Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 18:1-19

ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

18 ನನ್ನ ಬಲವಾಗಿರುವ ಯೆಹೋವನೇ,
    ನಿನ್ನನ್ನೇ ಪ್ರೀತಿಸುವೆನು!

ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
    ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
    ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ!
    ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
    ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
    ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
    ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
    ನನ್ನ ಮೊರೆಗೆ ಕಿವಿಗೊಟ್ಟನು.
ಆಗ ಆತನಿಗೆ ಸಿಟ್ಟೇರಿದ್ದರಿಂದ ಭೂಮಿಯು ಗಡಗಡನೆ ನಡುಗಿತು;
    ಪರ್ವತಗಳ ಬುನಾದಿಗಳು ಕಂಪಿಸಿದವು.
ಆತನ ಮೂಗಿನಿಂದ ಹೊಗೆಯು ಬಂದಿತು;
    ಆತನ ಬಾಯಿಂದ ಅಗ್ನಿಜ್ವಾಲೆಯೂ ಬೆಂಕಿಯ ಕಿಡಿಗಳೂ ಬಂದವು.
ಆತನು ಆಕಾಶವನ್ನು ಹರಿದು ಕೆಳಗಿಳಿದು ಬಂದನು.
    ಆತನು ದಟ್ಟವಾದ ಕಪ್ಪುಮೋಡದ ಮೇಲೆ ನಿಂತುಕೊಂಡನು.
10 ಕೆರೂಬಿಗಳ ಮೇಲೆ ಆಸೀನನಾಗಿ
    ವಾಯುವೇ ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
11 ಆತನನ್ನು ಗುಡಾರದಂತೆ ಆವರಿಸಿಕೊಂಡಿದ್ದ ದಟ್ಟವಾದ ಕಪ್ಪುಮೋಡದಲ್ಲಿ
    ಆತನು ಮರೆಯಾದನು.
12 ಬಳಿಕ, ಆತನ ಉಜ್ವಲವಾದ ಪ್ರಕಾಶವು ಮೋಡಗಳನ್ನು ಛೇದಿಸಿಕೊಂಡು ನುಗ್ಗಲು
    ಆಲಿಕಲ್ಲಿನ ಮಳೆಯು ಸುರಿಯಿತು; ಮಿಂಚುಗಳು ಹೊಳೆದವು.
13 ಯೆಹೋವನು ಆಕಾಶದಲ್ಲಿ ಗುಡುಗಿದನು;
    ಮಹೋನ್ನತ ದೇವರು ತನ್ನ ಧ್ವನಿಯನ್ನು ಕೇಳುವಂತೆ ಮಾಡಿದನು.
14 ಆತನು ಬಾಣಗಳನ್ನು[b] ಎಸೆದು ವೈರಿಗಳನ್ನು ಚದರಿಸಿಬಿಟ್ಟನು;
    ಸಿಡಿಲುಮಿಂಚುಗಳಿಂದ ಅವರನ್ನು ಕಳವಳಗೊಳಿಸಿದನು.

15 ಯೆಹೋವನೇ, ನೀನು ಆಜ್ಞಾಪಿಸಿದಾಗ
    ಬಿರುಗಾಳಿಯು ಬೀಸತೊಡಗಿ ನೀರನ್ನು ನೂಕಲು
ಸಮುದ್ರದ ತಳವೇ ಕಾಣಿಸಿತು.
    ಭೂಮಿಯ ಅಸ್ತಿವಾರಗಳೂ ಕಾಣಿಸಿದವು.

16 ಆತನು ಮೇಲಿನ ಲೋಕದಿಂದ ಕೈಚಾಚಿ ನನ್ನನ್ನು ರಕ್ಷಿಸಿದನು.
    ಆತನು ನನ್ನ ಕೈಹಿಡಿದು ನೀರಿನಿಂದ ಮೇಲೆತ್ತಿದನು.
17 ನನ್ನನ್ನು ದ್ವೇಷಿಸುವ ವೈರಿಗಳು
    ನನಗಿಂತ ಬಲವಾಗಿಯೂ ಶಕ್ತರಾಗಿಯೂ ಇದ್ದರು; ಆತನು ನನ್ನನ್ನು ಅವರಿಂದ ರಕ್ಷಿಸಿದನು.
18 ನಾನು ಕಷ್ಟದಲ್ಲಿದ್ದಾಗ ಅವರು ನನ್ನ ಮೇಲೆ ಆಕ್ರಮಣಮಾಡಲು,
    ಯೆಹೋವನು ನನಗೆ ಸಹಾಯಕನಾಗಿ ಬಂದನು.
19 ಆತನು ನನ್ನನ್ನು ಪ್ರೀತಿಸುವುದರಿಂದ ನನ್ನನ್ನು ರಕ್ಷಿಸಿದನು;
    ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬಂದನು.

