Revised Common Lectionary (Complementary)
7 ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
8 ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
9 “ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11 ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
ಶತ್ರುಗಳು ಜೆರುಸಲೇಮ್ ನಗರವನ್ನು ಮುತ್ತಿದರು
6 ಬೆನ್ಯಾಮೀನನ ಕುಲದವರೇ, ನಿಮ್ಮ ಪ್ರಾಣ ರಕ್ಷಣೆಗಾಗಿ ಓಡಿಹೋಗಿರಿ;
ಜೆರುಸಲೇಮ್ ನಗರದಿಂದ ಓಡಿಹೋಗಿರಿ.
ತೆಕೋವ ನಗರದಲ್ಲಿ ಯುದ್ಧದ ತುತ್ತೂರಿಗಳನ್ನು ಊದಿರಿ;
ಬೇತ್‌ಹಕ್ಕೆರೆಮಿನಲ್ಲಿ ಎಚ್ಚರಿಕೆಯ ಧ್ವಜಗಳನ್ನು ಹಾರಿಸಿರಿ.
ಉತ್ತರದಿಕ್ಕಿನಿಂದ ವಿಪತ್ತು ಬರುತ್ತಿರುವುದರಿಂದ ಇವೆಲ್ಲವನ್ನು ಮಾಡಿರಿ.
ಭಯಂಕರವಾದ ವಿನಾಶವು ನಿಮಗೆ ಬರುತ್ತಿದೆ.
2 ಚೀಯೋನ್ ಕುಮಾರಿಯೇ,[a] ನೀನು ಬಹು ಸುಂದರವಾಗಿಯೂ ಮೃದುವಾಗಿಯೂ ಇರುವೆ.
3 ಕುರುಬರು ಜೆರುಸಲೇಮಿಗೆ ಬರುತ್ತಾರೆ.
ಮತ್ತು ಕುರಿಮಂದೆಗಳನ್ನು ತರುತ್ತಾರೆ.
ಅದರ ಸುತ್ತಲೂ ತಮ್ಮ ಗುಡಾರಗಳನ್ನು ಹಾಕಿಕೊಳ್ಳುತ್ತಾರೆ.
ಪ್ರತಿಯೊಬ್ಬ ಕುರುಬನು ತನ್ನ ಕುರಿಹಿಂಡನ್ನು ನೋಡಿಕೊಳ್ಳುತ್ತಾನೆ.
4 “ಜೆರುಸಲೇಮಿನ ಮೇಲೆ ಧಾಳಿ ಮಾಡುವದಕ್ಕೆ ಸಿದ್ಧರಾಗಿರಿ.
ಏಳಿರಿ, ನಾವು ನಗರವನ್ನು ಮಧ್ಯಾಹ್ನದಲ್ಲಿಯೇ ಮುತ್ತೋಣ.
ಆದರೆ ಈಗಾಗಲೇ ಹೊತ್ತಾಗಿದೆ.
ಸಾಯಂಕಾಲದ ನೆರಳುಗಳು ವಿಸ್ತಾರಗೊಳ್ಳುತ್ತಿವೆ.
5 ಏಳಿರಿ, ನಾವು ರಾತ್ರಿಯಲ್ಲಿ ನಗರದ ಮೇಲೆ ಧಾಳಿ ಮಾಡೋಣ.
ನಾವು ಜೆರುಸಲೇಮಿನ ಭದ್ರವಾದ ರಕ್ಷಣಾಸ್ಥಳಗಳನ್ನು ನಾಶಮಾಡೋಣ.”
6 ಸರ್ವಶಕ್ತನಾದ ಯೆಹೋವನು ಹೀಗೆ ಹೇಳಿದನು:
“ಜೆರುಸಲೇಮಿನ ಸುತ್ತಮುತ್ತಲಿನ ಮರಗಳನ್ನು ಕಡಿದುಹಾಕಿರಿ;
ಜೆರುಸಲೇಮಿನ ಎದುರಿಗೆ ಒಂದು ದಿಬ್ಬ ನಿರ್ಮಿಸಿರಿ.
ನಗರವನ್ನು ದಂಡಿಸಬೇಕು.
ನಗರದ ಒಳಗಡೆ ದಬ್ಬಾಳಿಕೆಯ ಹೊರತು ಮತ್ತೇನಿಲ್ಲ.
7 ಬಾವಿಯಲ್ಲಿ ಹೊಸ ನೀರು ಬರುವಂತೆ
ಜೆರುಸಲೇಮಿನಲ್ಲಿ ಹೊಸಹೊಸ ದುಷ್ಟತನ ಉಂಟಾಗುತ್ತದೆ.
