Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 33:7-11

“ಈಗ, ನರಪುತ್ರನೇ, ನಾನು ನಿನ್ನನ್ನು ಇಸ್ರೇಲಿನ ಕಾವಲುಗಾರನನ್ನಾಗಿ ಆರಿಸಿದ್ದೇನೆ. ನನ್ನ ಬಾಯಿಂದ ನೀನು ಸಂದೇಶವನ್ನು ಕೇಳಿದಾಗ, ನನ್ನ ಪರವಾಗಿ ನೀನು ಜನರನ್ನು ಎಚ್ಚರಿಸಬೇಕು. ‘ಈ ಕೆಟ್ಟ ಮನುಷ್ಯನು ಸಾಯುವನು’ ಎಂದು ನಾನು ಹೇಳಿದರೆ, ನೀನು ಹೋಗಿ ಆ ಮನುಷ್ಯನನ್ನು ಎಚ್ಚರಿಸಬೇಕು. ಆದರೆ ನೀನು ಅವನನ್ನು ಎಚ್ಚರಿಸದೆ ಹೋದರೆ, ಅವನ ಜೀವಿತವನ್ನು ಬದಲಾಯಿಸಿಕೊಳ್ಳಲು ಹೇಳದೆ ಹೋದರೆ, ಪಾಪಮಾಡಬೇಡ ಎಂದು ಹೇಳದೆ ಹೋದರೆ, ಆ ದುಷ್ಟನು ಸಾಯುವನು. ಯಾಕೆಂದರೆ, ಅವನು ಪಾಪಮಾಡಿದನು. ಆದರೆ ಅವನ ಮರಣಕ್ಕೆ ನಿನ್ನನ್ನು ಕಾರಣನನ್ನಾಗಿ ಮಾಡುತ್ತೇನೆ. ಆದರೆ ನೀನು ಅವನನ್ನು ಎಚ್ಚರಿಸಿ, ಅವನ ಜೀವಿತವನ್ನು ಬದಲಾಯಿಸಲು ಹೇಳಿ, ಪಾಪವನ್ನು ಮಾಡಬೇಡ ಎಂದು ಹೇಳಿದರೂ ಅವನು ಕೇಳದೆ ಹೋದರೆ ಪಾಪ ಮಾಡುವದನ್ನು ಬಿಡದೆ ಹೋದರೆ ಅವನು ಪಾಪ ಮಾಡಿದುದರಿಂದ ಸಾಯುವನು. ಆದರೆ ನೀನು ಅವನ ಮರಣಕ್ಕೆ ಕಾರಣನಾಗುವದಿಲ್ಲ.

ದೇವರು ಮನುಷ್ಯರನ್ನು ನಾಶಮಾಡಲು ಇಷ್ಟಪಡುವುದಿಲ್ಲ

10 “ಆದ್ದರಿಂದ ನರಪುತ್ರನೇ, ನನ್ನ ಪರವಾಗಿ ಇಸ್ರೇಲ್ ಜನರೊಂದಿಗೆ ಮಾತನಾಡು. ‘ನಾವು ಪಾಪಮಾಡಿದ್ದೇವೆ. ಕಟ್ಟಳೆಗಳನ್ನು ಮೀರಿದ್ದೇವೆ. ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ. ನಾವು ಆ ಪಾಪಗಳಿಂದಾಗಿ ಕ್ಷೀಣಿಸುತ್ತಿದ್ದೇವೆ. ನಾವು ಜೀವಿಸಬೇಕಾದರೆ ಏನು ಮಾಡಬೇಕು?’ ಎಂದು ಅವರು ಕೇಳಿಯಾರು.

11 “ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’

ಕೀರ್ತನೆಗಳು 119:33-40

33 ಯೆಹೋವನೇ, ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು,
    ಆಗ ಅವುಗಳನ್ನು ಅನುಸರಿಸುವೆನು.
34 ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡು.
    ಆಗ ನಿನ್ನ ಉಪದೇಶಗಳಿಗೆ ಸಂಪೂರ್ಣವಾಗಿ ವಿಧೇಯನಾಗುವೆನು.
35 ನಿನ್ನ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸು.
    ಆ ಮಾರ್ಗವೇ ನನಗೆ ಬಹು ಇಷ್ಟ.
36 ಐಶ್ವರ್ಯದ ಮೇಲೆ ಮನಸ್ಸಿಡದೆ
    ನಿನ್ನ ಒಡಂಬಡಿಕೆಯ ಬಗ್ಗೆ ಧ್ಯಾನಿಸಲು ನನಗೆ ಸಹಾಯಮಾಡು.
37 ನಿಷ್ಪ್ರಯೋಜಕವಾದವುಗಳ ಮೇಲೆ ದೃಷ್ಟಿಸದಂತೆ ನನ್ನನ್ನು ಕಾಪಾಡು.
    ನಿನ್ನ ಮಾರ್ಗದಲ್ಲಿ ಜೀವಿಸಲು ನನಗೆ ಸಹಾಯಮಾಡು.
38 ನಿನ್ನ ಸೇವಕನಾದ ನನಗೆ ನೀನು ಮಾಡಿದ ವಾಗ್ದಾನಗಳನ್ನು ನೆರವೇರಿಸು.
    ಆಗ ಜನರು ನಿನ್ನನ್ನು ಗೌರವಿಸುವರು.
39 ಅವಮಾನವನ್ನು ನನ್ನಿಂದ ತೊಲಗಿಸು. ನಾನು ಅದಕ್ಕೆ ಹೆದರಿಕೊಂಡಿದ್ದೇನೆ.
    ನಿನ್ನ ಜ್ಞಾನದ ನಿರ್ಧಾರಗಳು ಒಳ್ಳೆಯವುಗಳಾಗಿವೆ.
40 ಇಗೋ, ನಿನ್ನ ಆಜ್ಞೆಗಳನ್ನು ಪ್ರೀತಿಸುವೆನು.
    ನನಗೆ ಒಳ್ಳೆಯವನಾಗಿದ್ದು ನನ್ನನ್ನು ಉಜ್ಜೀವನಗೊಳಿಸು.

