Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 18:1-3

ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

18 ನನ್ನ ಬಲವಾಗಿರುವ ಯೆಹೋವನೇ,
    ನಿನ್ನನ್ನೇ ಪ್ರೀತಿಸುವೆನು!

ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
    ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
    ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ!
    ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.

ಕೀರ್ತನೆಗಳು 18:20-32

20 ನಾನು ನಿರಪರಾಧಿಯಾಗಿದ್ದರಿಂದ ಯೆಹೋವನು ನನಗೆ ಪ್ರತಿಫಲ ನೀಡಿದನು;
    ನಾನು ತಪ್ಪನ್ನು ಮಾಡಿಲ್ಲದ ಕಾರಣ ನನಗೆ ಒಳ್ಳೆಯದನ್ನು ಮಾಡಿದನು.
21 ಯಾಕೆಂದರೆ ನಾನು ಯೆಹೋವನಿಗೆ ವಿಧೇಯನಾಗಿದ್ದೆನು;
    ನನ್ನ ದೇವರ ವಿರೋಧನಾಗಿ ನಾನು ಪಾಪಮಾಡಲಿಲ್ಲ.
22 ನಾನು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ
    ಯಾವಾಗಲೂ ಜ್ಞಾಪಿಸಿಕೊಳ್ಳುವೆ.
23 ಆತನ ಎದುರಿನಲ್ಲಿ ನಿರ್ದೋಷಿಯಾಗಿದ್ದೆನು.
    ಪಾಪದಲ್ಲಿ ಬೀಳದಂತೆ ಎಚ್ಚರಿಕೆಯಾಗಿದ್ದೆನು.
24 ಯೆಹೋವನ ದೃಷ್ಟಿಯಲ್ಲಿ ನಾನು ನೀತಿವಂತನೂ ನಿರಪರಾಧಿಯೂ ಆಗಿರುವುದರಿಂದ
    ಆತನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.

25 ಯೆಹೋವನೇ, ನಿನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು
    ನೀನು ಶಾಶ್ವತವಾದ ಪ್ರೀತಿಯಿಂದ ಪ್ರೀತಿಸುವೆ.
ನಿನಗೆ ನಂಬಿಗಸ್ತರಾಗಿರುವವರಿಗೆ
    ನೀನೂ ನಂಬಿಗಸ್ತನಾಗಿರುವೆ.
26 ನೀನು ಒಳ್ಳೆಯವರಿಗೂ ಶುದ್ಧರಿಗೂ ಒಳ್ಳೆಯವನಾಗಿಯೂ ಪರಿಶುದ್ಧನಾಗಿಯೂ ಇರುವೆ;
    ದುಷ್ಟರಿಗಾದರೋ ಶತ್ರುವಾಗಿರುವೆ.
27 ಯೆಹೋವನೇ, ನೀನು ದೀನರಿಗೆ ಸಹಾಯಮಾಡುವೆ.
    ಗರ್ವಿಷ್ಠರಿಗಾದರೋ ಅವಮಾನ ಮಾಡುವೆ.
28 ಯೆಹೋವನೇ, ನನ್ನ ದೀಪವನ್ನು ಹೊತ್ತಿಸುವವನು ನೀನೇ.
    ನನ್ನ ದೇವರು ನನ್ನ ಸುತ್ತಲೂ ಇರುವ ಕತ್ತಲೆಯನ್ನು ಬೆಳಕನ್ನಾಗಿ ಮಾಡುವನು.
29 ಯೆಹೋವನೇ, ನಿನ್ನ ಸಹಾಯದಿಂದ ನಾನು ಸೈನಿಕರೊಡನೆ ಓಡಬಲ್ಲೆ.
    ನನ್ನ ದೇವರ ಸಹಾಯದಿಂದ ನಾನು ಶತ್ರುಗಳ ಕೋಟೆಗಳನ್ನು ಹತ್ತುವೆನು.