ಈ ಪಟ್ಟಣದಲ್ಲಿ ಬಲಾತ್ಕಾರ ಮತ್ತು ವಿನಾಶಗಳೇ ಕೇಳಿಬರುತ್ತವೆ.
ನನಗೆ ಯಾವಾಗಲೂ ಜೆರುಸಲೇಮಿನ ರೋಗ ಮತ್ತು ಗಾಯಗಳು ಕಣ್ಣಿಗೆ ಬೀಳುತ್ತವೆ.
8 ಜೆರುಸಲೇಮ್ ನಗರವೇ, ಈ ಎಚ್ಚರಿಕೆಯ ನುಡಿಗಳನ್ನು ಕೇಳು.
ನೀನು ಕೇಳದಿದ್ದರೆ ನಾನು ನಿನಗೆ ವಿಮುಖನಾಗುವೆ.
ನಾನು ನಿನ್ನ ಪ್ರದೇಶವನ್ನು ಒಂದು ಮರಳುಗಾಡಾಗಿ ಮಾಡುತ್ತೇನೆ.
ಅಲ್ಲಿ ಯಾರೂ ವಾಸಮಾಡಲು ಸಾಧ್ಯವಾಗದು.”
9 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ದೇಶದಲ್ಲಿ ಅಳಿದುಳಿದ ಇಸ್ರೇಲಿಯರನ್ನು
ಒಟ್ಟಾಗಿ ಸೇರಿಸಿರಿ.
ದ್ರಾಕ್ಷಿತೋಟದಲ್ಲಿ ಕೊನೆಯ ದ್ರಾಕ್ಷಿಯನ್ನು ಕೀಳುವಂತೆ
ಅವರನ್ನು ಒಟ್ಟಾಗಿ ಸೇರಿಸಿ.
ಕೊಯ್ಲುಗಾರನು ಪ್ರತಿಯೊಂದು ಬಳ್ಳಿಯನ್ನು ನೋಡಿ ದ್ರಾಕ್ಷಿಕೀಳುವಂತೆ
ನೀವು ಸೂಕ್ಷ್ಮವಾಗಿ ಗಮನಿಸಿ ಅವರನ್ನು ಒಟ್ಟಾಗಿ ಸೇರಿಸಿರಿ.”
10 ನಾನು ಯಾರೊಂದಿಗೆ ಮಾತನಾಡಲಿ?
ನಾನು ಯಾರಿಗೆ ಎಚ್ಚರಿಕೆಯ ನುಡಿಗಳನ್ನು ಹೇಳಲಿ?
ನನ್ನ ಮಾತನ್ನು ಯಾರು ಕೇಳುತ್ತಾರೆ?
ಇಸ್ರೇಲಿನ ಜನರು ತಮ್ಮ ಕಿವಿಗಳನ್ನು ಮುಚ್ಚಿಕೊಂಡಿದ್ದಾರೆ.
ಅವರು ನನ್ನ ಎಚ್ಚರಿಕೆಯ ನುಡಿಗಳನ್ನು ಕೇಳಲಾರರು.
ಜನರಿಗೆ ಯೆಹೋವನ ಉಪದೇಶ ರುಚಿಸುವದಿಲ್ಲ.
ಅವರು ಯೆಹೋವನ ನುಡಿಗಳನ್ನು ಕೇಳಬಯಸುವದಿಲ್ಲ.
ಯೇಸುವಿನ ಬಗ್ಗೆ ಜನರ ವಾದವಿವಾದ
40 ಈ ಸಂಗತಿಗಳನ್ನು ಕೇಳಿದ ಜನರಲ್ಲಿ ಕೆಲವರು, “ಈ ಮನುಷ್ಯನು ನಿಜವಾಗಿಯೂ ಪ್ರವಾದಿ” ಎಂದರು.
41 “ಆತನೇ ಕ್ರಿಸ್ತನು” ಎಂದು ಇನ್ನು ಕೆಲವರು ಹೇಳಿದರು.
