Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 45:6-17

ದೇವರೇ,[a] ನಿನ್ನ ಸಿಂಹಾಸನವು ಶಾಶ್ವತವಾದದ್ದು.
    ಒಳ್ಳೆಯತನವು ನಿನ್ನ ರಾಜದಂಡವಾಗಿದೆ.
ನೀನು ನೀತಿಯನ್ನು ಪ್ರೀತಿಸುವೆ; ದುಷ್ಟತನವನ್ನು ದ್ವೇಷಿಸುವೆ.
    ಆದ್ದರಿಂದ ನಿನ್ನ ದೇವರಾಗಿರುವಾತನು
    ನಿನ್ನನ್ನು ನಿನ್ನ ಸ್ನೇಹಿತರಿಗೆ ರಾಜನನ್ನಾಗಿ ಆರಿಸಿಕೊಂಡಿದ್ದಾನೆ.[b]
ನಿನ್ನ ಬಟ್ಟೆಗಳು ಪರಿಮಳದ್ರವ್ಯಗಳಾದ ಗೋಲರಸ, ಅಗರು ಮತ್ತು ಚಂದನಗಳಿಂದ ಕೂಡಿವೆ.
    ಗಜದಂತದಿಂದ ಶೃಂಗರಿಸಿರುವ ಅರಮನೆಗಳಲ್ಲಿ ನಿನ್ನನ್ನು ಸಂತೋಷಪಡಿಸಲು ವಾದ್ಯಗಳನ್ನು ನುಡಿಸುವರು.
ನಿನ್ನ ಸ್ತ್ರೀಪರಿವಾರದಲ್ಲಿರುವವರು ರಾಜಕುಮಾರಿಯರೇ,
    ನಿನ್ನ ಪಟ್ಟದರಾಣಿಯು ಓಫೀರ್ ದೇಶದ ಬಂಗಾರದಿಂದ ಮಾಡಿದ ಕಿರೀಟವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿರುವಳು.

10 ರಾಣಿಯೇ, ನನಗೆ ಕಿವಿಗೊಡು.
    ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊ.
ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು.
11     ಆಗ ರಾಜನು ನಿನ್ನ ಸೌಂದರ್ಯವನ್ನು ಮೆಚ್ಚಿಕೊಳ್ಳುವನು.
ಅವನು ನಿನಗೆ ಹೊಸ ಯಜಮಾನನಾಗಿರುವನು.
    ಆದ್ದರಿಂದ ನೀನು ಅವನನ್ನು ಗೌರವಿಸಬೇಕು.[c]
12 ತೂರ್ ಪಟ್ಟಣದ ಶ್ರೀಮಂತರು
    ನಿನ್ನನ್ನು ಸಂಧಿಸಲು ನಿನಗಾಗಿ ಉಡುಗೊರೆಗಳನ್ನು ತರುವರು.

13 ಅಂತಃಪುರದಲ್ಲಿ ರಾಜಕುಮಾರಿಯು ವೈಭವದಿಂದಿರುವಳು;
    ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
14 ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು
    ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು.
15 ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ
    ರಾಜನ ಅರಮನೆಯೊಳಕ್ಕೆ ಪ್ರವೇಶಿಸುವರು.

16 ರಾಜನೇ, ನಿನ್ನ ಗಂಡುಮಕ್ಕಳು ನಿನ್ನ ತರುವಾಯ ಆಡಳಿತ ಮಾಡುವರು;
    ನೀನು ಅವರನ್ನು ನಿನ್ನ ದೇಶದಲ್ಲೆಲ್ಲಾ ಅಧಿಪತಿಗಳನ್ನಾಗಿ ನೇಮಿಸುವೆ.
17 ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು;
    ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು.

