Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 18:1-19

ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

18 ನನ್ನ ಬಲವಾಗಿರುವ ಯೆಹೋವನೇ,
    ನಿನ್ನನ್ನೇ ಪ್ರೀತಿಸುವೆನು!

ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
    ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
    ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ!
    ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
    ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
    ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
    ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
    ನನ್ನ ಮೊರೆಗೆ ಕಿವಿಗೊಟ್ಟನು.
ಆಗ ಆತನಿಗೆ ಸಿಟ್ಟೇರಿದ್ದರಿಂದ ಭೂಮಿಯು ಗಡಗಡನೆ ನಡುಗಿತು;
    ಪರ್ವತಗಳ ಬುನಾದಿಗಳು ಕಂಪಿಸಿದವು.
ಆತನ ಮೂಗಿನಿಂದ ಹೊಗೆಯು ಬಂದಿತು;
    ಆತನ ಬಾಯಿಂದ ಅಗ್ನಿಜ್ವಾಲೆಯೂ ಬೆಂಕಿಯ ಕಿಡಿಗಳೂ ಬಂದವು.
ಆತನು ಆಕಾಶವನ್ನು ಹರಿದು ಕೆಳಗಿಳಿದು ಬಂದನು.
    ಆತನು ದಟ್ಟವಾದ ಕಪ್ಪುಮೋಡದ ಮೇಲೆ ನಿಂತುಕೊಂಡನು.
10 ಕೆರೂಬಿಗಳ ಮೇಲೆ ಆಸೀನನಾಗಿ
    ವಾಯುವೇ ತನ್ನ ರೆಕ್ಕೆಗಳೋ ಎಂಬಂತೆ ಹಾರಿಬಂದನು.
11 ಆತನನ್ನು ಗುಡಾರದಂತೆ ಆವರಿಸಿಕೊಂಡಿದ್ದ ದಟ್ಟವಾದ ಕಪ್ಪುಮೋಡದಲ್ಲಿ
    ಆತನು ಮರೆಯಾದನು.
12 ಬಳಿಕ, ಆತನ ಉಜ್ವಲವಾದ ಪ್ರಕಾಶವು ಮೋಡಗಳನ್ನು ಛೇದಿಸಿಕೊಂಡು ನುಗ್ಗಲು
    ಆಲಿಕಲ್ಲಿನ ಮಳೆಯು ಸುರಿಯಿತು; ಮಿಂಚುಗಳು ಹೊಳೆದವು.
13 ಯೆಹೋವನು ಆಕಾಶದಲ್ಲಿ ಗುಡುಗಿದನು;
    ಮಹೋನ್ನತ ದೇವರು ತನ್ನ ಧ್ವನಿಯನ್ನು ಕೇಳುವಂತೆ ಮಾಡಿದನು.
14 ಆತನು ಬಾಣಗಳನ್ನು[b] ಎಸೆದು ವೈರಿಗಳನ್ನು ಚದರಿಸಿಬಿಟ್ಟನು;
    ಸಿಡಿಲುಮಿಂಚುಗಳಿಂದ ಅವರನ್ನು ಕಳವಳಗೊಳಿಸಿದನು.

15 ಯೆಹೋವನೇ, ನೀನು ಆಜ್ಞಾಪಿಸಿದಾಗ
    ಬಿರುಗಾಳಿಯು ಬೀಸತೊಡಗಿ ನೀರನ್ನು ನೂಕಲು
ಸಮುದ್ರದ ತಳವೇ ಕಾಣಿಸಿತು.
    ಭೂಮಿಯ ಅಸ್ತಿವಾರಗಳೂ ಕಾಣಿಸಿದವು.

16 ಆತನು ಮೇಲಿನ ಲೋಕದಿಂದ ಕೈಚಾಚಿ ನನ್ನನ್ನು ರಕ್ಷಿಸಿದನು.
    ಆತನು ನನ್ನ ಕೈಹಿಡಿದು ನೀರಿನಿಂದ ಮೇಲೆತ್ತಿದನು.
17 ನನ್ನನ್ನು ದ್ವೇಷಿಸುವ ವೈರಿಗಳು
    ನನಗಿಂತ ಬಲವಾಗಿಯೂ ಶಕ್ತರಾಗಿಯೂ ಇದ್ದರು; ಆತನು ನನ್ನನ್ನು ಅವರಿಂದ ರಕ್ಷಿಸಿದನು.
18 ನಾನು ಕಷ್ಟದಲ್ಲಿದ್ದಾಗ ಅವರು ನನ್ನ ಮೇಲೆ ಆಕ್ರಮಣಮಾಡಲು,
    ಯೆಹೋವನು ನನಗೆ ಸಹಾಯಕನಾಗಿ ಬಂದನು.
19 ಆತನು ನನ್ನನ್ನು ಪ್ರೀತಿಸುವುದರಿಂದ ನನ್ನನ್ನು ರಕ್ಷಿಸಿದನು;
    ನನ್ನನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಬಂದನು.

