Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 13

ರಚನೆಗಾರ: ದಾವೀದ.

13 ಯೆಹೋವನೇ, ನನ್ನನ್ನು ಇನ್ನೆಷ್ಟುಕಾಲ ಮರೆತಿರುವೆ?
    ನನ್ನನ್ನು ಶಾಶ್ವತವಾಗಿ ಮರೆತುಬಿಡುವೆಯಾ?
    ಇನ್ನೆಷ್ಟುಕಾಲ ನನಗೆ ಮರೆಯಾಗಿರುವೆ?
ನಾನು ದುಃಖಕ್ರಾಂತನಾಗಿ ಇನ್ನೆಷ್ಟುಕಾಲ ಆಲೋಚಿಸುತ್ತಿರಬೇಕು?
    ನನ್ನ ವೈರಿಗಳು ಇನ್ನೆಷ್ಟುಕಾಲ ನನ್ನ ಮೇಲೆ ಜಯಗಳಿಸಬೇಕು?

ನನ್ನ ದೇವರಾದ ಯೆಹೋವನೇ, ನನ್ನ ಮೇಲೆ ದೃಷ್ಟಿಯಿಟ್ಟು ಸದುತ್ತರವನ್ನು ದಯಪಾಲಿಸು.
    ಇಲ್ಲವಾದರೆ, ನಾನು ಸಾಯಲೇಬೇಕಾಗುವುದು!
ಆಗ ವೈರಿಯು, “ನಾನು ಅವನನ್ನು ಸೋಲಿಸಿದೆ!” ಎಂದು ಹೇಳುತ್ತಾ
    ನನ್ನ ಬೀಳುವಿಕೆಯನ್ನು ಕಂಡು ಸಂತೋಷಪಡುವನು.

ನಾನಂತೂ ನಿನ್ನ ಶಾಶ್ವತವಾದ ಪ್ರೀತಿಯಲ್ಲಿ ಭರವಸೆಯಿಟ್ಟಿದ್ದೇನೆ.
    ನಿನ್ನ ರಕ್ಷಣೆಯ ನಿಮಿತ್ತ ನನ್ನ ಹೃದಯವು ಹರ್ಷಿಸುವುದು.
ಯೆಹೋವನು ಮಹೋಪಕಾರಗಳನ್ನು ಮಾಡಿರುವುದರಿಂದ
    ಆತನಿಗೆ ಹರ್ಷಗೀತೆಗಳನ್ನು ಹಾಡುವೆನು.

ದಾನಿಯೇಲ 8:1-14

ದಾನಿಯೇಲನು ಕನಸಿನಲ್ಲಿ ಕಂಡ ಟಗರು ಮತ್ತು ಹೋತ

ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆನು. ಇದು ಮೊದಲಿನ ದರ್ಶನದ ತರುವಾಯ ಕಂಡದ್ದು. ಈ ದರ್ಶನದಲ್ಲಿ ನಾನು ಶೂಷನ್ ನಗರದಲ್ಲಿದ್ದೆನು. ಶೂಷನ್ ನಗರವು ಏಲಾಮ್ ಸಂಸ್ಥಾನದ ರಾಜಧಾನಿಯಾಗಿತ್ತು. ನಾನು ಊಲಾ ನದಿಯ ದಡದ ಮೇಲೆ ನಿಂತುಕೊಂಡಿದ್ದೆನು. ನಾನು ಕಣ್ಣೆತ್ತಿ ನೋಡಲಾಗಿ ಊಲಾ ನದಿಯ ಪಕ್ಕದಲ್ಲಿ ನಿಂತುಕೊಂಡಿದ್ದ ಟಗರೊಂದು ನನ್ನ ಕಣ್ಣಿಗೆ ಬಿತ್ತು. ಟಗರಿಗೆ ಎರಡು ಉದ್ದವಾದ ಕೊಂಬುಗಳಿದ್ದವು. ಆ ಎರಡು ಕೊಂಬುಗಳು ಉದ್ದವಾಗಿದ್ದರೂ ಒಂದು ಕೊಂಬು ಇನ್ನೊಂದು ಕೊಂಬಿಗಿಂತ ಉದ್ದವಾಗಿತ್ತು. ಉದ್ದವಾದ ಕೊಂಬು ಇನ್ನೊಂದು ಕೊಂಬಿಗಿಂತ ಹಿಂದಕ್ಕೆ ಇತ್ತು. ಆ ಟಗರು ತನ್ನ ಕೊಂಬುಗಳಿಂದ ಎಲ್ಲ ಕಡೆಗೂ ಹಾಯುತ್ತಿತ್ತು. ಆ ಟಗರು ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಜಿಗಿದಾಡುತ್ತಿತ್ತು. ಯಾವ ಪ್ರಾಣಿಗೂ ಆ ಟಗರನ್ನು ತಡೆಯಲಾಗಲಿಲ್ಲ. ಮಿಕ್ಕ ಪ್ರಾಣಿಗಳನ್ನು ರಕ್ಷಿಸುವುದು ಯಾರಿಂದಲೂ ಆಗಲಿಲ್ಲ. ಆ ಟಗರು ತನ್ನ ಮನಸ್ಸಿಗೆ ಬಂದಂತೆ ಮಾಡಲು ಸಾಧ್ಯವಾಯಿತು. ಆ ಟಗರು ಬಹಳ ಪ್ರಬಲವಾಯಿತು.

