Revised Common Lectionary (Complementary)
ರಚನೆಗಾರ: ದಾವೀದ.
103 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ನನ್ನ ಸರ್ವಾಂಗಗಳೇ, ಆತನ ಪವಿತ್ರ ಹೆಸರನ್ನು ಕೊಂಡಾಡಿರಿ!
2 ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ.
3 ಆತನು ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸುವನು;
ನಮ್ಮ ಕಾಯಿಲೆಗಳನ್ನೆಲ್ಲಾ ವಾಸಿಮಾಡುವನು.
4 ಆತನು ನಮ್ಮ ಜೀವವನ್ನು ನಾಶನದಿಂದ ರಕ್ಷಿಸಿ
ನಮಗೆ ಪ್ರೀತಿಯನ್ನೂ ಕನಿಕರವನ್ನೂ ತೋರುವನು.
5 ಆತನು ನಮಗೆ ಸುವರಗಳನ್ನು ಹೇರಳವಾಗಿ ದಯಪಾಲಿಸುವನು.
ಹದ್ದಿಗೆ ಬರುವಂತೆಯೇ ನಮಗೆ ಯೌವನವನ್ನು ಬರಮಾಡುತ್ತಾನೆ.
6 ಯೆಹೋವನು ನೀತಿವಂತನಾಗಿದ್ದಾನೆ.
ಕುಗ್ಗಿಹೋದವರಿಗೆ ಆತನು ನ್ಯಾಯ ದೊರಕಿಸುವನು.
7 ಆತನು ತನ್ನ ಕಟ್ಟಳೆಗಳನ್ನು ಮೋಶೆಗೆ ಉಪದೇಶಿಸಿದನು;
ತನ್ನ ಮಹತ್ಕಾರ್ಯಗಳನ್ನು ಇಸ್ರೇಲರಿಗೆ ತೋರಿಸಿದನು.
8 ಯೆಹೋವನು ಕನಿಕರವುಳ್ಳವನೂ ಕೃಪಾಪೂರ್ಣನೂ
ತಾಳ್ಮೆಯುಳ್ಳವನೂ ಪ್ರೀತಿಪೂರ್ಣನೂ ಆಗಿದ್ದಾನೆ.
9 ಆತನು ಯಾವಾಗಲೂ ಟೀಕಿಸುವವನಲ್ಲ.
ಆತನು ನಮ್ಮ ಮೇಲೆ ನಿತ್ಯವೂ ಕೋಪವಾಗಿರುವವನಲ್ಲ.
10 ನಾವು ದೇವರಿಗೆ ವಿರೋಧವಾಗಿ ಪಾಪಮಾಡಿದೆವು.
ಆದರೂ ತಕ್ಕ ದಂಡನೆಯನ್ನು ಆತನು ನಮಗೆ ಕೊಡಲಿಲ್ಲ.
11 ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವಾಗಿದೆಯೋ
ಆತನ ಮಹಾಪ್ರೀತಿಯು ಆತನ ಭಕ್ತರ ಮೇಲೆ ಅಷ್ಟೇ ಅಪಾರವಾಗಿದೆ.
12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟೋ ದೂರವಿರುವಂತೆ
ನಮ್ಮ ಪಾಪಗಳನ್ನು ನಮ್ಮಿಂದ ತೆಗೆದು ದೂರ ಮಾಡಿದ್ದಾನೆ.
13 ತಂದೆಯು ಮಕ್ಕಳನ್ನು ಕನಿಕರಿಸುವಂತೆ
ಯೆಹೋವನು ತನ್ನ ಭಕ್ತರನ್ನು ಕನಿಕರಿಸುವನು.
22 ಸರ್ವಸ್ಥಳಗಲ್ಲಿರುವ ಸಮಸ್ತವನ್ನು ಸೃಷ್ಟಿಸಿದಾತನು ಯೆಹೋವನೇ ಸರ್ವಸ್ಥಳಗಳಲ್ಲಿರುವ ಸಮಸ್ತಕ್ಕೂ ದೇವರೇ ಅಧಿಪತಿ.
ಅವುಗಳೆಲ್ಲಾ ಆತನನ್ನು ಕೊಂಡಾಡಲಿ!