ಆದಿಕಾಂಡ 7:11-8:5

11-13 ಎರಡನೆ ತಿಂಗಳಿನ ಹದಿನೇಳನೆಯ ದಿನದಂದು ಭೂಮಿಯ ಕೆಳಗಿರುವ ಸಾಗರದ ಸೆಲೆಗಳು ಒಡೆದು ಭೂಮಿಯೊಳಗಿಂದ ನೀರು ಮೇಲೇರತೊಡಗಿತು; ಭೂಮಿಯ ಮೇಲೆ ಭಾರಿಮಳೆ ಸುರಿಯತೊಡಗಿತು. ಆಕಾಶದ ಕಿಟಕಿ ತೆರೆದಿದೆಯೋ ಎಂಬಂತೆ ನಲವತ್ತು ದಿವಸ ಹಗಲಿರುಳು ಮಳೆ ಸುರಿಯಿತು. ಆ ದಿನದಂದು ನೋಹ ಮತ್ತು ಅವನ ಹೆಂಡತಿ, ಅವನ ಗಂಡುಮಕ್ಕಳಾದ ಶೇಮ್, ಹಾಮ್, ಯೆಫೆತ್ ಮತ್ತು ಅವನ ಸೊಸೆಯಂದಿರು ನಾವೆಯೊಳಗೆ ಹೋದರು. ಆಗ ನೋಹನು ಆರುನೂರು ವರ್ಷವಾಗಿತ್ತು. 14 ಅವರು ನಾವೆಯೊಳಗೆ ಇದ್ದರು. ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪ್ರಾಣಿಗಳು, ಪ್ರತಿಯೊಂದು ಬಗೆಯ ಪಶುಗಳು, ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಬಗೆಯ ಕ್ರಿಮಿಗಳು ಮತ್ತು ಪ್ರತಿಯೊಂದು ಬಗೆಯ ಪಕ್ಷಿಗಳು ನಾವೆಯೊಳಗೆ ಇದ್ದವು. 15 ಉಸಿರಾಡುವ ಪ್ರತಿಯೊಂದು ಬಗೆಯ ಪ್ರಾಣಿಗಳು ತಮ್ಮತಮ್ಮ ಜಾತಿಗನುಸಾರವಾಗಿ ಎರಡೆರಡಾಗಿ ಬಂದವು. 16 ದೇವರ ಆಜ್ಞೆಯಂತೆ ಈ ಪ್ರಾಣಿಗಳೆಲ್ಲಾ ನಾವೆಯೊಳಗೆ ಪ್ರವೇಶಿಸಿದವು. ಆಗ ಯೆಹೋವನು ನಾವೆಯ ಬಾಗಿಲನ್ನು ಮುಚ್ಚಿದನು.

17 ಭೂಮಿಯ ಮೇಲೆ ಜಲಪ್ರಳಯವು ನಲವತ್ತು ದಿನಗಳವರೆಗೆ ಇತ್ತು. ನೀರು ಮೇಲೇರುತ್ತಾ ನಾವೆಯನ್ನು ಎತ್ತಲು ಅದು ನೀರಿನ ಮೇಲೆ ತೇಲತೊಡಗಿತು. 18 ನೀರು ಇನ್ನೂ ಮೇಲೇರತೊಡಗಿದ್ದರಿಂದ ನಾವೆಯೂ ಭೂಮಿಯಿಂದ ಬಹು ಮೇಲೆ ಚಲಿಸತೊಡಗಿತು. 19 ನೀರು ಬಹಳವಾಗಿ ಹೆಚ್ಚಿದ್ದರಿಂದ, ಎತ್ತರವಾದ ಬೆಟ್ಟಗಳು ಸಹ ನೀರಿನಿಂದ ಮುಚ್ಚಿಕೊಂಡವು. 20 ಬೆಟ್ಟಗಳ ಮೇಲೂ ನೀರು ಹೆಚ್ಚತೊಡಗಿತು. ಅತೀ ಎತ್ತರವಾದ ಬೆಟ್ಟಕ್ಕಿಂತಲೂ ಇಪ್ಪತ್ತು ಅಡಿ ಹೆಚ್ಚಾಗಿ ನೀರು ಆವರಿಸಿಕೊಂಡಿತು.

