Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
ಯೆಹೂದದ ಅರಸನಾದ ಹಿಜ್ಕೀಯ
29 ಹಿಜ್ಕೀಯನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿದ್ದುಕೊಂಡು ಇಪ್ಪತ್ತೊಂಭತ್ತು ವರ್ಷ ರಾಜ್ಯಭಾರ ಮಾಡಿದನು. ಅವನ ತಾಯಿ ಜೆಕರ್ಯನ ಮಗಳಾದ ಅಬೀಯಳು. 2 ಹಿಜ್ಕೀಯನು ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನಿಗೆ ಸರಿಯಾಗಿ ನಡೆದುಕೊಂಡನು. ಅವನು ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು.
3 ಹಿಜ್ಕೀಯನು ದೇವಾಲಯದ ಬಾಗಿಲುಗಳನ್ನು ದುರಸ್ತಿಮಾಡಿ ಭದ್ರಪಡಿಸಿದನು; ತನ್ನ ಆಳ್ವಿಕೆಯ ಮೊದಲನೇ ವರ್ಷದ ಮೊದಲಿನ ತಿಂಗಳಿನಲ್ಲಿಯೇ ದೇವಾಲಯವನ್ನು ಮತ್ತೆ ತೆರೆಯಿಸಿದನು. 4-5 ಹಿಜ್ಕೀಯನು ಎಲ್ಲಾ ಯಾಜಕರನ್ನೂ ಲೇವಿಯರನ್ನೂ ಕರೆದು ದೇವಾಲಯದ ಪೂರ್ವದಿಕ್ಕಿನಲ್ಲಿದ್ದ ಅಂಗಳದಲ್ಲಿ ಒಟ್ಟುಗೂಡಿಸಿ ಅವರಿಗೆ, “ನನ್ನ ಮಾತುಗಳನ್ನು ಕೇಳಿರಿ. ಲೇವಿಯರೇ, ನೀವು ನಿಮ್ಮನ್ನು ಪವಿತ್ರ ಸೇವೆಗೆ ಸಿದ್ಧಮಾಡಿಕೊಳ್ಳಿರಿ. ಯೆಹೋವ ದೇವರ ಆಲಯವನ್ನು ಪವಿತ್ರ ಸೇವೆಗಾಗಿ ಶುದ್ಧಮಾಡಿರಿ. ನಮ್ಮ ಪೂರ್ವಿಕರು ಸೇವೆಮಾಡಿದ ದೇವರು ಆತನೇ. ದೇವಾಲಯದೊಳಗೆ ಇರಬಾರದ ವಸ್ತುಗಳನ್ನು ತೆಗೆದು ಹೊರಗೆಹಾಕಿರಿ. ಅವು ದೇವರ ಆಲಯವನ್ನು ಹೊಲಸು ಮಾಡುತ್ತವೆ. 6 ನಮ್ಮ ಪೂರ್ವಿಕರು ಯೆಹೋವನನ್ನು ತೊರೆದು ಆತನ ದೃಷ್ಟಿಯಲ್ಲಿ ಪಾಪಮಾಡಿದರು; ಆತನ ಆಲಯಕ್ಕೆ ವಿಮುಖರಾದರು. 7 ಅವರು ದೇವಾಲಯದ ಮಂಟಪದ ಬಾಗಿಲನ್ನು ಮುಚ್ಚಿ ಉರಿಯುತ್ತಿದ್ದ ದೀಪಗಳನ್ನು ನಂದಿಸಿಬಿಟ್ಟರು. ಇಸ್ರೇಲ್ ದೇವರಾದ ಯೆಹೋವನಿಗೆ ಪವಿತ್ರ ಸ್ಥಳದಲ್ಲಿ ಧೂಪಸುಡುವದನ್ನೂ ಸರ್ವಾಂಗಹೋಮಗಳನ್ನು ಅರ್ಪಿಸುವದನ್ನೂ ನಿಲ್ಲಿಸಿದರು. 