Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 17

ಪ್ರಾರ್ಥನೆ. ರಚನೆಗಾರ: ದಾವೀದ.

17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
    ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
    ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
    ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
    ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
    ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
    ಆದ್ದರಿಂದ ಈಗಲೂ ನನಗೆ ಕಿವಿಗೊಡು.
ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
    ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
    ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.
ನಿನ್ನ ಕಣ್ಣಿನ ಗುಡ್ಡೆಯಂತೆ ನನ್ನನ್ನು ಸಂರಕ್ಷಿಸು.
    ನಿನ್ನ ರೆಕ್ಕೆಗಳ ಮರೆಯಲ್ಲಿ ನನ್ನನ್ನು ಅಡಗಿಸಿಕೊ.
ಯೆಹೋವನೇ, ನನ್ನನ್ನು ನಾಶಮಾಡಬೇಕೆಂದಿರುವ ದುಷ್ಟರಿಂದ ನನ್ನನ್ನು ತಪ್ಪಿಸಿ ಕಾಪಾಡು.
    ನನಗೆ ಕೇಡುಮಾಡಬೇಕೆಂದು ಸುತ್ತುಗಟ್ಟಿರುವ ಜನರಿಂದ ನನ್ನನ್ನು ಸಂರಕ್ಷಿಸು.
10 ಆ ದುಷ್ಟರು ಗರ್ವಿಷ್ಠರಾಗಿದ್ದಾರೆ.
    ಅವರು ಜಂಬಕೊಚ್ಚಿಕೊಳ್ಳುತ್ತಾರೆ.
11 ಅವರು ನನ್ನನ್ನು ಬೆನ್ನಟ್ಟಿ ಬಂದು ಸುತ್ತುಗಟ್ಟಿದ್ದಾರೆ;
    ಆಕ್ರಮಣಮಾಡಲು ಸಿದ್ಧರಾಗಿದ್ದಾರೆ.[a]
12 ಅವರು ಬೇಟೆಗಾಗಿ ಕಾಯುತ್ತಿರುವ ಸಿಂಹಗಳಂತಿದ್ದಾರೆ;
    ಅಡಗಿಕೊಂಡು ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಂತಿದ್ದಾರೆ.

13 ಯೆಹೋವನೇ, ಎದ್ದೇಳು,[b] ವೈರಿಗಳ ಬಳಿಗೆ ಹೋಗು.
    ಅವರನ್ನು ಶರಣಾಗತರನ್ನಾಗಿ ಮಾಡು.
    ನಿನ್ನ ಖಡ್ಗವನ್ನು ಪ್ರಯೋಗಿಸಿ ದುಷ್ಟರಿಂದ ನನ್ನನ್ನು ರಕ್ಷಿಸು.
14 ಯೆಹೋವನೇ, ಈ ಲೋಕಕ್ಕಾಗಿಯೇ ಜೀವಿಸುವ ಜನರಿಂದ
    ನನ್ನನ್ನು ತಪ್ಪಿಸಿ ಕಾಪಾಡು.
ನಿನ್ನ ಸಹಾಯಕ್ಕಾಗಿ ಮೊರೆಯಿಡುವ ಅನೇಕರು ಕೊರತೆಯಲ್ಲಿದ್ದಾರೆ.
    ಅವರಿಗೆ ಆಹಾರವನ್ನು ಹೇರಳವಾಗಿ ದಯಪಾಲಿಸು.
    ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಬೇಕಾದದ್ದನ್ನೆಲ್ಲಾ ಒದಗಿಸಿಕೊಡು.

15 ನಾನು ನ್ಯಾಯಕ್ಕಾಗಿ ಪ್ರಾರ್ಥಿಸಿದ್ದರಿಂದ ನನಗೆ ನಿನ್ನ ಮುಖದ ದರ್ಶನವಾಗುವುದು.
    ಎಚ್ಚೆತ್ತಾಗ ನಿನ್ನ ಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

2 ಸಮುವೇಲನು 11:27-12:15

27 ಅವಳು ತನ್ನ ಶೋಕಕಾಲವನ್ನು ಮುಗಿಸಿದ ನಂತರ, ಅವಳನ್ನು ತನ್ನ ಮನೆಗೆ ಕರೆತರಲು ದಾವೀದನು ಸೇವಕರನ್ನು ಕಳುಹಿಸಿದನು. ಅವಳು ದಾವೀದನ ಪತ್ನಿಯಾದಳು. ಅವಳು ದಾವೀದನಿಂದ ಒಂದು ಗಂಡುಮಗುವಿಗೆ ಜನ್ಮನೀಡಿದಳು. ದಾವೀದನು ಮಾಡಿದ ಈ ಕೆಟ್ಟಕಾರ್ಯವು ಯೆಹೋವನಿಗೆ ದುಃಖವನ್ನುಂಟುಮಾಡಿತು.