ರೋಮ್ನಗರದವರಿಗೆ 13:8-14

ಇತರ ಜನರನ್ನು ಪ್ರೀತಿಸಬೇಕೆಂಬ ಒಂದೇ ಆಜ್ಞೆ

ಜನರಿಗೆ ಯಾವ ವಿಷಯದಲ್ಲಿಯೂ ಸಾಲಗಾರರಾಗಿರಬೇಡಿ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ವಿಷಯದಲ್ಲಿ ಮಾತ್ರ ಯಾವಾಗಲೂ ಸಾಲಗಾರರಾಗಿದ್ದೀರಿ. ಇತರ ಜನರನ್ನು ಪ್ರೀತಿಸುವ ವ್ಯಕ್ತಿಯು ಇಡೀ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದಾನೆ. ಏಕೆಂದರೆ, “ವ್ಯಭಿಚಾರ ಮಾಡಕೂಡದು; ಕೊಲೆ ಮಾಡಕೂಡದು; ಕದಿಯಕೂಡದು; ಇತರರಿಗೆ ಸೇರಿದ ವಸ್ತುಗಳನ್ನು ಅಪೇಕ್ಷಿಸಕೂಡದು”(A) ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಈ ಆಜ್ಞೆಗಳನ್ನು ಮೊದಲುಗೊಂಡು ಉಳಿದೆಲ್ಲಾ ಆಜ್ಞೆಗಳು, “ನೀನು ನಿನ್ನನ್ನು ಪ್ರೀತಿಸುವಂತೆ ಇತರ ಜನರನ್ನೂ ಪ್ರೀತಿಸು”(B) ಎಂಬ ಒಂದೇ ಆಜ್ಞೆಯಲ್ಲಿ ಅಡಕವಾಗಿದೆ. 10 ಪ್ರೀತಿಯು ಬೇರೆಯವರಿಗೆ ಕೇಡುಮಾಡುವುದಿಲ್ಲ. ಆದ್ದರಿಂದ ಪ್ರೀತಿಸುವುದಕ್ಕೂ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದಕ್ಕೂ ವ್ಯತ್ಯಾಸವೇನೂ ಇಲ್ಲ.

11 ನಾವು ಪ್ರಾಮುಖ್ಯವಾದ ಸಮಯದಲ್ಲಿ ಜೀವಿಸುತ್ತಿರುವುದರಿಂದ ಈ ವಿಷಯಗಳನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಗೊತ್ತೇ ಇದೆ. ಹೌದು, ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ ಇದಾಗಿದೆ. ನಾವು ವಿಶ್ವಾಸಿಗಳಾದ ಕಾಲಕ್ಕಿಂತ ಈಗ ನಮ್ಮ ರಕ್ಷಣೆಯು ಸಮೀಪವಾಗಿದೆ. 12 “ರಾತ್ರಿ”ಯು ಬಹುಮಟ್ಟಿಗೆ ಮುಗಿದುಹೋಗಿದೆ. “ಹಗಲು” ಬಹುಮಟ್ಟಿಗೆ ಬಂದಿದೆ. ಆದ್ದರಿಂದ ಕತ್ತಲೆಗೆ ಸೇರಿದ ಕಾರ್ಯಗಳನ್ನು ಇನ್ನು ಮೇಲೆ ಮಾಡದೆ ಬೆಳಕಿಗೆ ಸೇರಿದ ಕಾರ್ಯಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. 13 ಹಗಲಿಗೆ ಸೇರಿದ ಜನರಂತೆ ಸರಿಯಾದ ರೀತಿಯಲ್ಲಿ ಜೀವಿಸೋಣ. ಕೆಟ್ಟದಾದ ಮತ್ತು ವ್ಯರ್ಥವಾದ ಔತಣಕೂಟಗಳನ್ನು ನಾವು ಏರ್ಪಡಿಸಕೂಡದು; ಕುಡಿದು ಮತ್ತರಾಗಕೂಡದು; ನಾವು ಲೈಂಗಿಕ ಪಾಪವನ್ನಾಗಲಿ ನಮ್ಮ ದೇಹದಿಂದ ಯಾವುದೇ ಬಗೆಯ ಪಾಪವನ್ನಾಗಲಿ ಮಾಡಕೂಡದು; ವಾಗ್ವಾದಗಳನ್ನಾಗಲಿ ಜಗಳಗಳನ್ನಾಗಲಿ ಎಬ್ಬಿಸಬಾರದು; ಅಲ್ಲದೆ ಹೊಟ್ಟೆಕಿಚ್ಚುಪಡಬಾರದು. 14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.

