Revised Common Lectionary (Complementary)
93 ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
2 ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
3 ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
5 ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.
ಚೀದೋನಿನ ವಿರುದ್ಧ ಸಂದೇಶ
20 ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೀಗೆ ಹೇಳಿದನು: 21 “ನರಪುತ್ರನೇ, ಚೀದೋನಿನ ಕಡೆಗೆ ನೋಡಿ ನನ್ನ ಪರವಾಗಿ ನೀನೇ ಅದರ ವಿರುದ್ಧವಾಗಿ ಮಾತನಾಡು. 22 ನನ್ನ ಒಡೆಯನಾದ ಯೆಹೋವನು ಈ ಮಾತುಗಳನ್ನು ಹೇಳಿದನೆಂದು ಅವನಿಗೆ ತಿಳಿಸು:
“‘ಚೀದೋನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
ನಿನ್ನ ಜನರು ನನ್ನನ್ನು ಗೌರವಿಸಲು ಕಲಿಯುವರು.
ನಾನು ಚೀದೋನನ್ನು ಶಿಕ್ಷಿಸಿದಾಗ
ನಾನೇ ಯೆಹೋವನೆಂದು ಜನರಿಗೆ ಗೊತ್ತಾಗುವದು.
ನಾನು ಪವಿತ್ರನು ಎಂದು ಅವರು ತಿಳಿದು ಆ ರೀತಿಯಾಗಿ ಅವರು ನನ್ನೊಂದಿಗೆ ವರ್ತಿಸುವರು.
23 ಚೀದೋನಿಗೆ ನಾನು ರೋಗಮರಣಗಳನ್ನು ಕಳುಹಿಸುವೆನು.
ನಗರದೊಳಗೆ ವಾಸಿಸುವ ಅನೇಕ ಮಂದಿ ಸಾಯುವರು.
ನಗರದ ಹೊರಗೆ ಖಡ್ಗವು ಅನೇಕರನ್ನು ಕೊಲ್ಲುವದು,
ಆಗ ಅವರು ನಾನು ಯೆಹೋವನೆಂದು ತಿಳಿಯುವರು.’”
ರಾಜ್ಯಗಳು ಇಸ್ರೇಲಿಗೆ ಹಾಸ್ಯ ಮಾಡುವದನ್ನು ನಿಲ್ಲಿಸುವರು
24 “‘ಇಸ್ರೇಲಿನ ಸುತ್ತಲಿರುವ ರಾಜ್ಯಗಳು ಅದನ್ನು ಹಗೆ ಮಾಡಿದರು. ಆ ರಾಜ್ಯಗಳಿಗೆ ಬಹು ದೊಡ್ಡ ಕಂಟಕವು ಬಂದೊದಗುವದು. ಆಗ ಹರಿತವಾದ ಮುಳ್ಳಾಗಲಿ ಮುಳ್ಳಿನ ಪೊದೆಗಳಾಗಲಿ ಇಸ್ರೇಲಿನ ಜನರನ್ನು ಬಾಸಿ ಮಾಡಲು ಇರುವದಿಲ್ಲ. ಆಗ ನಾನು ಅವರ ಒಡೆಯನಾದ ಯೆಹೋವನು ಎಂದು ಅವರು ತಿಳಿಯುವರು.’”