ನಾನು ಈ ಟಗರಿನ ಬಗ್ಗೆ ಯೋಚಿಸಿದೆ. ನಾನು ಯೋಚನೆ ಮಾಡುತ್ತಿರುವಾಗಲೇ ಪಶ್ಚಿಮ ದಿಕ್ಕಿನಿಂದ ಒಂದು ಹೋತವು ಬರುವುದನ್ನು ಕಂಡೆ. ಈ ಹೋತವು ಇಡೀ ಭೂಮಂಡಲದ ಮೇಲೆಲ್ಲಾ ಓಡಾಡಿತು. ಅದು ತನ್ನ ಕಾಲುಗಳು ನೆಲಕ್ಕೆ ಸೋಕದಂತೆ ಓಡುತ್ತಿತ್ತು. ಈ ಹೋತಕ್ಕೆ ಎದ್ದುಕಾಣುವ ಒಂದು ದೊಡ್ಡ ಕೊಂಬು ಇತ್ತು. ಆ ಕೊಂಬು ಸರಿಯಾಗಿ ಆ ಹೋತದ ಎರಡು ಕಣ್ಣುಗಳ ಮಧ್ಯದಲ್ಲಿತ್ತು.

ಆ ಹೋತವು ಟಗರಿನ ಹತ್ತಿರಕ್ಕೆ ಬಂದಿತು. ನಾನು ಊಲಾ ನದಿಯ ದಡದ ಮೇಲೆ ನೋಡಿದ ಟಗರೇ ಇದಾಗಿತ್ತು. ಆ ಹೋತಕ್ಕೆ ಬಹಳ ಕೋಪ ಬಂದಿತ್ತು; ಅದು ವೇಗದಿಂದ ಟಗರಿನ ಕಡೆಗೆ ಓಡಿತು. ಹೋತವು ಟಗರಿನ ಕಡೆಗೆ ಓಡುವದನ್ನು ನಾನು ನೋಡುತ್ತಿದ್ದೆ. ಅದು ಅತಿ ಕೋಪದಿಂದ ಟಗರಿನ ಎರಡು ಕೊಂಬುಗಳನ್ನು ಮುರಿದುಬಿಟ್ಟಿತು. ಟಗರಿಗೆ ಆ ಹೋತವನ್ನು ತಡೆದು ನಿಲ್ಲಿಸಲಾಗಲಿಲ್ಲ. ಆ ಹೋತವು ಟಗರನ್ನು ನೆಲಕ್ಕೆ ಉರುಳಿಸಿ ತುಳಿದುಹಾಕಿತು. ಟಗರನ್ನು ಹೋತದಿಂದ ರಕ್ಷಿಸಲು ಅಲ್ಲಿ ಯಾರೂ ಇರಲಿಲ್ಲ.

