Revised Common Lectionary (Complementary)
ರಚನೆಗಾರ: ದಾವೀದ.
23 ಯೆಹೋವನೇ ನನಗೆ ಕುರುಬನು.
ನನಗೆ ಕೊರತೆಯೇ ಇಲ್ಲ.
2 ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
3 ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
5 ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
6 ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.
17 ಈ ದೇಶದಲ್ಲಿ ವಾಸಿಸುವ ಜನರಿಗೆ ಅಪಾಯವು ಕಾದಿದೆ ಎಂದು ನನಗೆ ತೋರುತ್ತಿದೆ.
ಅವರಿಗೆ ಭಯ, ಉರುಲು, ಗುಂಡಿಗಳು ಕಾದಿವೆ.
18 ಜನರು ಅಪಾಯದ ವಿಷಯ ಕೇಳಿ ಭಯಗ್ರಸ್ಥರಾಗುವರು.
ಕೆಲವರು ಓಡಿಹೋಗುವರು.
ಆದರೆ ಅವರು ಗುಂಡಿಯೊಳಗೆ ಬಿದ್ದು ಸಿಕ್ಕಿಕೊಳ್ಳುವರು.
ಅವರಲ್ಲಿ ಕೆಲವರು ಗುಂಡಿಯಿಂದ ಹೊರಬರುವರು,
ಆದರೆ ಅವರು ಇನ್ನೊಂದು ಉರುಲಿನೊಳಗೆ ಸಿಕ್ಕಿಹಾಕಿಕೊಳ್ಳುವರು.
ಆಕಾಶದಲ್ಲಿರುವ ಪ್ರವಾಹದ ದ್ವಾರಗಳು ತೆರೆಯಲ್ಪಡುವವು.
ಪ್ರವಾಹವು ತುಂಬುವದು; ಭೂಮಿಯ ಅಸ್ತಿವಾರಗಳು ಕದಲುವವು.
19 ಭೂಕಂಪಗಳಾಗುವವು.
ಭೂಮಿಯು ಸೀಳಿಹೋಗುವದು.
20 ಲೋಕದ ಪಾಪವು ತುಂಬಾ ಭಾರವಾಗಿದೆ.
ಆ ಭಾರದಿಂದಾಗಿ ಭೂಮಿಯು ಬೀಳುವದು.
ಒಂದು ಹಳೆಯ ಮನೆಯಂತೆ ಭೂಮಿಯು ಅಲುಗಾಡುವದು.
ಕುಡಿದು ಮತ್ತನಾಗಿ ನೆಲಕ್ಕೆ ಬೀಳುವವನಂತೆ ಭೂಮಿಯು ಇರುವದು.
ಭೂಮಿಗೆ ಮುಂದುವರಿಯಲು ಆಗದು.
21 ಆ ಸಮಯದಲ್ಲಿ ಯೆಹೋವನು ಪರಲೋಕ ಸೈನ್ಯಕ್ಕೆ
ಪರಲೋಕದಲ್ಲಿ ನ್ಯಾಯತೀರಿಸುವನು.
ಭೂಮಿಯ ಅರಸರನ್ನು ಭೂಮಿಯ ಮೇಲೆ ನ್ಯಾಯವಿಚಾರಣೆಮಾಡುವನು.
22 ಅನೇಕ ಮಂದಿ ಒಟ್ಟು ಸೇರುವರು.
ಕೆಲವರು ಗುಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುವರು.
ಕೆಲವರು ಸೆರೆಹಿಡಿಯಲ್ಪಡುವರು.
ಆಮೇಲೆ ಸ್ವಲ್ಪ ಕಾಲದ ನಂತರ ಅವರ ನ್ಯಾಯವಿಚಾರಣೆ ನಡಿಯುವದು.
23 ಯೆಹೋವನು ಜೆರುಸಲೇಮಿನ ಚೀಯೋನ್ ಪರ್ವತದಿಂದ ರಾಜ್ಯವನ್ನಾಳುವನು.
ಆತನ ಮಹಿಮೆಯು ಹಿರಿಯರ ಮುಂದಿರುವದು.
ಆತನ ಮಹಿಮೆಯ ಪ್ರಕಾಶಕ್ಕೆ ಚಂದ್ರನು ನಾಚಿಕೊಳ್ಳುವನು;
ಸೂರ್ಯನು ಲಜ್ಜೆಗೊಳ್ಳುವನು.
ಯೇಸು ಇತರ ಧಾರ್ಮಿಕ ನಾಯಕರಂತಲ್ಲ
(ಮತ್ತಾಯ 9:14-17; ಲೂಕ 5:33-39)
18 ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸ ಮಾಡುತ್ತಿದ್ದರು. ಕೆಲವು ಜನರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಹಿಂಬಾಲಕರು ಉಪವಾಸ ಮಾಡುತ್ತಾರೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು.
19 ಯೇಸು, “ಮದುವೆಯಲ್ಲಿ ಮದುಮಗನು ತಮ್ಮ ಜೊತೆಯಲ್ಲಿ ಇರುವಾಗ ಅವನ ಗೆಳೆಯರು ವ್ಯಸನಪಡುವುದಿಲ್ಲ. ಉಪವಾಸ ಮಾಡುವುದಿಲ್ಲ. 20 ಆದರೆ ಮದುಮಗನು ಅವರನ್ನು ಬಿಟ್ಟುಹೋಗುವ ಕಾಲ ಬರುತ್ತದೆ. ಆಗ ಅವನ ಗೆಳೆಯರು ವ್ಯಸನಪಡುತ್ತಾರೆ, ಉಪವಾಸ ಮಾಡುತ್ತಾರೆ.
21 “ಒಬ್ಬ ವ್ಯಕ್ತಿಯು ತನ್ನ ಹಳೆಯ ಮೇಲಂಗಿಯ ಹರಕಿಗೆ ಹೊಸ ಬಟ್ಟೆಯನ್ನು ತೇಪೆ ಹಚ್ಚುವುದಿಲ್ಲ. ಒಂದುವೇಳೆ ಹಚ್ಚಿದರೆ, ಆ ತೇಪೆಯು ಹಿಂಜಿಕೊಂಡು ಆ ಹರಕನ್ನು ಮತ್ತಷ್ಟು ದೊಡ್ಡದನ್ನಾಗಿ ಮಾಡುತ್ತದೆ. 22 ಹಾಗೆಯೇ, ಜನರು ಹೊಸ ದ್ರಾಕ್ಷಾರಸವನ್ನು ಹಳೆಯ ಬುದ್ದಲಿಗಳಲ್ಲಿ ಹಾಕಿಡುವುದಿಲ್ಲ. ಏಕೆಂದರೆ ಅದು ಬುದ್ದಲಿಗಳನ್ನು ಒಡೆದುಹಾಕುವುದರಿಂದ ದ್ರಾಕ್ಷಾರಸವೂ ಹಾಳಾಗುತ್ತದೆ. ಆದ್ದರಿಂದ ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International