ನನ್ನ ಆತ್ಮವೇ, ಯೆಹೋವನನ್ನು ಕೊಂಡಾಡು!
53 ದೇವರು ಹೇಳಿದ್ದೇನೆಂದರೆ: “ಸೊದೋಮ್ ಮತ್ತು ಅದರ ಸುತ್ತಲೂ ಇದ್ದ ನಗರಗಳನ್ನು ನಾನು ನಾಶಮಾಡಿದೆನು. ನಾನು ಸಮಾರ್ಯವನ್ನು ನಾಶಮಾಡಿದೆನು. ಮತ್ತು ಜೆರುಸಲೇಮೇ, ನಾನು ನಿನ್ನನ್ನು ನಾಶಮಾಡುವೆ. ಆದರೆ ನಾನು ತಿರುಗಿ ಆ ಪಟ್ಟಣಗಳನ್ನು ಕಟ್ಟುವೆನು. ಜೆರುಸಲೇಮೇ, ನಾನು ನಿನ್ನನ್ನೂ ಕಟ್ಟುವೆನು. 54 ಆಗ, ನೀನು ಮಾಡಿದ ಭಯಂಕರ ಕೃತ್ಯಗಳನ್ನು ನಿನ್ನ ನೆನಪಿಗೆ ತಂದುಕೊಳ್ಳುವೆ. ಆಗ ನೀನು ನಾಚಿಕೆಪಡುವೆ. ಅದೇ ಸಮಯದಲ್ಲಿ ನೀನು ನಿನ್ನ ಸಹೋದರಿಯರನ್ನು ಸಂತೈಸುವೆ. 55 ಆಗ ನೀನೂ ನಿನ್ನ ಸಹೋದರಿಯರೂ ತಿರುಗಿ ಕಟ್ಟಲ್ಪಡುವಿರಿ. ಸೊದೋಮಳೂ ಆಕೆಯ ಸುತ್ತಲಿರುವ ಪಟ್ಟಣಗಳೂ, ಸಮಾರ್ಯಳು ಮತ್ತು ಆಕೆಯ ಸುತ್ತಲಿರುವ ಪಟ್ಟಣಗಳೆಲ್ಲಾ ತಿರುಗಿ ಕಟ್ಟಲ್ಪಡುವವು.”
56 ದೇವರು ಹೇಳಿದ್ದೇನೆಂದರೆ, “ಹಿಂದೆ, ನೀನು ಜಂಬದಿಂದ ನಿನ್ನ ತಂಗಿ ಸೊದೋಮಳ ವಿಷಯವಾಗಿ ಗೇಲಿ ಮಾಡಿದ್ದೀ. ಹಾಗೆ ನೀನು ತಿರುಗಿ ಮಾಡುವುದಿಲ್ಲ. 57 ಈಗಿನಂತೆ, ನಿನ್ನ ದುಷ್ಟತನವು ಹೊರಬರುವುದಕ್ಕಿಂತ ಮೊದಲು ನೀನು ಅದನ್ನು ಮಾಡಿದೆ. ಈಗ ಎದೋಮಿನ ಹೆಣ್ಣುಮಕ್ಕಳು (ಪಟ್ಟಣಗಳು) ಮತ್ತು ಆಕೆಯ ನೆರೆಯವರು ನಿನ್ನನ್ನು ಗೇಲಿ ಮಾಡುವರು. ಫಿಲಿಷ್ಟಿಯರ ಹೆಣ್ಣುಮಕ್ಕಳು ಸಹ ನಿನ್ನನ್ನು ಗೇಲಿ ಮಾಡುವರು. ನಿನ್ನ ಸುತ್ತಲೂ ಇರುವವರು ನಿನ್ನನ್ನು ಕಡೆಗಾಣಿಸುವರು. 58 ಈಗ ನೀನು ಮಾಡಿದ ಭಯಂಕರ ಕೃತ್ಯಗಳ ಸಲುವಾಗಿ ಶಿಕ್ಷೆ ಅನುಭವಿಸಲೇಬೇಕು.” ಇದು ಒಡೆಯನಾದ ಯೆಹೋವನ ನುಡಿ.
