Revised Common Lectionary (Complementary)
ಸ್ತುತಿಗೀತೆ. ರಚನೆಗಾರ: ಆಸಾಪ.
76 ಯೆಹೂದದ ಜನರು ದೇವರನ್ನು ಬಲ್ಲವರೇ ಸರಿ!
ಇಸ್ರೇಲಿನ ಜನರು ಆತನ ನಾಮವನ್ನು ಗೌರವಿಸುವರು.
2 ಆತನ ಗುಡಾರವು ಸಾಲೇಮಿನಲ್ಲಿದೆ.
ಆತನ ಆಲಯವು ಸಿಯೋನ್ ಬೆಟ್ಟದ ಮೇಲಿದೆ.
3 ಆ ಸ್ಥಳದಲ್ಲಿ ದೇವರು ಬಿಲ್ಲುಬಾಣಗಳನ್ನೂ ಗುರಾಣಿಗಳನ್ನೂ
ಖಡ್ಗಗಳನ್ನೂ ಇತರ ಯುದ್ಧಾಯುಧಗಳನ್ನೂ ನುಚ್ಚುನೂರು ಮಾಡಿದ್ದಾನೆ.
4 ದೇವರೇ, ಶತ್ರುಗಳನ್ನು ಸೋಲಿಸಿ
ಬೆಟ್ಟಗಳಿಂದ ಇಳಿದುಬರುವಾಗ ನೀನು ತೇಜೋಮಯನಾಗಿರುವೆ.
5 ಆ ಸೈನಿಕರು ತಾವೇ ಶಕ್ತಿವಂತರೆಂದುಕೊಂಡಿದ್ದರು.
ಆದರೆ ಈಗ ಅವರು ಬಯಲುಗಳಲ್ಲಿ ಸತ್ತುಬಿದ್ದಿದ್ದಾರೆ.
ಅವರು ಧರಿಸಿಕೊಂಡಿದ್ದವುಗಳನ್ನೆಲ್ಲ ಸುಲಿಗೆ ಮಾಡಲಾಗಿದೆ.
ಆ ಸೈನಿಕರಲ್ಲಿ ಯಾರೂ ತಮ್ಮನ್ನು ಸಂರಕ್ಷಿಸಿಕೊಳ್ಳಲಾಗಲಿಲ್ಲ.
6 ಯಾಕೋಬನ ದೇವರು ಆ ಸೈನಿಕರನ್ನು ಗದರಿಸಲು
ರಥಾಶ್ವಗಳ ಸೇನೆಯು ಮೂರ್ಛೆಗೊಂಡಿತು.
7 ದೇವರೇ, ನೀನು ಭಯಂಕರನೇ ಸರಿ!
ನೀನು ಕೋಪಗೊಂಡಿರುವಾಗ ನಿನಗೆ ವಿರೋಧವಾಗಿ ಯಾರು ನಿಂತುಕೊಳ್ಳಬಲ್ಲರು?
8 ಯೆಹೋವನು ಎದ್ದುನಿಂತು
ತನ್ನ ನ್ಯಾಯತೀರ್ಪನ್ನು ಪ್ರಕಟಿಸಿದನು.
9 ದೇವರು ಲೋಕದ ದೀನರನ್ನು ರಕ್ಷಿಸಿದನು.
ಆತನು ಪರಲೋಕದಿಂದ ತೀರ್ಮಾನ ನೀಡುತ್ತಿರಲು ಭೂಲೋಕವೆಲ್ಲಾ ಭಯದಿಂದ ಸ್ತಬ್ಧವಾಯಿತು.
10 ದೇವರೇ, ನೀನು ದುಷ್ಟರನ್ನು ದಂಡಿಸುವಾಗ ಜನರು ನಿನ್ನನ್ನು ಕೊಂಡಾಡುವರು;
ನಿನ್ನ ಕೋಪವನ್ನು ತೋರಿಸುವಾಗ ಅಳಿದುಳಿದವರು ಬಲಿಷ್ಠರಾಗುವರು.
11 ದೇವರಾದ ಯೆಹೋವನಿಗೆ ಹರಕೆಗಳನ್ನು ಮಾಡಿದವರೇ,
ನಿಮ್ಮ ಹರಕೆಗಳನ್ನು ಸಲ್ಲಿಸಿರಿ.
ಸರ್ವಭೂನಿವಾಸಿಗಳೇ, ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
12 ಆತನು ಮಹಾನಾಯಕರುಗಳನ್ನು ಸೋಲಿಸುವನು.