ಹೋತವು ಬಹಳ ಪ್ರಬಲವಾಯಿತು. ಆದರೆ ಅದು ಪ್ರಾಬಲ್ಯಕ್ಕೆ ಬಂದಾಗಲೇ ಅದರ ದೊಡ್ಡ ಕೊಂಬು ಮುರಿದುಹೋಯಿತು. ಆ ಒಂದು ದೊಡ್ಡ ಕೊಂಬು ಇದ್ದ ಸ್ಥಳದಲ್ಲಿ ನಾಲ್ಕು ಕೊಂಬುಗಳು ಮೊಳೆತವು. ಆ ಕೊಂಬುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಆ ನಾಲ್ಕು ಕೊಂಬುಗಳು ನಾಲ್ಕು ಬೇರೆಬೇರೆ ದಿಕ್ಕುಗಳಲ್ಲಿ ಚಾಚಿಕೊಂಡವು.

ಆಗ ಅವುಗಳಿಂದ ಒಂದು ಚಿಕ್ಕ ಕೊಂಬು ಮೊಳೆಯಿತು. ಆ ಚಿಕ್ಕ ಕೊಂಬು ಬೆಳೆದು ಬಹಳ ದೊಡ್ಡದಾಯಿತು. ಅದು ಆಗ್ನೇಯಕ್ಕೆ ಬೆಳೆಯಿತು. ಅದು ದಕ್ಷಿಣಕ್ಕೆ, ಪೂರ್ವಕ್ಕೆ ಮತ್ತು ಸುಂದರವಾದ ನಾಡಿಗೆ ಬೆಳೆಯಿತು. 10 ಆ ಚಿಕ್ಕ ಕೊಂಬು ಬಹಳ ದೊಡ್ಡದಾಯಿತು. ಅದು ಆಕಾಶಕ್ಕೆ ಮುಟ್ಟುವಂತೆ ಬೆಳೆಯಿತು. ಆ ಚಿಕ್ಕ ಕೊಂಬು ಆಕಾಶದ ಕೆಲವು ನಕ್ಷತ್ರಗಳನ್ನು ನೆಲಕ್ಕೆ ಬೀಳಿಸಿತು ಮತ್ತು ಎಲ್ಲ ನಕ್ಷತ್ರಗಳ ಮೇಲೆ ಹತ್ತಿತ್ತು. 11 ಆ ಚಿಕ್ಕ ಕೊಂಬು ಅತಿ ಪ್ರಬಲವಾಯಿತು ಮತ್ತು ನಕ್ಷತ್ರಾಧಿಪತಿಯನ್ನು (ದೇವರನ್ನು) ವಿರೋಧಿಸತೊಡಗಿತು. ಆ ಚಿಕ್ಕ ಕೊಂಬು ನಕ್ಷತ್ರಾಧಿಪತಿಗೆ ನಿತ್ಯಹೋಮಗಳು ಸಲ್ಲದಂತೆ ಮಾಡಿತು. ಜನರು ನಕ್ಷತ್ರಾಧಿಪತಿಯನ್ನು ಪೂಜಿಸುವ ಸ್ಥಳವನ್ನು ಕೆಡವಿಬಿಟ್ಟಿತು. 12 ಆ ಚಿಕ್ಕ ಕೊಂಬು ನಿತ್ಯಹೋಮಗಳನ್ನು ತಡೆಯುವ ಪಾಪವನ್ನು ಮಾಡಿತು. ಅದು ಒಳ್ಳೆಯತನವನ್ನು (ಸತ್ಯ, ಧರ್ಮವನ್ನು) ನೆಲಕ್ಕೆ ತಳ್ಳಿತು. ಇದೆಲ್ಲವನ್ನು ಮಾಡಿ ಆ ಚಿಕ್ಕ ಕೊಂಬು ತನ್ನ ಇಷ್ಟಾರ್ಥವನ್ನು ಸಾಧಿಸುವದರಲ್ಲಿ ಜಯ ಪಡೆಯಿತು.