21-22 ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯು ಸತ್ತುಹೋಯಿತು. ಎಲ್ಲಾ ಪುರುಷರು ಮತ್ತು ಸ್ತ್ರೀಯರು ಸತ್ತುಹೋದರು. ಎಲ್ಲಾ ಪಕ್ಷಿಗಳು, ಪಶುಗಳು, ಪ್ರಾಣಿಗಳು ಮತ್ತು ಪ್ರತಿಯೊಂದು ಬಗೆಯ ಕ್ರಿಮಿಗಳು ಸತ್ತುಹೋದವು. 23 ಹೀಗೆ ದೇವರು ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯನ್ನು ನಾಶಗೊಳಿಸಿದನು. ಪ್ರತಿಯೊಬ್ಬ ಮನುಷ್ಯನು ನಾಶವಾದನು; ಪ್ರತಿಯೊಂದು ಪ್ರಾಣಿಯು, ಹರಿದಾಡುವ ಪ್ರತಿಯೊಂದು ಕ್ರಿಮಿಯು ಮತ್ತು ಪ್ರತಿಯೊಂದು ಪಕ್ಷಿಯು ನಾಶವಾದವು. ಉಳಿದುಕೊಂಡವರೆಂದರೆ, ನೋಹ ಮತ್ತು ಅವನ ಕುಟುಂಬದವರು ಹಾಗೂ ಅವನೊಡನೆ ನಾವೆಯೊಳಗಿದ್ದ ಜೀವಿಗಳು. 24 ನೂರೈವತ್ತು ದಿನಗಳವರೆಗೆ ನೀರು ಭೂಮಿಯನ್ನು ಆವರಿಸಿಕೊಂಡಿತ್ತು.

ಜಲಪ್ರಳಯದ ಮುಕ್ತಾಯ

ಆದರೆ ದೇವರು ನೋಹನನ್ನು ಮರೆಯಲಿಲ್ಲ. ದೇವರು ನೋಹನನ್ನು ಮತ್ತು ನಾವೆಯಲ್ಲಿದ್ದ ಎಲ್ಲಾ ಪ್ರಾಣಿಗಳನ್ನು ನೆನಪುಮಾಡಿಕೊಂಡನು. ದೇವರು ಭೂಮಿಯ ಮೇಲೆ ಗಾಳಿಯನ್ನು ಬರಮಾಡಿದನು. ನೀರು ಕಡಿಮೆಯಾಗಲು ಪ್ರಾರಂಭಿಸಿತು.

ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತುಹೋಯಿತು. ಆಕಾಶದ ತೂಬುಗಳು ಮುಚ್ಚಿಹೋದವು. ಭೂಸೆಲೆಗಳಿಂದ ಉಕ್ಕುತ್ತಿದ್ದ ನೀರು ಸಹ ನಿಂತುಹೋಯಿತು. 3-4 ಭೂಮಿಯನ್ನು ಆವರಿಸಿಕೊಂಡಿದ್ದ ನೀರು ನೂರೈವತ್ತು ದಿನಗಳಾದ ಮೇಲೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂತು. ಏಳನೆಯ ತಿಂಗಳ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ನಾಡಿನಲ್ಲಿದ್ದ ಒಂದು ಬೆಟ್ಟದ ಮೇಲೆ ನಿಂತುಕೊಂಡಿತು. ನೀರು ಕಡಿಮೆಯಾಗತೊಡಗಿದ್ದರಿಂದ ಹತ್ತನೆಯ ತಿಂಗಳ ಮೊದಲನೆಯ ದಿನದಲ್ಲಿ ಬೆಟ್ಟದ ತುದಿಗಳು ಕಾಣತೊಡಗಿದವು.

2 ಪೇತ್ರನು 2:4-10

ದೇವದೂತರು ಪಾಪಗಳನ್ನು ಮಾಡಿದಾಗ, ದೇವರು ಅವರನ್ನು ದಂಡಿಸದೆ ಬಿಡಲಿಲ್ಲ. ಆತನು ಅವರನ್ನು ನರಕಕ್ಕೆ ದಬ್ಬಿದನು. ಕತ್ತಲೆಯ ಗುಂಡಿಗಳಿಗೆ ಹಾಕಿದನು. ಅವರಿಗೆ ನ್ಯಾಯತೀರ್ಪಾಗುವವರೆಗೂ ಅವರು ಅಲ್ಲಿಯೇ ಇರುವರು.

