Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಜೆಕರ್ಯ 9:9-12

ಭವಿಷ್ಯತ್ತಿನ ಅರಸನು

ಚೀಯೋನ್ ನಗರಿಯೇ, ಹರ್ಷಿಸು!
    ಜೆರುಸಲೇಮ್ ಜನರೇ, ಸಂತೋಷದಿಂದ ಆರ್ಭಟಿಸಿರಿ.
ನಿಮ್ಮ ಅರಸನು ನಿಮ್ಮ ಬಳಿಗೆ ಬರುತ್ತಿದ್ದಾನೆ!
    ಆತನು ವಿಜಯಶಾಲಿಯಾದ ನೀತಿವಂತನಾಗಿದ್ದಾನೆ.
    ಆದರೆ ದೀನನಂತೆ ಕತ್ತೆಯ ಮೇಲೆ,
    ಹೌದು, ಕತ್ತೆಯ ಮರಿಯ ಮೇಲೆ ಸವಾರಿ ಮಾಡಿಕೊಂಡು ಬರುವನು.
10 ಅರಸನು ಹೀಗೆನ್ನುತ್ತಾನೆ: “ಎಫ್ರಾಯೀಮಿನಲ್ಲಿ ರಥಗಳನ್ನೂ ಜೆರುಸಲೇಮಿನಲ್ಲಿ ಅಶ್ವಾರೂಢರಾದ ಸೈನಿಕರನ್ನೂ ನಾಶಮಾಡಿದೆನು;
    ಯುದ್ಧದ ಬಿಲ್ಲುಗಳನ್ನು ತುಂಡು ಮಾಡಿದೆನು.”

ಆ ಅರಸನು ಸಮಾಧಾನದ ವರ್ತಮಾನವನ್ನು ರಾಜ್ಯಗಳಿಗೆ ತರುವನು.
    ಸಮುದ್ರದಿಂದ ಸಮುದ್ರದ ತನಕ ಯುಫ್ರೇಟೀಸ್ ನದಿಯಿಂದ
    ಭೂಮಿಯ ಕಟ್ಟಕಡೆಯವರೆಗೆ ಆತನು ರಾಜ್ಯವನ್ನಾಳುವನು.

ಯೆಹೋವನು ತನ್ನ ಜನರನ್ನು ಕಾಪಾಡುವನು

11 ಜೆರುಸಲೇಮೇ, ನಾವು ನಿನ್ನ ಒಡಂಬಡಿಕೆಗೆ ಮುದ್ರೆ ಹಾಕಲು ರಕ್ತವನ್ನು ಉಪಯೋಗಿಸಿದೆವು.
    ಆದ್ದರಿಂದ ನೆಲದ ಹೊಂಡದೊಳಗಿಂದ ಜನರನ್ನು ಬಿಡುಗಡೆ ಮಾಡಿದ್ದೇನೆ.
12 ಸೆರೆಹಿಡಿಯಲ್ಪಟ್ಟವರೇ, ಮನೆಗೆ ಹೋಗಿ.
    ಈಗ ನಿಮಗೊಂದು ನಿರೀಕ್ಷೆಯಿದೆ.
ನಾನು ನಿಮಗೆ ಖಂಡಿತವಾಗಿ ಹೇಳುವುದೇನೆಂದರೆ,
    ನಾನು ತಿರುಗಿ ಬರುತ್ತೇನೆ.

ಕೀರ್ತನೆಗಳು 145:8-14

ಯೆಹೋವನು ದಯೆಯುಳ್ಳವನೂ ಕನಿಕರವುಳ್ಳವನೂ
    ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.
ಯೆಹೋವನು ಪ್ರತಿಯೊಬ್ಬನಿಗೂ ಒಳ್ಳೆಯವನಾಗಿದ್ದಾನೆ.
    ಆತನು ತಾನು ನಿರ್ಮಿಸಿದವುಗಳಿಗೆಲ್ಲಾ ಕನಿಕರ ತೋರಿಸುವನು.
10 ಯೆಹೋವನೇ, ನಿನ್ನ ಸೃಷ್ಟಿಯೆಲ್ಲವೂ ನಿನ್ನನ್ನು ಸ್ತುತಿಸುತ್ತವೆ.
    ನಿನ್ನ ಭಕ್ತರು ನಿನ್ನನ್ನು ಕೊಂಡಾಡುವರು.
11 ಅವರು ನಿನ್ನ ರಾಜ್ಯದ ಮಹತ್ವವನ್ನು ಕುರಿತು ಹೇಳುವರು.
    ನಿನ್ನ ಪರಾಕ್ರಮವನ್ನು ವರ್ಣಿಸುವರು.
12 ಹೀಗೆ ನಿನ್ನ ಮಹತ್ಕಾರ್ಯಗಳನ್ನು ಇತರ ಜನರು ತಿಳಿದುಕೊಳ್ಳುವರು.
    ನಿನ್ನ ರಾಜ್ಯದ ಮಹತ್ವವನ್ನೂ ವೈಭವವನ್ನೂ ಅವರು ತಿಳಿದುಕೊಳ್ಳುವರು.
13 ಯೆಹೋವನೇ, ನಿನ್ನ ರಾಜ್ಯವು ಶಾಶ್ವತವಾಗಿದೆ.
    ನೀನು ಎಂದೆಂದಿಗೂ ಆಳುವೆ.

