Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 45:1-7

ಇಸ್ರೇಲಿಗೆ ಸ್ವಾತಂತ್ರ್ಯ ಕೊಡಲು ಯೆಹೋವನಿಂದ ಸೈರಸನ ಆಯ್ಕೆ

45 ತಾನು ಆರಿಸಿರುವ ಅರಸನಾದ ಸೈರಸನಿಗೆ ಯೆಹೋವನು ಹೇಳುವುದೇನೆಂದರೆ:

“ನಾನು ಸೈರಸನ ಬಲಗೈಯನ್ನು ಹಿಡಿಯುವೆನು.
    ಅರಸರುಗಳಿಂದ ಅವರ ಅಧಿಕಾರವನ್ನು ತೆಗೆದುಬಿಡುವಂತೆ ಅವನಿಗೆ ಸಹಾಯ ಮಾಡುವೆನು.
    ನಗರದ್ವಾರಗಳು ಅವನ ಮುನ್ನುಗ್ಗುವಿಕೆಯನ್ನು ನಿಲ್ಲಿಸದು.
    ನಗರದ್ವಾರವನ್ನು ತೆರೆದು ಸೈರಸನು ಒಳಗೆ ಪ್ರವೇಶಿಸುವಂತೆ ಮಾಡುವೆನು.”
ಸೈರಸನೇ, ನಿನ್ನ ಸೈನ್ಯವು ಮುನ್ನುಗ್ಗುವದು.
    ನಾನು ನಿನ್ನ ಮುಂದೆ ಹೋಗಿ ಪರ್ವತಗಳನ್ನು ನೆಲಸಮ ಮಾಡುವೆನು.
ಹಿತ್ತಾಳೆಯ ನಗರ ದ್ವಾರಗಳನ್ನು ಪುಡಿಪುಡಿ ಮಾಡುವೆನು.
    ದ್ವಾರಗಳ ಕಬ್ಬಿಣದ ಅಗುಳಿಗಳನ್ನು ತುಂಡು ಮಾಡಿ ಬಿಡುವೆನು.
ಕತ್ತಲೆಯಲ್ಲಿ ಕೂಡಿಸಿಟ್ಟಿದ್ದ ಐಶ್ವರ್ಯವನ್ನೂ
    ಗುಪ್ತವಾಗಿಟ್ಟಿದ್ದ ನಿಕ್ಷೇಪವನ್ನೂ ನಾನು ನಿನಗೆ ಕೊಡುವೆನು.
ನಾನೇ ಯೆಹೋವನೆಂದು ನೀನು ತಿಳಿಯುವಂತೆ ಇದನ್ನು ಮಾಡುವೆನು.
    ನಾನೇ ಇಸ್ರೇಲರ ದೇವರಾದ ಯೆಹೋವನು. ನಿನ್ನನ್ನು ಹೆಸರೆತ್ತಿ ಕರೆಯುತ್ತಿದ್ದೇನೆ.
ನಾನು ನನ್ನ ಸೇವಕನಾದ ಯಾಕೋಬನಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ.
    ನಾನು ಆರಿಸಿಕೊಂಡ ಜನಾಂಗವಾದ ಇಸ್ರೇಲಿಗಾಗಿ ಇದನ್ನೆಲ್ಲಾ ಮಾಡುತ್ತಿದ್ದೇನೆ.
ಸೈರಸನೇ, ನಾನು ನಿನ್ನ ಹೆಸರೆತ್ತಿ ಕರೆದಿದ್ದೇನೆ.
    ನೀನು ನನ್ನನ್ನು ತಿಳಿಯದವನಾಗಿದ್ದರೂ ನಾನು ನಿನಗೆ ಬಿರುದನ್ನು ಅನುಗ್ರಹಿಸಿದ್ದೇನೆ.
ಯೆಹೋವನೆಂಬ ನಾನೊಬ್ಬನೇ ದೇವರು.
    ನನ್ನ ಹೊರತು ಬೇರೆ ದೇವರುಗಳಿಲ್ಲ.
ನೀನು ಬಟ್ಟೆಗಳನ್ನು ಧರಿಸಿಕೊಳ್ಳುವಂತೆ ಮಾಡಿದವನು ನಾನೇ.
    ಆದರೂ ನೀನು ನನ್ನನ್ನು ತಿಳಿದಿಲ್ಲ.
ನಾನೊಬ್ಬನೇ ದೇವರೆಂದು ಎಲ್ಲರೂ ತಿಳಿದುಕೊಳ್ಳಲಿ ಎಂದು ನಾನು ಇದನ್ನೆಲ್ಲಾ ಮಾಡುತ್ತಿದ್ದೇನೆ.
ಪೂರ್ವದಿಂದ ಪಶ್ಚಿಮದ ತನಕ ಜನರೆಲ್ಲರೂ ನಾನೇ ದೇವರೆಂದೂ
    ನನ್ನ ಹೊರತು ಬೇರೆ ದೇವರಿಲ್ಲವೆಂದೂ ತಿಳಿದುಕೊಳ್ಳುವರು.
ಬೆಳಕನ್ನೂ ಕತ್ತಲೆಯನ್ನೂ ಉಂಟುಮಾಡಿದವನು ನಾನೇ.
    ಸಮಾಧಾನವನ್ನು ತರುವವನೂ ತೊಂದರೆಗಳನ್ನು ಬರಮಾಡುವವನೂ ನಾನೇ.
    ಯೆಹೋವನಾದ ನಾನೇ ಇವೆಲ್ಲವನ್ನು ಮಾಡುವೆನು.

