Revised Common Lectionary (Complementary)
93 ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
2 ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
3 ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
5 ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.
ತಾನು ದೇವರಂತೆ ಎಂದು ತೂರ್ ನೆನಸಿತು
28 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ತೂರಿನ ರಾಜನಿಗೆ ಹೀಗೆ ಹೇಳು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ:
“‘ನೀನು ಬಹಳ ಹೆಮ್ಮೆಯುಳ್ಳವನು.
“ನಾನು ದೇವರು ಎಂದು ಹೇಳುವೆ.
ಸಾಗರದ ಮಧ್ಯದಲ್ಲಿ ದೇವರುಗಳ ಸಿಂಹಾಸನದಲ್ಲಿ
ನಾನು ಕೂತಿರುತ್ತೇನೆ ಎಂದು ಅನ್ನುವೆ.”
“‘ಆದರೆ ನೀನು ಮನುಷ್ಯನು, ದೇವರಲ್ಲ.
ನೀನು ದೇವರೆಂದು ನೀನೇ ನೆನಸಿಕೊಳ್ಳುವೆ.
3 ನೀನು ದಾನಿಯೇಲನಿಗಿಂತ ಜಾಣನು ಎಂಬುದಾಗಿ ಭಾವಿಸುತ್ತಿ.
ಎಲ್ಲಾ ರಹಸ್ಯಗಳು ನನಗೆ ಗೊತ್ತು ಎಂದು ನೀನು ನೆನಸುವೆ.
4 ನಿನ್ನ ಜ್ಞಾನ ಮತ್ತು ತಿಳುವಳಿಕೆಯಿಂದ ನೀನು ಐಶ್ವರ್ಯವನ್ನು ಕೂಡಿಹಾಕಿದ್ದೀ.
ನಿನ್ನ ಖಜಾನೆಯಲ್ಲಿ ಬೆಳ್ಳಿಬಂಗಾರವನ್ನು ಶೇಖರಿಸಿದ್ದೀ.
5 ನಿನ್ನ ವ್ಯಾಪಾರದ ಜಾಣತನದಿಂದ ನಿನ್ನ ಐಶ್ವರ್ಯವು ಬೆಳೆಯುವಂತೆ ಮಾಡಿದ್ದೀ.
ಆ ಐಶ್ವರ್ಯದ ಕಾರಣದಿಂದ ನೀನು ಹೆಮ್ಮೆಯಿಂದ ತುಂಬಿರುತ್ತೀ.
6 “‘ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ತೂರ್, ನೀನು ದೇವರೆಂದು ನೆನಸಿಕೊಂಡಿಯಲ್ಲಾ?
7 ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅಪರಿಚಿತರನ್ನು ಕರೆತರುವೆನು.
ಅವರು ಎಲ್ಲಾ ಜನಾಂಗಗಳವರಿಗಿಂತ ಕ್ರೂರರು,
ಅವರು ತಮ್ಮ ಖಡ್ಗವನ್ನು ಎಳೆದು
ನಿನ್ನ ಜ್ಞಾನದಿಂದ ಕೊಂಡುಕೊಂಡಿದ್ದ ಎಲ್ಲಾ ಬೆಲೆಬಾಳುವ
ಅಪೂರ್ವ ವಸ್ತುಗಳನ್ನು ನಾಶಮಾಡುವರು.
8 ನಿನ್ನ ಘನತೆಯನ್ನು ಕೆಡಿಸಿಬಿಡುವರು. ಸಮಾಧಿಗೆ ನಿನ್ನನ್ನು ತರುವರು.
ಸಮುದ್ರದಲ್ಲಿ ಸತ್ತ ನಾವಿಕನ ಸ್ಥಿತಿಯು ನಿನ್ನದಾಗುವದು.
9 ಆ ಮನುಷ್ಯನು ನಿನ್ನನ್ನು ಕೊಂದುಹಾಕುವನು.
ಆಗಲೂ ನೀನು “ನಾನು ದೇವರು” ಎಂದು ಹೇಳುವಿಯಾ?
ಇಲ್ಲ. ಅವನು ನಿನ್ನನ್ನು ತನ್ನ ಅಧಿಕಾರದಲ್ಲಿರಿಸುವನು.
ಆಗ ನೀನು “ಕೇವಲ ಮನುಷ್ಯನೇ” ಎಂದು ತಿಳಿಯುವಿ.
