Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 131

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ.
    ನನ್ನ ಕಣ್ಣುಗಳಲ್ಲಿ ಸೊಕ್ಕಿಲ್ಲ.
ಮಹಾಕಾರ್ಯಗಳನ್ನಾಗಲಿ ಅಸಾಧ್ಯ ಕಾರ್ಯಗಳನ್ನಾಗಲಿ
    ಮಾಡಲು ನಾನು ಪ್ರಯತ್ನಿಸುವುದಿಲ್ಲ.
ನಾನು ಸಮಾಧಾನದಿಂದಿರುವೆ.
    ನನ್ನ ಆತ್ಮವು ನೆಮ್ಮದಿಯಿಂದಿದೆ.
ತನ್ನ ತಾಯಿಯ ತೋಳುಗಳಲ್ಲಿ ಸಂತೃಪ್ತಿಯಾಗಿರುವ ಮಗುವಿನಂತೆ
    ನನ್ನ ಆತ್ಮವು ಸಮಾಧಾನದಿಂದಲೂ ನೆಮ್ಮದಿಯಿಂದಲೂ ಇದೆ.

ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಈಗಲೂ ಆತನಲ್ಲಿ ಭರವಸವಿಡು.
    ಎಂದೆಂದಿಗೂ ಆತನಲ್ಲಿ ಭರವಸವಿಡು!

ಯೆರೆಮೀಯ 28:10-17

10 ಯೆರೆಮೀಯನು ತನ್ನ ಹೆಗಲಿನ ಮೇಲೆ ನೊಗವನ್ನು ಹೊತ್ತುಕೊಂಡಿದ್ದನು. ಪ್ರವಾದಿಯಾದ ಹನನ್ಯನು ಯೆರೆಮೀಯನ ಹೆಗಲಿನಿಂದ ಆ ನೊಗವನ್ನು ತೆಗೆದುಕೊಂಡು ಆ ನೊಗವನ್ನು ಮುರಿದುಹಾಕಿದನು. 11 ಆಮೇಲೆ ಹನನ್ಯನು ಗಟ್ಟಿಯಾಗಿ ಎಲ್ಲರೂ ಕೇಳುವಂತೆ ಮಾತನಾಡಿದನು. “ಯೆಹೋವನು ಹೇಳುತ್ತಾನೆ: ‘ಇದೇ ರೀತಿಯಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಹೇರಿದ ನೊಗವನ್ನು ನಾನು ಮುರಿದುಹಾಕುವೆನು. ಅವನು ಆ ನೊಗವನ್ನು ಜಗತ್ತಿನ ಸಮಸ್ತ ಜನಾಂಗಗಳ ಮೇಲೆ ಹೇರಿದ್ದಾನೆ. ಆದರೆ ನಾನು ಆ ನೊಗವನ್ನು ಎರಡು ವರ್ಷದೊಳಗಾಗಿ ಮುರಿದುಹಾಕುವೆನು.’”

ಹನನ್ಯನು ಹಾಗೆ ಹೇಳಿದ ಮೇಲೆ ಯೆರೆಮೀಯನು ಪವಿತ್ರಾಲಯವನ್ನು ಬಿಟ್ಟನು.