8 ಆದ್ದರಿಂದ ಯೆಹೋವನು ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಬಹು ಕೋಪಗೊಂಡು ಅವರನ್ನು ಶಿಕ್ಷಿಸಿದನು. ಯೆಹೋವನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮಾಡಿದ್ದ ಸಂಗತಿಗಳನ್ನು ನೋಡಿದ ಅನ್ಯರು ಗೇಲಿ ಮಾಡುತ್ತ ವೈರತ್ವದಿಂದ ತಲೆಯಾಡಿಸಿದರು. ಇವೆಲ್ಲಾ ಸತ್ಯವೆಂದು ನಿಮಗೆ ತಿಳಿದದೆ. ಇದನ್ನು ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದೀರಿ. 9 ನಮ್ಮ ಜನರು ರಣರಂಗದಲ್ಲಿ ಕೊಲ್ಲಲ್ಪಟ್ಟರು; ನಮ್ಮ ಹೆಂಡತಿಮಕ್ಕಳು ಸೆರೆಹಿಡಿಯಲ್ಪಟ್ಟರು. 10 ಆದ್ದರಿಂದ ಹಿಜ್ಕೀಯನಾದ ನಾನು ಇಸ್ರೇಲರ ದೇವರಾದ ಯೆಹೋವನೊಂದಿಗೆ ಒಡಂಬಡಿಕೆ ಮಾಡುತ್ತೇನೆ. ಆತನು ಇನ್ನು ಮುಂದೆ ನಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. 11 ಆದ್ದರಿಂದ ನನ್ನ ಪ್ರಿಯ ಮಕ್ಕಳೇ, ಉದಾಸೀನ ಮಾಡಬೇಡಿರಿ; ಸಮಯವನ್ನು ಹಾಳುಮಾಡಬೇಡಿ. ತನ್ನ ಸೇವೆಮಾಡುವದಕ್ಕಾಗಿ ಆತನು ನಿಮ್ಮನ್ನು ಆರಿಸಿರುತ್ತಾನೆ. ತನ್ನ ಆಲಯದಲ್ಲಿ ಸೇವೆಮಾಡುವುದಕ್ಕೂ ಧೂಪವನ್ನು ಆತನ ಮುಂದೆ ಸುಡುವದಕ್ಕೂ ನಿಮ್ಮನ್ನು ನೇಮಿಸಿರುತ್ತಾನೆ” ಎಂದು ಹೇಳಿದನು.
12-14 ದೇವಾಲಯದಲ್ಲಿ ಸೇವೆಮಾಡಲು ಪ್ರಾರಂಭಿಸಿದ ಲೇವಿಯರ ಪಟ್ಟಿ:
ಕೆಹಾತ್ಯನ ಕುಟುಂಬದ ಅಮಾಸೈಯ ಮಗನಾದ ಮಹತ್ ಮತ್ತು ಅಜರ್ಯನ ಮಗನಾದ ಯೋವೇಲ್;
ಮೆರಾರೀಯ ಸಂತತಿಯಲ್ಲಿ ಅಬ್ದೀಯ ಮಗನಾದ ಕೀಷ, ಯೆಹಲ್ಲೆಲೇಲನ ಮಗನಾದ ಅಜರ್ಯ;
ಗೆರ್ಷೋನ್ಯನ ಸಂತತಿಯಲ್ಲಿ ಜಿಮ್ಮನ ಮಗನಾದ ಯೋವಾಹ,
ಯೋವಾಹನ ಮಗನಾದ ಏದೆನ್; ಎಲೀಚಾಫಾನ್ಯನ ಸಂತತಿಯಲ್ಲಿ ಶಿಮ್ರಿ ಮತ್ತು ಯೆಗೀಯೇಲ್;
ಆಸಾಫಾನ ಸಂತತಿಯವರಿಂದ ಜೆಕರ್ಯ ಮತ್ತು ಮತ್ತನ್ಯ;
ಹೇಮಾನನ ಸಂತತಿಯಿಂದ ಯೆಹೀಯೇಲ್ ಮತ್ತು ಶಿಮ್ಮೀ;
ಯೆದೂತೂನನ ಸಂತತಿಯಲ್ಲಿ ಶೆಮಾಯ ಮತ್ತು ಉಜ್ಜೀಯೇಲ್.