ಕೀರ್ತನೆಗಳು 96:1-9

96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
    ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
    ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
    ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
    ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
    ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
    ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
    ಯೆಹೋವನನ್ನು ಮಹಿಮೆಪಡಿಸಿರಿ.
ಯೆಹೋವನ ಹೆಸರನ್ನು ಸ್ತುತಿಸಿರಿ.
    ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
    ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.

ಕೀರ್ತನೆಗಳು 96:10-13

10     ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
    ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
    ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
    ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
    ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.

1 ಥೆಸಲೋನಿಕದವರಿಗೆ 1

ತಂದೆಯಾದ ದೇವರಲ್ಲಿಯೂ ಮತ್ತು ಪ್ರಭುವಾದ ಯೇಸು ಕ್ರಿಸ್ತನಲ್ಲಿಯೂ ಇರುವ ಥೆಸಲೋನಿಕದವರ ಸಭೆಗೆ ಪೌಲ, ಸಿಲ್ವಾನ ಮತ್ತು ತಿಮೊಥೆ ಬರೆಯುವ ಪತ್ರ.

ದೇವರ ಕೃಪೆಯೂ ಶಾಂತಿಯೂ ನಿಮಗಿರಲಿ.

ಥೆಸಲೋನಿಕದವರ ಜೀವನ ಮತ್ತು ನಂಬಿಕೆ

ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮನ್ನು ಯಾವಾಗಲೂ ಜ್ಞಾಪಿಸಿಕೊಂಡು ನಿಮ್ಮೆಲ್ಲರ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ನಮ್ಮ ತಂದೆಯಾದ ದೇವರಿಗೆ ಪ್ರಾರ್ಥನೆ ಮಾಡುವಾಗ ನಿಮ್ಮ ನಂಬಿಕೆಯ ಮತ್ತು ಪ್ರೀತಿಯ ಫಲವಾಗಿ ಮಾಡಿದ ಕಾರ್ಯಗಳಿಗಾಗಿಯೂ ನಮ್ಮ ಪ್ರಭುವಾದ ಯೇಸು ಕ್ರಿಸ್ತನಲ್ಲಿ ನಿಮಗಿರುವ ನಿರೀಕ್ಷೆಯಿಂದ ನೀವು ದೃಢವಾಗಿರುವುದಕ್ಕಾಗಿಯೂ ನಾವು ಆತನಿಗೆ ಯಾವಾಗಲೂ ಕೃತಜ್ಞತಾಸ್ತುತಿ ಮಾಡುತ್ತೇವೆ.

ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಪ್ರೀತಿಸುತ್ತಾನೆ. ಆತನು ನಿಮ್ಮನ್ನು ತನ್ನವರನ್ನಾಗಿ ಆರಿಸಿಕೊಂಡಿದ್ದಾನೆಂಬುದೂ ನಮಗೆ ತಿಳಿದಿದೆ. ನಿಮಗೆ ಸುವಾರ್ತೆಯನ್ನು ಶಕ್ತಿಯೊಡನೆ ತಂದಿದ್ದೇವೆ. ಕೇವಲ ನುಡಿಗಳನ್ನು ಬಳಸದೆ ಅದನ್ನು ಪವಿತ್ರಾತ್ಮನೊಡನೆಯೂ ಮತ್ತು ಅದು ಸತ್ಯವೆಂಬ ನಿಶ್ಚಿತ ಜ್ಞಾನದೊಡನೆಯೂ ತಂದಿದ್ದೇವೆ. ಇದಲ್ಲದೆ ನಾವು ನಿಮ್ಮೊಡನೆ ಇದ್ದಾಗ ನಿಮಗೋಸ್ಕರ ಹೇಗೆ ಜೀವಿಸಿದ್ದೆವು ಎಂಬುದು ನಿಮಗೆ ತಿಳಿದಿದೆ. ನಿಮಗೆ ಸಹಾಯ ಮಾಡುವುದಕ್ಕಾಗಿ ಹಾಗೆ ಜೀವಿಸಿದೆವು. ನೀವು ನಮ್ಮನ್ನೂ ಪ್ರಭುವನ್ನೂ ಅನುಸರಿಸಿದಿರಿ; ಬಹಳ ಹಿಂಸೆಯನ್ನು ಅನುಭವಿಸಿದಿರಿ; ನಮ್ಮ ಉಪದೇಶವನ್ನು ನೀವು ಸಂತಸದಿಂದ ಒಪ್ಪಿಕೊಂಡಿರಿ. ಪವಿತ್ರಾತ್ಮನೇ ನಿಮಗೆ ಆ ಸಂತಸವನ್ನು ನೀಡಿದನು.

ಮಕೆದೋನಿಯ ಮತ್ತು ಅಖಾಯದಲ್ಲಿದ್ದ ನಂಬಿಗಸ್ತರಿಗೆಲ್ಲಾ ನೀವು ಮಾದರಿಯಾದಿರಿ. ಪ್ರಭುವಿನ ಉಪದೇಶವು ಮಕೆದೋನಿಯ ಮತ್ತು ಅಖಾಯದಲ್ಲಿ ನಿಮ್ಮಿಂದ ಪ್ರಚಾರವಾಯಿತು. ಇದಲ್ಲದೆ ದೇವರ ಮೇಲಿನ ನಿಮ್ಮ ನಂಬಿಕೆಯು ಎಲ್ಲಾ ಕಡೆಗಳಲ್ಲಿಯೂ ತಿಳಿದುಬಂದಿತು. ಆದುದರಿಂದ ನಿಮ್ಮ ನಂಬಿಕೆಯ ಬಗ್ಗೆ ಏನೂ ಹೇಳಬೇಕಾಗಿಲ್ಲ. ನಾವು ನಿಮ್ಮೊಡನೆ ಇದ್ದಾಗ ನೀವು ನಮ್ಮ ಬೋಧನೆಯನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿಕೊಂಡದ್ದರ ಕುರಿತಾಗಿಯೂ ವಿಗ್ರಹಾರಾಧನೆಯನ್ನು ನಿಲ್ಲಿಸಿ ಜೀವವುಳ್ಳ ಸತ್ಯದೇವರನ್ನು ಆರಾಧಿಸತೊಡಗಿದ್ದರ ಕುರಿತಾಗಿಯೂ ಅಲ್ಲಿನ ಜನರೆಲ್ಲರೂ ತಿಳಿಸುತ್ತಾರೆ. 10 ದೇವಕುಮಾರನು ಪರಲೋಕದಿಂದ ಬರುವುದನ್ನು ಎದುರುನೋಡುವುದಕ್ಕಾಗಿ ನೀವು ಹಾಗೆ ಮಾಡಿದಿರಿ. ದೇವರೇ ಆ ಕುಮಾರನನ್ನು ಸತ್ತವರೊಳಗಿಂದ ಜೀವಂತವಾಗಿ ಮೇಲಕ್ಕೆಬ್ಬಿಸಿದನು. ಆತನೇ ಯೇಸು. ಮುಂದೆ ಬರುವ ದೇವರ ಕೋಪದ ತೀರ್ಪಿನಿಂದ ನಮ್ಮನ್ನು ರಕ್ಷಿಸುವವನು ಆತನೇ.

