Revised Common Lectionary (Complementary)
7 ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
8 ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
9 “ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11 ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
23 “ಯೆಹೂದವೇ, ‘ನಾನು ತಪ್ಪಿತಸ್ಥಳಲ್ಲವೆಂದೂ ನಾನು ಬಾಳನ ವಿಗ್ರಹಗಳನ್ನು ಪೂಜಿಸಲಿಲ್ಲವೆಂದೂ’
ನೀನು ನನಗೆ ಹೇಗೆ ಹೇಳುವೆ?
ನೀನು ಕಣಿವೆಯಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಯೋಚಿಸು.
ನೀನು ಮಾಡಿದ ಕೆಲಸಗಳ ಬಗ್ಗೆ ಯೋಚಿಸು.
ನೀನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಿಹೋಗುವ
ತೀವ್ರಗತಿಯ ಹೆಣ್ಣು ಒಂಟೆಯಂತೆ ಇರುವೆ.
24 ನೀನು ಮರುಭೂಮಿಯಲ್ಲಿ ವಾಸಿಸುವ ಕಾಡುಕತ್ತೆಯಂತೆ ಇರುವೆ.
ಅದು ಬೆದೆಯ ಕಾಲದಲ್ಲಿ ಗಾಳಿಯನ್ನು ಮೂಸಿ ನೋಡುತ್ತದೆ.
ಅದಕ್ಕೆ ಬೆದೆ ಏರಿದಾಗ ಯಾರೂ ಅದನ್ನು ಹಿಡಿಯಲು ಸಾಧ್ಯವಿಲ್ಲ.
ಅದು ಬೆದೆಗೆ ಬಂದಾಗ ಅದನ್ನು ಇಷ್ಟಪಡುವ ಪ್ರತಿಯೊಂದು ಗಂಡು ಕತ್ತೆಗೆ ಅದು ಲಭಿಸುವುದು.
ಆಗ ಅದನ್ನು ಪಡೆಯುವುದು ಬಹಳ ಸುಲಭ.
25 ಯೆಹೂದವೇ, ವಿಗ್ರಹಗಳ ಬೆನ್ನುಹತ್ತಿ ಹೋಗುವದನ್ನು ನಿಲ್ಲಿಸು!
ಆ ಅನ್ಯದೇವರುಗಳ ಬಗ್ಗೆ ನಿನ್ನಲ್ಲಿರುವ ಬಯಕೆಯನ್ನು ತೊರೆದುಬಿಡು.
ಆದರೆ ನೀನು ‘ಹಾಗೆ ಮಾಡಿದರೆ ಪ್ರಯೋಜನವೇನು?
ನಾನು ಅವುಗಳನ್ನು ಬಿಡಲಾರೆ.
ನಾನು ಆ ಅನ್ಯದೇವರುಗಳನ್ನು ಪ್ರೀತಿಸುತ್ತೇನೆ.
ನಾನು ಅವುಗಳನ್ನು ಪೂಜಿಸಬಯಸುತ್ತೇನೆ’ ಎಂದು ಹೇಳುವೆ.
26 “ಜನರ ಕೈಗೆ ಸಿಕ್ಕಿಬಿದ್ದಾಗ
ಕಳ್ಳನಿಗೆ ನಾಚಿಕೆಯಾಗುತ್ತದೆ.
ಅದೇ ರೀತಿಯಲ್ಲಿ ಇಸ್ರೇಲ್ ವಂಶವು ನಾಚಿಕೆಪಡುತ್ತದೆ.
ರಾಜರು ಮತ್ತು ನಾಯಕರು ನಾಚಿಕೆಪಡುವರು.
ಯಾಜಕರು ಮತ್ತು ಪ್ರವಾದಿಗಳು ನಾಚಿಕೆಪಡುವರು.
27 ಅವರು ಮರದ ತುಂಡುಗಳೊಡನೆ ಮಾತನಾಡಿ,
‘ನೀನು ನಮ್ಮ ತಂದೆ’ ಎಂದು ಹೇಳುವರು.
ಆ ಜನರು ಕಲ್ಲುಬಂಡೆಯೊಂದಿಗೆ ಮಾತನಾಡಿ,
‘ನೀನು ನಮಗೆ ಜನ್ಮಕೊಟ್ಟ ತಾಯಿ’ ಎಂದು ಹೇಳುವರು.
ಆ ಜನರೆಲ್ಲರು ನಾಚಿಕೆಪಡುವರು.
ಅವರು ನನ್ನ ಕಡೆಗೆ ನೋಡುವದಿಲ್ಲ.
