Revised Common Lectionary (Complementary)
ಸ್ತುತಿಗೀತೆ. ರಚನೆಗಾರ: ಆಸಾಪ.
76 ಯೆಹೂದದ ಜನರು ದೇವರನ್ನು ಬಲ್ಲವರೇ ಸರಿ!
ಇಸ್ರೇಲಿನ ಜನರು ಆತನ ನಾಮವನ್ನು ಗೌರವಿಸುವರು.
2 ಆತನ ಗುಡಾರವು ಸಾಲೇಮಿನಲ್ಲಿದೆ.
ಆತನ ಆಲಯವು ಸಿಯೋನ್ ಬೆಟ್ಟದ ಮೇಲಿದೆ.
3 ಆ ಸ್ಥಳದಲ್ಲಿ ದೇವರು ಬಿಲ್ಲುಬಾಣಗಳನ್ನೂ ಗುರಾಣಿಗಳನ್ನೂ
ಖಡ್ಗಗಳನ್ನೂ ಇತರ ಯುದ್ಧಾಯುಧಗಳನ್ನೂ ನುಚ್ಚುನೂರು ಮಾಡಿದ್ದಾನೆ.
4 ದೇವರೇ, ಶತ್ರುಗಳನ್ನು ಸೋಲಿಸಿ
ಬೆಟ್ಟಗಳಿಂದ ಇಳಿದುಬರುವಾಗ ನೀನು ತೇಜೋಮಯನಾಗಿರುವೆ.
5 ಆ ಸೈನಿಕರು ತಾವೇ ಶಕ್ತಿವಂತರೆಂದುಕೊಂಡಿದ್ದರು.
ಆದರೆ ಈಗ ಅವರು ಬಯಲುಗಳಲ್ಲಿ ಸತ್ತುಬಿದ್ದಿದ್ದಾರೆ.
ಅವರು ಧರಿಸಿಕೊಂಡಿದ್ದವುಗಳನ್ನೆಲ್ಲ ಸುಲಿಗೆ ಮಾಡಲಾಗಿದೆ.
ಆ ಸೈನಿಕರಲ್ಲಿ ಯಾರೂ ತಮ್ಮನ್ನು ಸಂರಕ್ಷಿಸಿಕೊಳ್ಳಲಾಗಲಿಲ್ಲ.
6 ಯಾಕೋಬನ ದೇವರು ಆ ಸೈನಿಕರನ್ನು ಗದರಿಸಲು
ರಥಾಶ್ವಗಳ ಸೇನೆಯು ಮೂರ್ಛೆಗೊಂಡಿತು.
7 ದೇವರೇ, ನೀನು ಭಯಂಕರನೇ ಸರಿ!
ನೀನು ಕೋಪಗೊಂಡಿರುವಾಗ ನಿನಗೆ ವಿರೋಧವಾಗಿ ಯಾರು ನಿಂತುಕೊಳ್ಳಬಲ್ಲರು?
8 ಯೆಹೋವನು ಎದ್ದುನಿಂತು
ತನ್ನ ನ್ಯಾಯತೀರ್ಪನ್ನು ಪ್ರಕಟಿಸಿದನು.
9 ದೇವರು ಲೋಕದ ದೀನರನ್ನು ರಕ್ಷಿಸಿದನು.
ಆತನು ಪರಲೋಕದಿಂದ ತೀರ್ಮಾನ ನೀಡುತ್ತಿರಲು ಭೂಲೋಕವೆಲ್ಲಾ ಭಯದಿಂದ ಸ್ತಬ್ಧವಾಯಿತು.
10 ದೇವರೇ, ನೀನು ದುಷ್ಟರನ್ನು ದಂಡಿಸುವಾಗ ಜನರು ನಿನ್ನನ್ನು ಕೊಂಡಾಡುವರು;
ನಿನ್ನ ಕೋಪವನ್ನು ತೋರಿಸುವಾಗ ಅಳಿದುಳಿದವರು ಬಲಿಷ್ಠರಾಗುವರು.
11 ದೇವರಾದ ಯೆಹೋವನಿಗೆ ಹರಕೆಗಳನ್ನು ಮಾಡಿದವರೇ,
ನಿಮ್ಮ ಹರಕೆಗಳನ್ನು ಸಲ್ಲಿಸಿರಿ.
ಸರ್ವಭೂನಿವಾಸಿಗಳೇ, ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
12 ಆತನು ಮಹಾನಾಯಕರುಗಳನ್ನು ಸೋಲಿಸುವನು.
ಭೂರಾಜರುಗಳೆಲ್ಲಾ ಆತನಿಗೆ ಭಯಪಡುವರು.
