Revised Common Lectionary (Complementary)
9 “ನಾನು ನೋಡುತ್ತಿದ್ದಂತೆಯೇ, ಆಸನಗಳನ್ನು ಅವುಗಳ ಸ್ಥಳದಲ್ಲಿ ಹಾಕಲಾಯಿತು.
ಪುರಾತನ ರಾಜನು ತನ್ನ ಆಸನದ ಮೇಲೆ ಕುಳಿತುಕೊಂಡನು.
ಆತನ ಉಡುಪು ಬಹಳ ಶುಭ್ರವಾಗಿತ್ತು.
ಅದು ಹಿಮದಂತೆ ಶುಭ್ರವಾಗಿತ್ತು.
ಆತನ ತಲೆಕೂದಲು ಶುಭ್ರವಾಗಿತ್ತು.
ಅದು ಬಿಳಿಯ ಉಣ್ಣೆಯಂತೆ ಶುಭ್ರವಾಗಿತ್ತು.
ಆತನ ಆಸನವು ಬೆಂಕಿಯಿಂದ ಮಾಡಲಾಗಿತ್ತು.
ಅದರ ಚಕ್ರಗಳು ಬೆಂಕಿಯ ಜ್ವಾಲೆಗಳಿಂದ ಮಾಡಲಾಗಿದ್ದವು.
10 ಆ ಪುರಾತನ ರಾಜನ ಮುಂದೆ
ಬೆಂಕಿಯ ನದಿಯೊಂದು ಹರಿಯುತ್ತಿತ್ತು.
ಲಕ್ಷೋಪಲಕ್ಷ ದೂತರು ಆತನನ್ನು ಸೇವಿಸುತ್ತಿದ್ದರು.
ಕೋಟ್ಯಾನುಕೋಟಿ ಪರಲೋಕ ಸಮೂಹದವರು ಆತನ ಮುಂದೆ ನಿಂತಿದ್ದರು.
ನ್ಯಾಯಾಲಯವು ಪ್ರಾರಂಭವಾಗುವುದಕ್ಕೆ ಎಲ್ಲ ಸಿದ್ಧತೆಗಳು ಆಗಿದ್ದವು
ಮತ್ತು ಪುಸ್ತಕಗಳು ತೆರೆಯಲ್ಪಟ್ಟವು.
13 “ನನಗಾದ ರಾತ್ರಿಯ ದರ್ಶನದಲ್ಲಿ, ನನ್ನ ಎದುರಿಗೆ ಮನುಷ್ಯಕುಮಾರನಂತಿರುವವನನ್ನು ಕಂಡೆ. ಆತನು ಆಕಾಶದಲ್ಲಿ ಮೇಘಗಳ ಮೇಲೆ ಬರುತ್ತಿದ್ದನು. ಅವನು ಆ ಪುರಾತನ ರಾಜನ ಸಮೀಪಕ್ಕೆ ಬಂದನು; ಅವನನ್ನು ಆ ಮಹಾವೃದ್ಧನ ಸನ್ನಿಧಿಗೆ ತರಲಾಯಿತು.
14 “ಮನುಷ್ಯಕುಮಾರನಂತಿರುವ ಆ ವ್ಯಕ್ತಿಗೆ ದೊರೆತನ, ಮಹಿಮೆ ಮತ್ತು ಆಳುವ ಸಂಪೂರ್ಣ ಅಧಿಕಾರವನ್ನು ಕೊಡಲಾಯಿತು. ಸಕಲ ಜನರು, ಜನಾಂಗಗಳು ಮತ್ತು ಎಲ್ಲ ಭಾಷೆಯ ಜನರು ಆತನನ್ನು ಸೇವಿಸುವರು. ಆತನ ಅಧಿಕಾರವು ಶಾಶ್ವತ, ಆತನ ರಾಜ್ಯವು ಎಂದಿಗೂ ಅಳಿಯದು.
93 ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
2 ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
3 ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
5 ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.
