Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 28

ರಚನೆಗಾರ: ದಾವೀದ.

28 ಯೆಹೋವನೇ, ನೀನೇ ನನ್ನ ಬಂಡೆ.
    ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
    ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ
    ಜನರು ನನ್ನನ್ನು ಪರಿಗಣಿಸುವರು.
ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
    ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
    ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತಾರೆ.[a]
ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
    ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
    ಅವರಿಗೆ ತಕ್ಕ ದಂಡನೆಯನ್ನು ಕೊಡು.
ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
    ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
    ನಿತ್ಯನಾಶಮಾಡುವನು.

ಯೆಹೋವನಿಗೆ ಸ್ತೋತ್ರವಾಗಲಿ!
    ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
    ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ ಆತನು ನನಗೆ ಸಹಾಯಮಾಡಿದನು.
ಆದಕಾರಣ ನನ್ನ ಹೃದಯವು ಹರ್ಷಿಸುವುದು;
    ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
ಯೆಹೋವನು ತನ್ನ ಜನರಿಗೆ ಬಲವೂ
    ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.

ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
    ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
    ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.

ನ್ಯಾಯಸ್ಥಾಪಕರು 16:1-22

ಸಂಸೋನನು ಗಾಜಾಕ್ಕೆ ಹೋದನು

16 ಒಂದು ದಿನ ಸಂಸೋನನು ಗಾಜಾ ನಗರಕ್ಕೆ ಹೋದನು. ಅವನು ಅಲ್ಲಿ ಒಬ್ಬ ವೇಶ್ಯೆಯನ್ನು ಕಂಡು ಆ ರಾತ್ರಿ ಅವಳೊಂದಿಗಿರಲು ಅವಳ ಮನೆಯೊಳಗೆ ಹೋದನು. ಯಾರೋ ಒಬ್ಬರು, “ಸಂಸೋನನು ಇಲ್ಲಿಗೆ ಬಂದಿದ್ದಾನೆ” ಎಂದು ಗಾಜಾದ ಜನರಿಗೆ ಹೇಳಿದರು. ಅವರು ಅವನನ್ನು ಕೊಲ್ಲಬೇಕೆಂದಿದ್ದರು. ಅದಕ್ಕಾಗಿ ಅವರು ಆ ಸ್ಥಳವನ್ನು ಸುತ್ತುಗಟ್ಟಿದರು. ನಗರದ ಬಾಗಿಲುಗಳನ್ನು ಭದ್ರಪಡಿಸಿ ಅಡಗಿಕೊಂಡು ಸಂಸೋನನ ದಾರಿಕಾಯ್ದರು. ಇಡೀರಾತ್ರಿ ಅವರು ನಗರದ ಬಾಗಿಲಲ್ಲಿ ಸುಮ್ಮನಿದ್ದರು. “ಬೆಳಗಾದ ಮೇಲೆ ನಾವು ಸಂಸೋನನನ್ನು ಕೊಲ್ಲೋಣ” ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.

ಆದರೆ ಸಂಸೋನನು ಆ ವೇಶ್ಯೆಯ ಜೊತೆಯಲ್ಲಿ ಮಧ್ಯರಾತ್ರಿಯವರೆಗೆ ಮಾತ್ರ ಇದ್ದನು. ಸಂಸೋನನು ಮಧ್ಯರಾತ್ರಿಯಲ್ಲಿ ಎದ್ದುಬಿಟ್ಟನು. ಸಂಸೋನನು ನಗರ ದ್ವಾರದ ಬಾಗಿಲನ್ನು ಗಟ್ಟಿಯಾಗಿ ಹಿಡಿದು ಎಳೆದನು. ಕದಗಳು ಗೋಡೆಗಳಿಂದ ಕಿತ್ತುಬಂದವು. ಸಂಸೋನನು ಬಾಗಿಲಕದಗಳನ್ನೂ ಅದರ ನಿಲುವುಪಟ್ಟಿಗಳನ್ನೂ ಅಗುಳಿಗಳನ್ನೂ ಕಿತ್ತು ತನ್ನ ಹೆಗಲ ಮೇಲೆ ಹೊತ್ತು ಹೆಬ್ರೋನ್ ನಗರದ ಹತ್ತಿರವಿರುವ ಪರ್ವತ ಶಿಖರಕ್ಕೆ ತೆಗೆದುಕೊಂಡು ಹೋದನು.