25 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದನು: “ಬೇರೆ ದೇಶಗಳಿಗೆ ನಾನು ಇಸ್ರೇಲರನ್ನು ಚದರಿಸಿದೆನು. ಆದರೆ ತಿರುಗಿ ಇಸ್ರೇಲರನ್ನೆಲ್ಲಾ ಒಟ್ಟುಗೂಡಿಸುವೆನು. ಆಗ ಆ ದೇಶದವರು ನಾನು ಪವಿತ್ರವಾದ ದೇವರೆಂದು ತಿಳಿದು ಆ ರೀತಿಯಾಗಿ ನನ್ನನ್ನು ನೋಡುವರು. ಆಗ ಇಸ್ರೇಲರು ತಮ್ಮ ದೇಶದಲ್ಲಿ ವಾಸಮಾಡುವರು. ಆ ದೇಶವನ್ನು ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟಿದ್ದೆನು. 26 ಆ ದೇಶದಲ್ಲಿ ಅವರು ಸುರಕ್ಷಿತವಾಗಿ ವಾಸಿಸುವರು; ಮನೆಗಳನ್ನು ಕಟ್ಟಿ ದ್ರಾಕ್ಷಿತೋಟಗಳನ್ನು ಮಾಡುವರು. ಅವರನ್ನು ದ್ವೇಷಿಸಿದ ರಾಜ್ಯಗಳನ್ನು ದಂಡಿಸುವೆನು. ಆಗ ಇಸ್ರೇಲ್ ಜನರು ಸುರಕ್ಷಿತವಾಗಿ ಜೀವಿಸುವರು; ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”
20 ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು. 21 ಒಬ್ಬ ಮನುಷ್ಯನು (ಆದಾಮನು) ಮಾಡಿದ ಕಾರ್ಯದಿಂದಾಗಿ ಜನರು ಮರಣ ಹೊಂದುವಂತೆಯೇ ಒಬ್ಬ ಮನುಷ್ಯನ (ಕ್ರಿಸ್ತನ) ಮೂಲಕವಾಗಿಯೇ ಜನರು ಜೀವಂತವಾಗಿ ಎದ್ದುಬರುವರು. 22 ಆದಾಮನ ಸಂಬಂಧದಿಂದ ಎಲ್ಲರೂ ಸಾಯುತ್ತಾರೆ. ಇದೇರೀತಿ ಕ್ರಿಸ್ತನ ಸಂಬಂಧದಿಂದ ನಾವೆಲ್ಲರೂ ಮತ್ತೆ ಜೀವಂತರಾಗುತ್ತೇವೆ. 23 ಆದರೆ ಪ್ರತಿಯೊಬ್ಬನು ಕ್ರಮಬದ್ಧ ರೀತಿಯಲ್ಲಿ ಜೀವಂತವಾಗಿ ಎದ್ದುಬರುವನು. ಮೊಟ್ಟಮೊದಲನೆಯದಾಗಿ ಕ್ರಿಸ್ತನೇ ಎದ್ದುಬಂದನು. ಕ್ರಿಸ್ತನು ಮತ್ತೆ ಬರುವಾಗ ಕ್ರಿಸ್ತನಿಗೆ ಸೇರಿದ ಜನರು ಜೀವಂತವಾಗಿ ಎದ್ದುಬರುವರು. 24 ಅನಂತರ ಅಂತ್ಯ ಬರುವುದು. ಕ್ರಿಸ್ತನು ಎಲ್ಲಾ ಅಧಿಪತಿಗಳನ್ನು, ಅಧಿಕಾರಗಳನ್ನು ಮತ್ತು ಶಕ್ತಿಗಳನ್ನು ನಾಶಮಾಡುವನು. ಬಳಿಕ ಕ್ರಿಸ್ತನು ತಂದೆಯಾದ ದೇವರಿಗೆ ರಾಜ್ಯವನ್ನು ಕೊಡುವನು.
25 ದೇವರು ಎಲ್ಲಾ ಶತ್ರುಗಳನ್ನು ಕ್ರಿಸ್ತನಿಗೆ ಅಧೀನಗೊಳಿಸುವ ತನಕ ಕ್ರಿಸ್ತನು ಆಳಲೇಬೇಕು. 26 ನಾಶವಾಗುವ ಕಡೆಯ ಶತ್ರುವೆಂದರೆ ಮರಣವೇ. 27 “ದೇವರು ಸಮಸ್ತವನ್ನು ಆತನಿಗೆ ಅಧೀನಗೊಳಿಸುತ್ತಾನೆ”(A) ಎಂದು ಪವಿತ್ರಗ್ರಂಥವು ಹೇಳುತ್ತದೆ. “ಸಮಸ್ತವನ್ನು” ಕ್ರಿಸ್ತನಿಗೆ ಅಧೀನಗೊಳಿಸುತ್ತಾನೆಂದು ಹೇಳುವಾಗ, ಅದು ದೇವರನ್ನು ಒಳಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಸಮಸ್ತವನ್ನು ಕ್ರಿಸ್ತನಿಗೆ ಅಧೀನಗೊಳಿಸಿದಾತನು ದೇವರೇ. 28 ಸಮಸ್ತವು ತನ್ನ ಅಧೀನಕ್ಕೆ ಬಂದ ಮೇಲೆ, ಕ್ರಿಸ್ತನು ತನ್ನನ್ನೇ ದೇವರಿಗೆ ಅಧೀನಪಡಿಸಿಕೊಳ್ಳುವನು. ಸಮಸ್ತವನ್ನು ಕ್ರಿಸ್ತನಿಗೆ ಅಧೀನಪಡಿಸಿದಾತನು ದೇವರೇ. ಹೀಗೆ ದೇವರು ಸಮಸ್ತಕ್ಕೂ ಸರ್ವಾಧಿಪತಿಯಾಗುವನು.[a]
Kannada Holy Bible: Easy-to-Read Version. All rights reserved. © 1997 Bible League International