Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
2 ಸಮುವೇಲನು 11:26-12:10

ದಾವೀದನು ಬತ್ಷೆಬೆಳನ್ನು ಮದುವೆಯಾದನು

26 ತನ್ನ ಗಂಡನಾದ ಊರೀಯನು ಸತ್ತನೆಂಬ ಸುದ್ದಿಯು ಬತ್ಷೆಬೆಳಿಗೆ ತಿಳಿಯಿತು. ಆಗ ಅವಳು ತನ್ನ ಗಂಡನಿಗಾಗಿ ಗೋಳಾಡಿದಳು. 27 ಅವಳು ತನ್ನ ಶೋಕಕಾಲವನ್ನು ಮುಗಿಸಿದ ನಂತರ, ಅವಳನ್ನು ತನ್ನ ಮನೆಗೆ ಕರೆತರಲು ದಾವೀದನು ಸೇವಕರನ್ನು ಕಳುಹಿಸಿದನು. ಅವಳು ದಾವೀದನ ಪತ್ನಿಯಾದಳು. ಅವಳು ದಾವೀದನಿಂದ ಒಂದು ಗಂಡುಮಗುವಿಗೆ ಜನ್ಮನೀಡಿದಳು. ದಾವೀದನು ಮಾಡಿದ ಈ ಕೆಟ್ಟಕಾರ್ಯವು ಯೆಹೋವನಿಗೆ ದುಃಖವನ್ನುಂಟುಮಾಡಿತು.

ನಾತಾನನು ದಾವೀದನೊಂದಿಗೆ ಮಾತಾಡಿದ್ದು

12 ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ನಾತಾನನು ದಾವೀದನ ಬಳಿಗೆ ಬಂದು, “ಒಂದು ನಗರದಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಶ್ರೀಮಂತ. ಆದರೆ ಮತ್ತೊಬ್ಬನು ತೀರಾ ಬಡವ. ಶ್ರೀಮಂತನ ಹತ್ತಿರ ಅನೇಕ ಕುರಿಗಳು ಮತ್ತು ದನಗಳು ಇದ್ದವು. ಆದರೆ ಬಡವನ ಹತ್ತಿರ ಅವನೇ ತಂದ ಒಂದು ಕುರಿಮರಿಯ ಹೊರತಾಗಿ ಬೇರೇನೂ ಇರಲಿಲ್ಲ. ಆ ಕುರಿಮರಿಯನ್ನು ಬಹು ಪ್ರೀತಿಯಿಂದ ಆ ಬಡವನು ಸಾಕಿದನು. ಅವನ ಮಕ್ಕಳೊಂದಿಗೆ ಈ ಕುರಿಮರಿಯೂ ಬೆಳೆಯಿತು. ಆ ಕುರಿಮರಿಯು ಬಡವನ ಊಟವನ್ನೇ ತಿನ್ನುತ್ತಿತ್ತು. ಅವನ ಬಟ್ಟಲಿನಲ್ಲಿಯೇ ಅದು ನೀರನ್ನು ಕುಡಿಯುತ್ತಿತ್ತು. ಅವನ ಎದೆಯ ಮೇಲೆಯೇ ಆ ಕುರಿಮರಿಯು ಮಲಗುತ್ತಿತ್ತು. ಆ ಕುರಿಮರಿಯು ಬಡವನಿಗೆ ಮಗಳಂತೆಯೇ ಇತ್ತು.

