Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 32

ರಚನೆಗಾರ: ದಾವೀದ.

32 ಯಾವನ ಪಾಪಗಳು ಕ್ಷಮಿಸಲ್ಪಟ್ಟಿವೆಯೋ
    ಯಾವನ ದ್ರೋಹಗಳು ಅಳಿಸಲ್ಪಟ್ಟಿವೆಯೋ
    ಅವನೇ ಧನ್ಯನು.
ಯೆಹೋವನು ಯಾವನನ್ನು ದೋಷಿಯೆಂದು ಹೇಳುವುದಿಲ್ಲವೋ
    ಯಾವನು ತನ್ನ ಗುಪ್ತಪಾಪಗಳನ್ನು ಅಡಗಿಸಿಟ್ಟುಕೊಳ್ಳುವುದಿಲ್ಲವೋ
    ಅವನೇ ಧನ್ಯನು.

ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ
    ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು;
    ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.
ಹಗಲಿರುಳು ನಿನ್ನ ಶಿಕ್ಷಾಹಸ್ತವು ನನ್ನ ಮೇಲೆ ಭಾರವಾಗಿತ್ತು.
    ನಾನು ಬೇಸಿಗೆಯಲ್ಲಿ ಒಣಗಿಹೋದ ಭೂಮಿಯಂತಾದೆನು.

ಆಗ ನಾನು ನನ್ನ ಪಾಪಗಳನ್ನೆಲ್ಲ ಯೆಹೋವನಿಗೆ ಅರಿಕೆಮಾಡಲು ನಿರ್ಧರಿಸಿದೆನು.
    ಯೆಹೋವನೇ, ನಾನು ನನ್ನ ಪಾಪಗಳನ್ನು ಅರಿಕೆಮಾಡಿಕೊಂಡಾಗ, ನನ್ನ ಯಾವ ದೋಷವನ್ನೂ ನಿನಗೆ ಮರೆಮಾಡಲಿಲ್ಲ.
    ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ದೇವರೇ, ಈ ಕಾರಣದಿಂದಲೇ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸಲಿ.
    ಆಪತ್ತುಗಳು ಮಹಾಪ್ರವಾಹದಂತೆ ಬಂದರೂ ಅವರನ್ನು ಮುಟ್ಟಲಾರವು.
ನೀನು ನನಗೆ ಆಶ್ರಯದುರ್ಗವಾಗಿರುವೆ.
    ಇಕ್ಕಟ್ಟುಗಳಲ್ಲಿ ನೀನು ನನ್ನನ್ನು ಸುತ್ತುವರಿದು ಕಾಪಾಡುವೆ.
ಆದ್ದರಿಂದ ನಿನ್ನ ರಕ್ಷಣೆಯ ಕುರಿತು ಹಾಡಿಕೊಂಡಾಡುವೆ.
ಯೆಹೋವನು ಹೀಗೆನ್ನುತ್ತಾನೆ: “ನಿನಗೆ ಜೀವಮಾರ್ಗವನ್ನು ಉಪದೇಶಿಸಿ
    ಮಾರ್ಗದರ್ಶನ ನೀಡುವೆನು;
    ನಿನ್ನನ್ನು ಕಾಪಾಡಿ ನಿನಗೆ ಮಾರ್ಗದರ್ಶಿಯಾಗಿರುವೆನು.
ಆದ್ದರಿಂದ ಕುದುರೆಯಂತಾಗಲಿ ಹೇಸರಕತ್ತೆಯಂತಾಗಲಿ ಮೂಢರಾಗಿರಬೇಡಿ.
    ಬಾರು, ಕಡಿವಾಣಗಳಿಲ್ಲದಿದ್ದರೆ ಅವು ನಿಮ್ಮ ಅಧೀನಕ್ಕೆ ಬರುವುದಿಲ್ಲ.”

10 ಕೆಡುಕರಿಗೆ ಅನೇಕ ಕೇಡುಗಳಾಗುತ್ತವೆ.
    ಆದರೆ ಯೆಹೋವನಲ್ಲಿ ಭರವಸವಿಟ್ಟಿರುವವರನ್ನು ಆತನ ಶಾಶ್ವತವಾದ ಪ್ರೀತಿಯು ಆವರಿಸಿಕೊಳ್ಳುವುದು.
11 ನೀತಿವಂತರೇ, ಹರ್ಷಿಸಿರಿ; ಯೆಹೋವನಲ್ಲಿ ಆನಂದಿಸಿರಿ.
    ಶುದ್ಧಹೃದಯವುಳ್ಳವರೇ, ಉಲ್ಲಾಸಿಸಿರಿ.