ಯೋಬನು 36:24-33

24 ದೇವರನ್ನು ಆತನ ಕಾರ್ಯಗಳಿಗಾಗಿ ಕೊಂಡಾಡಲು ಮರೆಯಬೇಡ.
    ಜನರು ಆತನನ್ನು ಕುರಿತು ಅನೇಕ ಸುತ್ತಿಗೀತೆಗಳನ್ನು ಬರೆದಿದ್ದಾರೆ.
25 ಪ್ರತಿಯೊಬ್ಬನೂ ದೇವರ ಕಾರ್ಯವನ್ನು ನೋಡಬಲ್ಲನು.
    ದೂರದೇಶಗಳ ಜನರು ಸಹ ಆತನು ಕಾರ್ಯವನ್ನು ನೋಡಬಲ್ಲರು.
26 ಹೌದು, ದೇವರೇ ಮಹೋನ್ನತನು.
ಆತನ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಲಾರೆವು.
    ಆತನು ಎಂದಿನಿಂದ ಜೀವಿಸಿರುವನೋ ನಮಗೆ ತಿಳಿಯದು.

27 “ದೇವರು ಭೂಮಿಯ ನೀರನ್ನು ಹಬೆಯ ರೂಪದಲ್ಲಿ ಮೇಲಕ್ಕೆ ಕೊಂಡೊಯ್ದು
    ಅದನ್ನು ಮಂಜನ್ನಾಗಿಯೂ ಮಳೆಯನ್ನಾಗಿಯೂ ಪರಿವರ್ತಿಸುತ್ತಾನೆ.
28 ಆದ್ದರಿಂದ ಮೋಡಗಳು ನೀರನ್ನು ಸುರಿಯಮಾಡುತ್ತವೆ;
    ಅನೇಕರ ಮೇಲೆ ಮಳೆಯು ಸುರಿಯುತ್ತದೆ.
29 ದೇವರು ಮೋಡಗಳನ್ನು ಹರಡುವ ಬಗೆಯನ್ನಾಗಲಿ
    ಆಕಾಶದಲ್ಲಿ ಗುಡುಗು ಗರ್ಜಿಸುವ ಬಗೆಯನ್ನಾಗಲಿ ಯಾವನೂ ಅರ್ಥಮಾಡಿಕೊಳ್ಳಲಾರನು.
30 ಇಗೋ, ದೇವರು ತನ್ನ ಪ್ರಕಾಶವನ್ನು ಆಕಾಶದಲ್ಲೆಲ್ಲಾ ಹರಡಿ
    ಸಮುದ್ರದ ಆಳವಾದ ಭಾಗಗಳನ್ನು ಬೆಳಕಿನಿಂದ ತುಂಬಿಸಿದ್ದಾನೆ.
31 ಜನಾಂಗಗಳನ್ನು ಹತೋಟಿಯಲ್ಲಿಡುವುದಕ್ಕಾಗಿಯೂ
    ಬೇಕಾದಷ್ಟು ಆಹಾರವನ್ನು ಕೊಡುವುದಕ್ಕಾಗಿಯೂ ದೇವರು ಅವುಗಳನ್ನು ಉಪಯೋಗಿಸುವನು.
32 ದೇವರು ತನ್ನ ಕೈಗಳಲ್ಲಿ ಸಿಡಿಲನ್ನು ಹಿಡಿದುಕೊಂಡು ಅದಕ್ಕೆ ಆಜ್ಞಾಪಿಸಲು
    ಅದು ಆತನ ಚಿತ್ತಕ್ಕನುಸಾರವಾಗಿ ಹೊಡೆಯುವುದು.
33 ಬಿರುಗಾಳಿಯು ಬರುತ್ತಿದೆಯೆಂದು ಗುಡುಗು ಎಚ್ಚರಿಕೆ ನೀಡುತ್ತದೆ;
    ಬಿರುಗಾಳಿ ಬರುತ್ತಿರುವುದು ದನಕರುಗಳಿಗೂ ಸಹ ಗೊತ್ತಾಗುವುದು.

