Revised Common Lectionary (Complementary)
ರಚನೆಗಾರ: ದಾವೀದ.
28 ಯೆಹೋವನೇ, ನೀನೇ ನನ್ನ ಬಂಡೆ.
ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ
ಜನರು ನನ್ನನ್ನು ಪರಿಗಣಿಸುವರು.
2 ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
3 ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತಾರೆ.[a]
4 ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
ಅವರಿಗೆ ತಕ್ಕ ದಂಡನೆಯನ್ನು ಕೊಡು.
5 ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
ನಿತ್ಯನಾಶಮಾಡುವನು.
6 ಯೆಹೋವನಿಗೆ ಸ್ತೋತ್ರವಾಗಲಿ!
ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
7 ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ ಆತನು ನನಗೆ ಸಹಾಯಮಾಡಿದನು.
ಆದಕಾರಣ ನನ್ನ ಹೃದಯವು ಹರ್ಷಿಸುವುದು;
ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
8 ಯೆಹೋವನು ತನ್ನ ಜನರಿಗೆ ಬಲವೂ
ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.
9 ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.
23 ಫಿಲಿಷ್ಟಿಯ ಅಧಿಪತಿಗಳು ಒಂದು ಉತ್ಸವವನ್ನು ಮಾಡಲು ಸೇರಿಬಂದಿದ್ದರು. ಅವರು ತಮ್ಮ ದೇವರಾದ ದಾಗೋನನಿಗೆ ಒಂದು ಮಹಾಯಜ್ಞವನ್ನು ಸಮರ್ಪಿಸಬೇಕೆಂದಿದ್ದರು. “ನಮ್ಮ ಶತ್ರುವಾದ ಸಂಸೋನನನ್ನು ಸೋಲಿಸಲು ನಮ್ಮ ದೇವರು ನಮಗೆ ಸಹಾಯ ಮಾಡಿದನು” ಎಂದು ಅವರು ಭಾವಿಸಿದ್ದರು. 24 ಫಿಲಿಷ್ಟಿಯರು ಸಂಸೋನನನ್ನು ನೋಡಿದ ಕೂಡಲೇ ತಮ್ಮ ದೇವರನ್ನು ಸ್ತುತಿಸಿದರು. ಅವರು,
“ಇವನು ನಮ್ಮ ಜನರನ್ನು ಹಾಳುಮಾಡಿದನು.
ಇವನು ನಮ್ಮ ಅನೇಕ ಜನರನ್ನು ಕೊಂದನು.
ಆದರೆ ನಮ್ಮ ದೇವರು ನಮ್ಮ ಶತ್ರುವನ್ನು
ಸೆರೆಹಿಡಿಯಲು ಸಹಾಯ ಮಾಡಿದನು”
ಎಂದು ಹಾಡಿದರು.
25 ಆ ಉತ್ಸವದಲ್ಲಿ ಜನರು ಸಂತೋಷವಾಗಿದ್ದರು. ಅವರು, “ಸಂಸೋನನನ್ನು ಕರೆದು ತನ್ನಿ. ನಾವು ಅವನ ತಮಾಷೆಯನ್ನು ನೋಡಬೇಕು” ಎಂದರು. ಅವರು ಸಂಸೋನನನ್ನು ಸೆರೆಮನೆಯಿಂದ ತಂದು ಅವನನ್ನು ಅಪಹಾಸ್ಯ ಮಾಡಿದರು. ಸಂಸೋನನನ್ನು ಅವರ ದೇವರಾದ ದಾಗೋನನ ಮಂದಿರದಲ್ಲಿ ಎರಡು ಕಂಬಗಳ ಮಧ್ಯದಲ್ಲಿ ನಿಲ್ಲಿಸಿದರು. 26 ಒಬ್ಬ ಸೇವಕನು ಸಂಸೋನನ ಕೈಯನ್ನು ಹಿಡಿದುಕೊಂಡಿದ್ದನು. “ಈ ಮಂದಿರಕ್ಕೆ ಆಧಾರವಾಗಿರುವ ಕಂಬಗಳ ಹತ್ತಿರ ನನ್ನನ್ನು ಕರೆದುಕೊಂಡು ಹೋಗು. ನಾನು ಅವುಗಳಿಗೆ ಒರಗಿಕೊಳ್ಳುತ್ತೇನೆ” ಎಂದು ಸಂಸೋನನು ಅವನನ್ನು ಕೇಳಿಕೊಂಡನು.