ಅವರು ನನಗೆ ವಿಮುಖರಾಗಿದ್ದಾರೆ.
ಆದರೆ ಯೆಹೂದದ ಜನರು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗ,
‘ಬಾ ನಮ್ಮನ್ನು ರಕ್ಷಿಸು’ ಎಂದು ನನ್ನನ್ನು ಕೇಳುತ್ತಾರೆ.
28 ಆ ವಿಗ್ರಹಗಳು ಬಂದು ನಿಮ್ಮನ್ನು ರಕ್ಷಿಸಲಿ, ನೀವು ಮಾಡಿದ ವಿಗ್ರಹಗಳು ಎಲ್ಲಿವೆ?
ನೀವು ಕಷ್ಟದಲ್ಲಿದ್ದಾಗ ಆ ವಿಗ್ರಹಗಳು ಬಂದು ನಿಮ್ಮನ್ನು ರಕ್ಷಿಸುವವೇ ಎಂಬುದನ್ನು ನೋಡೋಣ.
ಯೆಹೂದದ ನಿವಾಸಿಗಳೇ, ನಿಮ್ಮಲ್ಲಿ ಎಷ್ಟು ಪಟ್ಟಣಗಳಿವೆಯೋ ಅಷ್ಟು ವಿಗ್ರಹಗಳಿವೆ.
29 “ನೀವು ನನ್ನೊಂದಿಗೆ ಏಕೆ ಚರ್ಚೆಮಾಡುವಿರಿ,
ನೀವೆಲ್ಲರೂ ನನ್ನ ವಿರುದ್ಧ ದಂಗೆ ಎದ್ದಿದ್ದೀರಿ”
ಎನ್ನುತ್ತಾನೆ ಯೆಹೋವನು.
30 “ಯೆಹೂದದ ಜನರೇ ನಾನು ನಿಮ್ಮನ್ನು ಶಿಕ್ಷಿಸಿದೆ,
ಆದರೆ ಅದರಿಂದ ಪ್ರಯೋಜನವಾಗಲಿಲ್ಲ.
ಶಿಕ್ಷಿಸಿದರೂ ನೀವು ಹಿಂತಿರುಗಿ ಬರಲಿಲ್ಲ.
ನಿಮ್ಮಲ್ಲಿಗೆ ಬಂದ ಪ್ರವಾದಿಗಳನ್ನು ನೀವು ಕತ್ತಿಯಿಂದ ಕೊಂದುಹಾಕಿದಿರಿ.
ನೀವು ಅಪಾಯಕಾರಿಯಾದ ಸಿಂಹದಂತಿದ್ದು ಪ್ರವಾದಿಗಳನ್ನು ಕೊಂದುಹಾಕಿದಿರಿ.”
31 ಈ ಪೀಳಿಗೆಯ ಜನರೇ, ಯೆಹೋವನ ಸಂದೇಶದ ಕಡೆಗೆ ಗಮನ ಕೊಡಿ,
“ಇಸ್ರೇಲಿನ ಜನರಿಗೆ ನಾನು ಮರಳುಗಾಡಿನಂತೆ ಇರುವೆನೇ?
ನಾನು ಗಾಢಾಂಧಕಾರಮಯವಾದ ಮತ್ತು ಅಪಾಯಕಾರಿಯಾದ ಭೂಮಿಯಂತೆ ಇರುವೆನೇ?
ನನ್ನ ಜನರು, ‘ನಮಗೆ ಇಷ್ಟವಾದ ಮಾರ್ಗವನ್ನು ಅನುಸರಿಸಲು ನಾವು ಸ್ವತಂತ್ರರಾಗಿದ್ದೇವೆ.
ಯೆಹೋವನೇ, ನಾವು ಪುನಃ ನಿನ್ನಲ್ಲಿಗೆ ಬರುವದಿಲ್ಲ’ ಎಂದು ಹೇಳುತ್ತಾರೆ.
ಅವರು ಹಾಗೆ ಏಕೆ ಹೇಳುತ್ತಾರೆ?
32 ಯುವತಿಯು ತನ್ನ ಆಭರಣಗಳನ್ನು ಮರೆಯುವಳೇ? ಇಲ್ಲ.
ವಧುವು ಮದುವೆಯ ಉಡುಪನ್ನು ಧರಿಸಿಕೊಳ್ಳಲು ಮರೆಯುವಳೇ? ಇಲ್ಲ.
ಆದರೆ ನನ್ನ ಜನರು ನನ್ನನ್ನು ಅಸಂಖ್ಯಾತ ದಿನಗಳವರೆಗೆ ಮರೆತುಬಿಟ್ಟಿದ್ದಾರೆ.