10 ಪರದೇಶಸ್ಥರು ನಿನ್ನನ್ನು ಪರದೇಶಿಯಂತೆ ನೋಡುವರು ಮತ್ತು ಕೊಲೆ ಮಾಡುವರು.
ನಾನು ಆ ರೀತಿಯಾಗಿ ಮಾಡಬೇಕೆಂದು ಆಜ್ಞಾಪಿಸುವದರಿಂದ ನಿನಗೆ ಹಾಗೆ ಆಗುವದು.’”
ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
ಸ್ತೆಫನನು ಕೊಲ್ಲಲ್ಪಟ್ಟನು
54 ಸ್ತೆಫನನ ಈ ಮಾತುಗಳನ್ನು ಕೇಳಿದ ಆ ಯೆಹೂದ್ಯನಾಯಕರು ಬಹಳ ಕೋಪಗೊಂಡರು. ಅವರು ರೋಷದಿಂದ ಸ್ತೆಫನನ ಮೇಲೆ ಹಲ್ಲು ಕಡಿದರು. 55 ಆದರೆ ಸ್ತೆಫನನು ಪವಿತ್ರಾತ್ಮಭರಿತನಾಗಿದ್ದನು. ಅವನು ಆಕಾಶದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ಕಂಡು, 56 “ಇಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು (ಯೇಸು) ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ!” ಎಂದು ಹೇಳಿದನು.
57 ಆಗ ಯೆಹೂದ್ಯನಾಯಕರೆಲ್ಲ ಗಟ್ಟಿಯಾಗಿ ಕೂಗಿ, ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡರು. ಅವರೆಲ್ಲರು ಸ್ತೆಫನನ ಬಳಿಗೆ ಒಟ್ಟಾಗಿ ಓಡಿಬಂದು, 58 ಅವನನ್ನು ಪಟ್ಟಣದಿಂದ ಹೊರಗೆ ಎಳೆದೊಯ್ದು, ಅವನು ಸಾಯುವವರೆಗೂ ಅವನ ಮೇಲೆ ಕಲ್ಲುಗಳನ್ನು ಎಸೆದರು. ಸ್ತೆಫನನ ವಿರುದ್ಧವಾಗಿ ಸುಳ್ಳು ಹೇಳಿದ ಜನರು ತಮ್ಮ ಮೇಲಂಗಿಗಳನ್ನು ಬಿಚ್ಚಿ ಸೌಲನೆಂಬ ಯುವಕನಿಗೆ ಕೊಟ್ಟು, 59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು. 60 ಅವನು ಮೊಣಕಾಲೂರಿ, “ಪ್ರಭುವೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.
8 1-3 ಸ್ತೆಫನನ ಕೊಲೆಗೆ ಸೌಲನ ಸಮ್ಮತಿಯಿತ್ತು. ಕೆಲವು ಭಕ್ತರು ಸ್ತೆಫನನನ್ನು ಸಮಾಧಿ ಮಾಡಿದರು. ಅವರು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು.
ವಿಶ್ವಾಸಿಗಳಿಗೆ ಹಿಂಸೆ
ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳ ಸಮುದಾಯವನ್ನು ಹಿಂಸಿಸಲು ಯೆಹೂದ್ಯರು ಅಂದೇ ಆರಂಭಿಸಿ ಅವರನ್ನು ಬಹಳವಾಗಿ ಸಂಕಟಪಡಿಸಿದರು. ಆ ಸಭೆಯನ್ನು ನಾಶಮಾಡಲು ಸೌಲನು ಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಎಳೆದೊಯ್ದು ಸೆರೆಮನೆಗೆ ಹಾಕಿದನು. ವಿಶ್ವಾಸಿಗಳೆಲ್ಲಾ ಜೆರುಸಲೇಮನ್ನು ಬಿಟ್ಟುಹೋದರು. ಅಪೊಸ್ತಲರು ಮಾತ್ರ ಅಲ್ಲೇ ಇದ್ದರು. ವಿಶ್ವಾಸಿಗಳು ಜುದೇಯ ಮತ್ತು ಸಮಾರ್ಯದ ಬೇರೆಬೇರೆ ಸ್ಥಳಗಳಿಗೆ ಹೊರಟುಹೋದರು.
Kannada Holy Bible: Easy-to-Read Version. All rights reserved. © 1997 Bible League International