“ಆಗ ಶ್ರೀಮಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಶ್ರೀಮಂತನು ಆ ಪ್ರಯಾಣಿಕನಿಗೆ ಊಟವನ್ನು ಕೊಡಲು ಇಚ್ಛಿಸಿದನು. ಆದರೆ ಶ್ರೀಮಂತನು ಆ ಪ್ರಯಾಣಿಕನಿಗೆ ಕೊಡಲು ತನ್ನ ಸ್ವಂತ ಕುರಿಗಳಿಂದಾಗಲಿ ದನಗಳಿಂದಾಗಲಿ ಯಾವುದನ್ನೇ ಆಗಲಿ ತೆಗೆದುಕೊಳ್ಳಲು ಇಚ್ಛಿಸಲಿಲ್ಲ. ಶ್ರೀಮಂತನು ಆ ಬಡವನಿಂದ ಕುರಿಮರಿಯನ್ನು ತೆಗೆದುಕೊಂಡು ಅದನ್ನು ಕೊಯ್ಯಿಸಿ ತನ್ನ ಅತಿಥಿಗಾಗಿ ಅಡಿಗೆ ಮಾಡಿಸಿದನು” ಎಂದು ಹೇಳಿದನು.

ದಾವೀದನು ಶ್ರೀಮಂತನ ಮೇಲೆ ಬಹಳ ಕೋಪಗೊಂಡನು. ಅವನು ನಾತಾನನಿಗೆ, “ಯೆಹೋವನ ಆಣೆಯಾಗಿ ಈ ಕಾರ್ಯವನ್ನು ಮಾಡಿದ ಮನುಷ್ಯನು ಸಾಯಲೇಬೇಕು! ಅವನು ಕರುಣೆಯಿಲ್ಲದೆ ಇಂತಹ ಕೆಟ್ಟಕಾರ್ಯವನ್ನು ಮಾಡಿದ್ದಕ್ಕಾಗಿ ಕುರಿಮರಿಯ ಬೆಲೆಯ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು” ಎಂದು ಹೇಳಿದನು.

ನಾತಾನನು ದಾವೀದನ ಪಾಪದ ಬಗ್ಗೆ ಹೇಳಿದನು

ಆಗ ನಾತಾನನು ದಾವೀದನಿಗೆ, “ನೀನೇ ಆ ಮನುಷ್ಯ! ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನಿನ್ನನ್ನು ಇಸ್ರೇಲರ ರಾಜನನ್ನಾಗಿ ಆರಿಸಿದವನು ನಾನೇ. ಸೌಲನಿಂದ ನಿನ್ನನ್ನು ರಕ್ಷಿಸಿದವನು ನಾನೇ. ಅವನ ಕುಟುಂಬವನ್ನೂ ಅವನ ಪತ್ನಿಯರನ್ನೂ ನಿನಗೆ ಕೊಟ್ಟವನು ನಾನೇ. ನಿನ್ನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಮಾಡಿದವನು ನಾನೇ. ಅದು ಸಾಲದು ಎನ್ನುವಂತೆ, ನಾನು ಮತ್ತಷ್ಟು ಹೆಚ್ಚಿನದನ್ನೂ ನೀಡಿದೆನು. ನೀನು ಯೆಹೋವನ ಆಜ್ಞೆಯನ್ನು ಏಕೆ ಕಡೆಗಣಿಸಿದೆ? ಆತನು ತಪ್ಪೆಂದು ಹೇಳಿದ ಕಾರ್ಯವನ್ನು ಏಕೆ ಮಾಡಿದೆ? ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ನೀನು ಕೊಲ್ಲಿಸಿದೆ. ಅವನ ಪತ್ನಿಯನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಿದೆ. ಹೌದು, ನೀನು ಅಮ್ಮೋನಿಯರ ಕತ್ತಿಯಿಂದ ಊರೀಯನನ್ನು ಕೊಲ್ಲಿಸಿದೆ. 10 ನೀನು ಅವನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಮತ್ತು ನನ್ನ ಆಜ್ಞೆಯನ್ನು ತಿರಸ್ಕರಿಸಿದ್ದರಿಂದ ಕತ್ತಿಯು ನಿನ್ನ ಕುಟುಂಬವನ್ನು ಸದಾ ಹಿಡಿದಿರುವುದು.’