30 ದೇವರ ಮಾರ್ಗಗಳು ನಿಷ್ಕಳಂಕವಾಗಿವೆ;
    ಯೆಹೋವನ ಮಾತುಗಳು ಸತ್ಯವಾಗಿವೆ.
    ಆತನು ತನ್ನಲ್ಲಿ ಭರವಸೆಯಿಟ್ಟಿರುವವರನ್ನು ಸಂರಕ್ಷಿಸುವನು.
31 ಯೆಹೋವನಲ್ಲದೆ ಬೇರೆ ಯಾವ ದೇವರೂ ಇಲ್ಲ.
    ನಮ್ಮ ದೇವರಲ್ಲದೆ ಬೇರೆ ಯಾವ ಬಂಡೆಯೂ ಇಲ್ಲ.
32 ಆತನೇ, ನನಗೆ ಬಲವನ್ನು ಕೊಡುವನು;
    ಶುದ್ಧ ಜೀವನವನ್ನು ನಡೆಸಲು ನನಗೆ ಸಹಾಯಮಾಡುವನು.

1 ಸಮುವೇಲನು 7:3-13

ಸಮುವೇಲನು ಇಸ್ರೇಲರಿಗೆ, “ನೀವು ಯೆಹೋವನ ಬಳಿಗೆ ಪೂರ್ಣಮನಸ್ಸಿನಿಂದ ಮತ್ತೆ ಬರುವುದಾದರೆ ನಿಮ್ಮ ಬಳಿಯಿರುವ ಅನ್ಯದೇವರುಗಳನ್ನು ಎಸೆಯಬೇಕು. ನೀವು ಅಷ್ಟೋರೆತ್ ದೇವತೆಯ ವಿಗ್ರಹಗಳನ್ನು ತ್ಯಜಿಸಬೇಕು. ನೀವು ನಿಮ್ಮನ್ನು ಯೆಹೋವನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟು ಆತನ ಸೇವೆಯನ್ನು ಮಾತ್ರ ಮಾಡಬೇಕು. ಆಗ ಆತನು ನಿಮ್ಮನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.

ಆದ್ದರಿಂದ ಇಸ್ರೇಲರು ಬಾಳ್‌ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ತ್ಯಜಿಸಿ ಯೆಹೋವನ ಸೇವೆಯನ್ನು ಮಾತ್ರ ಮಾಡಿದರು.

ಸಮುವೇಲನು ಅವರಿಗೆ, “ಇಸ್ರೇಲರೆಲ್ಲರೂ ಮಿಚ್ಪೆಯಲ್ಲಿ ಒಟ್ಟುಗೂಡಬೇಕು. ನಾನು ನಿಮಗಾಗಿ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.

ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿದರು. ಅವರು ನೀರನ್ನು ತೆಗೆದುಕೊಂಡು ಬಂದು ಯೆಹೋವನ ಮುಂದೆ ಅದನ್ನು ಸುರಿದರು. ಈ ರೀತಿ ಅಂದು ಅವರು ಉಪವಾಸವನ್ನು ಆರಂಭಿಸಿದರು. ಅಂದು ಅವರು ಯಾವ ಆಹಾರವನ್ನೂ ತೆಗೆದುಕೊಳ್ಳಲಿಲ್ಲ. ಅಲ್ಲದೆ ಅವರು ತಮ್ಮ ಪಾಪಗಳನ್ನು ಅರಿಕೆ ಮಾಡಿದರು. “ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಅವರು ಹೇಳಿದರು. ಹೀಗಿರಲು, ಸಮುವೇಲನು ಇಸ್ರೇಲರ ನ್ಯಾಯಾಧೀಶನಾಗಿ ಮಿಚ್ಪೆಯಲ್ಲಿ ಸೇವೆ ಸಲ್ಲಿಸಿದನು.

ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿರುವುದು ಫಿಲಿಷ್ಟಿಯರಿಗೆ ಗೊತ್ತಾಯಿತು. ಫಿಲಿಷ್ಟಿಯ ಅಧಿಪತಿಗಳು ಇಸ್ರೇಲರ ವಿರುದ್ಧ ಹೋರಾಡಲು ಹೊರಟರು. ಫಿಲಿಷ್ಟಿಯರು ಬರುತ್ತಿರುವುದನ್ನು ಕೇಳಿ ಇಸ್ರೇಲರು ಭಯಗೊಂಡರು. ಇಸ್ರೇಲರು ಸಮುವೇಲನಿಗೆ, “ನಮ್ಮ ದೇವರಾದ ಯೆಹೋವನಲ್ಲಿ ನಮಗಾಗಿ ಪ್ರಾರ್ಥಿಸು! ನಿಲ್ಲಿಸಬೇಡ! ಫಿಲಿಷ್ಟಿಯರಿಂದ ನಮ್ಮನ್ನು ರಕ್ಷಿಸಲು ಯೆಹೋವನಲ್ಲಿ ಬೇಡಿಕೊ!” ಎಂದು ಹೇಳಿದರು.

ಸಮುವೇಲನು ಕುರಿಮರಿಯೊಂದನ್ನು ತಂದು ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸಿದನು. ಸಮುವೇಲನು ಇಸ್ರೇಲರಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಸಮುವೇಲನ ಪ್ರಾರ್ಥನೆಗೆ ಉತ್ತರಿಸಿದನು. 10 ಸಮುವೇಲನು ಕುರಿಮರಿಯನ್ನು ಸಮರ್ಪಿಸುವಾಗ, ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಬಂದರು. ಆದರೆ ಯೆಹೋವನು ಫಿಲಿಷ್ಟಿಯರ ಹತ್ತಿರ ದೊಡ್ಡ ಗುಡುಗನ್ನು ಉಂಟುಮಾಡಿದನು. ಗುಡುಗಿನ ಶಬ್ದವು ಫಿಲಿಷ್ಟಿಯರಲ್ಲಿ ಕಳವಳವನ್ನೂ ಭಯವನ್ನೂ ಉಂಟುಮಾಡಿತು. ಅವರ ಸೇನಾಧಿಪತಿಗಳಿಗೆ ಅವರನ್ನು ಹತೋಟಿಯಲ್ಲಿಡಲಾಗಲಿಲ್ಲ. ಆದಕಾರಣ ಇಸ್ರೇಲರು ಫಿಲಿಷ್ಟಿಯರನ್ನು ಯುದ್ಧದಲ್ಲಿ ಸೋಲಿಸಿದರು. 11 ಇಸ್ರೇಲರು ಮಿಚ್ಪೆಯಿಂದ ಬಂದು ಫಿಲಿಷ್ಟಿಯರನ್ನು ದಾರಿಯುದ್ದಕ್ಕೂ ಸಂಹರಿಸುತ್ತಾ ಬೇತ್ಕರಿನವರೆಗೆ ಅಟ್ಟಿಸಿಕೊಂಡು ಹೋದರು.

ಇಸ್ರೇಲಿನಲ್ಲಿ ಶಾಂತಿ ಸ್ಥಾಪನೆ

12 ಅನಂತರ ಸಮುವೇಲನು ವಿಶೇಷವಾದ ಕಲ್ಲನ್ನು ನೆಡಿಸಿದನು. ಯೆಹೋವನು ಮಾಡಿದ ಕಾರ್ಯಗಳನ್ನು ಜನರು ಜ್ಞಾಪಿಸಿಕೊಳ್ಳುತ್ತಿರಲಿ ಎಂಬುದಕ್ಕಾಗಿ ಅವನು ಈ ರೀತಿ ಮಾಡಿದನು. ಸಮುವೇಲನು ಮಿಚ್ಪೆ ಮತ್ತು ಶೇನಿಗಳ ಮಧ್ಯೆ ಕಲ್ಲನ್ನು ನೆಟ್ಟು, “ಯೆಹೋವನು ಇಲ್ಲಿಯವರೆಗೂ ನಮಗೆ ಸಹಾಯ ಮಾಡಿದನು” ಎಂದು ಹೇಳಿ, ಅದಕ್ಕೆ “ಸಹಾಯದ ಕಲ್ಲು”[a] ಎಂದು ಹೆಸರಿಟ್ಟನು.