2 ಸಮುವೇಲನು 15:1-12

ಅಬ್ಷಾಲೋಮನಿಗೆ ಅನೇಕರು ಸ್ನೇಹಿತರಾದದ್ದು

15 ಇದಾದನಂತರ, ಅಬ್ಷಾಲೋಮನು ತನಗಾಗಿ ರಥವನ್ನೂ ಕುದರೆಗಳನ್ನೂ ಪಡೆದನು. ಅವನು ರಥವನ್ನು ನಡೆಸುವಾಗ ಅವನ ಮುಂದೆ ಓಡಲು ಐವತ್ತು ಜನರಿದ್ದರು. ಅಬ್ಷಾಲೋಮನು ಹೊತ್ತಾರೆಯಲ್ಲಿಯೇ ಎದ್ದು ದ್ವಾರದ[a] ಹತ್ತಿರದಲ್ಲಿ ನಿಂತುಕೊಳ್ಳುತ್ತಿದ್ದನು. ತೊಂದರೆಯಲ್ಲಿ ಸಿಕ್ಕಿಕೊಂಡಿರುವ ಯಾವನಾದರೂ ತೀರ್ಪಿಗಾಗಿ ರಾಜನಾದ ದಾವೀದನ ಬಳಿಗೆ ಹೋಗುತ್ತಿರುವುದನ್ನು ಅಬ್ಷಾಲೋಮನು ಕಂಡರೆ ಅವನನ್ನು ತನ್ನ ಬಳಿಗೆ ಕರೆಯುತ್ತಿದ್ದನು. ಅಬ್ಷಾಲೋಮನು, “ನೀನು ಯಾವ ನಗರದಿಂದ ಬಂದೆ?” ಎಂದು ಕೇಳುತ್ತಿದ್ದನು. ಆ ಮನುಷ್ಯನು, “ನಾನು ಇಸ್ರೇಲಿನ ಇಂಥ ಕುಲಕ್ಕೆ ಸೇರಿದವನು” ಎಂದು ಉತ್ತರಿಸುತ್ತಿದ್ದನು. ಆಗ ಅಬ್ಷಾಲೋಮನು ಆ ಮನುಷ್ಯನಿಗೆ, “ನೋಡು, ನಿನ್ನ ಬೇಡಿಕೆಗಳು ಸರಿಯಾಗಿವೆ. ಆದರೆ ರಾಜನಾದ ದಾವೀದನು ನಿನ್ನ ಮಾತುಗಳನ್ನು ಕೇಳುವುದಿಲ್ಲ” ಎಂದು ಹೇಳುತ್ತಿದ್ದನು.

ಅಲ್ಲದೆ ಅಬ್ಷಾಲೋಮನು, “ಯಾರಾದರೂ ನನ್ನನ್ನು ಈ ದೇಶದಲ್ಲಿ ನ್ಯಾಯಾಧೀಶನನ್ನಾಗಿ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ತೀರ್ಪಿಗಾಗಿ ತಮ್ಮ ತೊಂದರೆಗಳೊಂದಿಗೆ ಬರುವ ಪ್ರತಿಯೊಬ್ಬನಿಗೂ ಆಗ ನಾನು ಸಹಾಯ ಮಾಡಬಹುದಾಗಿತ್ತು. ಅವನ ತೊಂದರೆಗೆ ತೃಪ್ತಿಕರವಾದ ಪರಿಹಾರವನ್ನು ನೀಡಲು ನಾನು ಸಹಾಯ ಮಾಡಬಹುದಾಗಿತ್ತು” ಎಂದು ಹೇಳುತ್ತಿದ್ದನು.

ಯಾವನಾದರೂ ಅಬ್ಷಾಲೋಮನ ಹತ್ತಿರಕ್ಕೆ ಬಂದು ಸಾಷ್ಟಾಂಗನಮಸ್ಕಾರಮಾಡಲು ಬಾಗಿದಾಗ, ಅಬ್ಷಾಲೋಮನು ಕೈಚಾಚಿ ಅವನನ್ನು ಅಪ್ಪಿಕೊಂಡು ಮುದ್ದಿಡುತ್ತಿದ್ದನು. ರಾಜನಾದ ದಾವೀದನ ಬಳಿಗೆ ತೀರ್ಪಿಗಾಗಿ ಬರುವ ಎಲ್ಲಾ ಇಸ್ರೇಲರಿಗೆ ಅಬ್ಷಾಲೋಮನು ಇದೇ ರೀತಿ ಮಾಡುತ್ತಿದ್ದನು. ಹೀಗೆ, ಅಬ್ಷಾಲೋಮನು ಇಸ್ರೇಲಿನ ಜನರೆಲ್ಲರ ಹೃದಯಗಳನ್ನು ಗೆದ್ದುಕೊಂಡನು.

