Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 144

ರಚನೆಗಾರ: ದಾವೀದ.

144 ಯೆಹೋವನು ನನಗೆ ಬಂಡೆಯಾಗಿದ್ದಾನೆ.
    ಆತನಿಗೆ ಸ್ತೋತ್ರವಾಗಲಿ.
ಆತನು ನನ್ನನ್ನು ಯುದ್ಧಕ್ಕೂ
    ಕದನಕ್ಕೂ ತರಬೇತು ಮಾಡುವನು.
ಆತನು ನನ್ನನ್ನು ಪ್ರೀತಿಸುವ ದೇವರೂ
    ನನ್ನ ಕೋಟೆಯೂ ನನ್ನ ದುರ್ಗವೂ ನನ್ನ ರಕ್ಷಕನೂ ನನ್ನ ಗುರಾಣಿಯೂ ನನ್ನ ಆಶ್ರಯವೂ ಆಗಿದ್ದಾನೆ.

ಯೆಹೋವನೇ, ಮನುಷ್ಯರು ಎಷ್ಟು ಮಾತ್ರದವರು?
    ನೀನು ಅವರನ್ನು ಯಾಕೆ ನೆನಸಬೇಕು?
ಮನುಷ್ಯರು ಎಷ್ಟರವರು?
    ನೀನು ಅವರನ್ನು ಯಾಕೆ ಗಮನಿಸಬೇಕು?
ಮನುಷ್ಯರು ಕೇವಲ ಉಸಿರೇ.
    ಅವರ ಜೀವಮಾನವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.

ಯೆಹೋವನೇ, ಆಕಾಶವನ್ನು ಹರಿದು ಇಳಿದು ಬಾ.
    ಪರ್ವತಗಳನ್ನು ಮುಟ್ಟು.
    ಆಗ ಅವುಗಳಿಂದ ಹೊಗೆಯು ಮೇಲೇರುವುದು.
ಸಿಡಿಲಿನಿಂದ ಶತ್ರುಗಳನ್ನು ಚದರಿಸಿಬಿಡು.
    ನಿನ್ನ ಬಾಣಗಳಿಂದ ಅವರನ್ನು ಓಡಿಸಿಬಿಡು.
ಮೇಲಿನ ಲೋಕದಿಂದ ಕೈಚಾಚಿ ಮಹಾ ಜಲರಾಶಿಯಂತಿರುವ
    ನನ್ನ ಶತ್ರುಗಳಿಂದ ನನ್ನನ್ನು ಎಳೆದುಕೋ.
    ಅನ್ಯಜನರ ಕೈಯಿಂದ ನನ್ನನ್ನು ಬಿಡಿಸು.
ಅವರ ಬಾಯಿ ಸುಳ್ಳುಗಳಿಂದ ತುಂಬಿವೆ.
    ಅವರ ಬಲಗೈ ಮೋಸದಿಂದ ತುಂಬಿವೆ.

ಯೆಹೋವನೇ, ನಿನಗೆ ನೂತನ ಕೀರ್ತನೆಯನ್ನು ಹಾಡುವೆನು.
    ನಾನು ಹತ್ತು ತಂತಿಗಳ ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಸ್ತುತಿಸುವೆನು.
10 ರಾಜರುಗಳಿಗೆ ಸಹಾಯಮಾಡಿ ಯುದ್ಧಗಳಲ್ಲಿ ಗೆಲ್ಲಿಸುವವನೂ ನೀನೇ.
    ನಿನ್ನ ಸೇವಕನಾದ ದಾವೀದನನ್ನು ಅವನ ಶತ್ರುಗಳ ಖಡ್ಗಗಳಿಂದ ರಕ್ಷಿಸಿದವನೂ ನೀನೇ.
11 ಈ ಅನ್ಯಜನರಿಂದ ನನ್ನನ್ನು ರಕ್ಷಿಸು.
    ಅವರ ಬಾಯಿಗಳು ಸುಳ್ಳುಗಳಿಂದ ತುಂಬಿವೆ.
    ಅವರ ಬಲಗೈಗಳು ಮೋಸದಿಂದ ತುಂಬಿವೆ.