ಯೋಹಾನನು ಸಭೆಗಳಿಗೆ ಬರೆದ ಯೇಸುವಿನ ಸಂದೇಶ
4 ಏಷ್ಯಾ[a] ಪ್ರದೇಶದಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ:
ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು 5 ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ. ಯೇಸು ನಂಬಿಗಸ್ತ ಸಾಕ್ಷಿಯಾಗಿದ್ದಾನೆ. ಸತ್ತವರೊಳಗಿಂದ ಮೇಲೆದ್ದು ಬಂದವರಲ್ಲಿ ಆತನೇ ಮೊದಲಿಗನಾಗಿದ್ದಾನೆ. ಆತನು ಲೋಕದ ರಾಜರುಗಳಿಗೆ ಅಧಿಪತಿಯಾಗಿದ್ದಾನೆ.
ಯೇಸು ನಮ್ಮನ್ನು ಪ್ರೀತಿಸುತ್ತಾನೆ. ಆತನು ತನ್ನ ರಕ್ತದಿಂದ (ಮರಣ) ನಮ್ಮ ಪಾಪಗಳನ್ನು ನಿವಾರಿಸಿ ಬಿಡುಗಡೆಗೊಳಿಸಿದನು; 6 ನಮ್ಮನ್ನು ಒಂದು ರಾಜ್ಯವನ್ನಾಗಿ ಮಾಡಿ ನಮ್ಮನ್ನು ತನ್ನ ತಂದೆಯಾದ ದೇವರ ಸೇವೆ ಮಾಡುವ ಯಾಜಕರನ್ನಾಗಿ ಮಾಡಿದನು. ಯೇಸುವಿಗೆ ಎಂದೆಂದಿಗೂ ಮಹಿಮೆ ಪ್ರಭಾವಗಳಿರಲಿ! ಆಮೆನ್.
7 ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು[b] ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್.
8 ಪ್ರಭುವಾದ ದೇವರು ಹೇಳುವುದೇನೆಂದರೆ: “ನಾನೇ ಆದಿಯೂ ಅಂತ್ಯವೂ[c] ಆಗಿದ್ದೇನೆ. ನಾನು ವರ್ತಮಾನ, ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿರುವಾತನು. ನಾನೇ ಸರ್ವಶಕ್ತನು.”
33 ಬಳಿಕ ಪಿಲಾತನು, ಭವನದೊಳಗೆ ಹಿಂತಿರುಗಿ ಹೋಗಿ, ಯೇಸುವನ್ನು ಕರೆದು, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.
34 ಯೇಸು, “ಇದು ನಿನ್ನ ಪ್ರಶ್ನೆಯೋ? ಅಥವಾ ನನ್ನ ಬಗ್ಗೆ ಬೇರೆ ಜನರು ನಿನಗೆ ತಿಳಿಸಿದರೋ?” ಎಂದನು.
35 ಪಿಲಾತನು, “ನಾನು ಯೆಹೂದ್ಯನಲ್ಲ! ನಿನ್ನ ಸ್ವಂತ ಜನರು ಮತ್ತು ಅವರ ಮಹಾಯಾಜಕರು ನಿನ್ನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಿದ್ದಾರೆ. ನೀನು ಏನು ಮಾಡಿದೆ?” ಎಂದು ಕೇಳಿದನು.
36 ಯೇಸು, “ನನ್ನ ರಾಜ್ಯವು ಈ ಲೋಕಕ್ಕೆ ಸೇರಿದ್ದಲ್ಲ. ಅದು ಈ ಲೋಕಕ್ಕೆ ಸೇರಿದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಸಿಗದಂತೆ ನನ್ನ ಸೇವಕರು ಹೋರಾಡುತ್ತಿದ್ದರು. ಆದರೆ ನನ್ನ ರಾಜ್ಯವು ಮತ್ತೊಂದು ಸ್ಥಳದ್ದು” ಎಂದನು.
37 ಪಿಲಾತನು, “ಹಾಗಾದರೆ ನೀನು ರಾಜ!” ಎಂದನು.
ಯೇಸು, “ನೀನೇ ನನ್ನನ್ನು ರಾಜನೆಂದು ಹೇಳುತ್ತಿರುವೆ. ಅದು ಸತ್ಯ. ನಾನು ಜನರಿಗೆ ಸತ್ಯದ ಬಗ್ಗೆ ಹೇಳುವುದಕ್ಕಾಗಿಯೇ ಹುಟ್ಟಿದೆನು. ಆದಕಾರಣವೇ ನಾನು ಈ ಲೋಕಕ್ಕೆ ಬಂದೆನು. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನೂ ನನಗೆ ಕಿವಿಗೊಡುತ್ತಾನೆ” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International