ನಾತಾನನು ದಾವೀದನೊಂದಿಗೆ ಮಾತಾಡಿದ್ದು

12 ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ನಾತಾನನು ದಾವೀದನ ಬಳಿಗೆ ಬಂದು, “ಒಂದು ನಗರದಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಶ್ರೀಮಂತ. ಆದರೆ ಮತ್ತೊಬ್ಬನು ತೀರಾ ಬಡವ. ಶ್ರೀಮಂತನ ಹತ್ತಿರ ಅನೇಕ ಕುರಿಗಳು ಮತ್ತು ದನಗಳು ಇದ್ದವು. ಆದರೆ ಬಡವನ ಹತ್ತಿರ ಅವನೇ ತಂದ ಒಂದು ಕುರಿಮರಿಯ ಹೊರತಾಗಿ ಬೇರೇನೂ ಇರಲಿಲ್ಲ. ಆ ಕುರಿಮರಿಯನ್ನು ಬಹು ಪ್ರೀತಿಯಿಂದ ಆ ಬಡವನು ಸಾಕಿದನು. ಅವನ ಮಕ್ಕಳೊಂದಿಗೆ ಈ ಕುರಿಮರಿಯೂ ಬೆಳೆಯಿತು. ಆ ಕುರಿಮರಿಯು ಬಡವನ ಊಟವನ್ನೇ ತಿನ್ನುತ್ತಿತ್ತು. ಅವನ ಬಟ್ಟಲಿನಲ್ಲಿಯೇ ಅದು ನೀರನ್ನು ಕುಡಿಯುತ್ತಿತ್ತು. ಅವನ ಎದೆಯ ಮೇಲೆಯೇ ಆ ಕುರಿಮರಿಯು ಮಲಗುತ್ತಿತ್ತು. ಆ ಕುರಿಮರಿಯು ಬಡವನಿಗೆ ಮಗಳಂತೆಯೇ ಇತ್ತು.

“ಆಗ ಶ್ರೀಮಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಶ್ರೀಮಂತನು ಆ ಪ್ರಯಾಣಿಕನಿಗೆ ಊಟವನ್ನು ಕೊಡಲು ಇಚ್ಛಿಸಿದನು. ಆದರೆ ಶ್ರೀಮಂತನು ಆ ಪ್ರಯಾಣಿಕನಿಗೆ ಕೊಡಲು ತನ್ನ ಸ್ವಂತ ಕುರಿಗಳಿಂದಾಗಲಿ ದನಗಳಿಂದಾಗಲಿ ಯಾವುದನ್ನೇ ಆಗಲಿ ತೆಗೆದುಕೊಳ್ಳಲು ಇಚ್ಛಿಸಲಿಲ್ಲ. ಶ್ರೀಮಂತನು ಆ ಬಡವನಿಂದ ಕುರಿಮರಿಯನ್ನು ತೆಗೆದುಕೊಂಡು ಅದನ್ನು ಕೊಯ್ಯಿಸಿ ತನ್ನ ಅತಿಥಿಗಾಗಿ ಅಡಿಗೆ ಮಾಡಿಸಿದನು” ಎಂದು ಹೇಳಿದನು.

ದಾವೀದನು ಶ್ರೀಮಂತನ ಮೇಲೆ ಬಹಳ ಕೋಪಗೊಂಡನು. ಅವನು ನಾತಾನನಿಗೆ, “ಯೆಹೋವನ ಆಣೆಯಾಗಿ ಈ ಕಾರ್ಯವನ್ನು ಮಾಡಿದ ಮನುಷ್ಯನು ಸಾಯಲೇಬೇಕು! ಅವನು ಕರುಣೆಯಿಲ್ಲದೆ ಇಂತಹ ಕೆಟ್ಟಕಾರ್ಯವನ್ನು ಮಾಡಿದ್ದಕ್ಕಾಗಿ ಕುರಿಮರಿಯ ಬೆಲೆಯ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು” ಎಂದು ಹೇಳಿದನು.