13 ಆಗ ಒಬ್ಬ ಪವಿತ್ರನು[a] ಮಾತನಾಡುವದನ್ನು ಕೇಳಿದೆ. ಮತ್ತೊಬ್ಬ ಪವಿತ್ರನು ಮೊದಲನೆಯ ಪವಿತ್ರನಿಗೆ ಉತ್ತರಿಸುವದನ್ನೂ ಕೇಳಿದೆ. ಮೊದಲನೆಯ ಪವಿತ್ರನು, “ಈ ದರ್ಶನ ನಿತ್ಯಹೋಮಗಳಿಗೆ ಏನಾಗುವದೆಂಬುದನ್ನು ತೋರಿಸುವದು. ಇದು ಆ ಭಯಾನಕ ಪಾಪದ ಕುರಿತಾಗಿದೆ. ಅಧಿಪತಿಯು ಆರಾಧಿಸಲ್ಪಡುವ ಪವಿತ್ರಾಲಯವನ್ನು ಜನರು ಹಾಳುಮಾಡಿದರೆ, ಜನರು ಆ ಸ್ಥಳವನ್ನು ತುಳಿದಾಡಿದರೆ, ಆ ನಕ್ಷತ್ರಗಳ ಮೇಲೆ ಜನರು ನಡೆದಾಡಿದರೆ ಏನಾಗುವದೆಂಬುದನ್ನು ಇದು ತೋರಿಸಿಕೊಡುತ್ತದೆ. ಆದರೆ ಇದೆಲ್ಲ ಎಷ್ಟು ದಿನ ನಡೆಯುವದು?” ಎಂದನು.

14 ಇನ್ನೊಬ್ಬ ಪವಿತ್ರನು, “ಇದೆಲ್ಲಾ ಎರಡು ಸಾವಿರದ ಮುನ್ನೂರು ದಿನಗಳವರೆಗೆ ನಡೆಯುವುದು. ಆಮೇಲೆ ಪವಿತ್ರಾಲಯಕ್ಕೆ ಪುನಃ ನ್ಯಾಯ ಸಿಕ್ಕುವುದು” ಎಂದು ಉತ್ತರಿಸಿದನು.

ಇಬ್ರಿಯರಿಗೆ 10:26-31

ಕ್ರಿಸ್ತನಿಂದ ದೂರ ಸರಿಯದಿರಿ

26 ನಾವು ಸತ್ಯವನ್ನು ತಿಳಿದುಕೊಂಡ ಮೇಲೆಯೂ ಪಾಪಗಳನ್ನು ಮಾಡುತ್ತಲೇ ಇದ್ದರೆ, ನಮ್ಮ ಪಾಪಗಳನ್ನು ಯಾವ ಯಜ್ಞವೂ ಪರಿಹರಿಸುವುದಿಲ್ಲ. 27 ನಾವು ಪಾಪಗಳಲ್ಲಿಯೇ ಮುಂದುವರಿದರೆ, ನ್ಯಾಯತೀರ್ಪಿನ ಭಯದಲ್ಲಿ ಮತ್ತು ದೇವರ ವಿರುದ್ಧವಾಗಿ ಜೀವಿಸುವವರನ್ನು ದಹಿಸುವ ಭಯಂಕರ ಬೆಂಕಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. 28 ಮೋಶೆಯ ನಿಯಮಗಳಿಗೆ ಅವಿಧೇಯನಾದ ವ್ಯಕ್ತಿಯು ಇಬ್ಬರು ಅಥವಾ ಮೂವರು ಸಾಕ್ಷಿಗಳಿಂದ ತಪ್ಪಿತಸ್ಥನೆಂದು ನಿರ್ಧರಿಸಲ್ಪಟ್ಟರೆ, ಅವನಿಗೆ ಕ್ಷಮೆ ದೊರೆಯುತ್ತಿರಲಿಲ್ಲ. ಅವನನ್ನು ಕೊಂದುಹಾಕುತ್ತಿದ್ದರು. 29 ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು. 30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.”(A) ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ. 31 “ಪ್ರಭುವು ತನ್ನ ಜನರಿಗೆ ನ್ಯಾಯತೀರ್ಪು ನೀಡುತ್ತಾನೆ” ಎಂದು ಸಹ ದೇವರು ಹೇಳಿದ್ದಾನೆ. ಜೀವಸ್ವರೂಪನಾದ ದೇವರ ಹಿಡಿತಕ್ಕೆ ಸಿಕ್ಕಿ ಬೀಳುವುದು ಪಾಪಿಗೆ ಭಯಂಕರವಾಗಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International