ಯೆಶಾಯ 62:1-5

ನೀತಿಯುತವಾದ ಹೊಸ ಜೆರುಸಲೇಮ್

62 ಚೀಯೋನನ್ನು ನಾನು ಪ್ರೀತಿಸುತ್ತೇನೆ.
    ಆಕೆಯ ವಿಷಯವಾಗಿ ನಾನು ಮಾತಾಡುತ್ತಲೇ ಇರುವೆನು.
ನಾನು ಜೆರುಸಲೇಮನ್ನು ಪ್ರೀತಿಸುತ್ತೇನೆ.
    ಅದರ ವಿಷಯವಾಗಿ ಮಾತನಾಡುವದನ್ನು ನಾನು ನಿಲ್ಲಿಸುವದಿಲ್ಲ.
ಧರ್ಮವು ಬೆಳಕಿನಂತೆ ಪ್ರಕಾಶಿಸುವ ತನಕ ನಾನು ಮಾತನಾಡುವೆನು.
    ರಕ್ಷಣೆಯು ಬೆಂಕಿಯಂತೆ ಪ್ರಜ್ವಲಿಸುವವರೆಗೆ ನಾನು ಮಾತನಾಡುವೆನು.
ಆಗ ಎಲ್ಲಾ ಜನಾಂಗದವರು ಆಕೆಯ ನ್ಯಾಯವನ್ನು ನೋಡುವರು.
    ಎಲ್ಲಾ ಅರಸರುಗಳು ಆಕೆಯ ಮಹಿಮೆಯನ್ನು ನೋಡುವರು.
ಆಗ ನಿನಗೊಂದು ಹೊಸ ಹೆಸರನ್ನು ಕೊಡುವೆನು;
    ಯೆಹೋವನು ತಾನೇ ಆ ಹೆಸರನ್ನು ಕೊಡುವನು.
ಯೆಹೋವನು ನಿನ್ನಲ್ಲಿ ಬಹಳವಾಗಿ ಹೆಚ್ಚಳಪಡುವನು.
    ನೀನು ಆತನ ಕೈಯಲ್ಲಿ ಒಂದು ಸುಂದರವಾದ ಕಿರೀಟದಂತಿರುವೆ.
ದೇವರು ತೊರೆದ ಜನಾಂಗವೆಂದೂ ದೇವರು ನಾಶಮಾಡಿದ ದೇಶವೆಂದೂ
    ನಿನ್ನನ್ನು ಇನ್ನು ಮುಂದೆ ಯಾರೂ ಕರೆಯುವದಿಲ್ಲ.
“ದೇವರ ಪ್ರಿಯ ಜನರು” ಎಂದು ನೀನು ಕರೆಯಲ್ಪಡುವಿ.
    ನಿನ್ನ ದೇಶವು “ದೇವರ ಮದಲಗಿತ್ತಿ” ಎಂದು ಕರೆಯಲ್ಪಡುವದು.
ಯಾಕೆಂದರೆ ಯೆಹೋವನು ನಿನ್ನನ್ನು ಪ್ರೀತಿಸುತ್ತಾನೆ;
    ನಿನ್ನ ದೇಶವು ಆತನಿಗೆ ಸೇರಿದೆ.
ಯೌವನಸ್ಥನು ಕನ್ನಿಕೆಯನ್ನು ಪ್ರೀತಿಸಿ ಮದುವೆಯಾಗುವನು; ತನ್ನ ಹೆಂಡತಿಯನ್ನಾಗಿ ಆಕೆಯನ್ನು ಸ್ವೀಕರಿಸುವನು.
    ಅದೇ ರೀತಿಯಲ್ಲಿ ದೇವರು ನಿನ್ನನ್ನು ವಿವಾಹವಾಗುತ್ತಾನೆ.
    ದೇಶವು ತುಂಬಿಹೋಗುವಷ್ಟು ಮಕ್ಕಳನ್ನು ಆತನು ಪಡೆದುಕೊಳ್ಳುತ್ತಾನೆ.
ಒಬ್ಬನು ಹೊಸದಾಗಿ ಮದುವೆಯಾದ ತನ್ನ ಹೆಂಡತಿಯೊಡನೆ
    ಉಲ್ಲಾಸದಿಂದಿರುವಂತೆ ನಿನ್ನ ದೇವರು ನಿನ್ನಲ್ಲಿ ಆನಂದಿಸುವನು.