33 “ಯೆಹೂದವೇ, ಪ್ರಿಯತಮನ ಬೆನ್ನುಹತ್ತಿ ಹೋಗುವದು ನಿನಗೆ ಗೊತ್ತು.
ಆದಕಾರಣ ದುರಾಭ್ಯಾಸವನ್ನು ನೀನು ಕಲಿತುಕೊಂಡಿರುವೆ.
34 ನಿನ್ನ ಕೈಗಳ ಮೇಲೆ ರಕ್ತದ ಕಲೆ ಇದೆ.
ಅದು ನಿರ್ದೋಷಿಗಳಾದ ಬಡವರ ರಕ್ತ.
ಅವರು ನಿನ್ನ ಕೈಗೆ ಸಿಕ್ಕಿಹಾಕಿಕೊಂಡ ಕಳ್ಳರಾಗಿರಲಿಲ್ಲ.
ಆದರೂ ನೀನು ಅವರನ್ನು ಕೊಲೆ ಮಾಡಿರುವೆ.
ನೀನು ಅಂಥ ಕೆಟ್ಟ ಕೆಲಸವನ್ನು ಮಾಡಿರುವೆ.
35 ಆದರೆ ನೀನು, ‘ನಾನು ತಪ್ಪು ಮಾಡಿಲ್ಲ.
ದೇವರು ನನ್ನ ಮೇಲೆ ಕೋಪಗೊಂಡಿಲ್ಲ’ ಎಂದು ಹೇಳುತ್ತಿರುವೆ.
ಆದ್ದರಿಂದ ನೀನು ಸುಳ್ಳು ಹೇಳಿದ ಅಪರಾಧಿಯೆಂದು ನಾನು ನಿನಗೆ ತೀರ್ಪುನೀಡುತ್ತೇನೆ.
ಏಕೆಂದರೆ ‘ನಾನು ಯಾವ ತಪ್ಪೂ ಮಾಡಿಲ್ಲ’ ಎಂದು ನೀನು ಹೇಳಿಕೊಳ್ಳುತ್ತಿರುವೆ.
36 ನಿನ್ನ ವಿಚಾರಗಳನ್ನು ಬದಲಾಯಿಸುವದು ನಿನಗೆ ಸುಲಭ.
ಅಸ್ಸೀರಿಯಾ ನಿನ್ನನ್ನು ನಿರಾಶೆಗೊಳಿಸಿತು.
ಆಗ ನೀನು ಅಸ್ಸೀರಿಯರನ್ನು ಬಿಟ್ಟು ಈಜಿಪ್ಟಿನ ಸಹಾಯವನ್ನು ಕೇಳಿದೆ,
ಈಜಿಪ್ಟ್ ನಿನ್ನನ್ನು ನಿರಾಶೆಗೊಳಿಸುತ್ತದೆ.
37 ಕೊನೆಗೆ ನೀನು ಈಜಿಪ್ಟನ್ನು ಬಿಡುವೆ, ನಾಚಿಕೆಯಿಂದ
ತಲೆಯ ಮೇಲೆ ಕೈಯಿಟ್ಟುಕೊಂಡು ಹೊರಡುವೆ.
ನೀನು ಆ ದೇಶಗಳನ್ನು ನಂಬಿರುವೆ,
ಆದರೆ ಆ ದೇಶಗಳಿಂದ ನಿನಗೆ ಯಾವ ಅನುಕೂಲವೂ ಆಗದು.
ಯೆಹೋವನು ಆ ದೇಶಗಳನ್ನು ನಿರಾಕರಿಸಿದ್ದಾನೆ.”
14 ನೀವು ಮಾಡುವ ಪ್ರತಿಯೊಂದನ್ನು ಗುಣಗುಟ್ಟದೆಯೂ ವಿವಾದವಿಲ್ಲದೆಯೂ ಮಾಡಿರಿ. 15 ಆಗ ಮುಗ್ಧರೂ ಪರಿಶುದ್ಧರೂ ಆಗಿದ್ದು ಕಳಂಕರಹಿತವಾದ ದೇವಮಕ್ಕಳಾಗಿರುತ್ತೀರಿ. ದುಷ್ಟಜನರ ಮಧ್ಯದಲ್ಲಿ ವಾಸವಾಗಿರುವ ನೀವು ಕಾರ್ಗತ್ತಲೆಯಲ್ಲಿ ಪ್ರಕಾಶಿಸುವ ನಕ್ಷತ್ರಮಂಡಲದಂತಿದ್ದೀರಿ. 16 ಜೀವದಾಯಕವಾದ ವಾಕ್ಯವನ್ನು ನೀವು ಆ ಜನರಿಗೆ ಕೊಟ್ಟರೆ, ಕ್ರಿಸ್ತನು ಬಂದಾಗ ನಾನು ಹೆಮ್ಮೆಯಿಂದಿರಲು ಸಾಧ್ಯವಾಗುತ್ತದೆ, ಏಕೆಂದರೆ ನನ್ನ ಕೆಲಸವು ವ್ಯರ್ಥವಾಗಲಿಲ್ಲ. ನಾನು ಪಂದ್ಯದಲ್ಲಿ ಓಡಿ ಗೆದ್ದೆನು.