12 ನಮ್ಮ ಯುವಕರು ಮಹಾವೃಕ್ಷಗಳಂತಿದ್ದಾರೆ.
    ನಮ್ಮ ಯುವತಿಯರು ಅರಮನೆಯಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಕಂಬಗಳಂತಿರುವರು.
13 ನಮ್ಮ ಕಣಜಗಳು ಸಕಲ ಬಗೆಯ ದವಸಧಾನ್ಯಗಳಿಂದ ತುಂಬಿರುತ್ತವೆ.
    ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುತ್ತವೆ.
14     ನಮ್ಮ ಸೈನಿಕರು ಸುರಕ್ಷಿತವಾಗಿದ್ದಾರೆ.
ಯಾವ ಶತ್ರುಗಳೂ ನುಗ್ಗಿಬರಲು ಪ್ರಯತ್ನಿಸುತ್ತಿಲ್ಲ.
    ನಾವು ಯುದ್ಧಕ್ಕೆ ಹೋಗುವುದೂ ಇಲ್ಲ;
ನಮ್ಮ ಬೀದಿಗಳಲ್ಲಿ ಗೋಳಾಟವೂ ಇರುವುದಿಲ್ಲ.

15 ಇಂಥ ಸುಸ್ಥಿತಿಯಲ್ಲಿರುವ ಜನರೇ ಧನ್ಯರು.
    ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರೇ ಭಾಗ್ಯವಂತರು.

ಪರಮ ಗೀತ 8:5-14

ಜೆರುಸಲೇಮಿನ ಸ್ತ್ರೀಯರು

ತನ್ನ ಪ್ರಿಯನನ್ನು ಒರಗಿಕೊಂಡು
    ಅಡವಿಯಿಂದ ಬರುತ್ತಿರುವ ಈ ಯುವತಿ ಯಾರು?

ಪ್ರಿಯತಮೆ ಪ್ರಿಯಕರನಿಗೆ

ನಾನು ನಿನ್ನನ್ನು ಸೇಬಿನ ಮರದ ಕೆಳಗೆ ಎಬ್ಬಿಸಿದೆನು.
    ನಿನ್ನ ತಾಯಿಯು ನಿನ್ನನ್ನು ಗರ್ಭಧರಿಸಿದ್ದು ಅಲ್ಲಿಯೇ.
    ನೀನು ಹುಟ್ಟಿದ್ದೂ ಅಲ್ಲಿಯೇ.
ನನ್ನನ್ನು ನಿನ್ನ ಹೃದಯದ ಮೇಲೆ ಮುದ್ರೆಯನ್ನಾಗಿಯೂ,
    ನಿನ್ನ ಬೆರಳಿನಲ್ಲಿರುವ ಮುದ್ರೆಯೊತ್ತಿದ ಉಂಗುರದಂತೆಯೂ ಇಟ್ಟುಕೋ.
ಪ್ರೀತಿಯು ಮರಣದಷ್ಟೇ ಬಲಿಷ್ಠ;
    ಕಾಮೋದ್ರೇಕವು ಸಮಾಧಿಯಷ್ಟೇ ಬಲಿಷ್ಠ.
ಅದರ ಜ್ವಾಲೆಗಳು ಧಗಧಗಿಸುವ ಬೆಂಕಿ.
    ಅದು ಅತಿ ತೀಕ್ಷ್ಣವಾದ ಅಗ್ನಿಯೇ.
ಜಲರಾಶಿಗಳು ಪ್ರೀತಿಯನ್ನು ನಂದಿಸಲಾರವು;
    ನದಿಗಳು ಪ್ರೀತಿಯನ್ನು ಮುಳುಗಿಸಲಾರವು.
ಒಬ್ಬನು ಪ್ರೀತಿಗೋಸ್ಕರ ತನ್ನ ಆಸ್ತಿಯನ್ನೆಲ್ಲ ಕೊಟ್ಟುಬಿಟ್ಟರೆ
    ಅವನು ಕೇವಲ ತಿರಸ್ಕಾರಕ್ಕೆ ಗುರಿಯಾಗುವನು.

ಪ್ರಿಯತಮೆಯ ಸಹೋದರರು

ನಮಗೆ ಚಿಕ್ಕ ತಂಗಿಯಿದ್ದಾಳೆ,
    ಆಕೆಯ ಸ್ತನಗಳು ಇನ್ನೂ ಬೆಳೆದಿಲ್ಲ.
ಆಕೆಯ ನಿಶ್ಚಿತಾರ್ಥ ದಿನದಲ್ಲಿ
    ನಮ್ಮ ತಂಗಿಗೋಸ್ಕರ ನಾವೇನು ಮಾಡಬೇಕು?

ಆಕೆ ಕೋಟೆಯಾಗಿದ್ದರೆ
    ಅದರ ಮೇಲೆ ಬೆಳ್ಳಿಯ ಗೋಪುರಗಳನ್ನು ಕಟ್ಟುತ್ತಿದ್ದೆವು.
ಆಕೆ ಬಾಗಿಲಾಗಿದ್ದರೆ,
    ಶ್ರೇಷ್ಠವಾದ ದೇವದಾರು ಮರದ ಹಲಗೆಗಳಿಂದ ಅದನ್ನು ಹೊದಿಸುತ್ತಿದ್ದೆವು.