ದೇವರ ನಂಬಿಗಸ್ತಿಕೆಯು ಅಚಲ
59 ಈ ಮಾತುಗಳನ್ನು ನನ್ನ ಒಡೆಯನಾದ ಯೆಹೋವನು ಹೇಳಿದನು. “ನೀನು ಮಾಡಿರುವದನ್ನು ನಾನೂ ನಿನಗೆ ಮಾಡುವೆನು. ನೀನು ನಿನ್ನ ಮದುವೆ ಒಡಂಬಡಿಕೆಯನ್ನು ಮುರಿದುಬಿಟ್ಟೆ. ನಮ್ಮ ಒಡಂಬಡಿಕೆಗೆ ನೀನು ಮಹತ್ವ ಕೊಡಲಿಲ್ಲ. 60 ಆದರೆ ನೀನು ಎಳೆಯವಳಾಗಿದ್ದಾಗ ನಿನ್ನೊಡನೆ ನಾನು ಮಾಡಿಕೊಂಡ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುತ್ತೇನೆ. ನಾನು ಅದನ್ನು ಶಾಶ್ವತವಾದ ಒಡಂಬಡಿಕೆಯನ್ನಾಗಿ ಮಾಡುವೆನು. 61 ನಿನ್ನ ಅಕ್ಕತಂಗಿಯಂದಿರನ್ನು ನಾನು ನಿನ್ನ ಬಳಿಗೆ ತಂದು ಅವರನ್ನು ನಿನ್ನ ಮಕ್ಕಳನ್ನಾಗಿ ಮಾಡುವೆನು. ಅದು ನಮ್ಮ ಒಡಂಬಡಿಕೆಯಲ್ಲಿಲ್ಲದಿದ್ದರೂ ನಾನು ಅದನ್ನು ನಿನಗಾಗಿ ಮಾಡುವೆನು. ಆಗ ನೀನು ಮಾಡಿದ ಭಯಂಕರ ಸಂಗತಿಗಳನ್ನು ಜ್ಞಾಪಕಕ್ಕೆ ತಂದು ನೀನು ನಾಚಿಕೊಳ್ಳುವಿ. 62 ನಾನು ನಿನ್ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವೆನು. ಮತ್ತು ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ. 63 ಹೀಗಿರಲು, ನಿನ್ನ ಕಾರ್ಯಗಳನ್ನೆಲ್ಲಾ ನಾನು ಕ್ಷಮಿಸುವಾಗ, ನೀನು ಅವುಗಳನ್ನು ಜ್ಞಾಪಿಸಿಕೊಂಡು ನಾಚಿಕೆಪಡುವೆ. ಅಹಂಕಾರದಿಂದ ಮಾತನಾಡಲು ಮತ್ತೊಮ್ಮೆ ಬಾಯಿ ತೆರೆಯಲಾಗದಂತೆ ನೀನು ಬಹಳವಾಗಿ ಅವಮಾನಿತಳಾಗುವೆ.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
53 ಬಳಿಕ ಅವರೆಲ್ಲರೂ ತಮ್ಮತಮ್ಮ ಮನೆಗಳಿಗೆ ಹೊರಟುಹೋದರು.
ಸಿಕ್ಕಿಕೊಂಡ ವ್ಯಭಿಚಾರಿಣಿ
8 ಯೇಸು ಆಲಿವ್ ಮರಗಳ ಗುಡ್ಡಕ್ಕೆ ಹೋದನು. 2 ಮರುದಿನ ನಸುಕಿನಲ್ಲೇ ಯೇಸು ದೇವಾಲಯಕ್ಕೆ ಮರಳಿ ಹೋದನು. ಎಲ್ಲಾ ಜನರು ಯೇಸುವಿನ ಬಳಿಗೆ ನೆರೆದುಬಂದರು. ಯೇಸು ಕುಳಿತುಕೊಂಡು ಜನರಿಗೆ ಉಪದೇಶಿಸಿದನು.
