Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯೆಶಾಯ 25:1-9

ದೇವರಿಗೆ ಸ್ತೋತ್ರಗಾನ

25 ಯೆಹೋವನೇ, ನೀನೇ ನನ್ನ ದೇವರು.
ನಿನ್ನನ್ನು ಗೌರವಿಸಿ ನಿನ್ನ ನಾಮವನ್ನು ಸ್ತುತಿಸುವೆನು.
    ನೀನು ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ಬಹಳ ಕಾಲದ ಹಿಂದೆ ನೀನು ಹೇಳಿರುವ ವಿಷಯಗಳು ಸತ್ಯವೇ ಸರಿ.
    ನೀನು ಮುಂತಿಳಿಸಿದಂತೆಯೇ ಎಲ್ಲವೂ ಸಂಭವಿಸಿದವು.
ನೀನು ವಿದೇಶದ ಪಟ್ಟಣವನ್ನು ಕೆಡವಿಹಾಕಿರುವೆ.
    ಆ ಪಟ್ಟಣವು ಮಹಾಗೋಡೆಗಳಿಂದ ಸಂರಕ್ಷಿಸಲ್ಪಟ್ಟದ್ದಾಗಿತ್ತು.
    ಆದರೆ ಈಗ ಅದು ಕೇವಲ ಕಲ್ಲುಗಳ ರಾಶಿ.
ಅರಮನೆಯು ಕೆಡವಲ್ಪಟ್ಟಿದೆ.
    ಅದನ್ನು ತಿರುಗಿ ಕಟ್ಟಲು ಸಾಧ್ಯವೇ ಇಲ್ಲ.
ಬಲಾಢ್ಯ ದೇಶಗಳ ಜನರು ನಿನ್ನನ್ನು ಸನ್ಮಾನಿಸುವರು.
    ಬಲಿಷ್ಠ ನಗರಗಳ ಬಲಶಾಲಿಗಳು ನಿನಗೆ ಭಯಪಡುವರು.
ಯೆಹೋವನೇ, ನೀನೇ ನಮ್ಮ ಆಶ್ರಯವು. ಬಡವರಿಗೆ ನೀನೇ ಆಧಾರ.
    ಅವರ ಸಮಸ್ಯೆಗಳು ಅವರನ್ನು ಕಷ್ಟಕ್ಕೆ ಗುರಿಪಡಿಸುವವು. ಆದರೆ ನೀನು ಅವರನ್ನು ಸಂರಕ್ಷಿಸುವೆ.
    ಯೆಹೋವನೇ, ಒಂದು ಮನೆಯ ಜನರನ್ನು ಪ್ರವಾಹದಿಂದಲೂ,
    ಬಿಸಿಲಿನ ತಾಪದಿಂದಲೂ ಕಾಪಾಡುವಂತೆ ನೀನಿರುವೆ.
ಮುಂದಿನ ತೊಂದರೆಗಳು ಬಿರುಗಾಳಿಯಂತೆಯೂ ಮಳೆಯಂತೆಯೂ ಇವೆ.
    ಮಳೆಯು ಗೋಡೆಗೆ ಬಡಿದು ಕೆಳಗೆ ಇಳಿಯುವದು. ಆದರೆ ಮನೆಯೊಳಗಿರುವವರಿಗೆ ಹಾನಿಯೇ ಆಗದು.
ವೈರಿಯು ಆರ್ಭಟಿಸುತ್ತಾ ಗದ್ದಲ ಮಾಡುತ್ತಾನೆ.
    ಆ ಭಯಂಕರ ಶತ್ರುವು ಯುದ್ಧಕ್ಕೆ ಬಾ ಎಂದು ಸವಾಲು ಹಾಕುತ್ತಾನೆ.
    ಆದರೆ ದೇವರೇ, ನೀನು ಅವನನ್ನು ತಡೆಯುವೆ.
ಬೇಸಿಗೆ ಕಾಲದಲ್ಲಿ ಮರುಭೂಮಿಯಲ್ಲಿರುವ ಸಸಿಗಳು ಬಾಡಿಹೋಗಿ ನೆಲದ ಮೇಲೆ ಬಿದ್ದುಹೋಗುವವು.
    ಅದೇ ರೀತಿಯಲ್ಲಿ ನೀನು ವೈರಿಯನ್ನು ಸೋಲಿಸಿ ಅವನು ಮೊಣಕಾಲೂರುವಂತೆ ಮಾಡುವೆ.
ಕಾರ್ಮುಗಿಲು ಬೇಸಿಗೆಯ ತಾಪವನ್ನು ನಿವಾರಿಸುವದು.
    ಅದೇ ರೀತಿಯಲ್ಲಿ ನೀನು ಶತ್ರುವಿನ ಆರ್ಭಟವನ್ನು ನಿಲ್ಲಿಸುವೆ.