12 ಆಗ ಯೆರೆಮೀಯನಿಗೆ ಯೆಹೋವನ ಸಂದೇಶ ಬಂದಿತು. ಹನನ್ಯನು ಯೆರೆಮೀಯನ ಕತ್ತಿನಿಂದ ನೊಗವನ್ನು ತೆಗೆದುಕೊಂಡು ಮುರಿದುಹಾಕಿದ ಮೇಲೆ ಈ ಸಂದೇಶ ಬಂದಿತು. 13 ಯೆಹೋವನು ಯೆರೆಮೀಯನಿಗೆ ಹೀಗೆಂದನು: “ಹೋಗಿ ಹನನ್ಯನಿಗೆ ಹೀಗೆ ಹೇಳು: ‘ಯೆಹೋವನು ಹೀಗೆನ್ನುತ್ತಾನೆ. ನೀನು ಮರದ ನೊಗವನ್ನು ಮುರಿದೆ, ಆದರೆ ನಾನು ಮರದ ನೊಗಕ್ಕೆ ಬದಲಾಗಿ ಕಬ್ಬಿಣದ ನೊಗವನ್ನು ಮಾಡುವೆನು. 14 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೇಳುವುದೇನೆಂದರೆ, ನಾನು ಕಬ್ಬಿಣದ ನೊಗವನ್ನು ಈ ಎಲ್ಲಾ ಜನಾಂಗಗಳ ಹೆಗಲಿನ ಮೇಲೆ ಹೊರಿಸುವೆನು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಸೇವೆಯನ್ನು ಮಾಡುವಂತೆ ಮಾಡುತ್ತೇನೆ. ಅವರು ಅವನಿಗೆ ಗುಲಾಮರಾಗಿರುವರು. ನಾನು ನೆಬೂಕದ್ನೆಚ್ಚರನಿಗೆ ಕಾಡುಪ್ರಾಣಿಗಳ ಮೇಲೂ ಅಧಿಕಾರವನ್ನು ದಯಪಾಲಿಸುವೆನು.’”

15 ತರುವಾಯ ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೀಗೆ ಹೇಳಿದನು: “ಹನನ್ಯನೇ, ಕೇಳು. ಯೆಹೋವನು ನಿನ್ನನ್ನು ಕಳುಹಿಸಲಿಲ್ಲ. ಆದರೆ ಯೆಹೂದದ ಜನರಿಗೆ ಸುಳ್ಳನ್ನು ನಂಬುವಂತೆ ನೀನು ಮಾಡಿರುವೆ. 16 ಅದಕ್ಕಾಗಿ ಯೆಹೋವನು ಹೀಗೆ ಹೇಳುತ್ತಾನೆ: ‘ಹನನ್ಯನೇ, ನಾನು ನಿನ್ನನ್ನು ಶೀಘ್ರದಲ್ಲಿ ಈ ಜಗತ್ತಿನಿಂದ ತೆಗೆದುಬಿಡುತ್ತೇನೆ. ನೀನು ಈ ವರ್ಷ ಮರಣಹೊಂದುವೆ. ಏಕೆಂದರೆ ನೀನು ಜನರನ್ನು ಯೆಹೋವನ ವಿರುದ್ಧ ತಿರುಗುವಂತೆ ಮಾಡಿದೆ.’”

17 ಹನನ್ಯನು ಅದೇ ವರ್ಷದ ಏಳನೆಯ ತಿಂಗಳಲ್ಲಿ ಮರಣಹೊಂದಿದನು.

ರೋಮ್ನಗರದವರಿಗೆ 3:1-8

ಹೀಗಿರಲು, ಯೆಹೂದ್ಯರ ವೈಶಿಷ್ಟವೇನು? ಸುನ್ನತಿ ಮಾಡಿಸಿಕೊಂಡಿರುವುದರಲ್ಲಿ ಏನಾದರೂ ವಿಶೇಷತೆಯಿದೆಯೇ? ಹೌದು, ಯೆಹೂದ್ಯರಿಗೆ ಅನೇಕ ವಿಶೇಷತೆಗಳಿವೆ. ಎಲ್ಲಕ್ಕಿಂತಲೂ ಅತಿಮುಖ್ಯವಾದದ್ದೇನೆಂದರೆ, ದೇವರು ಯೆಹೂದ್ಯರಲ್ಲಿ ಭರವಸವಿಟ್ಟು ತನ್ನ ಉಪದೇಶಗಳನ್ನು ಅವರಿಗೆ ಕೊಟ್ಟನು. ಕೆಲವು ಯೆಹೂದ್ಯರು ದೇವರಿಗೆ ನಂಬಿಗಸ್ತರಾಗಿರಲಿಲ್ಲ ಎಂಬುದೇನೊ ಸತ್ಯ. ಆದರೆ ದೇವರು ತಾನು ಮಾಡಿದ ವಾಗ್ದಾನವನ್ನು ನೆರವೇರಿಸದಂತೆ ಅದು ಮಾಡುತ್ತದೆಯೇ? ಇಲ್ಲ! ಪ್ರತಿಯೊಬ್ಬ ವ್ಯಕ್ತಿ ಸುಳ್ಳುಗಾರನಾದರೂ ದೇವರು ಸತ್ಯವಂತನಾಗಿಯೇ ಇರುತ್ತಾನೆ. ಪವಿತ್ರ ಗ್ರಂಥವು ಹೀಗೆಂದು ಹೇಳುತ್ತದೆ:

