Revised Common Lectionary (Complementary)
93 ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
2 ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
3 ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
5 ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.
ನಾಲ್ಕು ಮೃಗಗಳ ವಿಷಯವಾಗಿ ದಾನಿಯೇಲನ ಕನಸು
7 ಬಾಬಿಲೋನಿನ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದಾನಿಯೇಲನಿಗೆ ಒಂದು ದರ್ಶನವಾಯಿತು. ತನ್ನ ಹಾಸಿಗೆಯ ಮೇಲೆ ಮಲಗಿರುವಾಗ ದಾನಿಯೇಲನು ಈ ದರ್ಶನಗಳನ್ನು ಕಂಡನು. ದಾನಿಯೇಲನು ತನ್ನ ಕನಸಿನಲ್ಲಿ ಕಂಡದ್ದನ್ನು ಬರೆದಿಟ್ಟನು. 2 ದಾನಿಯೇಲನು ಹೀಗೆಂದನು: “ನನಗಾದ ರಾತ್ರಿಯ ದರ್ಶನದಲ್ಲಿ, ನಾಲ್ಕು ದಿಕ್ಕಿನಿಂದ ಗಾಳಿಯು ಬೀಸುತ್ತಿತ್ತು. ಆ ಬಿರುಗಾಳಿಯು ಸಮುದ್ರವನ್ನು ಕೆರಳಿಸಿತು. 3 ನಾನು ನಾಲ್ಕು ದೊಡ್ಡ ಮೃಗಗಳನ್ನು ಕಂಡೆ. ಅದರಲ್ಲಿ ಪ್ರತಿಯೊಂದು ಮೃಗವು ಉಳಿದ ಮೃಗಗಳಿಂದ ಭಿನ್ನವಾಗಿತ್ತು. ಆ ನಾಲ್ಕು ಮೃಗಗಳು ಸಮುದ್ರದಿಂದ ಹೊರಬಂದವು.
4 “ಮೊದಲು ಕಾಣಿಸಿದ ಮೃಗವು ಸಿಂಹದ ಹಾಗಿತ್ತು. ಅದಕ್ಕೆ ಹದ್ದಿನಂತೆ ರೆಕ್ಕೆಗಳಿದ್ದವು. ನಾನು ಈ ಮೃಗವನ್ನು ನೋಡುತ್ತಲೇ ಇರಲು ಅದರ ರೆಕ್ಕೆಗಳು ಕೀಳಲ್ಪಟ್ಟವು. ಅದು ನೆಲದಿಂದ ಎತ್ತಲ್ಪಟ್ಟು ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲ್ಪಟ್ಟಿತ್ತು. ಅದಕ್ಕೆ ಮನುಷ್ಯನ ಹೃದಯವನ್ನು ಕೊಡಲಾಯಿತು.
5 “ಆಮೇಲೆ ನಾನು ಎರಡನೆ ಮೃಗವನ್ನು ಕಂಡೆ. ಆ ಮೃಗವು ಕರಡಿಯ ಹಾಗೆ ಕಾಣಿಸಿತು. ಅದು ಒಂದು ಭಾಗವನ್ನು ಮೇಲೆತ್ತಿಕೊಂಡಿತ್ತು. ತನ್ನ ಬಾಯಲ್ಲಿ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು. ‘ಎದ್ದು ನಿನಗೆ ಬೇಕಾದಷ್ಟು ಮಾಂಸವನ್ನು ತಿನ್ನು’ ಎಂದು ಅದಕ್ಕೆ ಹೇಳಲಾಯಿತು.
6 “ಆಮೇಲೆ ನಾನು ಮತ್ತೊಂದು ಮೃಗವನ್ನು ಕಂಡೆ. ಈ ಮೃಗವು ಚಿರತೆಯ ಹಾಗೆ ಕಾಣಿಸಿತು. ಆ ಚಿರತೆಗೆ ಅದರ ಬೆನ್ನಿನ ಮೇಲೆ ನಾಲ್ಕು ರೆಕ್ಕೆಗಳಿದ್ದವು. ಈ ರೆಕ್ಕೆಗಳು ಪಕ್ಷಿಗಳ ರೆಕ್ಕೆಗಳಂತಿದ್ದವು. ಈ ಮೃಗಕ್ಕೆ ನಾಲ್ಕು ತಲೆಗಳಿದ್ದವು. ಅದಕ್ಕೆ ದೊರೆತನವನ್ನು ಕೊಡಲಾಯಿತು.