ಭೂರಾಜರುಗಳೆಲ್ಲಾ ಆತನಿಗೆ ಭಯಪಡುವರು.
ಈಜಿಪ್ಟ್ ನಿತ್ಯಕಾಲಕ್ಕೂ ಬಲಹೀನವಾಗುವದು
20 ಸೆರೆಹಿಡಿಯಲ್ಪಟ್ಟ ಹನ್ನೊಂದನೆಯ ವರ್ಷದ ಮೊದಲನೇ ತಿಂಗಳಿನ ಏಳನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 21 “ನರಪುತ್ರನೇ, ನಾನು ಈಜಿಪ್ಟಿನ ರಾಜನಾದ ಫರೋಹನ ಕೈಯ ಬಲವನ್ನು ಮುರಿದಿದ್ದೇನೆ. ಯಾರೂ ಅವನನ್ನು ಶೂಶ್ರೂಷೆ ಮಾಡಲಾರರು. ಅದು ಗುಣವಾಗದು. ಅವನ ಕೈಗೆ ಖಡ್ಗ ಹಿಡಿದುಕೊಳ್ಳುವಷ್ಟೂ ಬಲವಿರದು.”
22 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ, “ನಾನು ಈಜಿಪ್ಟಿನ ರಾಜನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಅವನ ಎರಡು ಕೈಗಳನ್ನೂ ಮುರಿಯುವೆನು. ಒಂದು ಕೈ ಮುರಿಯಲ್ಪಟ್ಟಿತ್ತು. ಇನ್ನೊಂದು ಸರಿಯಾಗಿದ್ದ ಕೈಯೂ ಮುರಿಯಲ್ಪಡುವದು. ಅವನ ಕೈಯಿಂದ ಖಡ್ಗವು ಬೀಳುವಂತೆ ಮಾಡುವೆನು. 23 ಈಜಿಪ್ಟಿನ ಜನರನ್ನು ದೇಶಾಂತರ ಚದರಿಸಿಬಿಡುವೆನು. 24 ಬಾಬಿಲೋನಿನ ರಾಜನ ಕೈಗಳನ್ನು ನಾನು ಬಲಪಡಿಸುವೆನು. ನನ್ನ ಖಡ್ಗವನ್ನು ನಾನು ಅವನ ಕೈಯಲ್ಲಿಡುವೆನು. ಆದರೆ ಫರೋಹನ ಕೈಗಳನ್ನು ನಾನು ಮುರಿಯುವೆನು. ಆಗ ನೋವಿನಿಂದ ಫರೋಹನು ಕಿರುಚುವನು. ಒಬ್ಬ ಸಾಯುವ ಮನುಷ್ಯನು ಕಿರುಚುವಂತೆ ಆ ಶಬ್ದವು ಇರುವುದು. 25 ನಾನು ಬಾಬಿಲೋನಿನ ರಾಜನ ಕೈಗಳನ್ನು ಬಲಪಡಿಸುವೆನು. ಫರೋಹನ ಕೈಗಳು ಜೋಲುಬೀಳುವವು. ಆಗ ಅವರು ನಾನೇ ಯೆಹೋವನೆಂದು ತಿಳಿಯುವರು.
“ನನ್ನ ಖಡ್ಗವನ್ನು ನಾನು ಬಾಬಿಲೋನ್ ರಾಜನ ಕೈಗಳಲ್ಲಿ ಇಡುವೆನು. ಆಗ ಅವನು ಈಜಿಪ್ಟಿನ ಕಡೆಗೆ ಅದನ್ನು ಚಾಚುವನು. 26 ನಾನು ಈಜಿಪ್ಟಿನ ಜನರನ್ನು ದೇಶಾಂತರ ಚದರಿಸಿಬಿಡುವೆನು. ಆಗ ನಾನು ಯೆಹೋವನೆಂದು ಅವರು ತಿಳಿದುಕೊಳ್ಳುವರು.”