13 ಫಿಲಿಷ್ಟಿಯರು ಸೋತುಹೋದರು. ಅವರು ಮತ್ತೆ ಇಸ್ರೇಲರ ಭೂಮಿಯಲ್ಲಿ ಹೆಜ್ಜೆ ಇಡಲಿಲ್ಲ. ಸಮುವೇಲನ ಜೀವಿತದ ಉಳಿದ ಭಾಗದಲ್ಲಿ ಯೆಹೋವನು ಫಿಲಿಷ್ಟಿಯರಿಗೆ ವಿರುದ್ಧವಾಗಿದ್ದನು.

ರೋಮ್ನಗರದವರಿಗೆ 2:1-11

ಯೆಹೂದ್ಯರು ಸಹ ಪಾಪಿಗಳು

“ಇತರ ಜನರಿಗೆ ತೀರ್ಪು ಮಾಡಬಲ್ಲೆವು” ಎಂದು ನಿಮ್ಮ ವಿಷಯದಲ್ಲಿ ಯೋಚಿಸಿಕೊಳ್ಳಬೇಡಿ. ಏಕೆಂದರೆ ನೀವು ಸಹ ಪಾಪಮಾಡಿ ಅಪರಾಧಿಗಳಾಗಿದ್ದೀರಿ. ನೀವೂ ಆ ಜನರಿಗೆ ತೀರ್ಪು ಮಾಡುತ್ತೀರಿ. ಆದರೆ ಅದೇ ಕಾರ್ಯಗಳನ್ನು ನೀವೂ ಮಾಡುತ್ತೀರಿ. ಆದ್ದರಿಂದ ನೀವು ಅವರಿಗೆ ತೀರ್ಪು ಮಾಡುವಾಗ, ನಿಜವಾಗಿಯೂ ನಿಮಗೇ ತೀರ್ಪು ಮಾಡಿಕೊಳ್ಳುವವರಾಗಿದ್ದೀರಿ. ಅಪರಾಧಗಳನ್ನು ಮಾಡುವ ಜನರಿಗೆ ದೇವರು ತೀರ್ಪು ಮಾಡುತ್ತಾನೆ. ಆತನ ತೀರ್ಪು ನ್ಯಾಯವಾದುದೆಂದು ನಮಗೆ ಗೊತ್ತಿದೆ. ಆ ಅಪರಾಧಗಳನ್ನು ಮಾಡುವ ಜನರಿಗೆ ನೀವು ಸಹ ತೀರ್ಪು ಮಾಡುತ್ತೀರಿ. ಆದರೆ ನೀವೇ ಆ ಅಪರಾಧಗಳನ್ನು ಮಾಡುತ್ತೀರಿ. ಹೀಗಿರಲು ದೇವರ ದಂಡನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿದೆ. ದೇವರು ನಿಮ್ಮ ವಿಷಯದಲ್ಲಿ ಬಹು ಕನಿಕರ ಉಳ್ಳವನಾಗಿದ್ದಾನೆ; ತಾಳ್ಮೆ ಉಳ್ಳವನಾಗಿದ್ದಾನೆ. ನೀವು ಮಾರ್ಪಾಟಾಗಬೇಕೆಂದು ದೇವರು ನಿಮಗಾಗಿ ಕಾದುಕೊಂಡಿದ್ದಾನೆ. ಆದರೆ ನೀವು ಆತನ ಕರುಣೆಯ ಬಗ್ಗೆ ಆಲೋಚಿಸುವುದೇ ಇಲ್ಲ. ನೀವು ನಿಮ್ಮ ಹೃದಯಗಳನ್ನೂ ಜೀವಿತಗಳನ್ನೂ ಮಾರ್ಪಡಿಸಿಕೊಳ್ಳಬೇಕಾಗುತ್ತದೆಯೆಂದು ದೇವರ ಕನಿಕರವನ್ನು ಅರ್ಥಮಾಡಿಕೊಳ್ಳದೆ ಇದ್ದೀರಿ.

