Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 138

ಸ್ತುತಿಗೀತೆ. ರಚನೆಗಾರ: ದಾವೀದ.

138 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
    ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು.
ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು.
    ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು.
ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ.
ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ
    ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ.

ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ
    ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ.
ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು;
    ಯಾಕೆಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು.
ಯೆಹೋವನೇ ಮಹೋನ್ನತನು.
    ಆದರೂ ಆತನು ದೀನರಿಗೋಸ್ಕರ ಚಿಂತಿಸುವನು.
ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ.
    ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ.
ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು.
    ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.
ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು.
    ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು.
ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!

ಯೆಹೆಜ್ಕೇಲ 28:11-19

11 ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 12 “ನರಪುತ್ರನೇ, ತೂರ್ ದೇಶದ ರಾಜನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ:

“‘ನೀನೊಬ್ಬ ಆದರ್ಶ ಮನುಷ್ಯನಾಗಿದ್ದೆ.
    ಸರ್ವಾಂಗಸುಂದರನೂ ಜ್ಞಾನದಿಂದ ತುಂಬಿದವನೂ ಆಗಿದ್ದೆ.
13 ದೇವರ ಉದ್ಯಾನವನವಾಗಿದ್ದ ಏದೆನಿನಲ್ಲಿ ನೀನಿದ್ದೆ.
    ನಿನ್ನ ಬಳಿಯಲ್ಲಿ ಬಂಗಾರದ ಚೌಕಟ್ಟಿನಲ್ಲಿ ಕುಳ್ಳಿರಿಸಿದ
    ವಜ್ರ, ವೈಢೂರ್ಯ, ನವರತ್ನಗಳ ಆಭರಣಗಳಿದ್ದವು.
ನೀನು ಸೃಷ್ಟಿಸಲ್ಪಟ್ಟ ದಿನದಲ್ಲಿ ಈ ಸೌಂದರ್ಯವು ನಿನಗೆ ಕೊಡಲ್ಪಟ್ಟಿತು.
    ದೇವರು ನಿನ್ನನ್ನು ಬಲಾಢ್ಯನನ್ನಾಗಿ ಮಾಡಿದನು.
14 ನೀನು ಆರಿಸಲ್ಪಟ್ಟ ಕೆರೂಬಿಯರಲ್ಲಿ ಒಬ್ಬನಾಗಿದ್ದೆ.
    ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿದ್ದವು.
ನಾನು ನಿನ್ನನ್ನು ದೇವರ ಪವಿತ್ರ ಪರ್ವತದಲ್ಲಿಟ್ಟೆನು.
    ನೀನು ಬೆಂಕಿಯಂತೆ ಹೊಳೆಯುವ ರತ್ನಗಳ ಮೇಲೆ ನಡೆದಾಡಿದೆ.
15 ನಾನು ನಿನ್ನನ್ನು ಸೃಷ್ಟಿಸಿದಾಗ ನೀನು ಸದ್ಗುಣಿಯಾಗಿ ನಿರ್ದೋಷಿಯಾಗಿದ್ದಿ.
    ಆದರೆ ನೀನು ದುಷ್ಟನಾಗುತ್ತಾ ಬಂದೆ.
16 ನಿನ್ನ ವ್ಯಾಪಾರವು ನಿನಗೆ ಐಶ್ವರ್ಯವನ್ನು ತಂದಿತು.
    ಆದರೆ ಅದರೊಂದಿಗೆ ನಾನಾ ದುಷ್ಟತ್ವಗಳು ನಿನ್ನೊಳಗೆ ಬಂದು ನೀನು ಪಾಪ ಮಾಡಿದೆ.
ಆಗ ನಾನು ನಿನ್ನನ್ನು ಅಶುದ್ಧನೆಂದು ಪರಿಗಣಿಸಿ
    ನಿನ್ನನ್ನು ದೇವರ ಪರ್ವತದಿಂದ ದಬ್ಬಿಬಿಟ್ಟೆನು.
ನೀನು ನನ್ನ ಕೆರೂಬಿಯರಲ್ಲಿ ವಿಶೇಷವಾದವನಾಗಿದ್ದೆ.
    ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿರುತ್ತಿದ್ದವು.
ಆದರೆ ಬೆಂಕಿಯಂತೆ ಹೊಳೆಯುವ ರತ್ನಾಭರಣಗಳನ್ನೆಲ್ಲಾ
    ತೆಗೆದಿಡಲು ನಿನ್ನನ್ನು ಬಲವಂತಪಡಿಸಿದೆ.
17 ನಿನ್ನ ಸೌಂದರ್ಯವು ನಿನಗೆ ಹೆಮ್ಮೆ ಏರುವಂತೆ ಮಾಡಿತು.
    ನಿನ್ನ ಘನತೆಯು ನಿನ್ನ ಜ್ಞಾನವನ್ನು ಕೆಡಿಸಿತು.
ಆದ್ದರಿಂದ ನಿನ್ನನ್ನು ನೆಲಕ್ಕೆ ದಬ್ಬಿದೆ.
    ಈಗ ಬೇರೆ ರಾಜರುಗಳು ನಿನ್ನನ್ನೆ ಎವೆಯಿಕ್ಕದೆ ನೋಡುತ್ತಾರೆ.
18 ನೀನು ಅನೇಕ ತಪ್ಪುಗಳನ್ನು ಮಾಡಿದೆ.
ನೀನು ಮೋಸಗಾರನಾದ ವ್ಯಾಪಾರಿ.
    ಇದರಿಂದಾಗಿ ನೀನು ಪವಿತ್ರಸ್ಥಳವನ್ನು ಹೊಲೆ ಮಾಡಿರುವಿ.
ಆದ್ದರಿಂದ ನಿನ್ನೊಳಗೆ ಬೆಂಕಿಯನ್ನು ಬರಮಾಡಿ
    ಅದು ನಿನ್ನನ್ನು ದಹಿಸುವಂತೆ ಮಾಡಿದೆನು.
ನೀನು ಸುಟ್ಟ ಬೂದಿಯಾದೆ.
    ಈಗ ಎಲ್ಲರೂ ನಿನ್ನ ಲಜ್ಜಾತನವನ್ನು ನೋಡುವರು.