27 ಆ ಮಂದಿರದಲ್ಲಿ ಗಂಡಸರು ಹೆಂಗಸರು ಕಿಕ್ಕಿರಿದು ನೆರೆದಿದ್ದರು. ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಅಲ್ಲಿದ್ದರು. ಮಾಳಿಗೆಯ ಮೇಲೆ ಸುಮಾರು ಮೂರು ಸಾವಿರ ಹೆಂಗಸರು ಮತ್ತು ಗಂಡಸರು ಇದ್ದರು. ಅವರು ನಕ್ಕು ಸಂಸೋನನನ್ನು ಅಪಹಾಸ್ಯ ಮಾಡುತ್ತಿದ್ದರು. 28 ಆಗ ಸಂಸೋನನು ಯೆಹೋವನಿಗೆ, “ಸರ್ವಶಕ್ತನಾದ ಯೆಹೋವನೇ, ನನ್ನ ಕಡೆಗೆ ಗಮನ ಹರಿಸು. ದೇವರೇ, ದಯವಿಟ್ಟು ನನಗಿನ್ನೊಂದು ಸಲ ಶಕ್ತಿಯನ್ನು ಕೊಡು. ಫಿಲಿಷ್ಟಿಯರು ನನ್ನ ಎರಡು ಕಣ್ಣುಗಳನ್ನು ಕಿತ್ತುಹಾಕಿದ್ದಕ್ಕೆ ಇದೊಂದು ಸಲ ಅವರನ್ನು ಶಿಕ್ಷಿಸುತ್ತೇನೆ” ಎಂದು ಬೇಡಿಕೊಂಡನು. 29 ಆಮೇಲೆ ಸಂಸೋನನು ಇಡೀ ಮಂದಿರಕ್ಕೆ ಆಧಾರವಾಗಿದ್ದ ಎರಡು ಕಂಬಗಳ ಮಧ್ಯದಲ್ಲಿ ನಿಂತುಕೊಂಡನು. ಒಂದು ಕಂಬವನ್ನು ಬಲಗೈಯಿಂದಲೂ ಇನ್ನೊಂದು ಕಂಬವನ್ನು ಎಡಗೈಯಿಂದಲೂ ಹಿಡಿದು, 30 “ಈ ಫಿಲಿಷ್ಟಿಯರ ಜೊತೆ ನಾನೂ ಸಾಯಲು ಸಿದ್ಧ” ಎಂದು ಹೇಳಿ ಆ ಎರಡೂ ಕಂಬಗಳನ್ನು ತನ್ನ ಎಲ್ಲಾ ಶಕ್ತಿಯಿಂದ ಎಳೆಯುತ್ತಾ ಬಾಗಿದನು. ಆಗ ಮಂದಿರವು ಅಧಿಪತಿಗಳ ಮೇಲೂ ಅಲ್ಲಿದ್ದ ಜನರೆಲ್ಲರ ಮೇಲೂ ಕುಸಿದು ಬಿತ್ತು. ಈ ಪ್ರಕಾರ ಸಂಸೋನನು ತಾನು ಜೀವದಿಂದಿದ್ದಾಗ ಕೊಂದ ಜನರಿಗಿಂತ ಹೆಚ್ಚು ಜನರನ್ನು ತಾನು ಸಾಯುವಾಗ ಕೊಂದನು.
31 ಸಂಸೋನನ ಸಹೋದರರು ಮತ್ತು ಅವನ ತಂದೆಯ ಕುಟುಂಬದವರೆಲ್ಲರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಅವನ ತಂದೆಯ ಹೆಸರು ಮಾನೋಹ. ಆ ಸಮಾಧಿಯು ಚೊರ್ಗಕ್ಕೂ ಮತ್ತು ಎಷ್ಟಾವೋಲಿಗೂ ಮಧ್ಯದಲ್ಲಿದೆ. ಸಂಸೋನನು ಇಪ್ಪತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು.
2 ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ತಂದರು. ಅವನು ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಯೇಸು ಈ ಜನರಲ್ಲಿದ್ದ ದೊಡ್ಡ ನಂಬಿಕೆಯನ್ನು ಕಂಡು ಪಾರ್ಶ್ವವಾಯು ರೋಗಿಗೆ, “ಯುವಕನೇ, ಸಂತೋಷಪಡು. ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
3 ಅಲ್ಲಿದ್ದ ಧರ್ಮೋಪದೇಶಕರು ಇದನ್ನು ಕೇಳಿ, “ಇದು ದೇವದೂಷಣೆ” ಎಂದು ತಮ್ಮೊಳಗೆ ಅಂದುಕೊಂಡರು.
4 ಅವರು ಹೀಗೆ ಆಲೋಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆತನು ಅವರಿಗೆ, “ನೀವು ಏಕೆ ದುರಾಲೋಚನೆ ಮಾಡುತ್ತಿದ್ದೀರಿ? 5 ಯಾವುದು ಸುಲಭ? ಈ ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೇ ಅಥವಾ ‘ಮೇಲಕ್ಕೆದ್ದು ನಡೆ’ ಎಂದು ಹೇಳುವುದೇ? 6 ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸಲು ಭೂಲೋಕದಲ್ಲಿ ಅಧಿಕಾರವಿದೆ ಎಂಬುದನ್ನು ನಾನು ನಿಮಗೆ ನಿರೂಪಿಸುತ್ತೇನೆ” ಎಂದನು. ನಂತರ ಯೇಸು ಪಾರ್ಶ್ವವಾಯು ರೋಗಿಗೆ, “ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.
7 ಆಗ ಅವನು ಎದ್ದು ಮನೆಗೆ ಹೋದನು. 8 ಜನರು ಇದನ್ನು ನೋಡಿ ಆಶ್ಚರ್ಯಚಕಿತರಾದರು. ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟಿದ್ದಕ್ಕಾಗಿ ಜನರು ದೇವರನ್ನು ಕೊಂಡಾಡಿದರು.
Kannada Holy Bible: Easy-to-Read Version. All rights reserved. © 1997 Bible League International