17 ನೀವು ನಿಮ್ಮ ಜೀವಿತಗಳನ್ನು ದೇವರ ಸೇವೆಗಾಗಿ ಯಜ್ಞದೋಪಾದಿಯಲ್ಲಿ ಅರ್ಪಿಸಿಕೊಳ್ಳಲು ನಿಮ್ಮ ನಂಬಿಕೆಯು ನಿಮ್ಮನ್ನು ಪ್ರೇರೇಪಿಸುತ್ತದೆ. ಒಂದುವೇಳೆ, ನಿಮ್ಮ ಯಜ್ಞದೊಡನೆ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ಸಂತೋಷಿಸುತ್ತೇನೆ, ನಿಮ್ಮೆಲ್ಲರೊಂದಿಗೆ ಸಂತೋಷಿಸುತ್ತೇನೆ. 18 ಹಾಗೆಯೇ ನೀವು ಸಹ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಿಸಿರಿ.
ಕ್ರಿಸ್ತನೇ ಎಲ್ಲಕ್ಕಿಂತಲೂ ಮುಖ್ಯ
3 ನನ್ನ ಸಹೋದರ ಸಹೋದರಿಯರೇ, ಪ್ರಭುವಿನಲ್ಲಿ ಸಂತೋಷವಾಗಿರಿ. ನಾನು ಮೊದಲು ಬರೆದದ್ದನ್ನೇ ಮತ್ತೆ ಬರೆಯಲು ನನಗೆ ಬೇಸರವೇನೂ ಇಲ್ಲ; ಏಕೆಂದರೆ ಅದು ನಿಮ್ಮನ್ನು ಮತ್ತಷ್ಟು ಸಂರಕ್ಷಿಸುತ್ತದೆ.
2 ಕೇಡುಮಾಡುವಂಥ ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಅವರು ನಾಯಿಗಳಂತಿದ್ದಾರೆ. ಸುನ್ನತಿ ಎಂದು ಹೇಳಿಕೊಂಡು ಅಂಗಚ್ಛೇದನೆ ಮಾಡುವವರ ವಿಷಯದಲ್ಲಿ ಎಚ್ಚರಿಕೆಯಾಗಿರಿ. 3 ನಾವಾದರೋ ನಿಜವಾದ ಸುನ್ನತಿಯನ್ನು ಹೊಂದಿದವರಾಗಿದ್ದೇವೆ; ದೇವರನ್ನು ಆತ್ಮನ ಮೂಲಕ ಆರಾಧಿಸುವವರಾಗಿದ್ದೇವೆ.[a] ನಾವು ಕ್ರಿಸ್ತ ಯೇಸುವಿನಲ್ಲಿರಲು ಹೆಮ್ಮೆಪಡುತ್ತೇವೆ. ನಾವು ನಮ್ಮ ಮೇಲಾಗಲಿ ನಾವು ಮಾಡಬಲ್ಲವುಗಳ ಮೇಲಾಗಲಿ ಭರವಸೆ ಇಡುವುದಿಲ್ಲ. 4 ನಾನು ನನ್ನ ಮೇಲೆ ಭರವಸೆ ಇಡಬಲ್ಲವನಾಗಿದ್ದರೂ ಇಡುವುದಿಲ್ಲ. ತನ್ನ ಮೇಲೆ ಭರವಸೆ ಇಡಲು ತನಗೆ ಆಧಾರವಿರುವುದಾಗಿ ಯಾವನಾದರೂ ಯೋಚಿಸಿದರೆ, ನನ್ನ ಮೇಲೆ ಭರವಸೆ ಇಡಲು ನನಗೆ ಅದಕ್ಕಿಂತಲೂ ಹೆಚ್ಚಿನ ಆಧಾರವಿದೆ.
Kannada Holy Bible: Easy-to-Read Version. All rights reserved. © 1997 Bible League International