ಲೋಕದ ಮೇಲೆ ವಿಜಯ
25 “ನಾನು ನಿಮಗೆ ಈ ಸಂಗತಿಗಳನ್ನು ಸಾಮ್ಯಗಳ ರೂಪದಲ್ಲಿ ತಿಳಿಸಿದೆನು. ಆದರೆ ಸಮಯವು ಬರಲಿದೆ. ಆಗ ನಾನು ಸಾಮ್ಯಗಳನ್ನು ಬಳಸದೆ ನನ್ನ ತಂದೆಯ ಬಗ್ಗೆ ಸರಳವಾದ ಮಾತುಗಳಲ್ಲಿ ತಿಳಿಸುವೆನು. 26 ಆಗ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಬೇಡಿಕೊಳ್ಳುವಿರಿ. ನಾನು ನಿಮಗೋಸ್ಕರ ತಂದೆಯನ್ನು ಕೇಳಿಕೊಳ್ಳುವ ಅಗತ್ಯವಿರುವುದಿಲ್ಲ. 27 ಹೌದು, ತಂದೆಯು ತಾನೇ ನಿಮ್ಮನ್ನು ಪ್ರೀತಿಸುತ್ತಾನೆ. ನೀವು ನನ್ನನ್ನು ಪ್ರೀತಿಸಿದರಿಂದ ಮತ್ತು ನಾನು ದೇವರಿಂದ ಬಂದೆನೆಂದು ನೀವು ನಂಬುವುದರಿಂದ ಆತನು ನಿಮ್ಮನ್ನು ಪ್ರೀತಿಸುತ್ತಾನೆ. 28 ನಾನು ತಂದೆಯ ಬಳಿಯಿಂದ ಈ ಲೋಕಕ್ಕೆ ಬಂದೆನು. ಈಗ ನಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹಿಂತಿರುಗಿ ಹೋಗುತ್ತಿದ್ದೇನೆ” ಎಂದು ಹೇಳಿದನು.
29 ಆಗ ಶಿಷ್ಯರು ಯೇಸುವಿಗೆ, “ಈಗ ನೀನು ನಮ್ಮೊಂದಿಗೆ ಸ್ಪಷ್ಟವಾಗಿ ಮಾತಾಡುತ್ತಿರುವೆ. ಅರ್ಥವಾಗದಂಥ ಕಠಿಣ ಮಾತುಗಳನ್ನು ನೀನು ಬಳಸುತ್ತಿಲ್ಲ. 30 ನಿನಗೆ ಎಲ್ಲಾ ಸಂಗತಿಗಳು ತಿಳಿದಿವೆಯೆಂದು ನಮಗೆ ಈಗ ತಿಳಿಯಿತು. ಒಬ್ಬನು ಪ್ರಶ್ನೆಯನ್ನು ಕೇಳುವುದಕ್ಕಿಂತ ಮೊದಲೇ ನೀನು ಅವನ ಪ್ರಶ್ನೆಗೆ ಉತ್ತರ ಕೊಡಬಲ್ಲೆ. ಇದರಿಂದಾಗಿ, ನೀನು ದೇವರಿಂದ ಬಂದವನೆಂದು ನಾವು ನಂಬುತ್ತೇವೆ” ಎಂದು ಹೇಳಿದರು.
31 ಯೇಸು, “ಹಾಗಾದರೆ ಈಗ ನೀವು ನಂಬುತ್ತೀರಾ? 32 ನನಗೆ ಕಿವಿಗೊಡಿರಿ. ನೀವು ಚದರಿಹೋಗುವ ಕಾಲ ಬರುತ್ತಿದೆ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತ ಮನೆಗೆ ಚದರಿಹೋಗುವನು. ಆ ಸಮಯ ಈಗಲೇ ಬಂದಿದೆ. ನೀವು ನನ್ನನ್ನು ಬಿಟ್ಟು ಹೋಗುವಿರಿ. ನಾನು ಒಬ್ಬಂಟಿಗನಾಗಿರುವೆನು. ಆದರೆ ನಿಜವಾಗಿ ನಾನೆಂದಿಗೂ ಒಬ್ಬಂಟಿಗನಲ್ಲ. ಏಕೆಂದರೆ ತಂದೆಯು ನನ್ನೊಂದಿಗಿದ್ದಾನೆ.
33 “ನೀವು ನನ್ನಲ್ಲಿ ಶಾಂತಿಯನ್ನು ಹೊಂದಿದವರಾಗಿರಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನೆಲ್ಲಾ ಹೇಳಿದ್ದೇನೆ. ಈ ಲೋಕದಲ್ಲಿ ನಿಮಗೆ ಸಂಕಟವಿದೆ. ಆದರೆ ಧೈರ್ಯದಿಂದಿರಿ! ನಾನು ಈ ಲೋಕವನ್ನು ಸೋಲಿಸಿದ್ದೇನೆ!” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International