ಮತ್ತಾಯ 18:15-20

ನಿಮಗೆ ತಪ್ಪುಮಾಡಿದಾಗ ಮಾಡತಕ್ಕದ್ದೇನು?

(ಲೂಕ 17:3)

15 “ನಿನ್ನ ಸಹೋದರನಾಗಲಿ ಸಹೋದರಿಯಾಗಲಿ ನಿನಗೆ ಯಾವುದಾದರೂ ತಪ್ಪು ಮಾಡಿದರೆ, ನೀನು ಹೋಗಿ ಅವನೊಬ್ಬನೇ ಇರುವಾಗ ಅವನ ತಪ್ಪನ್ನು ತಿಳಿಸು. ಅವನು ನಿನ್ನ ಮಾತಿಗೆ ಕಿವಿಗೊಟ್ಟರೆ, ಮತ್ತೆ ನಿನ್ನ ಸಹೋದರನಾಗಿರಲು ನೀನೇ ಅವನಿಗೆ ಸಹಾಯ ಮಾಡಿದಂತಾಗುವುದು. 16 ಆದರೆ ಅವನು ನಿನ್ನ ಮಾತನ್ನು ಕೇಳದಿದ್ದರೆ, ನಿನ್ನೊಂದಿಗೆ ಒಬ್ಬಿಬ್ಬರನ್ನು ಕರೆದುಕೊಂಡು ಮತ್ತೆ ಅವನ ಬಳಿಗೆ ಹೋಗು. ಆಗ ಪ್ರತಿಯೊಂದು ದೂರಿನ ವಿಷಯದಲ್ಲೂ ಇಬ್ಬರು ಅಥವಾ ಮೂವರು ಸಾಕ್ಷಿಗಳಿರುವರು.[a] 17 ಅವನು ಅವರ ಮಾತನ್ನೂ ಕೇಳದಿದ್ದರೆ, ಸಭೆಗೆ ತಿಳಿಸು. ಅವನು ಸಭೆಯ ಮಾತನ್ನೂ ಕೇಳದಿದ್ದರೆ ಅವನನ್ನು ದೇವರಲ್ಲಿ ನಂಬಿಕೆ ಇಡದ ಮನುಷ್ಯನಂತಾಗಲಿ ಸುಂಕವಸೂಲಿಗಾರನಂತಾಗಲಿ ಪರಿಗಣಿಸಿರಿ.

18 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಲೋಕದಲ್ಲಿ ನೀಡುವ ನಿಷಿದ್ಧಾಜ್ಞೆಯು ದೇವರೇ ನೀಡಿದ ನಿಷಿದ್ಧಾಜ್ಞೆಯಾಗಿರುತ್ತದೆ. ನೀವು ಭೂಲೋಕದಲ್ಲಿ ನೀಡುವ ಅನುಮತಿಯು ದೇವರೇ ನೀಡಿದ ಅನುಮತಿಯಾಗಿರುತ್ತದೆ. 19 ಇದಲ್ಲದೆ ನಿಮ್ಮಲ್ಲಿ ಇಬ್ಬರು ಈ ಲೋಕದಲ್ಲಿ ಒಮ್ಮನಸ್ಸಿನಿಂದ ಏನನ್ನೇ ಬೇಡಿಕೊಂಡರೂ ಪರಲೋಕದಲ್ಲಿರುವ ನನ್ನ ತಂದೆ ಅದನ್ನು ನೆರವೇರಿಸುತ್ತಾನೆ. 20 ಇದು ಸತ್ಯ. ಏಕೆಂದರೆ ಎಲ್ಲಿ ಇಬ್ಬರಾಗಲಿ ಮೂವರಾಗಲಿ ನನ್ನಲ್ಲಿ ನಂಬಿಕೆಯನ್ನಿಟ್ಟು ಒಟ್ಟಾಗಿ ಸೇರಿಬಂದಿರುತ್ತಾರೋ ಅವರ ಮಧ್ಯದಲ್ಲಿ ನಾನಿರುತ್ತೇನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International