2 ಸಮುವೇಲನು 12:13-15

13 ಆಗ ದಾವೀದನು ನಾತಾನನಿಗೆ, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದೆನು” ಎಂದನು.

ನಾತಾನನು ದಾವೀದನಿಗೆ, “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ. ನೀನು ಸಾಯುವುದಿಲ್ಲ. 14 ನೀನು ನಿನ್ನ ಪಾಪಕೃತ್ಯಗಳಿಂದ ಯೆಹೋವನ ವೈರಿಗಳು ಯೆಹೋವನನ್ನು ಹೆಚ್ಚು ದ್ವೇಷಿಸುವಂತೆ ಮಾಡಿದೆ. ನಿನಗೆ ಹುಟ್ಟಿದ ಗಂಡುಮಗು ಈ ಕಾರಣಕ್ಕಾಗಿ ಸತ್ತುಹೋಗುವುದು” ಎಂದು ಹೇಳಿದನು.

ದಾವೀದ ಮತ್ತು ಬತ್ಷೆಬೆಳ ಮಗುವಿನ ಮರಣ

15 ನಾತಾನನು ಮನೆಗೆ ಹೋದನು. ದಾವೀದನಿಗೆ ಊರೀಯನ ಹೆಂಡತಿಯಲ್ಲಿ ಹುಟ್ಟಿದ ಗಂಡುಮಗುವಿಗೆ ಯೆಹೋವನು ಬಹಳ ಕಾಯಿಲೆಯನ್ನು ಬರಮಾಡಿದನು.

ಕೀರ್ತನೆಗಳು 32

ರಚನೆಗಾರ: ದಾವೀದ.

32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
    ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
    ಅವನೇ ಧನ್ಯನು.
ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
    ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
    ಅವನೇ ಧನ್ಯನು.

ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
    ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
    ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
    ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.

ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
    ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
    ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
    ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
ನೀನು ನನಗೆ ಆಶ್ರಯದುರ್ಗವಾಗಿರುವೆ.
    ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
    ಮಾರ್ಗದರ್ಶನ ನೀಡುವೆನು;
    ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
    ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”

10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
    ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
    ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.

ಗಲಾತ್ಯದವರಿಗೆ 2:15-21

15 ನಾವಂತೂ ಹುಟ್ಟು ಯೆಹೂದ್ಯರು. ನಾವು ಪಾಪಿಗಳೆನಿಸಿಕೊಂಡಿರುವ ಅನ್ಯಜನರಲ್ಲ. 16 ಕೇವಲ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಒಬ್ಬನು ನೀತಿವಂತನಾಗಲು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತಿದೆ. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದಲೇ ಒಬ್ಬನು ನೀತಿವಂತನಾಗಲು ಸಾಧ್ಯ. ಆದ್ದರಿಂದ ನೀತಿವಂತರಾಗಲು ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟೆವು. ಹೀಗಿರಲಾಗಿ, ನಾವು ನೀತಿವಂತರಾದದ್ದು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರಿಂದಲೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಇದು ಸತ್ಯ, ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರಿಂದ ಯಾರೂ ನೀತಿವಂತರಾಗಲು ಸಾಧ್ಯವಿಲ್ಲ.