19 “‘ಬೇರೆ ಜನಾಂಗಗಳ ಜನರು
    ನಿನಗೆ ಆದದ್ದನ್ನು ನೋಡಿ ಬೆಚ್ಚಿಬೆರಗಾದರು.
ನಿನಗಾದ ದುಸ್ಥಿತಿಯು ಜನರನ್ನು ಭಯಪಡಿಸಿತು.
    ನಿನ್ನ ಅಂತ್ಯವಾಯಿತು!’”

1 ಕೊರಿಂಥದವರಿಗೆ 6:1-11

ಕ್ರೈಸ್ತರ ನಡುವೆ ನ್ಯಾಯನಿರ್ಣಯದ ಸಮಸ್ಯೆಗಳು

ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವಿರೋಧವಿದ್ದರೆ, ನೀವು ನ್ಯಾಯಾಲಯಗಳಿಗೆ ಹೋಗುವುದೇಕೆ? ಅವರು ನೀತಿವಂತರಲ್ಲ. ಹೀಗಿರಲು ನಿಮಗೆ ನ್ಯಾಯತೀರ್ಪು ಮಾಡಲು ಅವರಿಗೆ ನೀವು ಅವಕಾಶ ಮಾಡಿಕೊಡುವುದೇಕೆ? ನಿಮಗೆ ನಾಚಿಕೆಯಾಗಬೇಕು. ನಿಮಗೆ ನ್ಯಾಯತೀರ್ಪು ನೀಡಲು ನೀವು ದೇವಜನರಿಗೆ ಏಕೆ ಅವಕಾಶ ಕೊಡಬಾರದು? ದೇವಜನರು ಲೋಕಕ್ಕೆ ತೀರ್ಪು ಮಾಡುವರೆಂಬುದು ನಿಮಗೆ ತಿಳಿಯದೋ? ದೇವಜನರು ಲೋಕಕ್ಕೆ ನ್ಯಾಯತೀರ್ಪು ಮಾಡುವವರಾಗಿದ್ದರೆ, ಇಂಥ ಚಿಕ್ಕ ಸಂಗತಿಗಳ ಬಗ್ಗೆಯೂ ನ್ಯಾಯತೀರ್ಪು ಮಾಡಬಲ್ಲರೆಂಬುದು ನಿಶ್ಚಯವಾಗಿದೆ. ಮುಂದಿನ ಕಾಲದಲ್ಲಿ ನಾವು ದೇವದೂತರಿಗೂ ನ್ಯಾಯತೀರಿಸುತ್ತೇವೆ ಎಂಬುದು ನಿಮಗೆ ಗೊತ್ತಿದೆ. ಆದ್ದರಿಂದ ಈ ಜೀವಿತದ ಸಂಗತಿಗಳನ್ನು ಕುರಿತು ನಾವು ತೀರ್ಪುಮಾಡಬಲ್ಲೆವು. ಹೀಗಿರಲು, ನಿಮಲ್ಲಿ ಭಿನ್ನಾಭಿಪ್ರಾಯಗಳಿದ್ದು ಅದಕ್ಕೆ ನ್ಯಾಯನಿರ್ಣಯದ ಅಗತ್ಯವಿರುವಾಗ, ಸಭೆಗೆ ಸೇರಿಲ್ಲದ ಜನರ ಬಳಿಗೆ ನೀವು ಆ ಸಂಗತಿಗಳನ್ನು ತೆಗೆದುಕೊಂಡು ಹೋಗುವುದೇಕೆ? ಆ ಜನರಿಗೆ ಸಭೆಯಲ್ಲಿ ಯಾವ ಮಾನ್ಯತೆಯೂ ಇಲ್ಲ. ನಿಮ್ಮನ್ನು ನಾಚಿಕೆಪಡಿಸಲು ಹೀಗೆ ಹೇಳುತ್ತಿದ್ದೇನೆ. ವಿಶ್ವಾಸಿಗಳಾಗಿರುವ ಇಬ್ಬರು ಸಹೋದರರ ನಡುವೆ ಉಂಟಾಗಿರುವ ವ್ಯಾಜ್ಯಕ್ಕೆ ತೀರ್ಪು ನೀಡಬಲ್ಲ ಜ್ಞಾನಿಯೊಬ್ಬನು ನಿಮ್ಮ ಸಭೆಯಲ್ಲಿ ಇಲ್ಲವೇ? ನಿಮ್ಮಲ್ಲಿ ಒಬ್ಬ ಸಹೋದರನು ಮತ್ತೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅವರ ವ್ಯಾಜ್ಯಕ್ಕೆ ತೀರ್ಪು ನೀಡಲು ಅವಿಶ್ವಾಸಿಗಳಿಗೆ ನೀವು ಅವಕಾಶ ಮಾಡಿಕೊಟ್ಟಿದ್ದೀರಿ!

ನೀವು ಆಗಲೇ ಸೋತು ಹೋಗಿದ್ದೀರೆಂಬುದನ್ನು ನಿಮ್ಮ ಮಧ್ಯದಲ್ಲಿರುವ ವ್ಯಾಜ್ಯಗಳೇ ಸೂಚಿಸುತ್ತವೆ. ಅದಕ್ಕಿಂತ, ನೀವು ಕೆಟ್ಟದ್ದನ್ನು ಸಹಿಸಿಕೊಳ್ಳಬೇಕಿತ್ತು; ಮೋಸವನ್ನು ತಾಳಿಕೊಳ್ಳಬೇಕಿತ್ತು. ಆದರೆ ಸ್ವತಃ ನೀವೇ ಕೆಟ್ಟದ್ದನ್ನು ಮಾಡುತ್ತೀರಿ ಮತ್ತು ಮೋಸ ಮಾಡುತ್ತೀರಿ! ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನಿಗೇ ನೀವು ಹೀಗೆ ಮಾಡುತ್ತೀರಿ.

9-10 ಅಧರ್ಮಿಗಳು ದೇವರ ರಾಜ್ಯವನ್ನು ಪಡೆಯುವುದಿಲ್ಲವೆಂದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ದೇವರ ರಾಜ್ಯಕ್ಕೆ ಸೇರದ ಜನರು ಯಾರ್ಯಾರೆಂದರೆ: ಲೈಂಗಿಕ ಪಾಪ ಮಾಡುವವರು, ವಿಗ್ರಹಗಳನ್ನು ಪೂಜಿಸುವವರು, ವ್ಯಭಿಚಾರ ಮಾಡುವವರು, ಸಲಿಂಗಕಾಮಿಗಳು, ಕದಿಯುವವರು, ಸ್ವಾರ್ಥಿಗಳು, ಕುಡುಕರು, ಬೈಯುವವರು ಮತ್ತು ಮೋಸಗಾರರು. 11 ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರಾತ್ಮನ ಮೂಲಕವಾಗಿಯೂ ನೀವು ತೊಳೆಯಲ್ಪಟ್ಟಿರಿ; ಪರಿಶುದ್ಧರಾದಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿಕೊಂಡಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International