ಪ್ರಿಯತಮೆಯು ಸಹೋದರರಿಗೆ ಕೊಡುವ ಉತ್ತರ

10 ನಾನು ಕೋಟೆ;
    ನನ್ನ ಸ್ತನಗಳೇ ಅದರ ಗೋಪುರಗಳು.
    ಹೀಗೆ ಸೊಲೊಮೋನನು ನನ್ನಲ್ಲಿ ತೃಪ್ತನಾದನು.

ಪ್ರಿಯಕರ

11 ಸೊಲೊಮೋನನಿಗೆ ಬಾಲ್ಹಾಮೋನಿನಲ್ಲಿ ದ್ರಾಕ್ಷಿತೋಟವಿತ್ತು.
    ಅವನು ಅದನ್ನು ರೈತರಿಗೆ ಒಪ್ಪಿಸಿದನು.
ಪ್ರತಿಯೊಬ್ಬನು ಹಣ್ಣಿಗಾಗಿ
    ಒಂದು ಸಾವಿರ ಬೆಳ್ಳಿನಾಣ್ಯಗಳನ್ನು ಕೊಡಬೇಕಿತ್ತು.

12 ಆದರೆ ನನ್ನ ಸ್ವಂತ ದ್ರಾಕ್ಷಿತೋಟವು ನನ್ನೆದುರಿನಲ್ಲಿದೆ.
    ಸೊಲೊಮೋನನೇ, ಆ ಸಾವಿರ ಬೆಳ್ಳಿನಾಣ್ಯಗಳು ನಿನಗಿರಲಿ.
    ತೋಟವನ್ನು ನೋಡಿಕೊಳ್ಳುವವರಿಗೆ ಇನ್ನೂರು ಬೆಳ್ಳಿನಾಣ್ಯಗಳಿರಲಿ.

ಪ್ರಿಯಕರ ಪ್ರಿಯತಮೆಗೆ

13 ಉದ್ಯಾನವನಗಳಲ್ಲಿ ವಾಸಿಸುವವಳೇ,
    ಗೆಳೆಯರು ನಿನ್ನ ಸ್ವರ ಕೇಳಬೇಕೆಂದಿದ್ದಾರೆ, ನನಗೂ ಸಹ ಕೇಳಿಸಲಿ.

ಪ್ರಿಯತಮೆ ಪ್ರಿಯಕರನಿಗೆ

14 ನನ್ನ ಪ್ರಿಯನೇ, ತ್ವರೆಪಡು.
    ಸುಗಂಧಸಸ್ಯ ಪರ್ವತಗಳ ಮೇಲೆ ಸಾರಂಗದಂತೆಯೂ ಪ್ರಾಯದ ಜಿಂಕೆಯಂತೆಯೂ ಇರು.

ಯೋಹಾನ 11:45-57

ಯೇಸುವನ್ನು ಕೊಲ್ಲಲು ಯೆಹೂದ್ಯ ನಾಯಕರ ಸಂಚು

(ಮತ್ತಾಯ 26:1-5; ಮಾರ್ಕ 14:1-2; ಲೂಕ 22:1-2)

45 ಮರಿಯಳನ್ನು ಸಂದರ್ಶಿಸಲು ಬಂದಿದ್ದ ಅನೇಕ ಯೆಹೂದ್ಯರು ಅಲ್ಲಿದ್ದರು. ಯೇಸು ಮಾಡಿದ ಈ ಕಾರ್ಯವನ್ನು ಕಂಡ ಇವರಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು. 46 ಆದರೆ ಕೆಲವು ಯೆಹೂದ್ಯರು ಫರಿಸಾಯರ ಬಳಿಗೆ ಹೋಗಿ, ಯೇಸು ಮಾಡಿದ್ದನ್ನು ತಿಳಿಸಿದರು. 47 ಆಗ ಮಹಾಯಾಜಕರು ಮತ್ತು ಫರಿಸಾಯರು ಯೆಹೂದ್ಯರ ಆಲೋಚನಾಸಭೆಯನ್ನು ಕರೆದು, “ನಾವು ಏನು ಮಾಡಬೇಕು? ಈ ಮನುಷ್ಯನು (ಯೇಸು) ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಿದ್ದಾನೆ. 48 ಈ ಕಾರ್ಯಗಳನ್ನು ಮಾಡಲು ನಾವು ಅವನಿಗೆ ಅವಕಾಶ ಕೊಟ್ಟರೆ ಜನರೆಲ್ಲರೂ ಇವನಲ್ಲಿ ನಂಬಿಕೆ ಇಡುವರು. ಆಗ ರೋಮ್ ರಾಜ್ಯದವರು ಬಂದು ನಮ್ಮ ದೇವಾಲಯವನ್ನೂ ನಮ್ಮ ದೇಶವನ್ನೂ ವಶಪಡಿಸಿಕೊಳ್ಳುವರು” ಅಂದರು.