ಸೇವಕರಿಗಾಗಿ ದೇವರ ಔತಣ

ಆ ಸಮಯದಲ್ಲಿ, ಸರ್ವಶಕ್ತನಾದ ಯೆಹೋವನು ಎಲ್ಲಾ ಜನರಿಗಾಗಿ ಈ ಪರ್ವತದ ಮೇಲೆ ಔತಣವನ್ನು ಏರ್ಪಡಿಸುವನು. ಅದು ಉತ್ಕೃಷ್ಟವಾದ ದ್ರಾಕ್ಷಾರಸದಿಂದಲೂ ಮೃಷ್ಠಾನ್ನದಿಂದಲೂ ಕೂಡಿರುವದು.

ಆದರೆ ಎಲ್ಲಾ ಜನಾಂಗಗಳನ್ನು ಮತ್ತು ಜನರನ್ನು ಮುಚ್ಚುವ ಒಂದು ಮುಸುಕು ಇದೆ. ಆ ಮುಸುಕು ಯಾವದೆಂದರೆ ಮರಣ. ಆದರೆ ಮರಣವು ಎಂದೆಂದಿಗೂ ನಾಶಮಾಡಲ್ಪಡುವದು. ನನ್ನ ಒಡೆಯನಾಗಿರುವ ಯೆಹೋವನು ಪ್ರತೀ ಮುಖದಲ್ಲಿರುವ ಕಣ್ಣೀರನ್ನು ಒರೆಸುವನು. ಹಿಂದೆ ಆತನ ಜನರೆಲ್ಲಾ ದುಃಖಕ್ಕೆ ಒಳಗಾಗಿದ್ದರು. ಆದರೆ ದೇವರು ಆ ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕುವನು. ಇವೆಲ್ಲಾ ಯೆಹೋವನು ಹೇಳಿದಂತೆಯೇ ಸಂಭವಿಸುವದು.

ಆ ಸಮಯದಲ್ಲಿ ಜನರು,
    “ನಮ್ಮ ದೇವರು ಇಲ್ಲಿದ್ದಾನೆ.
ಆತನಿಗಾಗಿಯೇ ನಾವು ಕಾಯುತ್ತಿದ್ದೆವು.
    ಆತನು ನಮ್ಮನ್ನು ರಕ್ಷಿಸಲು ಬಂದಿದ್ದಾನೆ.
ನಾವು ನಮ್ಮ ದೇವರಾದ ಯೆಹೋವನಿಗಾಗಿ ಕಾಯುತ್ತಿದ್ದೆವು.
    ಆತನು ನಮ್ಮನ್ನು ರಕ್ಷಿಸುವಾಗ ನಾವು ಹರ್ಷಭರಿತರಾಗಿ ಸಂತೋಷಿಸುವೆವು” ಎಂದು ಹೇಳುವರು.

ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

ಫಿಲಿಪ್ಪಿಯವರಿಗೆ 4:1-9

ಮಾಡಬೇಕಾದ ಕಾರ್ಯಗಳು

ನನ್ನ ಸಹೋದರ ಸಹೋದರಿಯರೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮ್ಮನ್ನು ನೋಡಬಯಸುತ್ತೇನೆ. ನೀವು ನನಗೆ ಆನಂದವನ್ನು ಉಂಟುಮಾಡಿ, ನಿಮ್ಮ ವಿಷಯದಲ್ಲಿ ನಾನು ಹೆಮ್ಮಪಡುವಂತೆ ಮಾಡಿದ್ದೀರಿ. ನಾನು ನಿಮಗೆ ಹೇಳಿದಂತೆ ಪ್ರಭುವನ್ನು ಅನುಸರಿಸಿರಿ.

ಪ್ರಭುವಿನಲ್ಲಿ ಒಂದೇ ಮನಸ್ಸನ್ನು ಹೊಂದಿರಬೇಕೆಂದು ನಾನು ಯವೋದ್ಯಳನ್ನೂ ಸಂತುಕೆಯನ್ನೂ ಕೇಳಿಕೊಳ್ಳುತ್ತೇನೆ. ನನ್ನ ಸ್ನೇಹಿತನೇ, ನೀನು ನನ್ನ ಜೊತೆಕೆಲಸದವನಾಗಿ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿರುವುದರಿಂದ ಈ ಸ್ತ್ರೀಯರಿಗೂ ನೀನು ಸಹಾಯ ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇನೆ. ಈ ಸ್ತ್ರೀಯರು ನನ್ನೊಂದಿಗೆ ಸುವಾರ್ತೆಗೋಸ್ಕರ ಸೇವೆ ಮಾಡಿದ್ದಾರೆ. ನನ್ನೊಂದಿಗೆ ಸೇವೆ ಮಾಡುತ್ತಿದ್ದ ಕ್ಲೇಮೆನ್ಸ್ ಮತ್ತು ಇತರ ಸೇವಕರೊಡನೆ ಈ ಸ್ತ್ರೀಯರು ಸೇವೆ ಮಾಡಿದ್ದಾರೆ. ಅವರ ಹೆಸರುಗಳು ಜೀವಬಾಧ್ಯರ ಪುಸಕ್ತದಲ್ಲಿ[a] ಬರೆಯಲ್ಪಟ್ಟಿವೆ.

ಯಾವಾಗಲೂ ಪ್ರಭುವಿನಲ್ಲಿ ಆನಂದಿಸಿರಿ; ಆನಂದಪಡಿರಿ ಎಂದು ಮತ್ತೆ ಹೇಳುತ್ತೇನೆ.

ನಿಮ್ಮ ಮೃದುಸ್ವಭಾವವನ್ನೂ ಕರುಣೆಯನ್ನೂ ಜನರೆಲ್ಲರೂ ನೋಡುವಂತಾಗಲಿ. ಪ್ರಭುವು ಬೇಗನೆ ಬರುತ್ತಾನೆ. ಯಾವುದರ ಬಗ್ಗೆಯೂ ಚಿಂತಿಸಬೇಡಿ. ಆದರೆ ಪ್ರಾರ್ಥನೆ ಮಾಡುತ್ತಾ ನಿಮ್ಮ ಅಗತ್ಯತೆಗಳಿಗೆಲ್ಲಾ ದೇವರಲ್ಲಿ ವಿಜ್ಞಾಪಿಸಿರಿ. ನೀವು ಪ್ರಾರ್ಥನೆ ಮಾಡುವಾಗಲೆಲ್ಲಾ ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ. ದೇವಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನೂ ಮನಸ್ಸುಗಳನ್ನೂ ಕಾಯುವುದು. ದೇವರು ಕೊಡುವ ಆ ಶಾಂತಿಯು ನಾವು ಅರ್ಥಮಾಡಿಕೊಳ್ಳಲಾಗದಷ್ಟು ಅಗಮ್ಯವಾಗಿದೆ.