15 ಈ ಲೇವಿಯರೆಲ್ಲಾ ಒಟ್ಟಾಗಿ ಸೇರಿ ತಮ್ಮ ಸಹೋದರರೊಂದಿಗೆ ದೇವಾಲಯದ ಪವಿತ್ರ ಸೇವೆಯನ್ನು ಆರಂಭಿಸಲು ಸಿದ್ಧರಾದರು; ಅರಸನ ಮೂಲಕವಾಗಿ ಬಂದ ದೇವರ ಆಜ್ಞೆಗೆ ವಿಧೇಯರಾದರು; ದೇವಾಲಯವನ್ನು ಶುದ್ಧೀಕರಿಸಲು ಪ್ರಾರಂಭಿಸಿದರು. 16 ಯಾಜಕರು ದೇವಾಲಯದ ಒಳಭಾಗವನ್ನು ಪ್ರವೇಶಿಸಿ ಶುಚಿಮಾಡಿದರು. ದೇವಾಲಯದೊಳಗೆ ಇದ್ದ ಎಲ್ಲಾ ಹೊಲಸು ವಸ್ತುಗಳನ್ನು ಹೊರತೆಗೆದರು. ದೇವಾಲಯದ ಅಂಗಳಕ್ಕೆ ತಂದು ಅಲ್ಲಿಂದ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಬಿಸಾಡಿದರು. 17 ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಲೇವಿಯರು ಪವಿತ್ರ ಸೇವೆಯನ್ನು ಮಾಡಲು ಸಿದ್ಧರಾದರು. ತಿಂಗಳಿನ ಎಂಟನೆಯ ದಿನದಲ್ಲಿ ದೇವಾಲಯದ ಮಂಟಪಕ್ಕೆ ಲೇವಿಯರು ಬಂದರು. ಎಂಟು ದಿನಗಳಲ್ಲಿ ಅವರು ದೇವಾಲಯವನ್ನೆಲ್ಲಾ ಶುಚಿಮಾಡಿದರು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಅವರು ಶುಚಿಮಾಡುವ ಕಾರ್ಯವನ್ನು ಮುಗಿಸಿದರು.
18 ಅನಂತರ ಅವರು ಅರಸನಾದ ಹಿಜ್ಕೀಯನ ಬಳಿಗೆ ಹೋಗಿ, “ಅರಸನಾದ ಹಿಜ್ಕೀಯನೇ, ನಾವು ದೇವಾಲಯವನ್ನೂ ಯಜ್ಞವೇದಿಕೆಯನ್ನೂ ದೇವಾಲಯದ ಸಾಮಾಗ್ರಿಗಳನ್ನೂ ಶುದ್ಧ ಮಾಡಿದೆವು. ರೊಟ್ಟಿಯನ್ನಿಡುವ ಮೇಜನ್ನೂ ಶುದ್ಧ ಮಾಡಿದೆವು. 19 ಆಹಾಜನು ಅರಸನಾಗಿದ್ದ ಕಾಲದಲ್ಲಿ ಅವನು ದೇವರಿಗೆ ವಿರುದ್ಧವಾಗಿ ಎದ್ದನು. ದೇವಾಲಯದೊಳಗಿದ್ದ ಅನೇಕ ವಸ್ತುಗಳನ್ನು ಎತ್ತಿ ಬಿಸಾಡಿದನು. ಆದರೆ ನಾವು ಅವುಗಳನ್ನೆಲ್ಲಾ ಮತ್ತೆ ಯಥಾಸ್ಥಾನದಲ್ಲಿರಿಸಿ ಅದರ ವಿಶೇಷ ಉಪಯೋಗಕ್ಕಾಗಿ ಸಿದ್ಧಪಡಿಸಿದೆವು. ಈಗ ಅವು ಯೆಹೋವನ ವೇದಿಕೆಯ ಮುಂದೆ ಇಡಲ್ಪಟ್ಟಿವೆ” ಎಂದು ಹೇಳಿದರು.