ದಾವೀದನ ರಾಜ್ಯಾಧಿಕಾರವನ್ನು ಪಡೆದುಕೊಳ್ಳಲು ಅಬ್ಷಾಲೋಮನ ಆಲೋಚನೆ

ನಾಲ್ಕು ವರ್ಷಗಳ ಬಳಿಕ[b] ಅಬ್ಷಾಲೋಮನು ರಾಜನಾದ ದಾವೀದನಿಗೆ, “ನಾನು ಹೆಬ್ರೋನಿನಲ್ಲಿ ಯೆಹೋವನೊಂದಿಗೆ ಮಾಡಿದ ವಿಶೇಷ ಪ್ರಮಾಣವನ್ನು ಪೂರ್ಣಗೊಳಿಸುವುದಕ್ಕೆ ದಯವಿಟ್ಟು ಅನುಮತಿಕೊಡು. ನಾನು ಅರಾಮಿನ ಗೆಷೂರಿನಲ್ಲಿ ನೆಲೆಸಿದ್ದಾಗ, ‘ಯೆಹೋವನು ನನ್ನನ್ನು ಜೆರುಸಲೇಮಿಗೆ ಮತ್ತೆ ಕರೆಸಿಕೊಂಡರೆ, ನಾನು ಯೆಹೋವನ ಆರಾಧನೆ ಮಾಡುತ್ತೇನೆ, ಎಂಬ ವಿಶೇಷ ಪ್ರಮಾಣವನ್ನು ಮಾಡಿದ್ದೆನು’” ಎಂದನು.

“ಸಮಾಧಾನದಿಂದ ಹೋಗು” ಎಂದು ರಾಜನಾದ ದಾವೀದನು ಹೇಳಿದನು.

ಅಬ್ಷಾಲೋಮನು ಹೆಬ್ರೋನಿಗೆ ಹೋದನು. 10 ಆದರೆ ಅಬ್ಷಾಲೋಮನು ಇಸ್ರೇಲಿನ ಎಲ್ಲಾ ಕುಲಗಳಿಗೂ ಗೂಢಚಾರರನ್ನು ಕಳುಹಿಸಿದನು. ಈ ಗೂಢಚಾರರು ಜನರಿಗೆ, “ನೀವು ಕಹಳೆಯ ಧ್ವನಿಯನ್ನು ಕೇಳಿದಾಗ, ‘ಅಬ್ಷಾಲೋಮನು ಹೆಬ್ರೋನಿನಲ್ಲಿ ರಾಜನಾದ’ನೆಂದು ಹೇಳಿ” ಎಂಬುದಾಗಿ ತಿಳಿಸಿದರು.

11 ಅಬ್ಷಾಲೋಮನು ತನ್ನೊಂದಿಗೆ ಬರಲು ಇನ್ನೂರು ಜನರನ್ನು ಆಹ್ವಾನಿಸಿದನು. ಆ ಜನರು ಜೆರುಸಲೇಮನ್ನು ಬಿಟ್ಟು ಅವನೊಂದಿಗೆ ಹೊರಟರು. ಆದರೆ ಅವನು ಯೋಚಿಸಿದ ಕಾರ್ಯವು ಅವರಿಗೆ ತಿಳಿದಿರಲಿಲ್ಲ. 12 ಅಹೀತೋಫೆಲನೆಂಬವನು ದಾವೀದನ ಸಲಹೆಗಾರರಲ್ಲಿ ಒಬ್ಬನಾಗಿದ್ದನು. ಅಹೀತೋಫೆಲನು ಗೀಲೋವ ಎಂಬ ಪಟ್ಟಣದವನು. ಅಬ್ಷಾಲೋಮನು ಯಜ್ಞಗಳನ್ನು ಅರ್ಪಿಸುತ್ತಿರುವಾಗ ಅಹೀತೋಫೆಲನನ್ನು ಅವನ ಪಟ್ಟಣವಾದ ಗೀಲೋವದಿಂದ ಕರೆಯಿಸಿದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದದ್ದರಿಂದ ಅವನು ಮಾಡಿದ ಒಳಸಂಚು ಸಫಲವಾಗತೊಡಗಿತು.