ನಾತಾನನು ದಾವೀದನ ಪಾಪದ ಬಗ್ಗೆ ಹೇಳಿದನು

ಆಗ ನಾತಾನನು ದಾವೀದನಿಗೆ, “ನೀನೇ ಆ ಮನುಷ್ಯ! ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನಿನ್ನನ್ನು ಇಸ್ರೇಲರ ರಾಜನನ್ನಾಗಿ ಆರಿಸಿದವನು ನಾನೇ. ಸೌಲನಿಂದ ನಿನ್ನನ್ನು ರಕ್ಷಿಸಿದವನು ನಾನೇ. ಅವನ ಕುಟುಂಬವನ್ನೂ ಅವನ ಪತ್ನಿಯರನ್ನೂ ನಿನಗೆ ಕೊಟ್ಟವನು ನಾನೇ. ನಿನ್ನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಮಾಡಿದವನು ನಾನೇ. ಅದು ಸಾಲದು ಎನ್ನುವಂತೆ, ನಾನು ಮತ್ತಷ್ಟು ಹೆಚ್ಚಿನದನ್ನೂ ನೀಡಿದೆನು. ನೀನು ಯೆಹೋವನ ಆಜ್ಞೆಯನ್ನು ಏಕೆ ಕಡೆಗಣಿಸಿದೆ? ಆತನು ತಪ್ಪೆಂದು ಹೇಳಿದ ಕಾರ್ಯವನ್ನು ಏಕೆ ಮಾಡಿದೆ? ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ನೀನು ಕೊಲ್ಲಿಸಿದೆ. ಅವನ ಪತ್ನಿಯನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಿದೆ. ಹೌದು, ನೀನು ಅಮ್ಮೋನಿಯರ ಕತ್ತಿಯಿಂದ ಊರೀಯನನ್ನು ಕೊಲ್ಲಿಸಿದೆ. 10 ನೀನು ಅವನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಮತ್ತು ನನ್ನ ಆಜ್ಞೆಯನ್ನು ತಿರಸ್ಕರಿಸಿದ್ದರಿಂದ ಕತ್ತಿಯು ನಿನ್ನ ಕುಟುಂಬವನ್ನು ಸದಾ ಹಿಡಿದಿರುವುದು.’

11 “ಯೆಹೋವನು ಹೇಳುವುದೇನೆಂದರೆ: ‘ನಾನು ನಿನಗೆ ತೊಂದರೆಯನ್ನುಂಟುಮಾಡುತ್ತೇನೆ. ನಿನ್ನ ಸ್ವಂತ ಕುಟುಂಬದಿಂದಲೇ ಈ ತೊಂದರೆಯು ಬರುತ್ತದೆ. ನಾನು ನಿನ್ನ ಪತ್ನಿಯರನ್ನು ತೆಗೆದುಕೊಂಡು ನಿನಗೆ ತೀರ ಹತ್ತಿರನಾಗಿರುವ ಒಬ್ಬ ವ್ಯಕ್ತಿಗೆ ಕೊಡುತ್ತೇನೆ. ಅವನು ನಿನ್ನ ಪತ್ನಿಯರ ಜೊತೆಯಲ್ಲಿ ಮಲಗುತ್ತಾನೆ. ಇದು ಎಲ್ಲರಿಗೂ ತಿಳಿಯುತ್ತದೆ.[a] 12 ನೀನು ಬತ್ಷೆಬೆಳೊಂದಿಗೆ ಗುಟ್ಟಾಗಿ ಮಲಗಿದೆ. ಆದರೆ ನಾನು ಹೇಳುತ್ತಿರುವ ಮಾತೆಲ್ಲಾ ಇಸ್ರೇಲ್ ಜನರ ಕಣ್ಣೆದುರಿನಲ್ಲಿ ನಡೆಯುವುದು’”[b] ಎಂದು ಹೇಳಿದನು.

13 ಆಗ ದಾವೀದನು ನಾತಾನನಿಗೆ, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದೆನು” ಎಂದನು.

ನಾತಾನನು ದಾವೀದನಿಗೆ, “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ. ನೀನು ಸಾಯುವುದಿಲ್ಲ. 14 ನೀನು ನಿನ್ನ ಪಾಪಕೃತ್ಯಗಳಿಂದ ಯೆಹೋವನ ವೈರಿಗಳು ಯೆಹೋವನನ್ನು ಹೆಚ್ಚು ದ್ವೇಷಿಸುವಂತೆ ಮಾಡಿದೆ. ನಿನಗೆ ಹುಟ್ಟಿದ ಗಂಡುಮಗು ಈ ಕಾರಣಕ್ಕಾಗಿ ಸತ್ತುಹೋಗುವುದು” ಎಂದು ಹೇಳಿದನು.

