Revised Common Lectionary (Complementary)
96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
2 ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
3 ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
4 ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
5 ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
6 ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
7 ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
ಯೆಹೋವನನ್ನು ಮಹಿಮೆಪಡಿಸಿರಿ.
8 ಯೆಹೋವನ ಹೆಸರನ್ನು ಸ್ತುತಿಸಿರಿ.
ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
9 ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.
10 ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.
ಮೀಕನ ವಿಗ್ರಹಗಳು
17 ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಮೀಕ ಎಂಬ ಮನುಷ್ಯನಿದ್ದನು. 2 ಮೀಕನು ತನ್ನ ತಾಯಿಗೆ, “ಅಮ್ಮಾ, ಯಾರೋ ನಿನ್ನ ಇಪ್ಪತ್ತೆಂಟು ತೊಲೆ ಬೆಳ್ಳಿಯನ್ನು ಕದ್ದಿದ್ದರಲ್ಲಾ, ನಿನಗೆ ನೆನಪಿದೆಯಾ? ನೀನು ಅದರ ಸಲುವಾಗಿ ಶಾಪಹಾಕುವದನ್ನು ನಾನು ಕೇಳಿದ್ದೆ. ನಾನು ಅದನ್ನು ತೆಗೆದುಕೊಂಡಿದ್ದೆ. ಇಗೋ ಆ ಬೆಳ್ಳಿ ನನ್ನ ಹತ್ತಿರ ಇದೆ” ಎಂದು ಹೇಳಿದನು.
ಅವನ ತಾಯಿಯು ಅವನಿಗೆ, “ಮಗನೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಎಂದು ಹರಸಿದಳು.
3 ಮೀಕನು ಇಪ್ಪತ್ತೆಂಟು ತೊಲೆ ಬೆಳ್ಳಿಯನ್ನು ತನ್ನ ತಾಯಿಗೆ ಕೊಟ್ಟನು. ಆಗ ಅವಳು, “ನಾನು ಈ ಬೆಳ್ಳಿಯನ್ನು ಯೆಹೋವನಿಗೆ ವಿಶೇಷ ಹರಕೆಯಾಗಿ ಕೊಡುವೆನು. ಇದನ್ನು ನಾನು ನನ್ನ ಮಗನಿಗೆ ಕೊಡುವೆನು, ಅವನು ಅದರಿಂದ ಒಂದು ವಿಗ್ರಹವನ್ನು ಮಾಡಿಸಿ ಅದಕ್ಕೆ ಬೆಳ್ಳಿಯ ಹೊದಿಕೆಯನ್ನು ಹಾಕಿಸುವನು” ಎಂದು ಹೇಳಿ ಆ ಬೆಳ್ಳಿಯನ್ನು ಮಗನ ಕೈಯಲ್ಲಿ ಕೊಟ್ಟಳು.
4 ಆದರೆ ಮೀಕನು ಆ ಬೆಳ್ಳಿಯನ್ನು ತನ್ನ ತಾಯಿಗೆ ಹಿಂದಿರುಗಿಸಿದನು. ಅವಳು ಸುಮಾರು ಐದು ತೊಲೆಯಷ್ಟು ಬೆಳ್ಳಿಯ ನಾಣ್ಯಗಳನ್ನು ಒಬ್ಬ ಅಕ್ಕಸಾಲಿಗನಿಗೆ ಕೊಟ್ಟಳು. ಆ ಅಕ್ಕಸಾಲಿಗನು ಅದರಿಂದ ಒಂದು ವಿಗ್ರಹವನ್ನು ಮಾಡಿ ಅದಕ್ಕೆ ಬೆಳ್ಳಿಯ ಹೊದಿಕೆ ಹಾಕಲು ಉಪಯೋಗಿಸಿದನು. ಆ ವಿಗ್ರಹವನ್ನು ಮೀಕನ ಮನೆಯಲ್ಲಿ ಇಡಲಾಯಿತು. 5 ವಿಗ್ರಹಗಳನ್ನು ಪೂಜಿಸುವುದಕ್ಕಾಗಿ ಮೀಕನಿಗೆ ಒಂದು ಮಂದಿರವಿತ್ತು. ಮೀಕನು ಏಫೋದನ್ನೂ ವಿಗ್ರಹಗಳನ್ನೂ ಪೂಜಿಸಲು ತನ್ನ ಒಬ್ಬ ಮಗನನ್ನು ಅರ್ಚಕನನ್ನಾಗಿ ನೇಮಿಸಿದನು. 6 (ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಪ್ರತಿಯೊಬ್ಬರೂ ತಮಗೆ ಸರಿ ತೋರಿದಂತೆ ನಡೆದುಕೊಳ್ಳುತ್ತಿದ್ದರು.)
