Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 100

ಕೃತಜ್ಞತಾ ಸ್ತುತಿಗೀತೆ.

100 ಸಮಸ್ತ ಭೂನಿವಾಸಿಗಳೇ,
    ಯೆಹೋವನಿಗೆ ಗಾಯನ ಮಾಡಿರಿ!
ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
    ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
    ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
    ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
    ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
    ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನು ಒಳ್ಳೆಯವನು!
    ಆತನ ಪ್ರೀತಿಯು ಶಾಶ್ವತವಾದದ್ದು,
    ಆತನ ನಂಬಿಗಸ್ತಿಕೆಯು ನಿರಂತರವಾದದ್ದು.

ವಿಮೋಚನಕಾಂಡ 6:28-7:13

ಯೆಹೋವನು ಮೋಶೆಯನ್ನು ತಿರುಗಿ ಕರೆದದ್ದು

28 ಬಳಿಕ ಯೆಹೋವನು ಮೋಶೆಯ ಸಂಗಡ ಈಜಿಪ್ಟಿನಲ್ಲಿ ಮಾತಾಡಿ, 29 “ನಾನು ಯೆಹೋವನು. ನಾನು ನಿನಗೆ ತಿಳಿಸುವ ಪ್ರತಿಯೊಂದನ್ನು ಈಜಿಪ್ಟಿನ ರಾಜನಿಗೆ ಹೇಳು” ಅಂದನು.

30 ಆದರೆ ಮೋಶೆ ಯೆಹೋವನಿಗೆ, “ನಾನು ಒಳ್ಳೆಯ ಮಾತುಗಾರನಲ್ಲ. ರಾಜನು ನನ್ನ ಮಾತನ್ನು ಕೇಳುವನೇ?” ಎಂದು ಉತ್ತರಿಸಿದನು.

ಯೆಹೋವನು ಮೋಶೆಗೆ, “ನಾನು ನಿನ್ನನ್ನು ಫರೋಹನಿಗೆ ಮಹಾರಾಜನಂತೆ ಮಾಡಿರುವೆನು; ಆರೋನನು ಅಧಿಕೃತ ಮಾತುಗಾರನಾಗಿರುವನು. ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ಆರೋನನಿಗೆ ಹೇಳು. ಆಗ ಅವನು ಅವುಗಳನ್ನೆಲ್ಲಾ ರಾಜನಿಗೆ ತಿಳಿಸುವನು. ಇಸ್ರೇಲರು ಈ ದೇಶವನ್ನು ಬಿಟ್ಟು ಹೋಗುವುದಕ್ಕೆ ಫರೋಹನು ಸಮ್ಮತಿಸುವನು. ಆದರೆ ನಾನು ಫರೋಹನ ಹೃದಯವನ್ನು ಕಠಿಣಗೊಳಿಸುವುದರಿಂದ ಅವನು ನನ್ನ ಆಜ್ಞೆಗಳಿಗೆ ವಿಧೇಯನಾಗುವುದಿಲ್ಲ. ಆಗ ನಾನು ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡುವೆನು. ಆದರೂ ಅವನು ವಿಧೇಯನಾಗುವುದಿಲ್ಲ. ಆಗ ನಾನು ಈಜಿಪ್ಟನ್ನು ಭಯಂಕರವಾಗಿ ದಂಡಿಸಿ ನನ್ನ ಜನರನ್ನು ಆ ದೇಶದಿಂದ ಹೊರತರುವೆನು. ನಾನು ಈಜಿಪ್ಟಿನ ವಿರುದ್ಧವಾಗಿ ನನ್ನ ಕೈಯನ್ನು ಚಾಚಿ ನನ್ನ ಜನರನ್ನು ಅವರ ದೇಶದಿಂದ ಬಿಡುಗಡೆ ಮಾಡಿದಾಗ, ನಾನೇ ಯೆಹೋವನೆಂದು ಅವರು ತಿಳಿದುಕೊಳ್ಳುವರು.”

ಯೆಹೋವನು ಆಜ್ಞಾಪಿಸಿದವುಗಳಿಗೆಲ್ಲಾ ಮೋಶೆ ಆರೋನರು ವಿಧೇಯರಾದರು. ಅವರು ಫರೋಹನೊಡನೆ ಮಾತಾಡಿದಾಗ ಮೋಶೆಗೆ ಎಂಭತ್ತು ವರ್ಷ ವಯಸ್ಸಾಗಿತ್ತು. ಆರೋನನಿಗೆ ಎಂಭತ್ತ ಮೂರು ವರ್ಷ ವಯಸ್ಸಾಗಿತ್ತು.