ಬಹಳ ಹಿಂದೆ ಬದುಕಿದ್ದ ಕೆಟ್ಟ ಜನರನ್ನು ದೇವರು ದಂಡಿಸಿದನು. ಈ ಲೋಕದಲ್ಲಿ ತನಗೆ ವಿರುದ್ಧವಾದ ಜನರು ತುಂಬಿಕೊಂಡಿದ್ದಾಗ ಆತನು ಜಲಪ್ರಳಯವನ್ನು ಬರಮಾಡಿ ದನು. ಆದರೆ ನೋಹನನ್ನೂ ಅವನೊಂದಿಗಿದ್ದ ಏಳು ಮಂದಿಯನ್ನೂ ರಕ್ಷಿಸಿದನು. ಯೋಗ್ಯರಾಗಿ ಜೀವಿಸಬೇಕೆಂದು ಆ ಜನರಿಗೆ ತಿಳಿಸಿದವನೇ ನೋಹ.

ದೇವರು ಸೊದೋಮ್, ಗೊಮೋರ ಎಂಬ ಕೆಟ್ಟ ಪಟ್ಟಣಗಳನ್ನು ದಂಡಿಸಿದನು. ಆತನು ಆ ಪಟ್ಟಣಗಳಲ್ಲಿ ಏನೂ ಉಳಿಯದಂತೆ, ಸುಟ್ಟು ಬೂದಿಮಾಡಿದನು. ತನಗೆ ವಿರುದ್ಧವಾಗಿರುವ ಜನರಿಗೆ ಏನಾಗುತ್ತದೆ ಎಂಬುದಕ್ಕೆ ಆತನು ಆ ಪಟ್ಟಣಗಳನ್ನು ನಿದರ್ಶನಗಳನ್ನಾಗಿ ಇಟ್ಟಿದ್ದಾನೆ. ಆದರೆ ದೇವರು ಆ ಪಟ್ಟಣಗಳಿಂದ ಲೋಟನನ್ನು ರಕ್ಷಿಸಿದನು. ಲೋಟನು ನೀತಿವಂತನಾಗಿದ್ದನು. ದುಷ್ಟ ಜನರ ಕೆಟ್ಟ ನಡತೆಯಿಂದ ಅವನು ದುಃಖಗೊಂಡಿದ್ದನು. (ಲೋಟನು ನೀತಿವಂತನಾಗಿದ್ದನು. ಆದರೆ ಅವನು ಪ್ರತಿದಿನವೂ ಆ ದುಷ್ಟಜನರ ಮಧ್ಯೆ ಜೀವಿಸುತ್ತಿದ್ದನು. ಕೆಟ್ಟಕಾರ್ಯಗಳನ್ನು ನೋಡಿ ಮತ್ತು ಕೇಳಿ ಅವನ ಒಳ್ಳೆಯ ಹೃದಯವು ವೇದನೆಗೆ ಒಳಗಾಗಿತ್ತು.)

ಹೌದು, ಪ್ರಭುವಾದ ದೇವರು ತನ್ನ ಭಕ್ತರನ್ನು ತೊಂದರೆಗಳಿಂದ ಯಾವಾಗಲೂ ರಕ್ಷಿಸುತ್ತಾನೆ. ಆತನು ದುಷ್ಟಜನರನ್ನು ನ್ಯಾಯತೀರ್ಪಿನ ದಿನ ಬರುವತನಕ ದಂಡಿಸುತ್ತಾನೆ. 10 ಪ್ರಭುವಿನ ಅಧಿಕಾರವನ್ನು ದ್ವೇಷಿಸುವ ಜನರನ್ನು ಮತ್ತು ತಮ್ಮ ಪಾಪಸ್ವಭಾವದ ಇಚ್ಚೆಗನುಸಾರವಾಗಿ ಕೆಟ್ಟಕಾರ್ಯಗಳನ್ನು ಮಾಡುವ ಜನರನ್ನು ದೇವರು ಹೀಗೆ ದಂಡಿಸುತ್ತಾನೆ.

ಈ ಸುಳ್ಳುಬೋಧಕರು ತಮಗೆ ಬೇಕಾದದ್ದನ್ನೆಲ್ಲಾ ಮಾಡುತ್ತಾರೆ ಮತ್ತು ತಮ್ಮ ಬಗ್ಗೆ ಹೊಗಳಿಕೊಳ್ಳುತ್ತಾರೆ. ಪ್ರಭಾವದಿಂದ ಕೂಡಿರುವ ದೇವದೂತರ ಬಗ್ಗೆ ಕೆಟ್ಟದ್ದನ್ನು ಹೇಳಲು ಅವರು ಹೆದರುವುದಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International