17 ಯೆಹೂದ್ಯರಾದ ನಾವು ನೀತಿವಂತರಾಗಲು ಕ್ರಿಸ್ತನ ಬಳಿಗೆ ಬಂದೆವು. ಆದ್ದರಿಂದ ನಾವು ಸಹ ಪಾಪಿಗಳಾಗಿದ್ದೇವೆಂಬುದು ಸ್ಪಷ್ಟವಾಗಿದೆ. ಕ್ರಿಸ್ತನು ನಮ್ಮನ್ನು ಪಾಪಿಗಳನ್ನಾಗಿ ಮಾಡುತ್ತಾನೆಂಬುದು ಇದರ ಅರ್ಥವೇ? ಇಲ್ಲ. 18 ಆದರೆ ನಾನು ತೊರೆದುಬಿಟ್ಟ ಆ ಸಂಗತಿಗಳನ್ನು ಮತ್ತೆ ಬೋಧಿಸಲಾರಂಭಿಸಿದರೆ ನಿಜವಾಗಿಯೂ ತಪ್ಪು ಮಾಡಿದವನಾಗುತ್ತೇನೆ. 19 ನಾನು ಧರ್ಮಶಾಸ್ತ್ರಕ್ಕಾಗಿ ಜೀವಿಸುವುದನ್ನು ತೊರೆದುಬಿಟ್ಟೆನು. ನನ್ನನ್ನು ಧರ್ಮಶಾಸ್ತ್ರವೇ ಕೊಂದಿತು. ಈಗ ನಾನು ದೇವರಿಗಾಗಿ ಜೀವಿಸಬೇಕೆಂದು ಧರ್ಮಶಾಸ್ತ್ರದ ಪಾಲಿಗೆ ಸತ್ತುಹೋದೆನು. ನಾನು ಕ್ರಿಸ್ತನೊಂದಿಗೆ ಶಿಲುಬೆಗೇರಿಸಲ್ಪಟ್ಟೆನು. 20 ಆದ್ದರಿಂದ ಈಗ ನನ್ನೊಳಗೆ ಜೀವಿಸುತ್ತಿರುವವನು ನಿಜವಾಗಿಯೂ ನಾನಲ್ಲ, ಕ್ರಿಸ್ತನೇ ನನ್ನೊಳಗೆ ಜೀವಿಸುತ್ತಿದ್ದಾನೆ. ನಾನಿನ್ನೂ ದೇಹಾರೂಢನಾಗಿದ್ದೇನೆ. ಆದರೆ ನಾನು ಜೀವಿಸುತ್ತಿರುವುದು ದೇವರ ಮಗನ ಮೇಲೆ ನನಗಿರುವ ನಂಬಿಕೆಯಿಂದಲೇ. ನನ್ನನ್ನು ಪ್ರೀತಿಸಿದಾತನು ಯೇಸುವೇ ಮತ್ತು ನನ್ನನ್ನು ರಕ್ಷಿಸುವುದಕ್ಕಾಗಿ ಆತನು ತನ್ನನ್ನೇ ಕೊಟ್ಟುಬಿಟ್ಟನು. 21 ಇದು ದೇವರ ವರವಾಗಿದೆ ಮತ್ತು ನನಗೆ ಅತಿಮುಖ್ಯವಾದದ್ದಾಗಿದೆ. ಏಕೆಂದರೆ ಧರ್ಮಶಾಸ್ತ್ರವು ನಮ್ಮನ್ನು ನೀತಿವಂತರನ್ನಾಗಿ ಮಾಡಬಹುದಾಗಿದ್ದರೆ, ಕ್ರಿಸ್ತನು ಸಾಯುವ ಅಗತ್ಯವೇ ಇರಲಿಲ್ಲ.

ಲೂಕ 7:36-8:3

ಫರಿಸಾಯನಾದ ಸಿಮೋನನು

36 ಫರಿಸಾಯರಲ್ಲಿ ಒಬ್ಬನು ಯೇಸುವನ್ನು ಊಟಕ್ಕೆ ಬರಬೇಕೆಂದು ಕೇಳಿಕೊಂಡನು. ಆದ್ದರಿಂದ ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತುಕೊಂಡನು.