ಊರುಗೋಲು ಸರ್ಪವಾಯಿತು

ಯೆಹೋವನು ಮೋಶೆ ಆರೋನರಿಗೆ, “ಫರೋಹನು ನಿಮಗೆ, ಅದ್ಭುತಕಾರ್ಯವೊಂದನ್ನು ಮಾಡಿ ನಿಮ್ಮ ಅಧಿಕಾರವನ್ನು ರುಜುವಾತುಪಡಿಸಬೇಕೆಂದು ಕೇಳುವನು. ಆಗ ಮೋಶೆಯು ಆರೋನನಿಗೆ ಊರುಗೋಲನ್ನು ನೆಲದ ಮೇಲೆ ಬಿಸಾಡಲು ಹೇಳಬೇಕು. ಆರೋನನು ಬಿಸಾಡಿದ ಕೂಡಲೇ ಆ ಕೋಲು ಅವರ ಕಣ್ಣೆದುರಿನಲ್ಲಿಯೇ ಸರ್ಪವಾಗುವುದು” ಅಂದನು.

10 ಆದ್ದರಿಂದ ಮೋಶೆ ಆರೋನರು ಫರೋಹನ ಬಳಿಗೆ ಹೋದರು. ಯೆಹೋವನು ಆಜ್ಞಾಪಿಸಿದ್ದಂತೆಯೇ ಅವರು ಮಾಡಿದರು. ಆರೋನನು ತನ್ನ ಊರುಗೋಲನ್ನು ಫರೋಹನ ಮತ್ತು ಅವನ ಅಧಿಕಾರಿಗಳ ಮುಂದೆ ನೆಲದ ಮೇಲೆ ಬಿಸಾಡಿದಾಗ ಅದು ಸರ್ಪವಾಯಿತು.

11 ಆಗ ರಾಜನು ತನ್ನ ವಿಧ್ವಾಂಸರನ್ನೂ ಮಂತ್ರಗಾರರನ್ನೂ ಕರೆಯಿಸಿದನು. ಅವರು ತಮ್ಮ ಮಂತ್ರವಿದ್ಯೆಯಿಂದ ಅದೇ ರೀತಿ ಮಾಡಿದರು. 12 ಅವರು ತಮ್ಮ ಊರುಗೋಲುಗಳನ್ನು ನೆಲದ ಮೇಲೆ ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು. 13 ಯೆಹೋವನು ಹೇಳಿದ್ದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಮೋಶೆ ಮತ್ತು ಆರೋನರ ಮಾತಿಗೆ ಕಿವಿಗೊಡಲಿಲ್ಲ.

ಮಾರ್ಕ 7:1-13

ದೇವರ ಧರ್ಮಶಾಸ್ತ್ರ ಮತ್ತು ಜನರ ಸ್ವನಿಯಮ

(ಮತ್ತಾಯ 15:1-20)

ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಬಂದರು. ಅವರು ಯೇಸುವಿನ ಸುತ್ತಲೂ ಒಟ್ಟಿಗೆ ಸೇರಿದರು. ಯೇಸುವಿನ ಶಿಷ್ಯರಲ್ಲಿ ಕೆಲವರು ಕೈಗಳನ್ನು ತೊಳೆಯದೆ[a] ಅಶುದ್ಧವಾದ ಕೈಗಳಿಂದ ಊಟ ಮಾಡುತ್ತಿರುವುದನ್ನು ಫರಿಸಾಯರು ಮತ್ತು ಧರ್ಮೋಪದೇಶಕರು ನೋಡಿದರು. ಫರಿಸಾಯರು ಮತ್ತು ಇತರ ಯೆಹೂದ್ಯರೆಲ್ಲರೂ ಸಂಪ್ರದಾಯದಂತೆ ಕೈಗಳನ್ನು ತೊಳೆಯದೆ ಊಟಮಾಡುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಆಚಾರಗಳನ್ನು ಅನುಸರಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು. ಅವರು ಏನನ್ನಾದರೂ ಮಾರುಕಟ್ಟೆಯಲ್ಲಿ ಕೊಂಡುಕೊಂಡರೆ, ವಿಶೇಷವಾದ ರೀತಿಯಲ್ಲಿ ಅದನ್ನು ತೊಳೆಯದೆ ತಿನ್ನುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಇತರ ಆಚಾರಗಳನ್ನು ಅಂದರೆ ಲೋಟ, ಬಟ್ಟಲು, ತಪ್ಪಲೆ ಮತ್ತು ದೋಲಿಗಳನ್ನು ತೊಳೆಯುವಾಗಲೂ ಈ ನಿಯಮಗಳನ್ನು ಅನುಸರಿಸುತ್ತಿದ್ದರು.

ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ನಮ್ಮ ಪಿತೃಗಳ ಸಂಪ್ರದಾಯವನ್ನು ನಿನ್ನ ಶಿಷ್ಯರು ಅನುಸರಿಸದೆ ಅಶುದ್ಧವಾದ ಕೈಗಳಿಂದ ಆಹಾರವನ್ನು ತಿನ್ನುವುದೇಕೆ?” ಎಂದು ಕೇಳಿದರು.

ಯೇಸು, “ನೀವೆಲ್ಲ ಕಪಟಿಗಳು. ನಿಮ್ಮ ಬಗ್ಗೆ ಯೆಶಾಯನು ಸರಿಯಾಗಿ ಹೇಳಿದ್ದಾನೆ:

‘ನನ್ನನ್ನು ಗೌರವಿಸುವುದಾಗಿ ಈ ಜನರು ಹೇಳುತ್ತಾರೆ,
    ಆದರೆ ಇವರ ಹೃದಯಗಳು ನನ್ನಿಂದ ಬಹುದೂರವಾಗಿವೆ.
ಇವರು ನನ್ನನ್ನು ಆರಾಧಿಸುವುದು ಕೇವಲ ವ್ಯರ್ಥ.
    ಏಕೆಂದರೆ ಮಾನವ ನಿಯಮಗಳನ್ನೇ ಇವರು ಬೋಧಿಸುತ್ತಾರೆ.’(A)

ನೀವು ದೇವರ ಆಜ್ಞೆಗಳಿಗೆ ವಿಧೇಯರಾಗದೆ ಜನರ ಸಂಪ್ರದಾಯಗಳನ್ನು ಅನುಸರಿಸುತ್ತಿರುವಿರಿ” ಎಂದು ಹೇಳಿದನು.

ನಂತರ ಯೇಸು ಅವರಿಗೆ, “ನೀವು ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದಕ್ಕಾಗಿ ದೇವರ ಆಜ್ಞೆಗಳನ್ನು ತಿರಸ್ಕರಿಸುವುದರಲ್ಲಿ ನಿಪುಣರಾಗಿದ್ದೀರಿ! 10 ‘ನಿಮ್ಮ ತಂದೆತಾಯಿಗಳನ್ನು ಗೌರವಿಸಿರಿ’(B) ಎಂತಲೂ ‘ಯಾವ ವ್ಯಕ್ತಿಯಾದರೂ ತನ್ನ ತಂದೆತಾಯಿಗಳಿಗೆ ಕೆಟ್ಟದ್ದನ್ನು ನುಡಿದರೆ ಅವನಿಗೆ ಮರಣದಂಡನೆ ಆಗಬೇಕು’(C) ಎಂತಲೂ ಮೋಶೆಯು ಹೇಳಿದ್ದಾನೆ. 11 ಆದರೆ ನೀವು ಹೇಳುವುದೇನೆಂದರೆ, ಒಬ್ಬನು ತನ್ನ ತಂದೆತಾಯಿಗಳಿಗೆ, ‘ನಿಮ್ಮ ಸಹಾಯಕ್ಕಾಗಿ ನಾನು ಕೊಡತಕ್ಕದ್ದನ್ನೆಲ್ಲ ದೇವರಿಗೆ ಅರ್ಪಿಸಿದ್ದೇನೆ ಎಂದು ಹೇಳಬಹುದು’ ಎಂದು ಬೋಧಿಸಿ, 12 ತನ್ನ ತಂದೆತಾಯಿಗಳಿಗೆ ಸಹಾಯಮಾಡದಂತೆ ಅವನನ್ನು ತಡೆಗಟ್ಟುತ್ತೀರಿ. 13 ಹೀಗಿರಲು ದೇವರ ಆಜ್ಞೆಯನ್ನು ಅನುಸರಿಸುವುದಕ್ಕಿಂತಲೂ ನಿಮ್ಮ ಸಂಪ್ರದಾಯಗಳನ್ನು ಅನುಸರಿಸುವುದೇ ಬಹಳ ಮುಖ್ಯವೆಂದು ನೀವು ಬೋಧಿಸಿದಂತಾಯಿತು. ಇಂಥ ಅನೇಕ ಕಾರ್ಯಗಳನ್ನು ನೀವು ಮಾಡುತ್ತೀರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International