ಸಹೋದರ ಸಹೋದರಿಯರೇ, ಒಳ್ಳೆಯದಾದ ಮತ್ತು ಸ್ತುತಿಗೆ ಯೋಗ್ಯವಾದ ಸಂಗತಿಗಳ ಬಗ್ಗೆ ಆಲೋಚಿಸಿರಿ. ಸತ್ಯವಾದ, ಮಾನ್ಯವಾದ, ನ್ಯಾಯವಾದ, ಶುದ್ಧವಾದ, ಸುಂದರವಾದ ಮತ್ತು ಗೌರವಯುತವಾದ ವಿಷಯಗಳ ಬಗ್ಗೆ ಆಲೋಚಿಸಿರಿ. ನೀವು ನನ್ನಿಂದ ಕಲಿತುಕೊಂಡದ್ದನ್ನು, ಹೊಂದಿಕೊಂಡದ್ದನ್ನು, ಕೇಳಿದ್ದನ್ನು ಮತ್ತು ಕಣ್ಣಾರೆ ಕಂಡದ್ದನ್ನು ಮಾಡಿರಿ. ಆಗ, ಶಾಂತಿಯನ್ನು ಕೊಡುವ ದೇವರು ನಿಮ್ಮೊಂದಿಗಿರುವನು.

ಮತ್ತಾಯ 22:1-14

ಊಟಕ್ಕೆ ಆಹ್ವಾನಿಸಲ್ಪಟ್ಟಿದ್ದ ಜನರ ಕುರಿತಾದ ಸಾಮ್ಯ

(ಲೂಕ 14:15-24)

22 ಯೇಸು ಬೇರೆ ಕೆಲವು ವಿಷಯಗಳನ್ನು ಸಾಮ್ಯಗಳ ಮೂಲಕವಾಗಿ ಜನರಿಗೆ ತಿಳಿಸಿದನು: “ಪರಲೋಕರಾಜ್ಯವು ತನ್ನ ಮಗನ ಮದುವೆಯನ್ನು ಸಿದ್ಧಪಡಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ. ಆ ರಾಜನು ಕೆಲವು ಜನರನ್ನು ಔತಣಕ್ಕೆ ಆಹ್ವಾನಿಸಿದನು. ಅಡಿಗೆ ಸಿದ್ಧವಾದ ಬಳಿಕ ರಾಜನು ತನ್ನ ಸೇವಕರ ಮೂಲಕ ಆ ಜನರಿಗೆ ತಿಳಿಸಿದನು. ಆದರೆ ಅವರು ಔತಣಕ್ಕೆ ಬರಲಿಲ್ಲ.

“ಆಮೇಲೆ ರಾಜನು ಇನ್ನೂ ಕೆಲವು ಸೇವಕರನ್ನು ಕರೆದು, ‘ಈ ಜನರನ್ನು ನಾನು ಆಗಲೇ ಆಹ್ವಾನಿಸಿದ್ದೇನೆ. ಆದ್ದರಿಂದ ಈಗ ಔತಣವು ಸಿದ್ಧವಾಗಿದೆ. ಅಡಿಗೆಗಾಗಿ ಕೊಬ್ಬಿದ ಎತ್ತುಗಳನ್ನು ಮತ್ತು ಕರುಗಳನ್ನು ಕೊಯ್ಸಿದ್ದೇನೆ. ಎಲ್ಲವೂ ಸಿದ್ಧವಾಗಿದೆ. ಮದುವೆ ಔತಣಕ್ಕೆ ಬನ್ನಿ ಎಂದು ಅವರಿಗೆ ತಿಳಿಸಿ’ ಎಂದು ಹೇಳಿ ಕಳುಹಿಸಿದನು.