ರೋಮ್ನಗರದವರಿಗೆ 11:1-10

ದೇವರು ತನ್ನ ಜನರನ್ನು ಮರೆತಿಲ್ಲ

11 ಹಾಗಾದರೆ, “ದೇವರು ತನ್ನ ಜನರನ್ನು ತಿರಸ್ಕರಿಸಿದನೇ?” ಎಂದು ನಾನು ಕೇಳುತ್ತೇನೆ. ಇಲ್ಲ! ನಾನೂ ಒಬ್ಬ ಇಸ್ರೇಲನಾಗಿದ್ದೇನೆ. ನಾನು ಅಬ್ರಹಾಮನ ಕುಟುಂಬಕ್ಕೆ ಸೇರಿದವನಾಗಿದ್ದೇನೆ: ಬೆನ್ಯಾಮೀನನ ಕುಲದವನಾಗಿದ್ದೇನೆ. ಇಸ್ರೇಲರು ಹುಟ್ಟುವುದಕ್ಕಿಂತ ಮೊದಲೇ ದೇವರು ಅವರನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಆತನು ಅವರನ್ನು ಹೊರಕ್ಕೆ ತಳ್ಳಿಬಿಡಲಿಲ್ಲ. ಎಲೀಯನ ಬಗ್ಗೆ ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ಇಸ್ರೇಲಿನ ಜನರ ವಿರೋಧವಾಗಿ ಎಲೀಯನು ದೇವರಿಗೆ ಮಾಡಿದ ಪ್ರಾರ್ಥನೆಯ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿದೆ. ಎಲೀಯನು, “ಪ್ರಭುವೇ, ಜನರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು; ನಿನ್ನ ಯಜ್ಞವೇದಿಕೆಗಳನ್ನು ನಾಶಮಾಡಿದರು. ಪ್ರವಾದಿಗಳಲ್ಲಿ ನಾನೊಬ್ಬನು ಮಾತ್ರ ಇನ್ನೂ ಬದುಕಿದ್ದೇನೆ. ಈಗ ಜನರು ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ”(A) ಎಂದು ಪ್ರಾರ್ಥಿಸಿದನು. ಆದರೆ ದೇವರು ಎಲೀಯನಿಗೆ ಕೊಟ್ಟ ಉತ್ತರವೇನು? ದೇವರು ಎಲೀಯನಿಗೆ, “ಇನ್ನೂ ನನ್ನನ್ನು ಆರಾಧಿಸುತ್ತಿರುವ ಏಳು ಸಾವಿರ ಮಂದಿಯನ್ನು ನನಗಾಗಿ ಉಳಿಸಿಕೊಂಡಿದ್ದೇನೆ. ಅವರನ್ನು ಬಾಳನ ಪೂಜೆಗೆ ಕೊಟ್ಟಿಲ್ಲ”(B) ಎಂದು ಉತ್ತರಕೊಟ್ಟನು.

ಈಗಲೂ ಅದರಂತೆಯೇ ಆಗಿದೆ. ದೇವರು ತನ್ನ ಕೃಪೆಯ ಮೂಲಕ ಆರಿಸಿಕೊಂಡಿರುವ ಕೆಲವು ಜನರು ಇದ್ದಾರೆ. ದೇವರ ಕೃಪೆಯ ಮೂಲಕ ಆರಿಸಲ್ಪಟ್ಟಿರುವ ಅವರು ದೇವರ ಮಕ್ಕಳಾದದ್ದು ತಮ್ಮ ಕ್ರಿಯೆಗಳಿಂದಲ್ಲ. ಇಲ್ಲದಿದ್ದರೆ, ದೇವರ ಕೃಪಾವರವು ಕೃಪಾವರವೆನಿಸಿಕೊಳ್ಳುತ್ತಿರಲಿಲ್ಲ.

ಆದ್ದರಿಂದ ನಡೆದ ಸಂಗತಿಯಿಷ್ಟೆ: ಇಸ್ರೇಲಿನ ಜನರು ನೀತಿವಂತರಾಗಲು ಪ್ರಯತ್ನಿಸಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ. ಹೀಗಿರಲು, ದೇವರಿಂದ ಆರಿಸಲ್ಪಟ್ಟಿದ್ದ ಜನರು ನೀತಿವಂತರಾದರು. ಆದರೆ ಉಳಿದ ಜನರು ಕಠಿಣರಾಗಿ ದೇವರಿಗೆ ಕಿವಿಗೊಡಲಿಲ್ಲ. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:

“ಜನರಿಗೆ ಅರ್ಥವಾಗದಂತೆ ದೇವರು ಅವರನ್ನು ಮಂಕುಗೊಳಿಸಿದನು.”(C)

“ಅವರು ಇಂದಿನವರೆಗೂ ಕಣ್ಣಿದ್ದರೂ ಕಾಣದಂತೆ
    ಕಿವಿಯಿದ್ದರೂ ಕೇಳದಂತೆ ದೇವರು ಅವುಗಳನ್ನು ಮುಚ್ಚಿಬಿಟ್ಟನು.”(D)

ದಾವೀದನು ಹೀಗೆನ್ನುತ್ತಾನೆ:

“ಅವರು ತಮ್ಮ ಔತಣಗಳಲ್ಲಿ ಸಿಕ್ಕಿಕೊಂಡು ಬಂಧಿತರಾಗಲಿ;
    ಎಡವಿಬಿದ್ದು ದಂಡನೆ ಹೊಂದಲಿ.
10 ಅವರ ಕಣ್ಣು ಕುರುಡಾಗಲಿ;
    ನಿರಂತರ ಭಾರದಿಂದ ಬೆನ್ನು ಗೂನಾಗಲಿ.”(E)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International