ಈಜಿಪ್ಟಿನ ವಿರುದ್ಧ ಸಂದೇಶ
29 ಸೆರೆ ಒಯ್ಯಲ್ಪಟ್ಟ ಹತ್ತನೇ ವರ್ಷದ ಹತ್ತನೇ ತಿಂಗಳಿನ, ಹನ್ನೆರಡನೇ ದಿವಸದಲ್ಲಿ ನನ್ನ ಒಡೆಯನಾದ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನ ಕಡೆಗೆ ಮುಖಮಾಡು. ಅವನಿಗೂ ಈಜಿಪ್ಟಿಗೂ ವಿರುದ್ಧವಾಗಿ ನನ್ನ ಪರವಾಗಿ ಮಾತನಾಡು. 3 ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ ಎಂದು ಅವರಿಗೆ ತಿಳಿಸು,
“‘ಈಜಿಪ್ಟಿನ ರಾಜನಾದ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
ನೀನು ನೈಲ್ ನದಿಯ ದಡದಲ್ಲಿ ಮಲಗಿರುವ ಪೇರ್ಮೊಸಳೆ,
“ಇದು ನಾನು ನಿರ್ಮಿಸಿದ ಹೊಳೆ”
ಎಂದು ನೀನು ಹೇಳಿಕೊಳ್ಳುವೆ.
4 “‘ಆದರೆ ನಾನು ನಿನ್ನ ದವಡೆಗಳಿಗೆ ಕೊಂಡಿಗಳನ್ನು ಸಿಕ್ಕಿಸುವೆನು.
ನೈಲ್ ನದಿಯ ಮೀನುಗಳು ನಿನ್ನ ಪೊರೆಗಳಿಗೆ ಸಿಲುಕಿಕೊಳ್ಳುವವು.
5 ನಾನು ನಿನ್ನನ್ನೂ ನಿನ್ನ ಮೀನುಗಳನ್ನೂ
ನೀರಿನೊಳಗಿಂದ ಹೊರಕ್ಕೆತ್ತಿ ಒಣನೆಲದ ಮೇಲೆ ಹಾಕುವೆನು.
ನೀನು ನೆಲದ ಮೇಲೆ ಬೀಳುವೆ.
ಯಾರೂ ನಿನ್ನನ್ನು ಮೇಲಕ್ಕೆ ಎತ್ತುವುದೂ ಇಲ್ಲ ಹೂಣಿಡುವುದೂ ಇಲ್ಲ.
ನಾನು ನಿನ್ನನ್ನು ಕಾಡುಪ್ರಾಣಿಗಳಿಗೂ ಪಕ್ಷಿಗಳಿಗೂ ಕೊಡುವೆನು.
ಅವರಿಗೆ ನೀನು ಆಹಾರವಾಗುವೆ.
6 ಆಗ ಈಜಿಪ್ಟಿನಲ್ಲಿ ವಾಸಮಾಡುವವರೆಲ್ಲರೂ
ನಾನು ಒಡೆಯನಾದ ಯೆಹೋವನು ಎಂದು ತಿಳಿದುಕೊಳ್ಳುವರು.
“‘ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ?
ಯಾಕೆಂದರೆ ಇಸ್ರೇಲಿನ ಜನರು ಈಜಿಪ್ಟಿನ ಸಹಾಯದ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಪೊಳ್ಳು ಬೆತ್ತದಂತಿತ್ತು.
7 ಇಸ್ರೇಲ್ ಜನರು ಈಜಿಪ್ಟಿನ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಅವರ ಕೈಗಳನ್ನೂ ಭುಜಗಳನ್ನೂ ಗಾಯಗೊಳಿಸಿತು.
ನಿನ್ನ ಸಹಾಯಕ್ಕಾಗಿ ಅವರು ನಿನ್ನನ್ನು ಆಶ್ರಯಿಸಿದರು.
ಆದರೆ ನೀನು ಅವರ ಬೆನ್ನೆಲುಬನ್ನು ತಿರುಗಿಸಿ ಮುರಿದುಬಿಟ್ಟೆ.’”
8 ಆದ್ದರಿಂದ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ,
“ನಾನು ನಿನಗೆ ವಿರುದ್ಧವಾಗಿ ಖಡ್ಗವನ್ನು ತರುವೆನು.
ನಾನು ನಿನ್ನ ಜನರನ್ನೂ ಪ್ರಾಣಿಗಳನ್ನೂ ಸಂಪೂರ್ಣವಾಗಿ ಸಂಹರಿಸುವೆನು.
9 ಈಜಿಪ್ಟ್ ನಿಶ್ಯೇಷವಾಗಿ ನಾಶವಾಗುವದು.