“ಅಂತೆಯೇ ಸೇವಕರು ಹೋಗಿ ಆ ಜನರಿಗೆ ತಿಳಿಸಿದರು. ಆದರೆ ಅವರು ಸೇವಕರ ಮಾತಿಗೆ ಕಿವಿಗೊಡಲಿಲ್ಲ. ಒಬ್ಬನು ತನ್ನ ಹೊಲದಲ್ಲಿ ಕೆಲಸ ಮಾಡಲು ಹೊರಟುಹೋದನು. ಬೇರೊಬ್ಬನು ತನ್ನ ವ್ಯಾಪಾರಕ್ಕಾಗಿ ಹೊರಟುಹೋದನು. ಇನ್ನು ಕೆಲವರು ಆ ಸೇವಕರನ್ನು ಹಿಡಿದು, ಹೊಡೆದು ಕೊಂದುಹಾಕಿದರು. ಆಗ ರಾಜನು ಬಹು ಕೋಪಗೊಂಡು ತನ್ನ ಸೈನ್ಯವನ್ನು ಕಳುಹಿಸಿ ಆ ಕೊಲೆಗಾರರನ್ನು ಕೊಲ್ಲಿಸಿದನು ಮತ್ತು ಅವರ ಪಟ್ಟಣವನ್ನು ಸುಟ್ಟುಹಾಕಿಸಿದನು.

“ಬಳಿಕ ರಾಜನು ತನ್ನ ಸೇವಕರಿಗೆ, ‘ಮದುವೆ ಊಟ ಸಿದ್ಧವಾಗಿದೆ. ನಾನು ಆಹ್ವಾನಿಸಿದ್ದ ಜನರು ಊಟಕ್ಕೆ ಬರುವಷ್ಟು ಒಳ್ಳೆಯವರಾಗಿರಲಿಲ್ಲ. ಆದ್ದರಿಂದ ಬೀದಿಯ ಮೂಲೆಮೂಲೆಗಳಿಗೆ ಹೋಗಿ ನೀವು ಕಂಡ ಜನರನ್ನೆಲ್ಲ ಔತಣಕ್ಕೆ ಆಹ್ವಾನಿಸಿರಿ’ ಎಂದನು. 10 ಅಂತೆಯೇ ಸೇವಕರು ಬೀದಿಬೀದಿಗಳಿಗೆ ಹೋಗಿ ತಾವು ಕಂಡ ಜನರನ್ನೆಲ್ಲಾ ಒಳ್ಳೆಯವರು, ಕೆಟ್ಟವರು ಎನ್ನದೆ ಒಟ್ಟುಗೂಡಿಸಿ ಊಟ ಸಿದ್ಧವಾಗಿದ್ದ ಸ್ಥಳಕ್ಕೆ ಕರೆತಂದರು. ಆ ಸ್ಥಳವು ಜನರಿಂದ ತುಂಬಿಹೋಯಿತು.

11 “ಆಗ ರಾಜನು ಜನರನ್ನೆಲ್ಲ ನೋಡಲು ಒಳಗೆ ಬಂದನು. ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲದ ಒಬ್ಬ ಮನುಷ್ಯನನ್ನು ರಾಜನು ಕಂಡು, 12 ‘ಸ್ನೇಹಿತನೇ, ನೀನು ಒಳಗೆ ಹೇಗೆ ಬಂದೆ? ನೀನು ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲವಲ್ಲಾ’ ಅಂದನು. ಆದರೆ ಅವನು ಉತ್ತರ ನೀಡಲಿಲ್ಲ. 13 ಆಗ ರಾಜನು ಕೆಲವು ಸೇವಕರಿಗೆ, ‘ಇವನ ಕೈಕಾಲು ಕಟ್ಟಿ ಹೊರಗೆ ಕತ್ತಲೆಯೊಳಕ್ಕೆ ಎಸೆಯಿರಿ’ ಅಂದನು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವರು.

14 “ಹೌದು, ಆಹ್ವಾನಿಸಲ್ಪಟ್ಟವರು ಅನೇಕರಾದರೂ ಆರಿಸಲ್ಪಟ್ಟವರು ಕೆಲವರು ಮಾತ್ರ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International