Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 96:1-9

96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
    ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
    ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
    ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
    ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
    ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
    ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
    ಯೆಹೋವನನ್ನು ಮಹಿಮೆಪಡಿಸಿರಿ.
ಯೆಹೋವನ ಹೆಸರನ್ನು ಸ್ತುತಿಸಿರಿ.
    ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
    ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.

ಕೀರ್ತನೆಗಳು 96:10-13

10     ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
    ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
    ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
    ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
    ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.

ಧರ್ಮೋಪದೇಶಕಾಂಡ 17:14-20

ಅರಸನನ್ನು ಆರಿಸುವ ರೀತಿ

14 “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಪ್ರವೇಶಿಸುವಿರಿ. ಆ ಸ್ಥಳಗಳನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ನೆಲೆಸುವಿರಿ. ಆಗ ನೀವು ‘ನಮ್ಮ ಸುತ್ತಲಿನ ದೇಶದಲ್ಲಿರುವಂತೆಯೇ ನಮಗೂ ಒಬ್ಬ ರಾಜನು ಬೇಕು’ ಎಂದು ಹೇಳುವಿರಿ. 15 ಅಂಥ ಸಮಯದಲ್ಲಿ ಯೆಹೋವನು ಆರಿಸಿಕೊಂಡವನನ್ನೇ ನೀವು ರಾಜನನ್ನಾಗಿ ಆರಿಸಿಕೊಳ್ಳಬೇಕು; ಅವನು ನಿಮ್ಮ ಸ್ವಂತ ಜನರಲ್ಲಿ ಒಬ್ಬನಾಗಿರಬೇಕು; ಪರದೇಶಸ್ಥನನ್ನು ನೀವು ನಿಮ್ಮ ರಾಜನನ್ನಾಗಿ ಆರಿಸಬಾರದು. 16 ಅರಸನು ತನ್ನ ಉಪಯೋಗಕ್ಕಾಗಿ ಹೆಚ್ಚೆಚ್ಚಾಗಿ ಕುದುರೆಗಳನ್ನು ಖರೀದಿಸಬಾರದು; ಜನರನ್ನು ಈಜಿಪ್ಟಿಗೆ ಕಳುಹಿಸಿ ಅಲ್ಲಿಂದ ಹೆಚ್ಚುಹೆಚ್ಚು ಕುದುರೆಗಳನ್ನು ತರಿಸಬಾರದು; ಯಾಕೆಂದರೆ, ‘ನೀವು ಆ ಮಾರ್ಗದಲ್ಲಿ ಹಿಂದಕ್ಕೆ ಹೋಗಲೇಬಾರದು’ ಎಂದು ಯೆಹೋವನು ಹೇಳಿದ್ದಾನೆ. 17 ಅರಸನಿಗೆ ಮಿತಿಮೀರಿ ಪತ್ನಿಯರು ಇರಬಾರದು. ಯಾಕೆಂದರೆ ಅವರು ಅರಸನನ್ನು ಯೆಹೋವನ ಮಾರ್ಗದಲ್ಲಿ ನಡೆಯದಂತೆ ಮಾಡಿ ಬೇರೆ ಕಡೆಗೆ ತಿರುಗಿಸುವರು. ರಾಜನು ಬೆಳ್ಳಿಬಂಗಾರಗಳನ್ನು ಶೇಖರಿಸಿ ತನ್ನನ್ನು ಐಶ್ವರ್ಯವಂತನನ್ನಾಗಿ ಮಾಡಿಕೊಳ್ಳಬಾರದು.

18 “ರಾಜನು ರಾಜ್ಯವಾಳಲು ಆರಂಭಿಸುವಾಗ, ಯಾಜಕರ ಮತ್ತು ಲೇವಿಯರ ಪುಸ್ತಕಗಳಿಂದ ಧರ್ಮಶಾಸ್ತ್ರವನ್ನು ತನಗಾಗಿ ಪುಸ್ತಕ ರೂಪದಲ್ಲಿ ಬರೆಸಿಟ್ಟುಕೊಳ್ಳಬೇಕು. 19 ಅವನು ಆ ಪುಸ್ತಕವನ್ನು ತನ್ನೊಂದಿಗಿಟ್ಟುಕೊಂಡು ಅದನ್ನು ತನ್ನ ಜೀವಮಾನ ಪೂರ್ತಿ ಪದೇಪದೇ ಓದುತ್ತಿರಬೇಕು. ಯಾಕೆಂದರೆ ಧರ್ಮಶಾಸ್ತ್ರವು ಆಜ್ಞಾಪಿಸುವ ಪ್ರತಿಯೊಂದಕ್ಕೂ ಸಂಪೂರ್ಣವಾಗಿ ವಿಧೇಯನಾಗಲು ಅವನು ಕಲಿತುಕೊಳ್ಳಬೇಕು. 20 ಆಗ ಅರಸನು ತನ್ನ ಪ್ರಜೆಗಳಿಗಿಂತ ತಾನು ಉತ್ತಮನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ಧರ್ಮಶಾಸ್ತ್ರಕ್ಕೆ ವಿಮುಖನಾಗದೆ ಅದನ್ನು ಚಾಚೂತಪ್ಪದೆ ಅನುಸರಿಸುವನು. ಆಗ ರಾಜನೂ ಅವನ ಸಂತತಿಯವರೂ ಇಸ್ರೇಲ್ ರಾಜ್ಯವನ್ನು ಬಹುಕಾಲ ಆಳುವರು.

1 ಪೇತ್ರನು 5:1-5

ದೇವರ ಮಂದೆ

ನಿಮ್ಮ ಸಭಾಹಿರಿಯರಿಗೆ ನಾನು ಈಗ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾನೂ ಒಬ್ಬ ಹಿರಿಯನಾಗಿದ್ದೇನೆ. ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ನೋಡಿದ್ದೇನೆ. ನಮಗೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ನಾನೂ ಪಾಲುಗಾರನಾಗಿದ್ದೇನೆ. ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ. ನೀವು ಜವಾಬ್ದಾರರಾಗಿರುವ ಆ ಮಂದೆಯ ಮೇಲೆ ದಬ್ಬಾಳಿಕೆ ಮಾಡಬೇಡಿ. ನೀವು ಅವರಿಗೆ ಉತ್ತಮ ಮಾದರಿಯಾಗಿರಿ. ಪ್ರಧಾನ ಕುರುಬನು (ಕ್ರಿಸ್ತನು) ಪ್ರತ್ಯಕ್ಷನಾದಾಗ, ನಿಮಗೆ ಕಿರೀಟವು ಲಭಿಸುವುದು. ಮಹಾ ಪ್ರಭಾವವನ್ನು ಹೊಂದಿರುವ ಆ ಕಿರೀಟವು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದೇ ಇಲ್ಲ.

ಯುವಕರೇ, ನಾನು ನಿಮಗೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನೀವು ಹಿರಿಯರಿಗೆ ಅಧೀನರಾಗಿರಬೇಕು. ನೀವೆಲ್ಲರೂ ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಬೇಕು.

“ದೇವರು ಅಹಂಕಾರಿಗಳಿಗೆ ವಿರುದ್ಧನಾಗಿದ್ದಾನೆ.
    ಆದರೆ ಆತನು ನಮ್ರತೆಯಿಂದ ಇರುವ ಜನರಿಗೆ ಕೃಪೆಯನ್ನು ದಯಪಾಲಿಸುವನು.”(A)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International