ಸಂಸೋನ ಮತ್ತು ದೆಲೀಲಾ

ತರುವಾಯ ಸಂಸೋನನು ದೆಲೀಲಾ ಎಂಬ ಸ್ತ್ರೀಯನ್ನು ಪ್ರೀತಿಸಿದನು. ಅವಳು ಸೋರೇಕ್ ಕಣಿವೆಯವಳು.

ಫಿಲಿಷ್ಟಿಯ ಪ್ರಭುಗಳು ದೆಲೀಲಳ ಬಳಿಗೆ ಹೋಗಿ, “ಸಂಸೋನನು ಅಷ್ಟೊಂದು ಶಕ್ತಿಶಾಲಿಯಾಗಿರುವುದಕ್ಕೆ ಕಾರಣಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಅವನನ್ನು ಮರುಳುಗೊಳಿಸಿ ಅವನ ರಹಸ್ಯವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡು. ಆಗ ನಾವು ಅವನನ್ನು ಸೋಲಿಸಿ, ಬಂಧಿಸಿ ನಮ್ಮ ಅಧೀನದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ನೀನು ಇದನ್ನು ಮಾಡಿದರೆ ನಮ್ಮಲ್ಲಿ ಪ್ರತಿಯೊಬ್ಬನೂ ನಿನಗೆ ಇಪ್ಪತ್ತೆಂಟು ಬೆಳ್ಳಿನಾಣ್ಯಗಳನ್ನು ಕೊಡುತ್ತೇವೆ” ಎಂದು ಹೇಳಿದರು.

ದೆಲೀಲಳು ಸಂಸೋನನಿಗೆ, “ನಿನಗೆ ಇಂಥ ಮಹಾಶಕ್ತಿ ಹೇಗೆ ಬಂತು? ನಿನ್ನನ್ನು ನಿರ್ಬಲಗೊಳಿಸಿ ಬಂಧಿಸುವುದು ಹೇಗೆ?” ಎಂದು ಕೇಳಿದಳು.

ಅದಕ್ಕೆ ಸಂಸೋನನು, “ಬಿಲ್ಲಿನ ಏಳು ಹೊಸತಂತಿಗಳಿಂದ ನನ್ನನ್ನು ಕಟ್ಟಿದರೆ ನಾನು ಬೇರೆ ಮನುಷ್ಯರಂತೆ ಬಲಹೀನನಾಗುತ್ತೇನೆ” ಎಂದು ಉತ್ತರಿಸಿದನು.

ಆಗ ಫಿಲಿಷ್ಟಿಯ ಅಧಿಪತಿಗಳು ದೆಲೀಲಳಿಗೆ ಬಿಲ್ಲಿನ ಏಳು ಹೊಸ ತಂತಿಗಳನ್ನು ತಂದುಕೊಟ್ಟರು. ಅವು ಇನ್ನೂ ಒಣಗಿರಲಿಲ್ಲ. ದೆಲೀಲಳು ಸಂಸೋನನನ್ನು ಬಿಲ್ಲಿನ ಆ ತಂತಿಗಳಿಂದ ಬಿಗಿದು ಕಟ್ಟಿದಳು. ಪಕ್ಕದ ಕೋಣೆಯಲ್ಲಿ ಕೆಲವು ಜನ ಅಡಗಿಕೊಂಡಿದ್ದರು. ಆಗ ದೆಲೀಲಳು ಸಂಸೋನನಿಗೆ, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಹೇಳಿದಳು. ಆದರೆ ಸಂಸೋನನು ಸುಲಭವಾಗಿ ಆ ಬಿಲ್ಲಿನ ತಂತಿಗಳನ್ನು ಕಿತ್ತುಹಾಕಿದನು; ಸುಟ್ಟದಾರದಿಂದ ಬೂದಿ ಉದುರಿ ಬೀಳುವಂತೆ ಆ ತಂತಿಗಳು ಕಿತ್ತುಬಿದ್ದವು. ಹೀಗಾಗಿ ಫಿಲಿಷ್ಟಿಯರಿಗೆ ಸಂಸೋನನ ಬಲದ ರಹಸ್ಯ ತಿಳಿಯಲಿಲ್ಲ.