14 ಯೆಹೋವನು ಬಿದ್ದುಹೋಗಿರುವವರನ್ನು ಮೇಲೆತ್ತುವವನೂ
    ಕುಗ್ಗಿಹೋದವರನ್ನು ಉದ್ಧರಿಸುವವನೂ ಆಗಿದ್ದಾನೆ.

ರೋಮ್ನಗರದವರಿಗೆ 7:15-25

15 ನಾನು ಮಾಡುವ ಕಾರ್ಯಗಳು ನನಗೇ ಅರ್ಥವಾಗುವುದಿಲ್ಲ. ನಾನು ಯಾವ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಇಚ್ಛಿಸುತ್ತೇನೋ ಆ ಕಾರ್ಯಗಳನ್ನು ಮಾಡದೆ ನಾನು ದ್ವೇಷಿಸುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 16 ನಾನು ಮಾಡುವ ಕೆಟ್ಟಕಾರ್ಯಗಳನ್ನು ಮಾಡಲು ನನಗೆ ಇಷ್ಟವಿಲ್ಲದಿದ್ದರೆ, ಧರ್ಮಶಾಸ್ತ್ರವು ಒಳ್ಳೆಯದೆಂದು ನಾನು ಒಪ್ಪಿಕೊಂಡಂತಾಯಿತು. 17 ಹೀಗಿರಲಾಗಿ ಈ ಕೆಟ್ಟಕಾರ್ಯಗಳನ್ನು ಮಾಡುವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಈ ಕೆಟ್ಟಕಾರ್ಯಗಳನ್ನು ಮಾಡುತ್ತದೆ. 18 ಹೌದು, ನನ್ನಲ್ಲಿ ಅಂದರೆ ನನ್ನ ಪಾಪಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂಬುದು ನನಗೆ ಗೊತ್ತಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಮನಸ್ಸಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ನನಗೆ ಸಾಧ್ಯವಿಲ್ಲ. 19 ನಾನು ಮಾಡಲಿಚ್ಛಿಸುವ ಒಳ್ಳೆಯ ಕಾರ್ಯಗಳನ್ನು ಮಾಡದೆ ಮಾಡಲಿಚ್ಛಿಸದಿರುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 20 ಹೀಗಿರಲಾಗಿ, ನಾನು ಮಾಡಲಿಚ್ಛಿಸದಿರುವ ಕಾರ್ಯಗಳನ್ನು ನಾನು ಮಾಡಿದರೆ, ಅವುಗಳನ್ನು ಮಾಡವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಆ ಕೆಟ್ಟಕಾರ್ಯಗಳನ್ನು ಮಾಡುತ್ತದೆ.

21 ಹೀಗಿರಲಾಗಿ, ನಾನು ಈ ನಿಯಮವನ್ನು ಕಲಿತುಕೊಂಡಿದ್ದೇನೆ: ನಾನು ಒಳ್ಳೆಯದನ್ನು ಮಾಡಲಿಚ್ಛಿಸುವಾಗ, ಕೆಟ್ಟದ್ದು ನನ್ನೊಳಗೇ ಇರುತ್ತದೆ. 22 ನನ್ನ ಅಂತರಂಗದಲ್ಲಿ ದೇವರ ನಿಯಮದ ವಿಷಯದಲ್ಲಿ ನಾನು ಸಂತೋಷಪಡುತ್ತೇನೆ. 23 ಆದರೆ ನನ್ನ ದೇಹದಲ್ಲಿ ಮತ್ತೊಂದು ನಿಯಮ ಕೆಲಸ ಮಾಡುತ್ತಿರುವುದನ್ನು ನಾನು ಕಾಣುತ್ತೇನೆ. ನನ್ನ ಅಂತರಂಗ ಒಪ್ಪಿಕೊಳ್ಳುವ ನಿಯಮಕ್ಕೆ ವಿರುದ್ಧವಾಗಿ ಆ ನಿಯಮ ಹೋರಾಡುತ್ತದೆ. ನನ್ನ ದೇಹದಲ್ಲಿ ಕೆಲಸ ಮಾಡುತ್ತಿರುವ ಆ ಮತ್ತೊಂದು ನಿಯಮವೇ ಪಾಪದ ನಿಯಮವಾಗಿದೆ. ಆ ನಿಯಮವು ನನ್ನನ್ನು ತನ್ನ ಸೆರೆಯಾಳನ್ನಾಗಿ ಮಾಡುತ್ತದೆ. 24 ನಾನು ದುರಾವಸ್ಥೆಗೆ ಒಳಗಾಗಿದ್ದೇನೆ. ನನಗೆ ಮರಣವನ್ನು ತರುವ ಈ ದೇಹದಿಂದ ನನ್ನನ್ನು ರಕ್ಷಿಸುವವರು ಯಾರು? 25 ದೇವರು ನನ್ನನ್ನು ರಕ್ಷಿಸುವನು! ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನ ಮೂಲಕ ಆತನು ದಯಪಾಲಿಸುವ ರಕ್ಷಣೆಗಾಗಿ ಆತನಿಗೆ ಸ್ತೋತ್ರವಾಗಲಿ!