3 ಧರ್ಮೋಪದೇಶಕರು ಮತ್ತು ಫರಿಸಾಯರು ಒಬ್ಬ ಸ್ತ್ರೀಯನ್ನು ಅಲ್ಲಿಗೆ ಕರೆದುಕೊಂಡು ಬಂದರು. ಆ ಸ್ತ್ರೀಯು ವ್ಯಭಿಚಾರ ಮಾಡುವಾಗಲೇ ಸಿಕ್ಕಿಕೊಂಡಿದ್ದಳು. ಅವರು ಆ ಸ್ತ್ರೀಯನ್ನು ಜನರ ಮುಂದೆ ಬಲವಂತವಾಗಿ ನಿಲ್ಲಿಸಿ, 4 ಯೇಸುವಿಗೆ, “ಉಪದೇಶಕನೇ, ಈ ಸ್ತ್ರೀಯು ವ್ಯಭಿಚಾರ ಮಾಡುತ್ತಿದ್ದಾಗಲೇ ಸಿಕ್ಕಿಕೊಂಡಳು. 5 ಇಂಥ ಕಾರ್ಯವನ್ನು ಮಾಡುವ ಪ್ರತಿಯೊಬ್ಬ ಸ್ತ್ರೀಯನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯ ಧರ್ಮಶಾಸ್ತ್ರವು ಆಜ್ಞಾಪಿಸುತ್ತದೆ. ಈಗ ನಾವೇನು ಮಾಡಬೇಕು? ನೀನೇ ಹೇಳು” ಎಂದರು.
6 ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿದರೆ ಆತನ ಮೇಲೆ ಅಪವಾದ ಹೊರಿಸಲು ಸಾಧ್ಯವಾಗುತ್ತದೆ ಎಂದು ಈ ಪ್ರಶ್ನೆಯನ್ನು ಕೇಳಿದರು. ಆದರೆ ಯೇಸು ತಲೆ ಬಾಗಿಸಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆಯತೊಡಗಿದನು. 7 ಯೆಹೂದ್ಯ ನಾಯಕರು ಅದೇ ಪ್ರಶ್ನೆಯನ್ನು ಮತ್ತೆ ಕೇಳಿದರು. ಆಗ ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪ ಮಾಡಿಲ್ಲದವನು ಆಕೆಯ ಮೇಲೆ ಮೊದಲನೆಯ ಕಲ್ಲನ್ನು ಎಸೆಯಲಿ” ಎಂದು ಹೇಳಿ, 8 ಮತ್ತೆ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದನು.
9 ಯೇಸುವಿನ ಈ ಮಾತನ್ನು ಕೇಳಿದ ಆ ಜನರು ಒಬ್ಬೊಬ್ಬರಾಗಿ ಅಲ್ಲಿಂದ ಹೊರಟುಹೋದರು. ಮೊದಲು ಹಿರಿಯರು, ನಂತರ ಇತರರು ಹೊರಟುಹೋದರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ಆ ಸ್ತ್ರೀ. ಆಕೆಯು ಆತನ ಮುಂದೆ ನಿಂತುಕೊಂಡಿದ್ದಳು. 10 ಯೇಸು ನೆಟ್ಟಗೆ ಕುಳಿತುಕೊಂಡು, “ಅಮ್ಮಾ, ನಿನ್ನ ಮೇಲೆ ತಪ್ಪು ಹೊರಿಸಿದವರು ಎಲ್ಲಿದ್ದಾರೆ? ಅವರಲ್ಲಿ ಒಬ್ಬರಾದರೂ ನಿನಗೆ ಶಿಕ್ಷೆ ವಿಧಿಸಲಿಲ್ಲವೇ?” ಎಂದು ಕೇಳಿದನು.
11 ಆ ಸ್ತ್ರೀಯು, “ಸ್ವಾಮೀ, ಅವರಲ್ಲಿ ಯಾರೂ ನನಗೆ ತೀರ್ಪು ನೀಡಲಿಲ್ಲ” ಎಂದು ಉತ್ತರಕೊಟ್ಟಳು.
ಯೇಸು ಆಕೆಗೆ, “ಆದ್ದರಿಂದ ನಾನು ಸಹ ನಿನಗೆ ತೀರ್ಪು ನೀಡುವುದಿಲ್ಲ. ಈಗ ನೀನು ಹೋಗಬಹುದು, ಆದರೆ ಇನ್ನು ಮುಂದೆ ಪಾಪ ಮಾಡಬೇಡ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International