ದಾವೀದ ಮತ್ತು ಬತ್ಷೆಬೆಳ ಮಗುವಿನ ಮರಣ

15 ನಾತಾನನು ಮನೆಗೆ ಹೋದನು. ದಾವೀದನಿಗೆ ಊರೀಯನ ಹೆಂಡತಿಯಲ್ಲಿ ಹುಟ್ಟಿದ ಗಂಡುಮಗುವಿಗೆ ಯೆಹೋವನು ಬಹಳ ಕಾಯಿಲೆಯನ್ನು ಬರಮಾಡಿದನು.

ಪ್ರಕಟನೆ 3:7-13

ಫಿಲದೆಲ್ಫಿಯದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಪವಿತ್ರನೂ ಸತ್ಯವಂತನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಬೀಗದ ಕೈ ನನ್ನಲ್ಲಿದೆ. ನಾನು ತೆರೆದದ್ದನ್ನು ಯಾರೂ ಮುಚ್ಚಲಾರರು;(A) ಮುಚ್ಚಿದ್ದನ್ನು ಯಾರೂ ತೆರೆಯಲಾರರು.

“ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಮುಂದೆ ತೆರೆದ ಬಾಗಿಲನ್ನು ಇಟ್ಟಿದ್ದೇನೆ. ಅದನ್ನು ಯಾರೂ ಮುಚ್ಚಲಾರರು. ನೀನು ದುರ್ಬಲನೆಂಬುದು ನನಗೆ ತಿಳಿದಿದೆ. ಆದರೆ ನೀನು ನನ್ನ ಬೋಧನೆಯನ್ನು ಅನುಸರಿಸಿದೆ. ನನ್ನ ಹೆಸರನ್ನು ಹೇಳಲು ನೀನು ಹಿಂಜರಿಯಲಿಲ್ಲ. ಆಲಿಸು! ಅಲ್ಲಿ ಸೈತಾನನ ಗುಂಪಿಗೆ ಸೇರಿದವರಿದ್ದಾರೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಸುಳ್ಳು. ಅವರು ನಿಜವಾದ ಯೆಹೂದ್ಯರಲ್ಲ. ಆ ಜನರು ನಿನ್ನ ಮುಂದೆ ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸುವಂತೆ ಮಾಡುತ್ತೇನೆ. ನಾನು ಪ್ರೀತಿಸಿದ ಜನರು ನೀವೇ ಎಂಬುದನ್ನು ಆಗ ಅವರು ತಿಳಿದುಕೊಳ್ಳುತ್ತಾರೆ. 10 ನೀನು ನನ್ನ ಆಜ್ಞೆಯನ್ನು ಸಹನೆಯಿಂದ ಮತ್ತು ತಾಳ್ಮೆಯಿಂದ ಅನುಸರಿಸಿದೆ. ಆದ್ದರಿಂದ ಈ ಲೋಕಕ್ಕೆಲ್ಲಾ ಉಂಟಾಗುವ ಕಡುಶೋಧನೆಯಿಂದ ನಾನು ನಿನ್ನನ್ನು ತಪ್ಪಿಸುತ್ತೇನೆ. ಭೂನಿವಾಸಿಗಳೆಲ್ಲರನ್ನು ಈ ಶೋಧನೆಯು ಪರಿಶೋಧಿಸುತ್ತದೆ.

11 “ನಾನು ಬೇಗನೆ ಬರುತ್ತೇನೆ. ಈಗ ನೀನಿರುವಂತೆಯೇ ಇರು. ಆಗ ಯಾರೂ ನಿನ್ನ ಕಿರೀಟವನ್ನು ಕಸಿದುಕೊಳ್ಳಲಾರರು. 12 ಜಯಗಳಿಸಿದ ವ್ಯಕ್ತಿಯನ್ನು ನನ್ನ ದೇವರ ಆಲಯದಲ್ಲಿ ಆಧಾರಸ್ತಂಭವನ್ನಾಗಿ ಮಾಡುವೆನು. ಅವನು ದೇವರ ಆಲಯವನ್ನು ಮತ್ತೆಂದಿಗೂ ಬಿಟ್ಟುಹೋಗುವ ಅಗತ್ಯವಿಲ್ಲ. ನನ್ನ ದೇವರ ಹೆಸರನ್ನೂ ನನ್ನ ದೇವರ ಪಟ್ಟಣದ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. ಹೊಸ ಜೆರುಸಲೇಮೇ ಆ ಪಟ್ಟಣ. ಆ ಪಟ್ಟಣವು ನನ್ನ ದೇವರ ಬಳಿಯಿಂದ ಪರಲೋಕದಿಂದ ಇಳಿದುಬರುತ್ತದೆ. ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. 13 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International