ಯೋಬನು 37:14-24

14 “ಯೋಬನೇ, ಒಂದು ನಿಮಿಷ ಮೌನವಾಗಿದ್ದು ಕೇಳು.
    ದೇವರ ಅದ್ಭುತಕಾರ್ಯಗಳ ಬಗ್ಗೆ ಮೌನವಾಗಿದ್ದು ಆಲೋಚಿಸು.
15 ಯೋಬನೇ, ದೇವರು ಮೋಡಗಳನ್ನು ಹೇಗೆ ಹತೋಟಿಯಲ್ಲಿಡುತ್ತಾನೆಂಬುದು ನಿನಗೆ ಗೊತ್ತಿದೆಯೋ?
    ದೇವರು ಸಿಡಿಲನ್ನು ಹೇಗೆ ಹೊಳೆಯ ಮಾಡುತ್ತಾನೆಂಬುದು ನಿನಗೆ ಗೊತ್ತಿದೆಯೋ?
16 ಆಕಾಶದಲ್ಲಿ ಮೋಡಗಳು ಹೇಗೆ ತೂಗಾಡುತ್ತಿವೆ ಎಂಬುದು ನಿನಗೆ ಗೊತ್ತಿದೆಯೋ?
    ದೇವರ ಆಶ್ಚರ್ಯಕಾರ್ಯಗಳಲ್ಲಿ ಮೋಡಗಳು ಒಂದು ಉದಾಹರಣೆಯಷ್ಟೇ.
    ಅವುಗಳ ಬಗ್ಗೆ ದೇವರಿಗೆ ಸಂಪೂರ್ಣವಾಗಿ ತಿಳಿದಿದೆ.
17 ಯೋಬನೇ, ನಿನಗೆ ಇವುಗಳ ಬಗ್ಗೆ ಗೊತ್ತಿಲ್ಲ.
    ದಕ್ಷಿಣ ದಿಕ್ಕಿನ ಬಿಸಿಗಾಳಿಯಿಂದ ಭೂಮಿಯು ಸ್ತಬ್ಧವಾದಾಗ, ನೀನು ಬೆವತು ಬಟ್ಟೆಗಳು ಒದ್ದೆಯಾಗುವುದಷ್ಟೇ ನಿನಗೆ ತಿಳಿದಿದೆ.
18 ಯೋಬನೇ, ಆಕಾಶಮಂಡಲವನ್ನು ಹರಡುವುದಕ್ಕಾಗಲಿ
    ಅದಕ್ಕೆ ಕಂಚಿನ ದರ್ಪಣದಂತೆ ಮೆರಗು ನೀಡುವುದಕ್ಕಾಗಲಿ ನೀನು ದೇವರಿಗೆ ಸಹಾಯಮಾಡಬಲ್ಲೆಯಾ?[a]