9 ನಾನು ಸಭೆಗೆ ಒಂದು ಪತ್ರವನ್ನು ಬರೆದೆನು. ಆದರೆ ನಾವು ಹೇಳಿದುದನ್ನು ದಿಯೊತ್ರೇಫನು ಕೇಳುವುದಿಲ್ಲ. ಅವನು ತಾನೇ ಅವರ ನಾಯಕನಾಗಿರಬೇಕೆಂದು ಯಾವಾಗಲೂ ಇಚ್ಛಿಸುತ್ತಾನೆ. 10 ನಾನು ಬಂದಾಗ, ದಿಯೊತ್ರೇಫನು ಮಾಡುತ್ತಿರುವುದರ ಬಗ್ಗೆ ತಿಳಿಸುತ್ತೇನೆ. ಅವನು ನಮ್ಮನ್ನು ಕುರಿತು ಸುಳ್ಳನ್ನೂ ಕೆಟ್ಟ ಸಂಗತಿಗಳನ್ನೂ ಹೇಳುತ್ತಾನೆ. ಆದರೆ ಅಷ್ಟೇ ಅಲ್ಲ! ಕ್ರಿಸ್ತನ ಸೇವೆಮಾಡುತ್ತಿರುವ ಆ ಸಹೋದರರಿಗೆ ಸಹಾಯಮಾಡಲು ಅವನು ಒಪ್ಪುವುದಿಲ್ಲ. ಅಲ್ಲದೆ ಆ ಸಹೋದರರಿಗೆ ಸಹಾಯ ಮಾಡಲಿಚ್ಛಿಸುವ ಜನರನ್ನೂ ಅವನು ತಡೆಯುತ್ತಾನೆ. ಆ ಜನರು ಸಭೆಯನ್ನು ಬಿಟ್ಟುಹೋಗುವಂತೆ ಅವನು ಮಾಡುತ್ತಾನೆ.
11 ನನ್ನ ಪ್ರಿಯ ಸ್ನೇಹಿತನೇ, ಕೆಟ್ಟದ್ದನ್ನು ಅನುಸರಿಸಬೇಡ; ಒಳ್ಳೆಯದನ್ನೇ ಅನುಸರಿಸು. ಒಳ್ಳೆಯದನ್ನು ಮಾಡುವವನು ದೇವರಿಗೆ ಸೇರಿದವನಾಗಿದ್ದಾನೆ. ಆದರೆ ಕೆಟ್ಟದ್ದನ್ನು ಮಾಡುವವನು ದೇವರನ್ನು ಎಂದೂ ತಿಳಿಯದವನಾಗಿದ್ದಾನೆ.
12 ದೇಮೇತ್ರಿಯನ ಬಗ್ಗೆ ಜನರೆಲ್ಲರೂ ಒಳ್ಳೆಯ ಸಂಗತಿಗಳನ್ನು ಹೇಳುತ್ತಾರೆ. ಅವರು ಹೇಳುವುದನ್ನು ಸತ್ಯವೂ ಅಂಗೀಕರಿಸುತ್ತದೆ. ಅವನನ್ನು ಕುರಿತು ನಾವೂ ಸಹ ಒಳ್ಳೆಯದನ್ನು ಹೇಳುತ್ತೇವೆ. ನಾವು ಹೇಳುವುದು ನಿಜವೆಂಬುದು ನಿನಗೆ ತಿಳಿದಿದೆ.
Kannada Holy Bible: Easy-to-Read Version. All rights reserved. © 1997 Bible League International