37 ಆ ಊರಿನಲ್ಲಿ ಪಾಪಿಷ್ಠಳಾದ ಒಬ್ಬ ಸ್ತ್ರೀ ಇದ್ದಳು. ಯೇಸುವು ಫರಿಸಾಯನ ಮನೆಯಲ್ಲಿ ಊಟಮಾಡುತ್ತಿದ್ದಾನೆಂದು ಆಕೆಗೆ ತಿಳಿಯಿತು. ಆದ್ದರಿಂದ ಆಕೆ ಭರಣಿಯಲ್ಲಿ[a] ಸ್ವಲ್ಪ ಪರಿಮಳತೈಲವನ್ನು ತೆಗೆದುಕೊಂಡು ಬಂದಳು. 38 ಆಕೆ ಯೇಸುವಿನ ಪಾದಗಳ ಬಳಿ ಅಳುತ್ತಾ, ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿನಿಂದ ಯೇಸುವಿನ ಪಾದಗಳನ್ನು ಒರೆಸಿದಳು. ಆಕೆ ಅನೇಕಸಲ ಆತನ ಪಾದಗಳಿಗೆ ಮುದ್ದಿಟ್ಟು ಪರಿಮಳತೈಲವನು ಹಚ್ಚಿದಳು.

39 ಯೇಸುವನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ ಫರಿಸಾಯನು ಇದನ್ನು ಕಂಡು ತನ್ನೊಳಗೆ, “ಯೇಸು ಪ್ರವಾದಿಯೇ ಆಗಿದ್ದರೆ, ತನ್ನನ್ನು ಮುಟ್ಟುತ್ತಿರುವ ಸ್ತ್ರೀಯು ಪಾಪಿಷ್ಠಳೆಂದು ತಿಳಿದುಕೊಳ್ಳುತ್ತಿದ್ದನು” ಎಂದುಕೊಂಡನು.

40 ಅದಕ್ಕೆ ಯೇಸು ಫರಿಸಾಯನಿಗೆ, “ಸಿಮೋನನೇ, ನಾನು ನಿನಗೆ ಒಂದು ವಿಷಯವನ್ನು ಹೇಳಬೇಕಾಗಿದೆ” ಎಂದನು.

ಸಿಮೋನನು, “ಗುರುವೇ, ಹೇಳು!” ಎಂದನು.

41 ಯೇಸು, “ಇಬ್ಬರು ಮನುಷ್ಯರಿದ್ದರು. ಅವರಿಬ್ಬರೂ ಒಬ್ಬನೇ ಸಾಹುಕಾರನಿಂದ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು[b] ತೆಗೆದುಕೊಂಡಿದ್ದನು. ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು. 42 ಅವರಲ್ಲಿ ಹಣವಿರಲಿಲ್ಲ. ಆದ್ದರಿಂದ ಅವರು ಸಾಲ ತೀರಿಸಲು ಆಗಲಿಲ್ಲ. ಸಾಹುಕಾರನು ಅವರಿಗೆ, ‘ನೀವು ಸಾಲ ತೀರಿಸಬೇಕಾಗಿಲ್ಲ’ ಎಂದು ಹೇಳಿದನು. ಆ ಇಬ್ಬರಲ್ಲಿ ಯಾರು ಹೆಚ್ಚಾಗಿ ಸಾಹುಕಾರನನ್ನು ಪ್ರೀತಿಸುವರು?” ಎಂದು ಕೇಳಿದನು.

43 ಸಿಮೋನನು, “ಹೆಚ್ಚು ಸಾಲ ತೆಗೆದುಕೊಂಡಿದ್ದವನೇ ಎಂದು ತೋರುತ್ತದೆ” ಎಂದನು.