19 “ಯೋಬನೇ, ನಾವು ದೇವರಿಗೆ ಹೇಳಬೇಕಾದುದನ್ನು ನಮಗೆ ತಿಳಿಸು!
ನಮಗೆ ಸಾಕಷ್ಟು ಗೊತ್ತಿಲ್ಲದಿರುವುದರಿಂದ ಏನು ಹೇಳಬೇಕೋ ನಮಗೆ ತಿಳಿಯದು.
20 ನಾನು ದೇವರಿಗೆ, ‘ನಿನ್ನೊಂದಿಗೆ ಮಾತಾಡಬೇಕಾಗಿದೆ’ ಎಂದು ಹೇಳಲಾರೆ.
    ಯಾಕೆಂದರೆ ಅದು ನಾಶನವನ್ನೇ ಕೇಳಿಕೊಂಡಂತಾಗುವುದು.
21 ಯಾವನೂ ಪ್ರಕಾಶಮಾನವಾದ ಸೂರ್ಯನನ್ನು ನೋಡಲಾರನು.
    ಗಾಳಿಯು ಮೋಡಗಳನ್ನು ಬಡಿದುಕೊಂಡು ಹೋದಮೇಲೆ ಆಕಾಶದಲ್ಲಿ ಸೂರ್ಯನು ಬಹು ಪ್ರಕಾಶಮಾನವಾಗಿ ಹೊಳೆಯುತ್ತಿರುವನು.
22 ದೇವರ ಹೊನ್ನಿನ ಮಹಿಮೆಯು ಪವಿತ್ರ ಪರ್ವತದಿಂದ ಹೊಳೆಯುವುದು.
    ದೇವರ ಸುತ್ತಲೂ ಪ್ರಕಾಶಮಾನವಾದ ಬೆಳಕು ಸುತ್ತುವರಿದಿದೆ.
23 “ಸರ್ವಶಕ್ತನಾದ ದೇವರು ಮಹೋನ್ನತನೇ ಸರಿ! ನಾವು ಆತನನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಿಲ್ಲ.
    ದೇವರು ಮಹಾ ಬಲಿಷ್ಠನಾಗಿದ್ದರೂ ನಮಗೆ ಒಳ್ಳೆಯವನೂ ನ್ಯಾಯವಂತನೂ ಆಗಿದ್ದಾನೆ; ಆತನು ನಮ್ಮನ್ನು ಹಿಂಸಿಸಲು ಇಷ್ಟಪಡುವುದಿಲ್ಲ.
24 ಆದಕಾರಣವೇ ಜನರು ದೇವರಲ್ಲಿ ಭಯಭಕ್ತಿಯಿಂದಿರುವರು.
    ದೇವರಾದರೋ ತಮ್ಮನ್ನು ಜ್ಞಾನಿಗಳೆಂದು ಭಾವಿಸಿಕೊಂಡಿರುವ ಗರ್ವಿಷ್ಠರನ್ನು ಗೌರವಿಸುವುದಿಲ್ಲ.”

ಮತ್ತಾಯ 8:23-27

ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ

(ಮಾರ್ಕ 4:35-41; ಲೂಕ 8:22-25)

23 ಯೇಸು ದೋಣಿಯೊಳಗೆ ಹೋದನು. ಆತನ ಶಿಷ್ಯರೂ ಆತನೊಂದಿಗೆ ಹೋದರು. 24 ದೋಣಿಯು ದಡವನ್ನು ಬಿಟ್ಟಮೇಲೆ ದೊಡ್ಡ ಬಿರುಗಾಳಿಯು ಸರೋವರದ ಮೇಲೆ ಪ್ರಾರಂಭವಾಯಿತು. ಅಲೆಗಳು ದೋಣಿಯನ್ನು ಮುಚ್ಚಿಕೊಂಡವು. ಆದರೆ ಯೇಸು ನಿದ್ರಿಸುತ್ತಿದ್ದನು. 25 ಯೇಸುವಿನ ಶಿಷ್ಯರು ಆತನ ಬಳಿಗೆ ಹೋಗಿ ಆತನನ್ನು ಎಬ್ಬಿಸಿ, “ಪ್ರಭುವೇ, ನಮ್ಮನ್ನು ರಕ್ಷಿಸು! ನಾವು ಮುಳುಗುತ್ತಿದ್ದೇವೆ!” ಎಂದು ಹೇಳಿದರು.

26 ಯೇಸು, “ನೀವು ಭಯಪಡುವುದೇಕೆ? ನಿಮ್ಮಲ್ಲಿ ಸಾಕಷ್ಟು ನಂಬಿಕೆಯಿಲ್ಲ” ಎಂದು ಉತ್ತರಿಸಿ ಎದ್ದುನಿಂತುಕೊಂಡು ಆ ದೊಡ್ಡ ಬಿರುಗಾಳಿಗೂ ಅಲೆಗಳಿಗೂ ಆಜ್ಞಾಪಿಸಿದನು. ಆ ಕೂಡಲೇ ಬಿರುಗಾಳಿ ನಿಂತುಹೋಯಿತು. ಸರೋವರ ಪ್ರಶಾಂತವಾಯಿತು.

27 ಜನರೆಲ್ಲರೂ ಆಶ್ಚರ್ಯಪಟ್ಟರು. “ಈತನು ಎಂತಹ ಮನುಷ್ಯ? ಬಿರುಗಾಳಿ ಮತ್ತು ನೀರು ಈತನಿಗೆ ವಿಧೇಯವಾಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International