“ನಿನ್ನ ಮಾತುಗಳಲ್ಲಿ ನೀನು ನ್ಯಾಯಸ್ಥನೆಂದು ನಿರೂಪಿತನಾಗಬೇಕು.
    ನಿನಗೆ ತೀರ್ಪಾಗುವಾಗ ನೀನು ಜಯಗಳಿಸಬೇಕು.”(A)

ದೇವರು ನ್ಯಾಯವಂತನೆಂಬುದನ್ನು ನಾವು ಮಾಡುವ ತಪ್ಪು ಮತ್ತಷ್ಟು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಹೀಗಿರಲು, ದೇವರು ನಮ್ಮನ್ನು ಶಿಕ್ಷಿಸುವಾಗ, ಆತನು ಅನ್ಯಾಯ ಮಾಡುತ್ತಿದ್ದಾನೆಂದು ನಾವು ಹೇಳಲು ಸಾಧ್ಯವೇ? (ಬೇರೆ ಕೆಲವು ಜನರಿಗೆ ಇರಬಹುದಾದ ಆಲೋಚನೆಯನ್ನೇ ನಾನು ಇಲ್ಲಿ ಹೇಳುತ್ತಿದ್ದೇನೆ.) ಇಲ್ಲ! ದೇವರು ನಮ್ಮನ್ನು ದಂಡಿಸಲಾಗದಿದ್ದರೆ, ದೇವರು ಲೋಕಕ್ಕೆ ತೀರ್ಪುಮಾಡಲಾಗುವುದಿಲ್ಲ.

“ನಾನಾಡುವ ಸುಳ್ಳು ದೇವರ ಸತ್ಯವನ್ನು ತೋರಿಸುವುದಾದರೆ ನನ್ನ ಸುಳ್ಳಿನಿಂದ ದೇವರಿಗೆ ನಿಜವಾಗಿಯೂ ಮಹಿಮೆಯಾಗುತ್ತದೆ. ಹೀಗಿರಲು ನನಗೆ ‘ಪಾಪಿ’ ಎಂಬ ತೀರ್ಪಾಗುವುದೇಕೆ?” ಎಂದು ಒಬ್ಬನು ಕೇಳಬಹುದು. “ಒಳ್ಳೆಯದಾಗುವಂತೆ ನಾವು ಕೇಡುಮಾಡೋಣ” ಎಂದು ಹೇಳುವುದಕ್ಕೂ ಅದಕ್ಕೂ ಯಾವ ವ್ಯತ್ಯಾಸವಿಲ್ಲ. ಅನೇಕ ಜನರು ನಮ್ಮನ್ನು ಟೀಕಿಸುತ್ತಾರೆ ಮತ್ತು ನಾವು ಅಂಥ ಸಂಗತಿಗಳನ್ನು ಬೋಧಿಸುತ್ತೇವೆ ಎಂದು ಹೇಳುತ್ತಾರೆ. ಆ ಜನರು ತಪ್ಪಿತಸ್ಥರಾಗಿದ್ದಾರೆ. ಅವರಿಗೆ ದಂಡನೆಯಾಗಲೇಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International