೇಕು. ಅವನು ಕೇವಲ ಪರಿಚಯದ ನಿಮಿತ್ತ ಯಾರಿಗೂ ಸಹಾಯ ಮಾಡಕೂಡದು. 24 ನ್ಯಾಯಾಧೀಶನು ಅಪರಾಧಿಗೆ, “ನೀನು ನಿರಪರಾಧಿ” ಎಂದು ಹೇಳಿದರೆ, ಜನರು ನ್ಯಾಯಾಧೀಶನನ್ನು ಶಪಿಸುವರು; ಜನಾಂಗಗಳು ಅವನನ್ನು ಖಂಡಿಸುವವು. 25 ಆದರೆ ನ್ಯಾಯಾಧೀಶನು ಅಪರಾಧಿಯನ್ನು ದಂಡಿಸಿದರೆ, ಜನರೆಲ್ಲರೂ ಅವನನ್ನು ಮೆಚ್ಚಿಕೊಳ್ಳುವರು; ಅವನಿಗೆ ಮಹಾ ಆಶೀರ್ವಾದ ದೊರೆಯುವುದು.
26 ಯಥಾರ್ಥವಾದ ಉತ್ತರ ಜನರೆಲ್ಲರನ್ನು ಸಂತೋಷಗೊಳಿಸುವುದು; ಅದು ತುಟಿಯ ಮೇಲಿನ ಮುದ್ದಿನಂತಿದೆ.
27 ಹೊಲಗಳಲ್ಲಿ ಬಿತ್ತುವ ಮೊದಲು ಮನೆಯನ್ನು ಕಟ್ಟಬೇಡ. ವಾಸಕ್ಕಾಗಿ ಮನೆಯನ್ನು ಕಟ್ಟುವ ಮೊದಲೇ ನೀನು ಬೇಸಾಯ ಮಾಡಲು ಸಿದ್ಧನಾಗಿರುವಿಯೋ ಎಂಬುದನ್ನು ಖಾತರಿಪಡಿಸಿಕೊ.
28 ಬೇರೊಬ್ಬನ ವಿರೋಧವಾಗಿ ಸಕಾರಣವಿಲ್ಲದೆ ಸಾಕ್ಷಿ ಹೇಳಬೇಡ, ಸುಳ್ಳನ್ನೂ ಹೇಳಬೇಡ.
29 “ಅವನು ನನಗೆ ಕೇಡುಮಾಡಿದನು. ಆದ್ದರಿಂದ ನಾನೂ ಅವನಿಗೆ ಕೇಡುಮಾಡುವೆ. ಅವನು ಮಾಡಿದ ಕೇಡುಗಳಿಗಾಗಿ ಸೇಡು ತೀರಿಸಿಕೊಳ್ಳುವೆ” ಎಂದು ಹೇಳಬೇಡ.
30 ಸೋಮಾರಿಯ ಹೊಲದ ಸಮೀಪದಲ್ಲೂ ಅಜ್ಞಾನಿಯ ದ್ರಾಕ್ಷಿತೋಟದ ಬಳಿಯಲ್ಲೂ ನಡೆದುಹೋದೆನು. 31 ಆ ಹೊಲಗಳಲ್ಲಿ ಮುಳ್ಳುಗಿಡಗಳೂ ಉಪಯೋಗವಿಲ್ಲದ ಸಸಿಗಳೂ ಬೆಳೆಯುತ್ತಿದ್ದವು. ಹೊಲಗಳ ಸುತ್ತಲೂ ಇದ್ದ ಗೋಡೆ ಒಡೆದುಹೋಗಿತ್ತು; ಕುಸಿದು ಬೀಳುತ್ತಿತ್ತು. 32 ಅದನ್ನು ನೋಡಿ, ಆಲೋಚಿಸಿದೆ; ಒಂದು ಪಾಠವನ್ನು ಕಲಿತುಕೊಂಡೆ; 33 ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ವಿಶ್ರಾಂತಿ, ಇನ್ನು ಸ್ವಲ್ಪ ಕೈಮುದುರಿಕೊಳ್ಳುವೆ, ಮಧ್ಯಾಹ್ನ ಇನ್ನು ಸ್ವಲ್ಪ ನಿದ್ರೆ ಮಾಡುವೆ ಎನ್ನುವೆಯಾ? 34 ಇವು ನಿನ್ನನ್ನು ಬೇಗನೆ ಬಡವನನ್ನಾಗಿ ಮಾಡಿ ಬರಿದು ಮಾಡುತ್ತದೆ; ಇದ್ದಕ್ಕಿದ್ದಂತೆ ಬಂದು ಎಲ್ಲವನ್ನು ದೋಚಿಕೊಂಡು ಹೋಗುವ ಕಳ್ಳನಂತಿವೆ.