10 ಆಗ ದೆಲೀಲಳು ಸಂಸೋನನಿಗೆ, “ನೀನು ನನಗೆ ಸುಳ್ಳು ಹೇಳಿದೆ, ನನ್ನನ್ನು ವಂಚಿಸಿದೆ. ನಿನ್ನನ್ನು ಬಂಧಿಸುವದು ಹೇಗೆಂಬುದನ್ನು ದಯವಿಟ್ಟು ಹೇಳು” ಎಂದು ಕೇಳಿದಳು.

11 ಅದಕ್ಕೆ ಸಂಸೋನನು, “ಎಂದೂ ಉಪಯೋಗಿಸದ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ ನಾನು ಬೇರೆಯವರಂತೆ ನಿರ್ಬಲನಾಗುತ್ತೇನೆ” ಎಂದನು.

12 ದೆಲೀಲಳು ಕೆಲವು ಹೊಸ ಹಗ್ಗಗಳನ್ನು ತೆಗೆದುಕೊಂಡು ಸಂಸೋನನನ್ನು ಬಿಗಿದುಕಟ್ಟಿದಳು. ಕೆಲವು ಜನರು ಪಕ್ಕದ ಕೋಣೆಯಲ್ಲಿ ಅಡಗಿಕೊಂಡಿದ್ದರು. ದೆಲೀಲಳು, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಕೂಗಿದಳು. ಆದರೆ ಅವನು ದಾರಗಳನ್ನು ಕಿತ್ತುಹಾಕುವಂತೆ ಆ ಹಗ್ಗಗಳನ್ನು ಸುಲಭವಾಗಿ ಕಿತ್ತುಹಾಕಿದನು.

13 ಆಗ ದೆಲೀಲಳು ಸಂಸೋನನಿಗೆ, “ನೀನು ನನಗೆ ಪುನಃ ಸುಳ್ಳು ಹೇಳಿದೆ. ನೀನು ನನ್ನನ್ನು ವಂಚಿಸಿದೆ. ನಿನ್ನನ್ನು ಬಂಧಿಸುವುದು ಹೇಗೆಂಬುದನ್ನು ಈಗ ನನಗೆ ತಿಳಿಸು” ಎಂದು ಕೇಳಿದಳು.

ಸಂಸೋನನು, “ನನ್ನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದು ಕಟ್ಟಿದರೆ ನಾನು ಬೇರೆ ಮನುಷ್ಯರಂತೆ ದುರ್ಬಲನಾಗುತ್ತೇನೆ” ಎಂದು ಹೇಳಿದನು.

14 ಸಂಸೋನನು ಮಲಗಿಕೊಂಡಿರುವಾಗ ದೆಲೀಲಳು ಅವನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದಳು. ಆಮೇಲೆ ಆ ಮಗ್ಗವನ್ನು ಒಂದು ಗೂಟದಿಂದ ಭದ್ರಪಡಿಸಿದಳು. ಬಳಿಕ, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಮತ್ತೆ ಕೂಗಿಕೊಂಡಳು. ಸಂಸೋನನು ಗೂಟವನ್ನೂ ಮಗ್ಗವನ್ನೂ ಲಾಳಿಯನ್ನೂ ಕಿತ್ತುಹಾಕಿದನು.

15 ಆಗ ದೆಲೀಲಳು ಸಂಸೋನನಿಗೆ, “‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನೀನು ಹೇಗೆ ಹೇಳಲು ಸಾಧ್ಯ? ನನ್ನನ್ನು ನೀನು ನಂಬುವುದೇ ಇಲ್ಲ. ನೀನು ನನಗೆ ನಿನ್ನ ರಹಸ್ಯವನ್ನು ತಿಳಿಸುವುದಿಲ್ಲ. ಮೂರನೆಯ ಸಲ ನೀನು ನನ್ನನ್ನು ವಂಚಿಸಿದೆ. ನೀನು ನನಗೆ ನಿನ್ನ ಶಕ್ತಿಯ ರಹಸ್ಯವನ್ನು ತಿಳಿಸಲಿಲ್ಲ” ಎಂದಳು. 16 ಅವಳು ಸಂಸೋನನನ್ನು ಪ್ರತಿದಿನ ಪೀಡಿಸತೊಡಗಿದಳು. ಅವನ ಶಕ್ತಿಯ ರಹಸ್ಯದ ಬಗ್ಗೆ ಅವಳು ಪದೇಪದೇ ಕೇಳುತ್ತಿದ್ದದರಿಂದ ಅವನಿಗೆ ಸಾಯುವಷ್ಟು ಬೇಸರವಾಯಿತು. 17 ಕೊನೆಗೆ ಸಂಸೋನನು ದೆಲೀಲಳಿಗೆ ಎಲ್ಲವನ್ನು ಹೇಳಿದನು. “ನಾನೆಂದೂ ನನ್ನ ತಲೆಕೂದಲನ್ನು ಕತ್ತರಿಸಿಕೊಂಡಿಲ್ಲ. ನಾನು ಹುಟ್ಟುವ ಮೊದಲೇ ನನ್ನನ್ನು ದೇವರಿಗೆ ಪ್ರತಿಷ್ಠಿಸಲಾಗಿತ್ತ್ತು. ಯಾರಾದರೂ ನನ್ನ ತಲೆಬೋಳಿಸಿದರೆ ನಾನು ನನ್ನ ಶಕ್ತಿಯನ್ನು ಕಳೆದುಕೊಳ್ಳುತ್ತೇನೆ. ನಾನು ಬೇರೆ ಮನುಷ್ಯರಷ್ಟೇ ದುರ್ಬಲನಾಗುತ್ತೇನೆ” ಎಂದು ಹೇಳಿದನು.