ಯೇಸು ಸಿಮೋನನಿಗೆ, “ನೀನು ಸರಿಯಾಗಿ ಹೇಳಿದೆ” ಎಂದನು. 44 ಬಳಿಕ ಯೇಸು ಸ್ತ್ರೀಯ ಕಡೆಗೆ ನೋಡಿ ಸಿಮೋನನಿಗೆ, “ಈ ಸ್ತ್ರೀಯು ನಿನಗೆ ಕಾಣುತ್ತಿರುವಳೇ? ನಾನು ನಿನ್ನ ಮನೆಯೊಳಗೆ ಬಂದಾಗ ನೀನು ನನ್ನ ಪಾದಗಳಿಗೆ ನೀರು ಕೊಡಲಿಲ್ಲ. ಆದರೆ ಈಕೆ ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿಂದ ಒರೆಸಿದಳು. 45 ನೀನು ನನಗೆ ಮುದ್ದಿಡಲಿಲ್ಲ. ಈಕೆಯಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುದ್ದಿಡುತ್ತಿದ್ದಾಳೆ! 46 ನೀನು ನನ್ನ ತಲೆಗೆ ಎಣ್ಣೆಯನ್ನು ಹಚ್ಚಲಿಲ್ಲ. ಈಕೆಯಾದರೋ ನನ್ನ ಪಾದಗಳಿಗೆ ಪರಿಮಳತೈಲವನ್ನು ಹಚ್ಚಿದಳು. 47 ಈಕೆಯ ಅನೇಕ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ಈಕೆ ಅಧಿಕವಾದ ಪ್ರೀತಿಯನ್ನು ತೋರಿದಳು. ಆದರೆ ಸ್ವಲ್ಪ ಕ್ಷಮೆ ಹೊಂದುವವನು ಕೇವಲ ಸ್ವಲ್ಪ ಪ್ರೀತಿಯನ್ನೇ ತೋರುವನು” ಎಂದು ಹೇಳಿದನು.

48 ಬಳಿಕ ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

49 ಊಟಕ್ಕೆ ಕುಳಿತುಕೊಂಡಿದ್ದವರು, “ಇವನು (ಯೇಸು) ತನ್ನನ್ನು ಯಾರೆಂದುಕೊಂಡಿದ್ದಾನೆ? ಪಾಪಗಳನ್ನು ಕ್ಷಮಿಸಲು ಇವನಿಗೆ ಹೇಗೆ ಸಾಧ್ಯ?” ಎಂದು ತಮ್ಮೊಳಗೆ ಅಂದುಕೊಂಡರು.

50 ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯಿಂದಲೇ ನಿನಗೆ ರಕ್ಷಣೆ ಆಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.

ಯೇಸುವಿನೊಂದಿಗಿದ್ದ ಜನರು

ಮರುದಿನ, ಯೇಸು ಕೆಲವು ನಗರಗಳ ಮತ್ತು ಊರುಗಳ ಮೂಲಕ ಪ್ರಯಾಣ ಮಾಡಿ ಜನರಿಗೆ ಬೋಧಿಸಿದನು ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಿದನು. ಹನ್ನೆರಡು ಮಂದಿ ಅಪೊಸ್ತಲರು ಆತನೊಡನೆ ಇದ್ದರು. ಕೆಲವು ಸ್ತ್ರೀಯರೂ ಆತನೊಡನೆ ಇದ್ದರು. ಈ ಸ್ತ್ರೀಯರು ಆತನಿಂದ ತಮ್ಮ ಕಾಯಿಲೆಗಳಿಂದ ಗುಣಹೊಂದಿದವರೂ ದೆವ್ವಗಳ ಕಾಟದಿಂದ ಬಿಡುಗಡೆ ಹೊಂದಿದವರೂ ಆಗಿದ್ದರು. ಈ ಸ್ತ್ರೀಯರಲ್ಲಿ ಒಬ್ಬಳ ಹೆಸರು ಮರಿಯಳು. ಆಕೆ ಮಗ್ದಲ ಎಂಬ ಊರಿನವಳು. ಯೇಸು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದನು. ಇದಲ್ಲದೆ ಕೂಜನ (ಹೆರೋದನ ಸಹಾಯಕ) ಹೆಂಡತಿಯಾದ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕ ಸ್ತ್ರೀಯರು ಇದ್ದರು. ಈ ಸ್ತ್ರೀಯರು ಯೇಸುವಿಗೂ ಆತನ ಅಪೊಸ್ತಲರಿಗೂ ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International