39 ನೀವು ಪವಿತ್ರ ಗ್ರಂಥವನ್ನು ಜಾಗ್ರತೆಯಿಂದ ಅಧ್ಯಯನ ಮಾಡುತ್ತೀರಿ. ಆ ಪವಿತ್ರ ಗ್ರಂಥವು ನಿಮಗೆ ನಿತ್ಯಜೀವವನ್ನು ಕೊಡುತ್ತದೆ ಎಂಬುದು ನಿಮ್ಮ ಆಲೋಚನೆ. ಅದೇ ಪವಿತ್ರ ಗ್ರಂಥವು ನನ್ನ ಬಗ್ಗೆ ತಿಳಿಸುತ್ತದೆ! 40 ಆದರೆ ನೀವು ಬಯಸುವ ಆ ಜೀವವನ್ನು ನನ್ನ ಬಳಿಗೆ ಬಂದು ಹೊಂದಿಕೊಳ್ಳಲು ನಿಮಗೆ ಇಷ್ಟವಿಲ್ಲ.
41 “ಮನುಷ್ಯರಿಂದ ಬರುವ ಹೊಗಳಿಕೆಯು ನನಗೆ ಬೇಕಾಗಿಲ್ಲ. 42 ಆದರೆ ನಾನು ನಿಮ್ಮನ್ನು ಬಲ್ಲೆನು. ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನನಗೆ ಗೊತ್ತಿದೆ. 43 ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ. ನಾನು ಆತನಿಗೋಸ್ಕರ ಮಾತಾಡುತ್ತೇನೆ. ಆದರೆ ನೀವು ನನ್ನನ್ನು ಸ್ವೀಕರಿಸಿಕೊಳ್ಳುವುದಿಲ್ಲ. ಮತ್ತೊಬ್ಬನು ಬಂದು ತನಗೋಸ್ಕರವಾಗಿ ಮಾತಾಡಿದರೆ ನೀವು ಅವನನ್ನು ಸ್ವೀಕರಿಸಿಕೊಳ್ಳುತ್ತೀರಿ. 44 ನೀವು ಪರಸ್ಪರ ಸನ್ಮಾನವನ್ನು ಬಯಸುತ್ತೀರಿ. ಆದರೆ ಒಬ್ಬನೇ ದೇವರಿಂದ ಬರುವ ಸನ್ಮಾನವನ್ನು ಪಡೆದುಕೊಳ್ಳಲು ನೀವೆಂದೂ ಪ್ರಯತ್ನಿಸುವುದಿಲ್ಲ. ಹೀಗಿರಲು ನೀವು ಹೇಗೆ ನಂಬಬಲ್ಲಿರಿ? 45 ನಾನು ತಂದೆಯ ಮುಂದೆ ನಿಂತುಕೊಂಡು ನಿಮ್ಮನ್ನು ತಪ್ಪಿತಸ್ಥರೆಂಬುದಾಗಿ ಹೇಳುತ್ತೇನೆಂದು ಯೋಚಿಸಬೇಡಿರಿ. ನಿಮ್ಮನ್ನು ರಕ್ಷಿಸುತ್ತಾನೆಂದು ನೀವು ನಿರೀಕ್ಷಿಸಿಕೊಂಡಿರುವ ಮೋಶೆಯೇ ನಿಮ್ಮ ಮೇಲೆ ದೂರು ಹೇಳುವನು. 46 ನೀವು ಮೋಶೆಯನ್ನು ನಿಜವಾಗಿಯೂ ನಂಬಿದ್ದರೆ, ನನ್ನನ್ನೂ ನಂಬುತ್ತಿದ್ದಿರಿ. ಯಾಕೆಂದರೆ ಅವನು ನನ್ನ ವಿಷಯವಾಗಿ ಬರೆದಿದ್ದಾನೆ. 47 ಆದರೆ ಮೋಶೆ ಬರೆದದ್ದನ್ನು ನೀವು ನಂಬುವುದಿಲ್ಲ. ಹೀಗಿರಲು ನಾನು ಹೇಳುವ ಸಂಗತಿಗಳನ್ನು ನೀವು ಹೇಗೆ ನಂಬಬಲ್ಲಿರಿ?”
Kannada Holy Bible: Easy-to-Read Version. All rights reserved. © 1997 Bible League International