ಮತ್ತಾಯ 22:15-22

ಯೇಸುವನ್ನು ವಂಚಿಸಲು ಯೆಹೂದ್ಯ ನಾಯಕರ ಪ್ರಯತ್ನ

(ಮಾರ್ಕ 12:13-17; ಲೂಕ 20:20-26)

15 ಆಗ ಫರಿಸಾಯರು, ಅಲ್ಲಿಂದ ಹೊರಟುಹೋಗಿ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಉಪಾಯಗಳನ್ನು ಮಾಡಿಕೊಂಡರು. 16 ಫರಿಸಾಯರು ಯೇಸುವನ್ನು ವಂಚಿಸುವುದಕ್ಕೆ ಕೆಲವರನ್ನು ಕಳುಹಿಸಿದರು. ಅವರಲ್ಲಿ ಕೆಲವರು ಫರಿಸಾಯರ ಹಿಂಬಾಲಕರಾಗಿದ್ದರು. ಇನ್ನು ಕೆಲವರು ಯೆಹೂದ್ಯರ ರಾಜಕೀಯ ಪಂಗಡಕ್ಕೆ ಸೇರಿದವರಾಗಿದ್ದರು. ಈ ಜನರು, “ಬೋಧಕನೇ, ನೀನು ಯಥಾರ್ಥವಂತನೆಂದು ನಾವು ಬಲ್ಲೆವು. ನೀನು ದೇವರ ಮಾರ್ಗದ ಕುರಿತು ಸತ್ಯವನ್ನೇ ಬೋಧಿಸುವೆ ಎಂಬುದು ನಮಗೆ ಗೊತ್ತಿದೆ. ಬೇರೆಯವರು ನಿನ್ನ ವಿಷಯವಾಗಿ ಏನೇ ಯೋಚಿಸಿದರೂ ನೀನು ಹೆದರುವುದಿಲ್ಲ. ನೀನು ಮುಖದಾಕ್ಷಿಣ್ಯ ಮಾಡುವುದಿಲ್ಲ. 17 ಆದ್ದರಿಂದ ನಿನ್ನ ಅಭಿಪ್ರಾಯವನ್ನು ತಿಳಿಸು. ಸೀಸರನಿಗೆ ತೆರಿಗೆ ಕೊಡುವುದು ಸರಿಯೋ ಅಥವಾ ತಪ್ಪೋ?” ಎಂದು ಕೇಳಿದರು.

18 ಈ ಜನರ ಕುತಂತ್ರವು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “ನೀವು ಕಪಟಿಗಳು! ನನ್ನನ್ನು ತಪ್ಪಿನಲ್ಲಿ ಸಿಕ್ಕಿಸಲು ಏಕೆ ಪ್ರಯತ್ನಿಸುತ್ತೀರಿ? 19 ತೆರಿಗೆಗಾಗಿ ಕೊಡುವ ಒಂದು ನಾಣ್ಯವನ್ನು ನನಗೆ ತೋರಿಸಿರಿ” ಎಂದನು. ಜನರು ಒಂದು ಬೆಳ್ಳಿಯ ನಾಣ್ಯವನ್ನು ಆತನಿಗೆ ತೋರಿಸಿದರು. 20 ಆಗ ಆತನು, “ನಾಣ್ಯದ ಮೇಲೆ ಯಾರ ಮುಖಚಿತ್ರವಿದೆ ಮತ್ತು ಯಾರ ಹೆಸರಿದೆ?” ಎಂದು ಕೇಳಿದನು.

21 ಜನರು, “ಅದು ಸೀಸರನ ಮುಖಚಿತ್ರ ಮತ್ತು ಹೆಸರು” ಎಂದು ಉತ್ತರಕೊಟ್ಟರು.

ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಅಂದನು.

22 ಯೇಸು ಹೇಳಿದ್ದನ್ನು ಕೇಳಿದ ಆ ಜನರು ಆಶ್ಚರ್ಯಚಕಿತರಾಗಿ ಅಲ್ಲಿಂದ ಹೊರಟುಹೋದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International