ಆಗ ಅವರು ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”
ದೇವರು ಹೀಗೆಂದನು, “ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ. ಯಾಕೆಂದರೆ ನೀನು, ‘ಇದು ನನ್ನ ನದಿ, ಇದನ್ನು ನಾನು ಮಾಡಿದೆನು’ ಎಂದು ಹೇಳಿದೆ. 10 ಆದ್ದರಿಂದ ನಾನು ನಿನಗೆ ವಿರೋಧವಾಗಿರುತ್ತೇನೆ. ನೈಲ್ ನದಿಯ ಅನೇಕ ಶಾಖೆಗಳಿಗೂ ನಾನು ವಿರೋಧವಾಗಿದ್ದೇನೆ. ಈಜಿಪ್ಟನ್ನು ನಾನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಮಿಗ್ದೋಲ್‌ನಿಂದ ಅಸ್ವಾನ್ ತನಕ ಇರುವ ಪಟ್ಟಣಗಳು ಬರಿದಾಗುವವು. ಇಥಿಯೋಪ್ಯದ ಮೇರೆಯ ತನಕವೂ ಬರಿದಾಗುವದು. 11 ಯಾವನೂ, ಯಾವ ಪ್ರಾಣಿಯೂ ಈಜಿಪ್ಟ್ ದೇಶವನ್ನು ದಾಟುವುದಿಲ್ಲ. ನಲವತ್ತು ವರ್ಷದ ತನಕ ಯಾರೂ ಅಲ್ಲಿ ನೆಲೆಸುವದಿಲ್ಲ. 12 ನಾನು ಈಜಿಪ್ಟನ್ನು ನಾಶಮಾಡುತ್ತೇನೆ. ಅದರ ನಗರಗಳು ನಲವತ್ತು ವರ್ಷಗಳ ತನಕ ನಿರ್ಜನವಾಗಿರುವದು. ಈಜಿಪ್ಟ್ ಜನರನ್ನು ಬೇರೆ ದೇಶಗಳಿಗೆ ಅಟ್ಟಿಬಿಡುವೆನು. ಪರದೇಶಗಳಲ್ಲಿ ಅವರು ಪ್ರವಾಸಿಗಳಂತಿರುವರು.”
ಏಳನೆಯ ತುತೂರಿ
15 ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳು ಉಂಟಾದವು. ಆ ಶಬ್ದಗಳು ಹೀಗೆ ಹೇಳಿದವು:
“ಈ ಲೋಕದ ರಾಜ್ಯವು ಈಗ ನಮ್ಮ ಪ್ರಭುವಿನ ಮತ್ತು ಆತನವನಾಗಿರುವ ಕ್ರಿಸ್ತನ ರಾಜ್ಯವಾಗಿ ಮಾರ್ಪಾಟಾಯಿತು.
ಆತನು ಯುಗಯುಗಾಂತರಗಳಲ್ಲಿಯೂ ಆಳುವನು.”
16 ನಂತರ ಇಪ್ಪತ್ನಾಲ್ಕು ಮಂದಿ ಹಿರಿಯರು ಮೊಣಕಾಲೂರಿ ದೇವರನ್ನು ಆರಾಧಿಸಿದರು. ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿರುವ ಹಿರಿಯರೇ ಇವರು. 17 ಆ ಹಿರಿಯರು ಹೀಗೆ ಹೇಳಿದರು:
“ಪ್ರಭುವೇ, ಸರ್ವಶಕ್ತನಾದ ದೇವರೇ, ಭೂತಕಾಲದಲ್ಲಿ ಇದ್ದಾತನೇ,
ವರ್ತಮಾನ ಕಾಲದಲ್ಲಿ ಇರುವಾತನೇ, ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
ನೀನು ನಿನ್ನ ಮಹಾ ಅಧಿಕಾರವನ್ನು ಉಪಯೋಗಿಸಿ ನಿನ್ನ ಆಡಳಿತವನ್ನು
ಆರಂಭಿಸಿದ್ದರಿಂದ ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
18 ಲೋಕದ ಜನರು ಕೋಪಗೊಂಡಿದ್ದರು.
ಆದರೆ ಇದು ನಿನ್ನ ಕೋಪದ ಸಮಯ.
ಸತ್ತವರಿಗೆ ತೀರ್ಪು ನೀಡುವ ಸಮಯವಿದು.
ನಿನ್ನ ಸೇವಕರಾದ ಪ್ರವಾದಿಗಳಿಗೂ
ನಿನ್ನ ಪರಿಶುದ್ಧ ಜನರಿಗೂ ನಿನ್ನನ್ನು ಗೌರವಿಸುವ
ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲ ನೀಡುವ ಸಮಯವಿದು.
ಲೋಕನಾಶಕರನ್ನು ನಾಶಪಡಿಸುವ ಸಮಯವಿದು.”
19 ನಂತರ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರು ತನ್ನ ಜನರಿಗೆ ಅನುಗ್ರಹಿಸಿದ ಒಡಂಬಡಿಕೆಯನ್ನು ಇಟ್ಟಿದ್ದ ಪೆಟ್ಟಿಗೆಯು ಆತನ ಆಲಯದಲ್ಲಿ ಕಾಣಿಸಿತು. ಆಗ ಮಿಂಚುಗಳು ಹೊಳೆದವು, ಶಬ್ದಗಳಾದವು, ಗುಡುಗುಗಳಾದವು, ಭೂಕಂಪಗಳಾದವು ಮತ್ತು ಆಲಿಕಲ್ಲಿನ ಮಳೆಯೂ ಸುರಿಯಿತು.
Kannada Holy Bible: Easy-to-Read Version. All rights reserved. © 1997 Bible League International