18 ಸಂಸೋನನು ತನ್ನ ರಹಸ್ಯವನ್ನು ತಿಳಿಸಿದನೆಂದು ದೆಲೀಲಳಿಗೆ ಗೊತ್ತಾಯಿತು. ಅವಳು ಫಿಲಿಷ್ಟಿಯ ಅಧಿಪತಿಗಳಿಗೆ ಸಂದೇಶವನ್ನು ಕಳುಹಿಸಿದಳು. ಅವಳು, “ಸಂಸೋನನು ನನಗೆ ಎಲ್ಲವನ್ನು ಹೇಳಿದ್ದಾನೆ, ಮತ್ತೊಮ್ಮೆ ಬನ್ನಿ” ಎಂದು ಹೇಳಿದಳು. ಫಿಲಿಷ್ಟಿಯ ಅಧಿಪತಿಗಳು ದೆಲೀಲಳ ಬಳಿಗೆ ಬಂದರು. ಅವರು ಅವಳಿಗೆ ಕೊಡುವುದಾಗಿ ಹೇಳಿದ್ದ ಹಣವನ್ನು ತಂದಿದ್ದರು.

19 ಸಂಸೋನನು ಅವಳ ತೊಡೆಯ ಮೇಲೆ ಮಲಗಿ ನಿದ್ರೆಮಾಡಿದನು. ಆಗ ಅವಳು ಸಂಸೋನನ ಏಳುಜಡೆಗಳನ್ನು ಬೋಳಿಸಲು ಒಬ್ಬ ಮನುಷ್ಯನನ್ನು ಒಳಗೆ ಕರೆದಳು. ಅವನು ಆ ಏಳು ಜಡೆಗಳನ್ನು ಬೋಳಿಸಲು, ಅವನು ಇತರರಂತೆ ದುರ್ಬಲನಾದನು. 20 ಆಮೇಲೆ ದೆಲೀಲಳು ಅವನನ್ನು, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಕೂಗಿದಳು. ಅವನು ಎಚ್ಚೆತ್ತನು. “ಮುಂಚಿನಂತೆಯೇ ನಾನು ತಪ್ಪಿಸಿಕೊಳ್ಳುವೆನು” ಎಂದು ಅವನು ತಿಳಿದಿದ್ದನು. ಆದರೆ ಯೆಹೋವನು ಅವನನ್ನು ಬಿಟ್ಟುಹೋಗಿದ್ದಾನೆಂಬುದು ಅವನಿಗೆ ಗೊತ್ತಾಗಲಿಲ್ಲ.

21 ಫಿಲಿಷ್ಟಿಯರು ಸಂಸೋನನನ್ನು ಬಂಧಿಸಿ ಅವನ ಕಣ್ಣುಗಳನ್ನು ಕಿತ್ತು ಗಾಜಾ ನಗರಕ್ಕೆ ತೆಗೆದುಕೊಂಡು ಹೋದರು. ಅವನು ಓಡಿಹೋಗದಂತೆ ಅವನಿಗೆ ಸಂಕೋಲೆಗಳನ್ನು ಬಿಗಿದರು. ಅವರು ಸಂಸೋನನನ್ನು ಒಂದು ಸೆರೆಮನೆಯಲ್ಲಿಟ್ಟು ಧಾನ್ಯಬೀಸುವ ಕೆಲಸಕ್ಕೆ ಹಚ್ಚಿದರು. 22 ಆದರೆ ಸಂಸೋನನ ಕೂದಲುಗಳು ಪುನಃ ಬೆಳೆಯತೊಡಗಿದವು.