ನಂಬಿಕೆಯ ಮೂಲಕ ದೇವರಾಶೀರ್ವಾದ
3 ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದ್ದರ ಬಗ್ಗೆ ಗಲಾತ್ಯದಲ್ಲಿರುವ ನಿಮಗೆ ಬಹು ಸ್ಪಷ್ಟವಾಗಿ ತಿಳಿಸಲಾಯಿತು. ಆದರೆ ನೀವು ಬಹು ಬುದ್ಧಿಹೀನರಾಗಿದ್ದೀರಿ. ನಿಮ್ಮನ್ನು ಮೋಸಗೊಳಿಸಲು ಬೇರೊಬ್ಬನಿಗೆ ಅವಕಾಶ ಮಾಡಿಕೊಟ್ಟಿರಿ. 2 ಈ ವಿಷಯವೊಂದನ್ನು ನನಗೆ ತಿಳಿಸಿರಿ: ನೀವು ಪವಿತ್ರಾತ್ಮನನ್ನು ಹೊಂದಿಕೊಂಡದ್ದು ಹೇಗೆ? ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದ ಹೊಂದಿಕೊಂಡಿರೊ? ಇಲ್ಲ! ಸುವಾರ್ತೆಯನ್ನು ಕೇಳಿ ಅದರಲ್ಲಿ ನಂಬಿಕೆಯಿಟ್ಟದ್ದರಿಂದಲೇ ಪವಿತ್ರಾತ್ಮನನ್ನು ಹೊಂದಿಕೊಂಡಿರಿ. 3 ಕ್ರಿಸ್ತನಲ್ಲಿಯ ನಿಮ್ಮ ಜೀವಿತವನ್ನು ಪವಿತ್ರಾತ್ಮನೊಂದಿಗೆ ಆರಂಭಿಸಿದಿರಿ. ಈಗ ಅದನ್ನು ನಿಮ್ಮ ಸ್ವಂತ ಶಕ್ತಿಯೊಂದಿಗೆ ಮುಂದುವರಿಸಲು ಪ್ರಯತ್ನಿಸುತ್ತೀರೋ? ಅದು ಬುದ್ಧಿಹೀನತೆ! 4 ಅನೇಕ ಸಂಗತಿಗಳನ್ನು ಅನುಭವದಿಂದ ತಿಳಿದುಕೊಂಡಿದ್ದೀರಿ. ಆ ಅನುಭವಗಳೆಲ್ಲಾ ವ್ಯರ್ಥಗೊಂಡವೇ? 5 ದೇವರು ಪವಿತ್ರಾತ್ಮನನ್ನು ಕೊಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ದೇವರು ಮಹತ್ಕಾರ್ಯಗಳನ್ನು ಮಾಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ಇಲ್ಲ! ಸುವಾರ್ತೆಯನ್ನು ಕೇಳಿ ಅದನ್ನು ನಂಬಿಕೊಂಡದ್ದರಿಂದ ದೇವರು ನಿಮಗೆ ಪವಿತ್ರಾತ್ಮನನ್ನು ಕೊಡುತ್ತಾನೆ ಮತ್ತು ಮಹತ್ಕಾರ್ಯಗಳನ್ನು ಮಾಡುತ್ತಾನೆ.
6 ಪವಿತ್ರ ಗ್ರಂಥವು ಅಬ್ರಹಾಮನ ವಿಷಯವಾಗಿಯೂ ಇದನ್ನೇ ಹೇಳುತ್ತದೆ. “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅವನ ನಂಬಿಕೆಯನ್ನು ಪರಿಗಣಿಸಿದ್ದರಿಂದ ನೀತಿವಂತನೆಂಬ ನಿರ್ಣಯ ಅವನಿಗೆ ದೊರೆಯಿತು.”(A) 7 ಆದ್ದರಿಂದ ನಂಬಿಕೆಯನ್ನು ಹೊಂದಿರುವ ಜನರೇ ಅಬ್ರಹಾಮನ “ನಿಜಮಕ್ಕಳು” ಎಂಬುದು ನಿಮಗೆ ತಿಳಿದಿರಬೇಕು. 8 ದೇವರು ಯೆಹೂದ್ಯರಲ್ಲದವರನ್ನು ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. “ಅಬ್ರಹಾಮನೇ, ನಿನ್ನ ಮೂಲಕ ದೇವರು ಭೂಮಿಯ ಮೇಲಿರುವ ಜನರನ್ನೆಲ್ಲ ಆಶೀರ್ವದಿಸುತ್ತಾನೆ”(B) ಎಂಬ ಸುವಾರ್ತೆಯನ್ನು ಅವನಿಗೆ ಮೊದಲೇ ತಿಳಿಸಲಾಯಿತೆಂದು ಪವಿತ್ರ ಗ್ರಂಥವು ಹೇಳುತ್ತದೆ. 9 ಅವನು ಇದನ್ನು ನಂಬಿದ್ದರಿಂದಲೇ ಆಶೀರ್ವಾದ ಹೊಂದಿದನು. ಇದೇ ನಿಯಮ ಇಂದಿಗೂ ಅನ್ವಯಿಸುತ್ತದೆ. ಅವನು ಆಶೀರ್ವಾದ ಹೊಂದಿದಂತೆಯೇ ನಂಬಿಕೆಯಿಡುವ ಜನರೆಲ್ಲರೂ ಆಶೀರ್ವಾದ ಹೊಂದುವರು.
Kannada Holy Bible: Easy-to-Read Version. All rights reserved. © 1997 Bible League International