ಯೋಹಾನ 3:22-36

ಯೇಸು ಮತ್ತು ಸ್ನಾನಿಕ ಯೋಹಾನ

22 ಇದಾದ ನಂತರ, ಯೇಸು ಮತ್ತು ಆತನ ಶಿಷ್ಯರು ಜುದೇಯ ಪ್ರಾಂತ್ಯಕ್ಕೆ ಹೋದರು. ಅಲ್ಲಿ ಯೇಸು ತನ್ನ ಶಿಷ್ಯರೊಡನೆ ತಂಗಿದ್ದು, ಜನರಿಗೆ ದೀಕ್ಷಾಸ್ನಾನ ಮಾಡಿಸಿದನು. 23 ಯೋಹಾನನು ಸಹ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಐನೋನ್ ಎಂಬ ಊರು ಸಲೀಮ್ ಊರಿನ ಸಮೀಪದಲ್ಲಿದೆ. ಅಲ್ಲಿ ಬೇಕಾದಷ್ಟು ನೀರಿದ್ದುದರಿಂದ ಯೋಹಾನನು ಅಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದರು. 24 (ಆಗ ಯೋಹಾನನನ್ನು ಇನ್ನೂ ಸೆರೆಮನೆಗೆ ಹಾಕಿರಲಿಲ್ಲ.)

25 ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಮತ್ತೊಬ್ಬ ಯೆಹೂದ್ಯನಿಗೂ ಶುದ್ಧಾಚಾರದ ಬಗ್ಗೆ ವಾದವಾಯಿತು. 26 ಆದ್ದರಿಂದ ಶಿಷ್ಯರು ಯೋಹಾನನ ಬಳಿಗೆ ಬಂದು, “ಗುರುವೇ, ಜೋರ್ಡನ್ ನದಿಯ ಆಚೆದಡದಲ್ಲಿ ನಿನ್ನೊಂದಿಗಿದ್ದ ವ್ಯಕ್ತಿಯನ್ನು ಜ್ಞಾಪಿಸಿಕೊ. ಆತನ ಕುರಿತಾಗಿ ನೀನೇ ಸಾಕ್ಷಿ ಹೇಳಲಿಲ್ಲವೇ? ಆತನು ಜನರಿಗೆ ದೀಕ್ಷಾಸ್ನಾನ ಕೊಡುತ್ತಿದ್ದಾನೆ. ಅನೇಕ ಜನರು ಆತನ ಬಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು.

27 ಯೋಹಾನನು, “ದೇವರು ಏನು ಕೊಡುತ್ತಾನೋ ಅದನ್ನು ಮಾತ್ರ ಒಬ್ಬನು ಪಡೆದುಕೊಳ್ಳಬಲ್ಲನು. 28 ‘ನಾನು ಕ್ರಿಸ್ತನಲ್ಲ. ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದಕ್ಕಾಗಿ ಮಾತ್ರ ಕಳುಹಿಸಲ್ಪಟ್ಟಿದ್ದೇನೆ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. 29 ಮದುಮಗಳು ಮದುಮಗನಿಗೆ ಮಾತ್ರ ಸೇರಿದವಳಾಗಿದ್ದಾಳೆ. ಮದುಮಗನಿಗೆ ಸಹಾಯಮಾಡುವ ಸ್ನೇಹಿತನು ಮದುಮಗನ ಬರುವಿಕೆಗಾಗಿ ಕಾಯುತ್ತಿರುತ್ತಾನೆ ಮತ್ತು ಆತನ ಕರೆಗಾಗಿ ಆಲಿಸುತ್ತಿರುತ್ತಾನೆ. ಮದುಮಗನ ಸ್ವರವನ್ನು ಕೇಳುವಾಗ ಈ ಸ್ನೇಹಿತನು ಬಹು ಸಂತೋಷಪಡುವನು. ಅದೇ ಸಂತೋಷ ನನಗಿದೆ. ನನ್ನ ಪೂರ್ಣಾನಂದದ ಸಮಯವು ಇದೇ ಆಗಿದೆ. 30 ಆತನು (ಯೇಸು) ವೃದ್ಧಿಯಾಗಬೇಕು ಮತ್ತು ನಾನು ಕಡಿಮೆಯಾಗಬೇಕು.

ಪರಲೋಕದಿಂದ ಬರುವ ವ್ಯಕ್ತಿ

31 “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. 32 ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ. 33 ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ. 34 ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ. 35 ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ. 36 ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International