ನೀವು ಕಠಿಣರಾಗಿದ್ದೀರಿ ಮತ್ತು ಮೊಂಡರಾಗಿದ್ದೀರಿ. ಮಾರ್ಪಾಟಾಗಲು ನಿಮಗೆ ಇಷ್ಟವಿಲ್ಲ. ಆದ್ದರಿಂದ ನಿಮಗೆ ಬರಲಿರುವ ದಂಡನೆಯನ್ನು ನೀವು ಹೆಚ್ಚುಹೆಚ್ಚು ಮಾಡಿಕೊಳ್ಳುತ್ತಿದ್ದೀರಿ. ದೇವರು ತನ್ನ ಕೋಪವನ್ನು ತೋರಿಸುವ ದಿನದಲ್ಲಿ ನಿಮಗೆ ಆ ದಂಡನೆಯಾಗುವುದು. ಆ ದಿನದಲ್ಲಿ ದೇವರ ನ್ಯಾಯವಾದ ತೀರ್ಪುಗಳನ್ನು ಜನರು ನೋಡುವರು.[a] ದೇವರು ಪ್ರತಿಯೊಬ್ಬರಿಗೂ ಅವರವರು ಮಾಡಿದ ಕಾರ್ಯಗಳಿಗಾಗಿ ಬಹುಮಾನವನ್ನಾಗಲಿ ದಂಡನೆಯನ್ನಾಗಲಿ ಕೊಡುವನು. ಕೆಲವು ಜನರು ಮಹಿಮೆಗಾಗಿ, ಘನತೆಗಾಗಿ ಮತ್ತು ಅಮರತ್ವಕ್ಕಾಗಿ ಯಾವಾಗಲೂ ಸತ್ಕಾರ್ಯಗಳನ್ನು ಮಾಡುತ್ತಾ ಜೀವಿಸುವರು. ದೇವರು ಆ ಜನರಿಗೆ ನಿತ್ಯಜೀವವನ್ನು ಕೊಡುವನು. ಆದರೆ ಉಳಿದ ಜನರು ಸ್ವಾರ್ಥಿಗಳಾಗಿದ್ದು, ಸತ್ಯವನ್ನು ಅನುಸರಿಸದೆ ದುಷ್ಟತ್ವವನ್ನು ಅನುಸರಿಸುವವರಾಗಿದ್ದಾರೆ. ಅವರ ಮೇಲೆ ದೇವರ ದಂಡನೆಯೂ ಕೋಪವೂ ಬರುತ್ತದೆ. ಕೆಟ್ಟದ್ದನ್ನು ನಡೆಸುವ ಪ್ರತಿಯೊಬ್ಬ ವ್ಯಕ್ತಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಕಷ್ಟಸಂಕಟಗಳನ್ನು ಕೊಡುತ್ತಾನೆ. 10 ಆದರೆ ಒಳ್ಳೆಯದನ್ನು ಮಾಡುವ ಪ್ರತಿಯೊಬ್ಬರಿಗೂ ಅಂದರೆ ಮೊದಲನೆಯದಾಗಿ ಯೆಹೂದ್ಯರಿಗೆ, ಅನಂತರ ಗ್ರೀಕರಿಗೆ ಸಹ ದೇವರು ಮಹಿಮೆಯನ್ನು, ಘನತೆಯನ್ನು ಮತ್ತು ಶಾಂತಿಯನ್ನು ಕೊಡುವನು. 11 ದೇವರು ಪಕ್ಷಪಾತ ಮಾಡದೆ ಎಲ್ಲರಿಗೂ ಒಂದೇ ರೀತಿಯಲ್ಲಿ ತೀರ್ಪು ಕೊಡುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International