ಆದ್ದರಿಂದ ನನ್ನ ಅಂತರಂಗದಲ್ಲಿ ನಾನು ದೇವರ ನಿಯಮಕ್ಕೆ ಗುಲಾಮನಾಗಿದ್ದೇನೆ. ಆದರೆ ನನ್ನ ಪಾಪಾಧೀನಸ್ವಭಾವದಲ್ಲಿ ನಾನು ಪಾಪದ ನಿಯಮಕ್ಕೆ ಗುಲಾಮನಾಗಿದ್ದೇನೆ.

ಮತ್ತಾಯ 11:16-19

16 “ಈ ಕಾಲದ ಜನರನ್ನು ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಮತ್ತೊಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ:

17 ‘ನಾವು ನಿಮಗೋಸ್ಕರ ವಾದ್ಯ ಬಾರಿಸಿದೆವು.
    ನೀವು ಕುಣಿಯಲಿಲ್ಲ;
ನಾವು ಶೋಕಗೀತೆ ಹಾಡಿದೆವು,
    ನೀವು ದುಃಖಿಸಲಿಲ್ಲ.’

18 ಇಂದಿನ ಜನರು ಈ ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು. ಆದರೆ ಅವನು ಬೇರೆ ಜನರಂತೆ ಊಟಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ.’ 19 ಮನುಷ್ಯಕುಮಾರನು ಬಂದನು. ಆತನು ಬೇರೆ ಜನರಂತೆ ಊಟಮಾಡುತ್ತಾನೆ; ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು, ‘ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ, ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಅವನ ಸ್ನೇಹಿತರಾಗಿದ್ದಾರೆ’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ.”

ಮತ್ತಾಯ 11:25-30

ಯೇಸು ಜನರಿಗೆ ವಿಶ್ರಾಂತಿದಾಯಕ

(ಲೂಕ 10:21-22)

25 ಬಳಿಕ ಯೇಸು, “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಿನಗೆ ನಾನು ವಂದನೆ ಸಲ್ಲಿಸುತ್ತೇನೆ. ನಾನು ನಿನ್ನನ್ನು ಕೊಂಡಾಡುತ್ತೇನೆ. ಏಕೆಂದರೆ, ನೀನು ಈ ಸಂಗತಿಗಳನ್ನು ಜ್ಞಾನಿಗಳಿಗೂ ಸೂಕ್ಷ್ಮಬುದ್ದಿಯುಳ್ಳವರಿಗೂ ಮರೆಮಾಡಿರುವೆ. ಆದರೆ ಚಿಕ್ಕ ಮಕ್ಕಳಂತಿರುವ ಈ ಜನರಿಗೆ ನೀನು ಗೋಚರಪಡಿಸಿರುವೆ. 26 ಹೌದು ತಂದೆಯೇ, ಇದು ನಿಜವಾಗಿಯೂ ನಿನ್ನ ಚಿತ್ತವಾಗಿದ್ದುದರಿಂದ ನೀನು ಹೀಗೆ ಮಾಡಿರುವೆ.

27 “ನನ್ನ ತಂದೆ ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಯಾವನೂ ಮಗನನ್ನು ಅರಿತಿಲ್ಲ. ತಂದೆ ಮಾತ್ರ ಮಗನನ್ನು ಅರಿತಿದ್ದಾನೆ. ಯಾವನೂ ತಂದೆಯನ್ನು ಅರಿತಿಲ್ಲ. ಮಗನು ಮಾತ್ರ ತಂದೆಯನ್ನು ಅರಿತಿದ್ದಾನೆ. ಮಗನು ತಂದೆಯನ್ನು ಯಾರಿಗೆ ಪ್ರಕಟಿಸಬೇಕೆಂದು ಇಷ್ಟಪಡುತ್ತಾನೋ ಅವರು ತಂದೆಯನ್ನು ತಿಳಿದುಕೊಳ್ಳುತ್ತಾರೆ.

28 “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ. 29 ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ನಾನು ಸಾತ್ವಿಕನೂ ದೀನನೂ ಆಗಿರುವುದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಹೌದು, ನಿಮಗೆ ನನ್ನ ನೊಗವು ಮೃದುವಾಗಿದೆ; ನನ್ನ ಹೊರೆಯು ಹಗುರವಾಗಿದೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International