ಫಿಲಿಪ್ಪಿಯವರಿಗೆ 1:15-21

15 ಕೆಲವರು ತಮ್ಮಲ್ಲಿರುವ ಅಸೂಯೆಯಿಂದಲೂ ವೈಮನಸ್ಸಿನಿಂದಲೂ ಇನ್ನು ಕೆಲವರು ಸಹಾಯ ಮಾಡಬೇಕೆಂಬ ಉದ್ದೇಶದಿಂದಲೂ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. 16 ಇವರು ತಮ್ಮಲ್ಲಿ ಪ್ರೀತಿಯಿರುವುದರಿಂದಲೇ ಜನರಿಗೆ ಬೋಧಿಸುತ್ತಾರೆ. ಸುವಾರ್ತೆಯನ್ನು ಪ್ರತಿಪಾದಿಸುವ ಕೆಲಸವನ್ನು ದೇವರು ನನಗೆ ಕೊಟ್ಟನೆಂಬುದು ಇವರಿಗೆ ಗೊತ್ತಿದೆ. 17 ಬೇರೆ ಕೆಲವರು ತಮ್ಮ ಸ್ವಾರ್ಥದ ದೆಸೆಯಿಂದ ಕ್ರಿಸ್ತನ ವಿಷಯವಾಗಿ ಬೋಧಿಸುತ್ತಾರೆ. ಅವರ ಸುವಾರ್ತಾಸೇವೆಯ ಉದ್ದೇಶವೇ ತಪ್ಪಾಗಿದೆ. ಸೆರೆಯಲ್ಲಿರುವ ನನಗೆ ತೊಂದರೆ ಮಾಡಬೇಕೆಂಬುದೇ ಅವರ ಅಪೇಕ್ಷೆ. 18 ಅವರು ನನಗೆ ತೊಂದರೆ ಮಾಡಿದರೂ ನಾನು ಚಿಂತಿಸುವುದಿಲ್ಲ. ಅವರ ಉದ್ದೇಶವು ಯಥಾರ್ಥವಾಗಿದ್ದರೂ ಯಥಾರ್ಥವಾಗಿಲ್ಲದಿದ್ದರೂ ನನಗದು ಮುಖ್ಯವಲ್ಲ.

ಅವರು ಕ್ರಿಸ್ತನ ವಿಷಯವಾಗಿ ಜನರಿಗೆ ಬೋಧಿಸುತ್ತಿರುವುದರಿಂದ ನಾನು ಉಲ್ಲಾಸಿಸುತ್ತೇನೆ, ಇನ್ನು ಮುಂದೆಯೂ ಉಲ್ಲಾಸಿಸುತ್ತೇನೆ. 19 ನೀವು ನನಗೋಸ್ಕರ ಪ್ರಾರ್ಥಿಸುತ್ತಿದ್ದೀರಿ ಮತ್ತು ಯೇಸು ಕ್ರಿಸ್ತನ ಆತ್ಮನು ನನಗೆ ಸಹಾಯ ಮಾಡುತ್ತಿದ್ದಾನೆ. ಆದ್ದರಿಂದ ನನ್ನ ಈ ಕಷ್ಟವು ನನಗೆ ರಕ್ಷಣೆಯನ್ನು ಉಂಟು ಮಾಡುವುದೆಂದು ನನಗೆ ಗೊತ್ತಿದೆ. 20 ನಾನು ಯಾವ ವಿಷಯದಲ್ಲಿಯೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ಧೈರ್ಯದಿಂದ ಇದ್ದೇನೆ. ನಾನು ಬದುಕಿದರೂ ಸರಿ, ಸತ್ತರೂ ಸರಿ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆ ಉಂಟಾಗಬೇಕೆಂಬುದೇ ನನ್ನ ಅಭಿಲಾಷೆ ಮತ್ತು ನಿರೀಕ್ಷೆ. 21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದೆಂದರೆ ಲಾಭವೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International