49 ಅವರಲ್ಲಿ ಕಾಯಫನೆಂಬ ಒಬ್ಬನಿದ್ದನು. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಅವನು, “ನಿಮಗೆ ಏನೂ ಗೊತ್ತಿಲ್ಲ! 50 ಇಡೀ ಜನಾಂಗವು ನಾಶವಾಗುವುದಕ್ಕಿಂತ ಒಬ್ಬನು ಅವರಿಗೋಸ್ಕರವಾಗಿ ಸಾಯುವುದು ಉತ್ತಮ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳುತ್ತಿಲ್ಲ” ಎಂದು ಹೇಳಿದನು.

51 ಇದು ಕಾಯಫನ ಸ್ವಂತ ಆಲೋಚನೆಯಾಗಿರಲಿಲ್ಲ. ಅವನು ಆ ವರ್ಷ ಮಹಾಯಾಜಕನಾಗಿದ್ದನು. ಆದ್ದರಿಂದ ಯೆಹೂದ್ಯರಿಗೋಸ್ಕರವಾಗಿ ಯೇಸು ಸಾಯುತ್ತಾನೆಂದು ಅವನು ನಿಜವಾಗಿಯೂ ಪ್ರವಾದಿಸಿದನು. 52 ಹೌದು, ಯೆಹೂದ್ಯರಿಗಾಗಿಯೂ ಲೋಕದಲ್ಲೆಲ್ಲಾ ಚದರಿಹೋಗಿರುವ ದೇವರ ಮಕ್ಕಳನ್ನೆಲ್ಲ ಒಂದುಗೂಡಿಸುವುದಕ್ಕಾಗಿಯೂ ಆತನು ಸಾಯಲಿದ್ದನು.

53 ಅಂದಿನಿಂದ ಯೆಹೂದ್ಯನಾಯಕರು ಯೇಸುವನ್ನು ಕೊಲ್ಲಲು ಸಂಚು ಮಾಡಲಾರಂಭಿಸಿದರು. 54 ಆದ್ದರಿಂದ ಯೇಸುವು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ಸಂಚರಿಸುವುದನ್ನು ಬಿಟ್ಟುಬಿಟ್ಟನು. ಆತನು ಜೆರುಸಲೇಮನ್ನು ಬಿಟ್ಟು ಮರುಭೂಮಿಯ ಸಮೀಪದಲ್ಲಿದ್ದ ಸ್ಥಳಕ್ಕೆ ಹೋಗಿ ಎಫ್ರಾಯಿಮ್ ಎಂಬ ಊರಿನಲ್ಲಿ ತನ್ನ ಶಿಷ್ಯರ ಸಂಗಡ ಇಳಿದುಕೊಂಡನು.

55 ಆಗ ಯೆಹೂದ್ಯರ ಪಸ್ಕಹಬ್ಬವು ಸಮೀಪವಾಗಿತ್ತು. ಪಸ್ಕಹಬ್ಬಕ್ಕಿಂತ ಮೊದಲೇ ತಮ್ಮ ಗ್ರಾಮಗಳಿಂದ ಅನೇಕ ಜನರು ಜೆರುಸಲೇಮಿಗೆ ಹೋಗಿದ್ದರು. ವಿಶೇಷವಾದ ಕಾರ್ಯಗಳನ್ನು ಮಾಡಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಶುದ್ಧೀಕರಿಸಿಕೊಳ್ಳಬೇಕೆಂದು ಅವರು ಹೋಗಿದ್ದರು. 56 ಅವರು ಅಲ್ಲಿ ಯೇಸುವನ್ನು ಹುಡುಕತೊಡಗಿದರು. ಅವರು ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುವನೇ? ನಿಮ್ಮ ಆಲೋಚನೆ ಏನು?” ಎಂದು ಒಬ್ಬರನ್ನೊಬ್ಬರು ಕೇಳುತ್ತಿದ್ದರು. 57 ಆದರೆ ಮಹಾಯಾಜಕರು ಮತ್ತು ಫರಿಸಾಯರು, ಯೇಸು ಎಲ್ಲಿದ್ದಾನೆಂಬುದು ಯಾರಿಗಾದರೂ ತಿಳಿದು ಬಂದರೆ ತಮಗೆ ತಿಳಿಸಬೇಕೆಂದು ವಿಶೇಷ ಆಜ್ಞೆಯನ್ನು ಪ್ರಕಟಿಸಿದ್ದರು. ಅವರು ಆತನನ್ನು ಬಂಧಿಸಬೇಕೆಂದಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International