ಮತ್ತೆ ಕೆಲವರು, “ಕ್ರಿಸ್ತನು ಗಲಿಲಾಯದಿಂದ ಬರುವುದಿಲ್ಲ. 42 ಕ್ರಿಸ್ತನು ದಾವೀದನ ಕುಟುಂಬದವನೆಂತಲೂ ದಾವೀದನು ವಾಸಿಸಿದ ಬೆತ್ಲೆಹೇಮ್ ಊರಿನಿಂದ ಆತನು ಬರುತ್ತಾನೆಂತಲೂ ಪವಿತ್ರ ಗ್ರಂಥವು ತಿಳಿಸುತ್ತದೆ” ಎಂದರು. 43 ಹೀಗೆ ಯೇಸುವಿನ ಕುರಿತು ಜನರಲ್ಲಿ ಭೇದ ಉಂಟಾಯಿತು. 44 ಕೆಲವರು ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಬಂಧಿಸಲು ಯಾರೂ ಪ್ರಯತ್ನಿಸಲಿಲ್ಲ.
ಯೆಹೂದ್ಯನಾಯಕರ ಅಪನಂಬಿಕೆ
45 ದೇವಾಲಯದ ಸಿಪಾಯಿಗಳು ಹಿಂತಿರುಗಿದಾಗ, ಮಹಾಯಾಜಕರು ಮತ್ತು ಫರಿಸಾಯರು ಅವರಿಗೆ, “ನೀವು ಅವನನ್ನು ಏಕೆ ಹಿಡಿದುಕೊಂಡು ಬರಲಿಲ್ಲ?” ಎಂದು ಕೇಳಿದರು.
46 ದೇವಾಲಯದ ಸಿಪಾಯಿಗಳು, “ಈತನಂತೆ ಆಶ್ಚರ್ಯಕರವಾದ ಸಂಗತಿಗಳನ್ನು ಬೇರೆ ಯಾರೂ ಹೇಳಿಲ್ಲ” ಎಂದು ಉತ್ತರಕೊಟ್ಟರು.
47 ಫರಿಸಾಯರು, “ಹಾಗಾದರೆ, ಯೇಸು ನಿಮ್ಮನ್ನು ಸಹ ಮರುಳುಗೊಳಿಸುತ್ತಿದ್ದಾನೆ! 48 ನಾಯಕರಲ್ಲಿ ಯಾರಾದರೂ ಯೇಸುವಿನಲ್ಲಿ ನಂಬಿಕೆ ಇಟ್ಟಿದ್ದಾರೋ? ಇಲ್ಲ! ಫರಿಸಾಯರಾದ ನಮ್ಮಲ್ಲಿ ಯಾರಾದರೂ ಆತನನ್ನು ನಂಬಿದ್ದಾರೋ? ಇಲ್ಲ! 49 ಆದರೆ ಹೊರಗಿನ ಜನರಿಗೆ ಧರ್ಮಶಾಸ್ತ್ರದ ಬಗ್ಗೆ ಏನೂ ಗೊತ್ತಿಲ್ಲ. ಅವರು ದೇವರ ಶಾಪಕ್ಕೆ ಒಳಗಾಗಿದ್ದಾರೆ!” ಎಂದು ಉತ್ತರಕೊಟ್ಟರು.
50 ಆದರೆ ಆ ಗುಂಪಿನಲ್ಲಿ ನಿಕೊದೇಮನು ಇದ್ದನು. ಮೊದಲೊಮ್ಮೆ ಯೇಸುವನ್ನು ನೋಡಲು ಹೋಗಿದ್ದವನು ಇವನೇ. 51 ನಿಕೊದೇಮನು, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ ತೀರ್ಪು ನೀಡಲು ನಮ್ಮ ಧರ್ಮಶಾಸ್ತ್ರವು ಸಮ್ಮತಿಸುವುದಿಲ್ಲ. ಆತನು ಮಾಡಿರುವುದನ್ನು ನಾವು ತಿಳಿದುಕೊಳ್ಳುವವರೆಗೆ ಆತನಿಗೆ ತೀರ್ಪು ಮಾಡಲಾಗದು” ಎಂದು ಹೇಳಿದನು.
52 ಯೆಹೂದ್ಯನಾಯಕರು, “ನೀನೂ ಗಲಿಲಾಯದವನೋ? ಪವಿತ್ರ ಗ್ರಂಥವನ್ನು ಅಧ್ಯಯನಮಾಡು. ಗಲಿಲಾಯದಿಂದ ಯಾವ ಪ್ರವಾದಿಯೂ ಬರುವುದಿಲ್ಲವೆಂಬುದು ಆಗ ನಿನಗೆ ತಿಳಿಯುತ್ತದೆ” ಎಂದು ಉತ್ತರಕೊಟ್ಟರು.
Kannada Holy Bible: Easy-to-Read Version. All rights reserved. © 1997 Bible League International