7 “ನನಗಾದ ರಾತ್ರಿಯ ದರ್ಶನದಲ್ಲಿ ನಾಲ್ಕನೆ ಮೃಗವನ್ನು ಕಂಡೆ. ಅದು ಅತ್ಯಂತ ಬಲಿಷ್ಠವಾಗಿತ್ತು ಮತ್ತು ಭಯಂಕರವಾಗಿತ್ತು. ಅದು ಅತಿ ಶಕ್ತಿಶಾಲಿಯಾಗಿತ್ತು. ಅದಕ್ಕೆ ದೊಡ್ಡದೊಡ್ಡ ಕಬ್ಬಿಣದ ಹಲ್ಲುಗಳಿದ್ದವು. ಈ ಪ್ರಾಣಿಯು ತಾನು ಬೇಟೆಯಾಡಿದ ಪಶುವನ್ನು ತಂಡುತುಂಡು ಮಾಡುತ್ತಾ ತಿನ್ನುತ್ತಿತ್ತು; ಮಿಕ್ಕಿದ್ದನ್ನು ಅದು ತುಳಿಯುತ್ತಿತ್ತು. ಈ ನಾಲ್ಕನೆಯ ಪ್ರಾಣಿಯು ನಾನು ಅದಕ್ಕೂ ಮುಂಚೆ ನೋಡಿದ ಮೃಗಗಳಿಗಿಂತ ಭಿನ್ನವಾಗಿತ್ತು. ಈ ಮೃಗಕ್ಕೆ ಹತ್ತು ಕೊಂಬುಗಳಿದ್ದವು.
8 “ನಾನು ಆ ಕೊಂಬುಗಳನ್ನು ನೋಡುತ್ತಿರಲು, ಅವುಗಳ ನಡುವೆ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು. ಅದರ ದೆಸೆಯಿಂದ ಮುಂಚಿನ ಕೊಂಬುಗಳಲ್ಲಿ ಮೂರು, ಬೇರುಸಹಿತ ಕೀಳಲ್ಪಟ್ಟವು. ಈ ಚಿಕ್ಕ ಕೊಂಬಿನ ಮೇಲೆ ಕಣ್ಣುಗಳಿದ್ದವು. ಈ ಕಣ್ಣುಗಳು ಮನುಷ್ಯನ ಕಣ್ಣಿನಂತಿದ್ದವು. ಈ ಚಿಕ್ಕ ಕೊಂಬಿನ ಮೇಲೆ ಒಂದು ಬಾಯಿ ಇತ್ತು; ಆ ಬಾಯಿ ಜಂಬಕೊಚ್ಚಿಕೊಳ್ಳುತ್ತಿತ್ತು.
ನಾಲ್ಕನೆಯ ಮೃಗದ ಬಗ್ಗೆ ಬಿದ್ದ ಕನಸಿನ ಅರ್ಥ
15 “ದಾನಿಯೇಲನಾದ ನಾನು ಗಲಿಬಿಲಿಗೊಳಗಾದೆ ಮತ್ತು ತೊಂದರೆಪಟ್ಟೆ, ನಾನು ಕಂಡ ದರ್ಶನಗಳು ನನ್ನನ್ನು ಮನೋವ್ಯಥೆಗೆ ಒಳಪಡಿಸಿದವು. 16 ನಾನು ಅಲ್ಲಿ ನಿಂತಿದ್ದವರಲ್ಲಿ ಒಬ್ಬನ ಬಳಿಗೆ ಹೋದೆ. ಇದೆಲ್ಲದರ ಅರ್ಥವೇನೆಂದು ಅವನನ್ನು ಕೇಳಿದೆ. ಅವನು ಇವುಗಳ ಅರ್ಥವನ್ನು ವಿವರಿಸಿದನು. 17 ಅವನು, ‘ಆ ನಾಲ್ಕು ದೊಡ್ಡ ಮೃಗಗಳು ಅಂದರೆ ನಾಲ್ಕು ರಾಜ್ಯಗಳು. ಆ ರಾಜ್ಯಗಳು ಭೂಮಿಯಿಂದ ಹುಟ್ಟುವವು. 18 ಆದರೆ ದೇವರ ವಿಶೇಷ ಜನರಿಗೆ ಆ ಸಾಮ್ರಾಜ್ಯಗಳು ದೊರೆಯುವವು. ಅವರು ಆ ಸಾಮ್ರಾಜ್ಯವನ್ನು ಶಾಶ್ವತವಾಗಿ ಅನುಭವಿಸುವರು’ ಎಂದು ಹೇಳಿದನು.
ಪರಲೋಕದಿಂದ ಬರುವ ವ್ಯಕ್ತಿ
31 “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. 32 ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ. 33 ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ. 34 ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ. 35 ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ. 36 ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International